December 27, 2024

Newsnap Kannada

The World at your finger tips!

deepa1

ದಾರಿ ದೀಪ – 15

Spread the love

ವಿವೇಕಾನಂದ. ಹೆಚ್.ಕೆ.

ಹೀಗೊಂದು ಬದಲಾವಣೆಗೆ ಎಲ್ಲರೂ ಪ್ರಯತ್ನಿಸಬಹುದೆ !!!!?????………

ನೀನು ಬದಲಾದರೆ ಜಗತ್ತೇ ಬದಲಾಗುತ್ತದೆ.
ಇತರರಿಗೆ ತಿಳುವಳಿಕೆ ಹೇಳುವ ಮೊದಲು ನೀನು ಪಾಲಿಸು.
ಬದಲಾವಣೆ ನಿನ್ನಿಂದಲೇ ಆರಂಭವಾಗುತ್ತದೆ.
ಜಗತ್ತಲ್ಲದಿದ್ದರೂ ಕನಿಷ್ಠ ಕರ್ನಾಟಕ ರಾಜ್ಯ ಬದಲಾಗುತ್ತದೆ…..

ಅರೆ, ಎಷ್ಟೊಂದು ಸಣ್ಣ ಮತ್ತು ಸರಳ ವಿಷಯ.
ನನ್ನಿಂದ ಕರ್ನಾಟಕ ಬದಲಾಗುತ್ತದೆ ಎಂದರೆ ನಾನೇಕೆ ಬದಲಾಗಬಾರದು.
ಅಷ್ಟೂ ಮಾಡದಿದ್ದರೆ ಹೇಗೆ….

ಹೌದು ಅದಕ್ಕಾಗಿ ನಾನು ಈ ಕ್ಷಣದಿಂದಲೇ ಬದಲಾಗುತ್ತಿದ್ದೇನೆ……….

ಈಗ ನನ್ನನ್ನು ಯಾರಾದರು ನಿನ್ನ ಜಾತಿ ಧರ್ಮ ಕುಲ ಯಾವುದೆಂದು ಕೇಳಿದರೆ ನಿಸ್ಸಂಕೋಚವಾಗಿ ಹೇಳುತ್ತೇನೆ,
ಜಾತಿ/ ಕನ್ನಡಿಗ – ಧರ್ಮ/ ಭಾರತೀಯ – ಕುಲ / ಮನುಷ್ಯ.

ಇನ್ನೆಂದೂ ಹಣ ಅಧಿಕಾರ ಪ್ರಚಾರದ ವ್ಯಾಮೋಹಕ್ಕೆ ಬಲಿಯಾಗಿ ಭ್ತಷ್ಟನಾಗುವುದಿಲ್ಲ. ಅಂದರೆ ಸಹಜವಾಗಿ ಈಗಾಗಲೇ ನನ್ನ ಬಳಿ ಇರುವ ಇವುಗಳನ್ನು ಉಳಿಸಿಕೊಂಡು ಅನುಭವಿಸುತ್ತೇನೆ…….

ಇನ್ನು ಮುಂದೆ ತಾಳ್ಮೆಗೆಟ್ಟು ಉದ್ವೇಗಕ್ಕೆ ಒಳಗಾಗಿ ಯಾವುದೇ ವಿಷಯಕ್ಕೂ ಇನ್ನೊಬ್ಬರಿಗೆ ವೈಯಕ್ತಿಕವಾಗಿ ನೋವಾಗುವಂತೆ ಬದುಕುವುದಿಲ್ಲ. ಆದರೆ ನನ್ನ ಅಭಿಪ್ರಾಯಗಳನ್ನು ಮತ್ತು ನನಗೆ ಅರಿವಾದ ಸತ್ಯವನ್ನು ಎಷ್ಟೇ ಕಠೋರವಾಗಿದ್ದರೂ ಸೌಮ್ಯವಾಗಿ ಹೇಳುತ್ತೇನೆ…….
ಅದರಲ್ಲಿ ಇತರರು ನನ್ನನ್ನು ಎಷ್ಟೇ ಹಿಯಾಳಿಸಿದರು ನನ್ನ ಪ್ರತಿಕ್ರಿಯೆ ಸಭ್ಯತೆಯ ಗೆರೆ ದಾಟದಂತೆ ಎಚ್ಚರಿಕೆ ವಹಿಸುತ್ತೇನೆ……….

ತೀರಾ ಇನ್ನೊಬ್ಬರಿಗೆ ತೊಂದರೆಯಾಗುವಂತ ಮತ್ತು ನೈತಿಕತೆಗೆ ಪೆಟ್ಟು ಬೀಳುವಂತ ಯಾವ ಸುಳ್ಳನ್ನೂ ಹೇಳುವುದಿಲ್ಲ. ಆದರೆ ವೈಯಕ್ತಿಕ ವಿಷಯಗಳ, ಖಾಸಗಿ ಹಣಕ್ಕೆ ಸಂಬಂದಿಸಿದ, ಸರ್ಕಾರದ ಅನುಸರಿಸಲು ಸಾಧ್ಯವಾಗದ ಅವಾಸ್ತವಿಕ ಕೆಲವು ವಿಷಯಗಳಲ್ಲಿ ಸಣ್ಣ ಪುಟ್ಟ ವ್ಯಾವಹಾರಿಕ ಸುಳ್ಳುಗಳನ್ನು ಸಂದರ್ಭಕ್ಕೆ ತಕ್ಕಂತೆ ಹೇಳುತ್ತೇನೆ. ಇದು ಕೂಡ ನನ್ನ ಉಳಿವಿಗಾಗಿ ಮತ್ತು ಇತರ ಸಂಕಲ್ಪಗಳನ್ನು ಸರಿಯಾಗಿ ಪಾಲಿಸಲು. ಕ್ರಮೇಣ ಇದನ್ನೂ ಕಡಿಮೆ ಮಾಡಲು ಪ್ರಯತ್ನಿಸಿತ್ತೇನೆ……..

ಅನಾವಶ್ಯಕ ಆಡಂಬರ ಶ್ರೀಮಂತಿಕೆ ತೋರ್ಪಡಿಸುವ ಗಂಡಸು/ಹೆಂಗಸು ಯಾರೇ ಆಗಿರಲಿ ಅವರನ್ನು ಮೆಚ್ಚದೆ ನಿರ್ಲಕ್ಷಿಸುತ್ತೇನೆ ಮತ್ತು ಅದೊಂದು ಅಸಹ್ಯಕರ ವರ್ತನೆ ಎಂಬಂತೆ ಪ್ರತಿಕ್ರಯಿಸುತ್ತೇನೆ………

ಅನಿವಾರ್ಯ ಮತ್ತು ತೀರಾ ಅವಶ್ಯಕ ಸಂದರ್ಭ ಬಿಟ್ಟು ಬೇರೆ ಯಾವುದೇ ಸಂದರ್ಭದಲ್ಲಿ ಇತರರ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸುವುದಿಲ್ಲ……

ಎಂದಿಗೂ ಸರ್ಕಾರದ / ಸಮಾಜದ ವಿರುದ್ಧವಾಗಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಆದರೆ ಮೌಡ್ಯದ ಅನ್ಯಾಯದ ಪಕ್ಷಪಾತದ ಅಸಮಾನತೆಯ ವಿರುದ್ಧ ಅಹಿಂಸಾತ್ಮಕವಾಗಿ ಪ್ರತಿಭಟನೆ ಇದ್ದೇ ಇರುತ್ತದೆ…….

ಸ್ನೇಹ ಪ್ರೀತಿ ವಿಶ್ವಾಸಕ್ಕೆ ಹಣ ಅಧಿಕಾರ ಮೌಲ್ಯ ಸಿದ್ಧಾಂತಕ್ಕಿಂತ ಹೆಚ್ಚಿನ ಬೆಲೆ ಕೊಡುತ್ತೇನೆ ಮತ್ತು ಜೀವಂತವಿಲ್ಲದ ಮಹಾನ್ ವ್ಯಕ್ತಿಗಳಿಗಿಂತ ಬದುಕಿರುವ ಸಾಮಾನ್ಯ ಜನರಿಗೇ ಹೆಚ್ಚಿನ ಮಹತ್ವ ಕೊಡುತ್ತೇನೆ……

ಮಾತಿಗೂ ಕೃತಿಗೂ ಹೆಚ್ಚಿನ ಅಂತರ ಕೊಡದೆ ಮಾಡುವುದನ್ನು ಹೇಳುವುದು ಮತ್ತು ಹೇಳುವುದನ್ನು ಮಾಡಲು ಪ್ರಯತ್ನಿಸುತ್ತೇನೆ. ಇಲ್ಲಿ ಏರಿಳಿತ ಇದ್ದೇ ಇರುತ್ತದೆ. ಆದರೆ ಆತ್ಮ ವಂಚನೆ ಮಾಡಿಕೊಳ್ಳುವುದಿಲ್ಲ…….

ಜನಪ್ರಿಯತೆಯೇ ಸತ್ಯವಲ್ಲ, ಹಣವೇ ಶ್ರೀಮಂತಿಕೆಯಲ್ಲ, ಮಾತುಗಳೇ ಜೀವನವಲ್ಲ ಎಂಬುದನ್ನು ನಡವಳಿಕೆಯಲ್ಲಿ ಅಳವಡಿಸಿಕೊಳ್ಳುತ್ತೇನೆ ಮತ್ತು ಇನ್ನೂ ಇನ್ನೂ ………………..

ಹೀಗೆ ಮತ್ತು ಇನ್ನಷ್ಟು ಕನಿಷ್ಠ ಮಟ್ಟದ ಬದಲಾವಣೆಗಾಗಿ ನಾವೆಲ್ಲರೂ ಪ್ರಯತ್ನಿಸೋಣ. ಮುಂದೆ ಖಂಡಿತ ಕೆಲವೇ ವರ್ಷಗಳಲ್ಲಿ ಉತ್ತಮ ಸಮಾಜದ ಸಾಧ್ಯತೆಯ ಪ್ರಮಾಣವನ್ನು ಹೆಚ್ಚಿಸೋಣ……

Copyright © All rights reserved Newsnap | Newsever by AF themes.
error: Content is protected !!