ಮಾದಪ್ಪನ ಹುಂಡಿಯಲ್ಲಿ 54 ದಿನಕ್ಕೆ 2.21 ಕೋಟಿ ರು. ಸಂಗ್ರಹ

Team Newsnap
1 Min Read

ಕೊರೋನಾ ಸಂಕಷ್ಟದ ನಡುವೆಯೂ ಮಲೆ ಮಹದೇಶ್ವರನ ಹುಂಡಿಗೆ ಕೋಟಿಗಟ್ಟಲೆ ಹಣ ಹರಿದು ಬಂದಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ 54 ದಿನಗಳ ಬಳಿಕ ಹುಂಡಿ ಎಣಿಕೆಯಲ್ಲಿ ಒಟ್ಟು 2,21,32,439 ಕೋಟಿ ರೂಪಾಯಿ ಸಂಗ್ರಹವಾಗಿದೆ.

ನಗದು ಹಣದ ಜೊತೆಗೆ 40 ಗ್ರಾಂ ಚಿನ್ನ, 1 ಕೆಜಿ 657 ಗ್ರಾಂ ಬೆಳ್ಳಿಯನ್ನು ಭಕ್ತರು ಸಮರ್ಪಿಸಿದ್ದಾರೆ. ಈ ಬಾರಿ ಹನ್ನೊಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ಮೂಲಕವೇ ಸಂಗ್ರಹವಾಗಿರುವುದು ವಿಶೇಷವಾಗಿದೆ. 

ಮಹದೇಶ್ವರ ಬೆಟ್ಟದಲ್ಲಿ  ಪ್ರತಿ  ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ನಡೆದಿರಲಿಲ್ಲ.
ನಂತರ 82 ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 18 ರಂದು ಹುಂಡಿ  ಎಣಿಕೆ ನಡೆದು ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿತ್ತು.

ಮೊದಲು ಪ್ರತಿ ತಿಂಗಳ ಸರಾಸರಿ 1.50 ಕೋಟಿ ರೂ ಸಂಗ್ರಹವಾಗುತ್ತಿತ್ತು. ಆದರೆ, 82 ದಿನಗಳಿಗೆ 1.47 ಕೋಟಿ ರೂ ಸಂಗ್ರಹವಾಗುವ ಮೂಲಕ ಕಾಣಿಕೆ ಮೊತ್ತ ಇಳಿಮುಖವಾಗಿತ್ತು. ಆದರೆ, ಇದೀಗ 54 ದಿನಗಳ ಅವಧಿಯಲ್ಲಿ 2,21,32,439 ಕೋಟಿ ರೂಪಾಯಿ ಸಂಗ್ರಹವಾಗಿದ್ದು ಮಹದೇಶ್ವರನ ಆದಾಯ ನಿಧಾನವಾಗಿ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿವೆ.

ಜೂನ್ ನಂತರ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತಾದರೂ ದರ್ಶನ ಹೊರತುಪಡಿಸಿ ಯಾವುದೇ ರೀತಿಯ ಸೇವೆಗಳಿಗೆ ಅವಕಾಶ ಇರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಮುಡಿಸೇವೆ, ರಾತ್ರಿ ವಾಸ್ತವ್ಯ ಹಾಗು ವಿವಿಧ ಸೇವೆಗಳಿಗೆ ವಿಧಿಸಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದ್ದರಿಂದ ಇತ್ತೀಚೆಗೆ ಭಕ್ತರ ಸಂಖ್ಯೆಯು ಜಾಸ್ತಿಯಾಗಿದೆ.

ಈ ಮೊದಲು ಚಿನ್ನದ ರಥಧ ಮೇಲೆ ಭಕ್ತರು ನಾಣ್ಯಗಳನ್ನು ಎಸೆಯವುದು ರೂಢಿಯಲ್ಲಿತ್ತು. ಇದರಿಂದ ಚಿನ್ನದ ರಥಕ್ಕೆ ಹಾನಿಯಾಗುವುದನ್ನು ಮನಗಂಡು ನಾಣ್ಯಗಳನ್ನು ಎಸೆಯುವುದನ್ನು ನಿಷೇಧಿಸಲಾಗಿತ್ತು. ರಥದ ಮೇಲೆ ನಾಣ್ಯ ಎಸೆಯುವ ಬದಲು ಹುಂಡಿಗೆ ಹಾಕುವಂತೆ ಭಕ್ತರಲ್ಲಿ ಮನವಿ ಮಾಡಲಾಗಿತ್ತು. ಈ ಕಾರಣದಿಂದಲೇ ಈ ಬಾರಿ ಹುಂಡಿಯಲ್ಲಿ ಹನ್ನೊಂದುವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ಮೂಲಕವೇ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.

Share This Article
Leave a comment