January 30, 2026

Newsnap Kannada

The World at your finger tips!

deepa1

ಎಲ್ಲವನ್ನೂ ಕಳೆದುಕೊಂಡು, ನನ್ನನ್ನು ಮತ್ತೆ ಪಡೆಯುವಾಸೆ…..

Spread the love

ಜೀವ ನೀಡುವ ತಂದೆ,
ಜನ್ಮ ನೀಡುವ ತಾಯಿ,
ತುತ್ತು ನೀಡುವ ಅಕ್ಕ,
ಬಟ್ಟೆ ತೊಡಿಸುವ ಅಣ್ಣ,
ಕೈ ಹಿಡಿದು ನಡೆಯವ ತಮ್ಮ,
ಅಪ್ಪಿ ಮಲಗುವ ತಂಗಿ,
ನನ್ನೊಳಗಿನ ಗಂಡ/ಹೆಂಡತಿ,
ನನ್ನ ಭವಿಷ್ಯವೇ ಆದ ಮಗ,
ಸರ್ವಸ್ವವೇ ಆದ ಮಗಳು,
ನನ್ನಾಟದ ಜೀವ ಅಜ್ಜ,
ನನ್ನ ಮುನಿಸಿನ ಜೀವ ಅಜ್ಜಿ……….

ವಾವ್,
ನಮ್ಮನ್ನು ಬೆಸೆದ ರಕ್ತ ಸಂಬಂಧಗಳೇ ನಿಮಗೂ ನಿಯತ್ತಾಗಿರಲು ಸಾಧ್ಯವಾಗುತ್ತಿಲ್ಲ.
ನಿಮ್ಮ ಋಣ ತೀರಿಸಲೂ ಸಾಧ್ಯವಾಗುತ್ತಿಲ್ಲ.

ಎಷ್ಟೊಂದು ಪ್ರೀತಿ,
ಎಷ್ಟೊಂದು ಪ್ರೇಮ,
ಎಷ್ಟೊಂದು ಅಕ್ಕರೆ,
ಎಷ್ಟೊಂದು ವಾತ್ಸಲ್ಯ,
ಎಷ್ಟೊಂದು ತ್ಯಾಗ,
ನೀವು ನನಗಾಗಿ ಮಾಡಿರುವಿರಿ,

ಆದರೆ,
ನಾನು ಮಾಡುತ್ತಿರುವುದೇನು ?

ಬಾಲ್ಯ ನನಗರಿವಿಲ್ಲದೆ ಕಳೆದೆ,
ಪ್ರೌಡದಲ್ಲಿ ನಿಮ್ಮನ್ನು ನಿರ್ಲಕ್ಷಿಸುತ್ತಾ ಕಳೆದೆ,
ಯೌವ್ವನದಲ್ಲಿ ನಿಮ್ಮನ್ನು ದ್ವೇಷಿಸುತ್ತಾ ಬೆಳೆದೆ,
ಉದ್ಯೋಗ/ ವ್ಯವಹಾರದಲ್ಲಿ ನಿಮ್ಮಿಂದ ದೂರವಾಗಿ ನಡೆದೆ,
ಮುಪ್ಪಿನಲಿ ಕೆಲವರು ನನ್ನಿಂದಲೇ ದೂರವಾದಿರಿ,
ಕೆಲವರನ್ನು ನಾನೇ ದೂರ ಮಾಡಿದೆ,

ಛೆ,
ಎಂತಹ ಅನ್ಯಾಯ,
ಎಂತಹ ವಿಪರ್ಯಾಸ,
ಎಂತಹ ಪಶ್ಚಾತ್ತಾಪ,
ಎಂತಹ ದೌರ್ಭಾಗ್ಯ,
ಎಂತಹ ಪರಿಸ್ಥಿತಿ,

ತಂದೆ ತಾಯಿಯನ್ನು ದೇವರಂತೆ ಪೂಜಿಸಬೇಕೆಂದಿದ್ದೆ,
ಮದುವೆ ಮಕ್ಕಳ ನಂತರ ಅವರು ಹೆಚ್ಚು ಕಾಡಲೇ ಇಲ್ಲ,
ಅಜ್ಜ ಅಜ್ಜಿಗೆ ಆಶ್ರಯ ನೀಡಬೇಕೆಂದಿದ್ದೆ,
ಅವರು ನೆನಪಾಗಲೇ ಇಲ್ಲ,
ಹೆಂಡತಿ/ಗಂಡನಿಗೆ, ನನ್ನ ಎಲ್ಲವನ್ನೂ ನೀಡಬೇಕೆಂದಿದ್ದೆ,
ಆದರೆ, ಏನೋ ಕಸಿವಿಸಿಯಾಗಿ ಒಂದಾಗಿದ್ದರೂ ಅಪರಿಚಿತರಂತಾದೆ,
ನನ್ನ ಭವಿಷ್ಯದ ಕನಸಾದ ಮಗ ಮದುವೆಯ ನಂತರ ನನ್ನಿಂದ ದೂರಾದ,
ಮಗಳು ಪರರ ಪಾಲಾದಳು…

‌ಕಳೆದು ಹೋಗಿದ್ದೇನೆ ನಾನು……
ದೂರದೂರಿನಲ್ಲಿ ಅಪ್ಪ ಅಮ್ಮ,
ನಗರದಲ್ಲಿ ಹೆಂಡತಿ ಮಕ್ಕಳು,
ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,

ಕಳೆದು ಹೋಗಿದ್ದೇನೆ ನಾನು…….. ‌
ಗಾಂಧಿಗಿರಿ, ಬಸವ ಧರ್ಮ,
ಅಂಬೇಡ್ಕರ್ ವಾದ, ಮನುಸ್ಮೃತಿ, ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,

ಕಳೆದು ಹೋಗಿದ್ದೇನೆ ನಾನು………
ಪ್ರೀತಿಯಾವುದೋ,
ದ್ವೇಷವಾವುದೋ,
ವಂಚನೆಯಾವುದೋ,
ಶಾಂತಿಯಾವುದೋ,
ಅಸಹನೆಯಾವುದೋ,
ಅರ್ಥವಾಗದೆ,

ಕಳೆದು ಹೋಗಿದ್ದೇನೆ ನಾನು………
ಅಣ್ಣನ ಹುಡುಕಾಟದಲ್ಲಿ,
ತಂಗಿಯ ನೆನಪಿನಲ್ಲಿ,
ಸ್ನೇಹಿತನ ವಂಚನೆಯಲ್ಲಿ,
ಸಂಬಂದಿಗಳ ಸ್ವಾರ್ಥದಲ್ಲಿ,
ನೆರೆಹೊರೆಯವರ ಕುಹುಕದಲ್ಲಿ,

ಕಳೆದು ಹೋಗಿದ್ದೇನೆ ನಾನು…….
ವೇಗದ ಬದುಕಿನಲ್ಲಿ,
ಕೆಲಸದ ಒತ್ತಡದಲ್ಲಿ,
ನಿದ್ದೆಯ ಮಂಪರಿನಲ್ಲಿ,
ಊಟದ ಕಲಬೆರಕೆಯಲ್ಲಿ,
ಅನಾರೋಗ್ಯದ ಭಯದಲ್ಲಿ,

ಕಳೆದು ಹೋಗಿದ್ದೇನೆ ನಾನು…….
ಬದುಕಿನ ಅಲೆದಾಟದಲ್ಲಿ,
ನೆಮ್ಮದಿಯ ಹಂಬಲದಲ್ಲಿ,
ಅಕ್ಷರಗಳ ನೆರಳಿನಲ್ಲಿ,
ಜೀವನದ ಅವಶ್ಯಕತೆಯಲ್ಲಿ,

ಕಳೆದೇ ಹೋಗಿದ್ದೇನೆ…..

ಹುಡುಕಿಕೊಡುವವರಾರು ?
ಎಲ್ಲರೂ ನನ್ನಂತೆ ಕಳೆದು ಹೋದವರೇ !!

ಎಲ್ಲವನ್ನೂ ಪಡೆದೆ,
ನನ್ನನ್ನು ನಾನು ಕಳೆದುಕೊಂಡೆ,
ಈಗ ,
ಎಲ್ಲವನ್ನೂ ಕಳೆದುಕೊಂಡು,
ನನ್ನನ್ನು ಮತ್ತೆ ಪಡೆಯುವಾಸೆ……

ಎಂತಹ ವಿಪರ್ಯಾಸ,
ಎಂತಹ ಮರ್ಮ,
ಎಂತಹ ನಿಗೂಢ,
ಎಂತಹ ತಿರುವುಗಳು.
ಎಂತಹ ಕನವರಿಕೆಗಳು,……..

ಭಾರತೀಯ ಮನಸ್ಸುಗಳ,
ಭಾರತದ ಸಾಮಾಜಿಕ ವ್ಯವಸ್ಥೆಯ,
ಕೆಲವು ಕೌಟುಂಬಿಕ ಮತ್ತು ಆಂತರ್ಯದ ಸಮಸ್ಯೆಗಳ ವ್ಯಂಗ್ಯ ಮತ್ತು ದುರಂತ
ನನ್ನ ಅನುಭವದ ಕಣ್ಣಲ್ಲಿ ಮೂಡಿದ ಚಿತ್ರಣ. ನಿಮ್ಮೆಲ್ಲರಿಗಾಗಿ………

  • ವಿವೇಕಾನಂದ. ಹೆಚ್.ಕೆ.
error: Content is protected !!