ಮದ್ದೂರು: ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ ದೇಶದಲ್ಲೇ ಹೋರಾಟದ ಕಿಚ್ಚು ಹಚ್ಚಿದ ಹೆಗ್ಗಳಿಕೆ ಶಿವಪುರದ ಧ್ವಜಸತ್ಯಾಗ್ರಹ ಚಳವಳಿ. ಈ ಹೋರಾಟ ನಡೆದ ನೆಲವೇ ಮದ್ದೂರಿನ ವೈಶಿಷ್ಠ
ಈ ನೆಲದ ಹಿರಿಯ ರಾಜಕಾರಣಿ ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ, ಮಂಚೇಗೌಡ, ಎ.ಡಿ.ಬಿಳಿಗೌಡ ಮುಂತಾದ ನಾಯಕರ ರಾಜಕಾರಣದಲ್ಲಿ ಪಳಗಿದ ಕ್ಷೇತ್ರ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವ ಮುಂತಾದ ಸ್ಥಾನಮಾನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ವರ್ಣರಂಜಿತ ರಾಜಕಾರಣಿ. ಅವರೀಗ ಪದ್ಮಭೂಷಣ ಪುರಸ್ಕೃತ ವಿಶಿಷ್ಟ ಸಾಧಕರು. ಇವರ ಸಹೋದರ ಎಸ್.ಎಂ.ಶ0ಕರ್ ಅವರ ಪುತ್ರ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಅವರಿಗೇ ಕ್ಷೇತ್ರದ ಟಿಕೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಲ್ಲರಿಗೂ ಮುನ್ನವೇ ಘೋಷಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈ ಕೊಟ್ಟ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತ ಗುರುಚರಣ್ ಇವತ್ತು ಜಾ.ದಳ ಸೇರ್ಪಡೆಯಾಗಿ ಪಕ್ಷದ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಎಸ್.ಎಂ.ಕೃಷ್ಣ, ಎಸ್.ಎಂ.ಶAಕರ್ ಅವರುಗಳ ಬೆಂಬಲಿಗರು ಸಹಜವಾಗೇ ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೂ ಆಗಿದೆ. ಜಾ.ದಳ ಅಧಿಕಾರಕ್ಕೆ ಬಂದಲ್ಲಿ ಗುರುಚರಣ್ ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದು, ಕ್ಷೇತ್ರದಲ್ಲಿನ ಕಾಂಗ್ರೆಸ್-ಜಾ.ದಳ ವಲಯದಲ್ಲಿ ಹಲವು ರಾಜಕೀಯ ಪಲ್ಲಟಗಳಿಗೆ ಕಾರಣವಾಗಿದೆ.
ಇತ್ತೀಚೆಗೆ ಸಮಾಜ ಸೇವೆ ಮಾಡುತ್ತ, ಕೊಡುಗೈ ದಾನಿಯಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕದಲೂರು ಉದಯ್ ಅವರು ಸಾಕಷ್ಟು ಜನಪರ ಕೆಲಸಗಳಿಗೆ ನೆರವು ನೀಡುತ್ತ ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟಿಕೊಂಡ ನಾಯಕ. ಗುರುಚರಣ್ ಜೊತೆಗಿದ್ದುಕೊಂಡೇ ಅಂತಿಮವಾಗಿ ಬಿ.ಫಾರಂ ಪಡೆಯುವಲ್ಲಿ ಯಶಸ್ವಿಯಾಗಿದ್ದು ಹೆಚ್ಚು ಚರ್ಚೆಗೊಳಪಟ್ಟಿತು. ಚುನಾವಣೆ ಎಂದ ಮೇಲೆ ಜನಬಲದೊಂದಿಗೆ ಹಣಬಲವೂ ಬೇಕೆಂಬ ನಿಟ್ಟಿನಲ್ಲಿ ಇವತ್ತಿನ ಬೆಳವಣಿಗೆಗಳು ನಡೆದಿವೆ. ಅದರಂತೆ ಕದಲೂರು ಉದಯ್ ಕೂಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು ಸ್ಪರ್ಧೆ ನೀಡುತ್ತಿದ್ದಾರೆ. ಗುರುಚರಣ್ ಜೆಡಿಎಸ್‌ಗೆ ಹೋದರೂ ಅವರ ಬಹುತೇಕ ಬೆಂಬಲಿಗರು ಕಾಂಗ್ರೆಸ್‌ನಲ್ಲೇ ಉಳಿದಿರುವುದು ಪ್ಲಸ್‌ಪಾಯಿಂಟ್ ಆಗಿದೆ.
ಇತ್ತ ಶಾಸಕ ಡಿ.ಸಿ.ತಮ್ಮಣ್ಣ ಅವರು ಜಾ.ದಳ ಅಭ್ಯರ್ಥಿಯಾಗಿ ಕಣದಲ್ಲಿದ್ದು, ದಳಪತಿಗಳ ಬೀಗರೂ ಆಗಿರುವ ತಮ್ಮಣ್ಣ ಅವರಿಗೆ ಒಂದಷ್ಟು ರಾಜಕೀಯ ಇಚ್ಛಾಶಕ್ತಿ, ಆಡಳಿತದ ಅನುಭವದಲ್ಲಿ ಒಂದು ಕೈ ಮೇಲು ಎನ್ನುವಂತೆ ಅವರ ಕೆಲಸ ಕಾರ್ಯಗಳು ಸಾಧನೆ ತೋರಿಸುತ್ತವೆ. ಇಲ್ಲಿ ತಮ್ಮಣ್ಣ ಎದುರು ನಿಂತವರು ಶಾಸಕ ಸ್ಥಾನಕ್ಕೆ ಹೊಸ ಮುಖಗಳೇ ಆಗಿರುವುದರಿಂದ ನಾನು ಇಷ್ಟು ಅನುದಾನ ತಂದಿದ್ದೇನೆ ಎಂದು ಜನರ ಮುಂದೆ ಹೇಳಲಾಗದು.
ಆದರೆ ಡಿ.ಸಿ.ತಮ್ಮಣ್ಣ ಅವರು ನಾನು ಶಾಸಕನಾಗಿ ಈ ಕ್ಷೇತ್ರಕ್ಕೆ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಮತ್ತು ಸಾರ್ವಜನಿಕರಿಗಾಗಿ ಮಾಡಿದ ಕೆಲಸಗಳೆಷ್ಟು ಎಂಬುದರ ಕುರಿತ ದಾಖಲೆ ಇಡುತ್ತ ಮತಯಾಚಿಸುತ್ತಿರುವುದನ್ನು ಕಾಣಬಹುದು. ಹಾಗೆ ಹಳ್ಳಿ ಹಳ್ಳಿಗಳಿಗೆ ತೆರಳುವ ತಮ್ಮಣ್ಣನವರ ಸುತ್ತ ಸಾಕಷ್ಟು ಸ್ಥಳೀಯ ಜನಪ್ರತಿನಿಧಿಗಳು ನೆರೆಯುತ್ತಾರೆ. ಇದೀಗ ಎಸ್.ಎಂ.ಕೃಷ್ಣ ಅವರ ಕುಡಿ ಗುರುಚರಣ್ ಕೂಡ ಪಕ್ಷ ಸೇರಿ ಸಾಥ್ ನೀಡಿರುವುದು ತಮ್ಮಣ್ಣ ಅವರಿಗೆ ಗುರುಬಲ ಬಂದAತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಶಾಸಕ ಡಿ.ಸಿ.ತಮ್ಮಣ್ಣ ಅವರ ನೆರಳಿನಲ್ಲೆ ಬೆಳೆದು ಬಂದು ಎಸ್.ಪಿ.ಸ್ವಾಮಿ ಮನ್‌ಮುಲ್ ನಿರ್ದೇಶಕರು, ಇವರ ಪತ್ನಿ ಜಿಪಂ ಮಾಜಿ ಅಧ್ಯಕ್ಷೆ ನಾಗರತ್ನ ದಂಪತಿ ತಮ್ಮ ದಿವಂಗತ ಪುತ್ರ ಶ್ರೀನಿಧಿಗೌಡ ಹೆಸರಲ್ಲಿ ಪ್ರತಿಷ್ಠಾನ ಮಾಡಿ, ಆ ಮೂಲಕ ಅನೇಕ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತ ಬಂದಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಬಿಜೆಪಿ ಎಸ್.ಪಿ.ಸ್ವಾಮಿ ಅವರಿಗೆ ಬಿ.ಫಾರಂ ನೀಡಿ ಕಣಕ್ಕಿಳಿಸಿದೆ. ಇವರ ಪರವಾಗಿ ಸಂಸದೆ ಸುಮಲತಾ ಅಂಬರೀಷ್ ಬ್ಯಾಟಿಂಗ್ ಮಾಡುತ್ತ ಸಾಗಿದ್ದಾರೆ. ಅಂತಂತ್ರಕ್ಕೆ ಕುಟುಂಬದ ತಂತ್ರ ;ಎಚ್‍ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ
ಹಾಗಾಗಿ ಪ್ರಸ್ತುತ ಕಣ ಚಿತ್ರಣದಲ್ಲಿ ಕಾಂಗ್ರೆಸ್‌ನ ಕದಲೂರು ಉದಯ್, ಜಾ.ದಳದ ಡಿ.ಸಿ.ತಮ್ಮಣ್ಣ ಹಾಗೂ ಬಿಜೆಪಿಯ ಎಸ್.ಪಿ.ಸ್ವಾಮಿ ಎದುರಾಳಿಗಳಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಶಾಸಕ ಡಿ.ಸಿ.ತಮ್ಮಣ್ಣ
- ಪ್ಲಸ್: ಶಾಸಕ ಡಿ.ಸಿ.ತಮ್ಮಣ್ಣ ಅವರು ಉತ್ತಮ ಕೆಲಸಗಾರ ಎಂಬುದು, ಬೀಗರಾದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯ ಬೆಂಬಲ. ಮತ್ತೊಂದೆಡೆ ಮಾಡಿರುವ ಕೆಲಸಗಳು, ಏತ ನೀರಾವರಿ ಯೋಜನೆಗಳು.
- ನೆಗೆಟಿವ್: ಕ್ಷೇತ್ರದಲ್ಲಿ ಮತದಾರ ಬದಲಾವಣೆ ಬಯಸಿದ್ದಾರೆನ್ನುವ ಮಾತುಗಳು.
ಎಸ್.ಪಿ.ಸ್ವಾಮಿ
- ಪ್ಲಸ್: ಕೋವಿಡ್ ಸಂದರ್ಭದಲ್ಲಿ ಇವರು ಕ್ಷೇತ್ರದಾದ್ಯಂತ ಸುತ್ತಿ, ಬಡಬಗ್ಗರಿಗೆ ಫುಡ್‌ಕಿಟ್ ವಿತರಿಸಿದ್ದು, ಮಗ ದಿ.ಶ್ರೀನಿಧಿಗೌಡ ಹೆಸರಿನಲ್ಲಿ ಸಮಾಜ ಸೇವೆ ಮಾಡಿದ್ದು.
- ನೆಗೆಟಿವ್-ಬಿಜೆಪಿ ಬಡಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ಶೇ.೪೦ ಕಮಿಷನ್ ಸರ್ಕಾರ ಎಂಬುದು
ಕದಲೂರು ಉದಯ್
- ಪ್ಲಸ್: ಕ್ಷೇತ್ರದಲ್ಲಿ ಸಮಾಜ ಸೇವಾ ಕಾರ್ಯಗಳ ಮೂಲಕ ತೊಡಗಿಸಿಕೊಂಡಿದ್ದು, ಕ್ಷೇತ್ರದಾದ್ಯಂತ ಯುವಕರ ಪಡೆಗಳನ್ನು ರಚಿಸಿಕೊಂಡಿದ್ದು,
- ನೆಗೆಟಿವ್: ರಾಜಕಾರಣಕ್ಕೆ ಬರಲೆಂದೇ ಸಮಾಜ ಸೇವೆ ಹೆಸರಲ್ಲಿ ಎಂಟ್ರಿ ಕೊಟ್ಟಿದ್ದು, ಈ ಹಿಂದೆ ಎಲ್ಲಿದ್ದರು ಏನು ಮಾಡುತ್ತಿದ್ದರು ಎಂಬ ಕುತೂಹಲದ ಪ್ರಶ್ನೆಗಳು
ಅಭ್ಯರ್ಥಿಗಳ ಹೇಳಿಕೆಗಳು –
ಬಿಜೆಪಿ ಪಕ್ಷದ ದುರಾಡಳಿತ, ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನದಿಂದ ನೂರಾರು ಕಾರ್ಯಕರ್ತರು ಜಾ.ದಳ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ನಾನು ಕ್ಷೇತ್ರದಾದ್ಯಂತ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸ್ಥಳೀಯ ಸಾರ್ವಜನಿಕರ ಕಷ್ಟ, ಸುಖಗಳಿಗೆ ಸ್ಪಂಧಿಸಿದ್ದು ಮತ್ತು ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವುದನ್ನು ಕಂಡು ನನ್ನನ್ನು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ.
-ಡಿ.ಸಿ.ತಮ್ಮಣ್ಣ, ಜಾ.ದಳ ಅಭ್ಯರ್ಥಿ
-ಕದಲೂರು ಉದಯ್, ಕಾಂಗ್ರೆಸ್ ಅಭ್ಯರ್ಥಿ.
- ನಾನು ಬಡ, ಹಿಂದುಳಿದ ಮತ್ತು ಎಲ್ಲಾ ವರ್ಗದ ಜನರ ಹಿತದೃಷ್ಠಿಯಿಂದ ಸಮಾಜ ಸೇವೆ ಮಾಡಲೆಂದು ಆಗಮಿಸಿ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷವು ನನ್ನ ಸೇವೆಯನ್ನು ಪರಿಗಣಿಸಿ ಟಿಕೆಟ್ ನೀಡಿದೆ. ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜತೆಗೂಡಿ ಮುಂದಿನ ದಿನಗಳಲ್ಲೂ ಸಮಾಜ ಸೇವೆಗೆ ಮತ್ತಷ್ಟು ತೊಡಗಿಸಿಕೊಳ್ಳುವೆ.
ತಾಲ್ಲೂಕಿನಾದ್ಯಂತ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಂಡು ಕಳೆದ ೨ ದಶಕಗಳಿಂದಲೂ ನಿರಂತರವಾಗಿ ಜನಸೇವೆ ಮಾಡುತ್ತಿದ್ದೇನೆ, ನನಗೆ ಅಧಿಕಾರ ಸಿಕ್ಕಿದರೆ ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವೆ.
-ಎಸ್.ಪಿ.ಸ್ವಾಮಿ, ಬಿಜೆಪಿ ಅಭ್ಯರ್ಥಿ.
ಮತದಾರರು ಸಂಖ್ಯೆ
- ಪುರುಷ-1,03,049
- ಮಹಿಳಾ-1,08,839
- ತೃತೀಯ ಲಿಂಗಿ-21
ಒಟ್ಟು ಮತದಾರರು: 2,11,909
ಜಾತಿವಾರು ಮತದಾರರ ವಿವರ (2018ರ ವರೆಗೆ)
- ಲಿಂಗಾಯತ – 9000
- ಒಕ್ಕಲಿಗ – 102000
- ಕುರುಬ – 11000
- ಎಸ್.ಸಿ. – 35000
- ಎಸ್.ಟಿ. – 4000
- ಈಡಿಗ – 2000
- ಬ್ರಾಹ್ಮಣ – 3000
- ವಿಶ್ವಕರ್ಮ – 4000
- ಬೆಸ್ತ – 1000
- ಗೊಲ್ಲ- 1000
- ಉಪ್ಪಾರ – 1000
- ಮಡಿವಾಳ – 3000
- ಅರೆ ಅಲೆಮಾರಿ – 1000
- ಕುಂಬಾರ – 2000
- ತಿಗಳರು – 2000
- ಸವಿತಾ ಸಮಾಜ – 4000
- ಮರಾಠ – 1000
- ಮುಸ್ಲಿಂ – 12000
- ಕ್ರಿಶ್ಚಿಯನ್ – 3000
- ಜೈನ್ – 2000
ಎಂ.ಆರ್.ಚಕ್ರಪಾಣಿ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ