ಮದ್ದೂರು : ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಂ ಉದಯ್ ನಾಮಪತ್ರ

Team Newsnap
1 Min Read

ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಎಂ.ಉದಯ್ ಬುಧವಾರ ಬೃಹತ್ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಸಾಥ್ ನೀಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದಲ್ಲಿ ಪತ್ನಿ ವಿನುತಾ ಅವರೊಂದಿಗೆ ಪೂಜೆ ಸಲ್ಲಿಸಿದ ಉದಯ್ ಅವರು ತರುವಾಯು ತೆರೆದ ವಾಹನದಲ್ಲಿ ಜಾನಪದ ಕಲಾ ತಂಡಗಳ ಆಕರ್ಷಕ ಮೆರವಣಿಗೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ಬೆಂಬಲಿಗರ ಜೊತೆ ತಾಲ್ಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ಆರ್.ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜಕೀಯ ಪಕ್ಷಗಳ ರೀತಿ ಕ್ಷೇತ್ರದ ಜನರು ಯಾವುದೇ ಆಮಿಷಗಳಿಗೆ ಒಳಗಾಗದೆ ಶಕ್ತಿ ಪ್ರದರ್ಶನ ಮಾಡಿಲ್ಲ ನನ್ನ ಮೇಲೆ ಅಭಿಮಾನ ಮತ್ತು ವಿಶ್ವಾಸದ ಹುಮ್ಮಸ್ಸಿನಿಂದ ಬಂದು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಕೆ.ಎಂ.ಉದಯ್ ಹೇಳಿದರು.

ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಎಸ್.ಗುರುಚರಣ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನಾನು ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ ಹೇಳಿದರು. ಬಳ್ಳಾರಿಯ ಜೆಡಿಎಸ್ ಅಭ್ಯರ್ಥಿ ದಿಢೀರ್ ಬದಲು- ಮಾಜಿ ಶಾಸಕ ಅನಿಲ್ ಲಾಡ್ ಗೆ ಟಿಕೆಟ್!

ಎಸ್.ಗುರುಚರಣ್‌ ಅವರಿಗೆ ಟಿಕೆಟ್ ಕೈ ತಪ್ಪಿರುವುದು ಅವರಿಗೆ ಮಾತ್ರವಲ್ಲ ನಮಗೂ ಬೇಸರವಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಸದಸ್ಯ ಬಿ.ರಾಮಕೃಷ್ಣ ಹಾಗೂ ಅಭ್ಯರ್ಥಿ ಉದಯ್ ಮತ್ತು ಗುರುಚರಣ್ ಒಗ್ಗಟ್ಟಿನಿಂದ ಮದ್ದೂರು ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಸಾಕ್ಷಿಯಾಗಬೇಕೆಂದು ಚೆಲುವರಾಯಸ್ವಾಮಿ ಹೇಳಿದರು.

ಮತ್ತೊಮ್ಮೆ ಗುರುಚರಣ್ ಅವರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷದಲ್ಲೆ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.

Share This Article
Leave a comment