Editorial

ದಾರಿ ದೀಪ – 8

ಡಾ.ಶ್ರೀರಾಮ ಭಟ್ಟ

ವಿಮರ್ಶೆಯ ವಿವೇಕ

ಪುರಾಣಮಿತ್ಯೇವ ನ ಸಾಧು ಸರ್ವಮ್
ನ ಚಾಪಿ ಕಾವ್ಯಂ ನವಮಿತ್ಯವದ್ಯಮ್
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇಯಬುದ್ಧಿಃ

ಹಳೆಯದೆಂದ ಮಾತ್ರಕ್ಕೆ ಎಲ್ಲವೂ ಶ್ರೇಷ್ಠವಲ್ಲ; ಯಾವುದೇ ಕಾವ್ಯಕೃತಿ ಹೊಸತೆಂದ ಮಾತ್ರಕ್ಕೆ ತಿರಸ್ಕರಣೀಯವೂ ಅಲ್ಲ. ಸಜ್ಜನರು ವಿಮರ್ಶಿಸಿ ನೋಡಿ ಉತ್ತಮವಾದುದನ್ನು ಆಯ್ದುಕೊಳ್ಳುವರು. ಮೂರ್ಖರು ಇತರರ ನಿರ್ಣಯಕ್ಕೆ ಜೋತುಬೀಳುವರು.
ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಕಾಣುವ ಮಾತು. ಕಾಳಿದಾಸನ ಹೊಸ ನಾಟಕದ ರಂಗಪ್ರದರ್ಶನಕ್ಕೆ ಸೂತ್ರಧಾರನು ಅಣಿಯಾದಾಗ, ಅವನ ಒಡನಾಡಿ ಪಾರಿಪಾರ್ಶ್ವಕ ಹೇಳುತ್ತಾನೆ: ‘ಭಾಸನಂಥ ನಾಟಕಕಾರರನ್ನು ಬಿಟ್ಟು ಸಮಕಾಲದ ಹೊಸ ನಾಟಕವನ್ನಾಡಿದರೆ ಪ್ರೇಕ್ಷಕರು ಮೆಚ್ಚುವರೇ!’ ಇದಕ್ಕೆ ಸೂತ್ರಧಾರನ ಚುರುಕಾದ ಉತ್ತರ: ‘ವಿವೇಕಕ್ಕೆ ವಿಶ್ರಾಂತಿ ನೀಡಿ ಮಾತನಾಡುತ್ತಿರುವೆ.’ ಇದರ ವಿವರಣೆಯಾಗಿ ನಾಲ್ಕು ಸಾಲಿನ ಈ ಶ್ಲೋಕ.


ಕಾಳಿದಾಸನ ವಿಮರ್ಶಾ ವಿವೇಕದಲ್ಲಿ ‘ಪರೀಕ್ಷ್ಯ ಅನ್ಯತರದ್ ಭಜಂತೇ’ ಮತ್ತು ‘ಪರಪ್ರತ್ಯಯನೇಯ ಬುದ್ಧಿಃ’ ಈ ಎರಡು ಮಾತುಗಳು ಮಹತ್ವದ್ದು. ಅಭಿಜಾತದ ಸಂಗ್ರಹಾತ್ಮಕ ಅಭಿವ್ಯಕ್ತಿಯಾದ ಈ ಮಾತುಗಳಲ್ಲಿ ವಿಮರ್ಶೆಯ ವಿಧಿ ನಿಷೇಧದ ಅಂಶಗಳು ಅಡಕಗೊಂಡಿವೆ. ಪರೀಕ್ಷಿಸಿ ಸ್ವಯಂ ಅವಲೋಕಿಸಿ ಗುಣವನ್ನೂ ಅವಗುಣವನ್ನೂ ಆಪ್ತವಾಗಿ ಗ್ರಹಿಸುವುದು ಮತ್ತು ಗುಣವನ್ನು ಮುಂದಾಗಿ ಆಯ್ದುಕೊಳ್ಳುವುದು ಅನ್ಯತರದ್ ಭಜಂತೇ ಎನ್ನುವುದರ ಆಶಯ. ಪ್ರತ್ಯಯ ಎಂದರೆ ಗ್ರಹಿಕೆಯಿಂದ ತಲಪುವ ನಿರ್ಣಯ. ಅದು ತನ್ನದಲ್ಲದೆ ಪರರದ್ದಾಗಿದ್ದು ಆಗ್ರಹಕ್ಕೆ ಎಳೆದೊಯ್ದರೆ ಆ ಓದುಗ ಅಥವಾ ಪ್ರೇಕ್ಷಕ ಪರ-ಪ್ರತ್ಯಯ-ನೇಯ-ಬುದ್ಧಿ. ಈ ಹಿನ್ನೆಲೆಯಲ್ಲಿ ಕಾಳಿದಾಸನ ಇನ್ನೊಂದು ಮಾತನ್ನೂ ನೋಡಬೇಕು:


ತಂ ಸಂತಃ ಶ್ರೋತುಮರ್ಹಂತಿ ಸದಸದ್‌ವ್ಯಕ್ತಿಹೇತವಃ
ಹೇಮ್ನಃ ಸಂಲಕ್ಷ್ಯತೇ ಹ್ಯಗ್ನೌ ವಿಶುದ್ಧಿಃ ಶ್ಯಾಮಿಕಾಪಿ ವಾ

ಗುಣದೋಷಗಳನ್ನು ಗುರುತಿಸಬಲ್ಲ ಸಜ್ಜನ ವಿಮರ್ಶಕರು ನನ್ನ ಕಾವ್ಯವನ್ನು ಕೇಳಬೇಕು. ಚಿನ್ನದ ಅದಿರನ್ನು ಬೆಂಕಿಗೆ ಹಾಕಿದಾಗಲೇ ಅಪರಂಜಿ ಮತ್ತು ಕಾಳಿಕೆಯನ್ನು ಗುರುತಿಸಬಹುದಾಗಿದೆ. (ರಘುವಂಶದ ಮೊದಲ ಸರ್ಗ)
ಗುಣ ದೋಷ ಎನ್ನುವುದು ವಿಮರ್ಶೆಯ ಪರಿಭಾಷೆ. ಕವಿಯ ಮಾತಿನಲ್ಲಿ ಅದು ಸದಂಶ ಮತ್ತು ಅಸದಂಶ. ಮೌಲಿಕವಾದುದನ್ನು ಮತ್ತು ಮೌಲಿಕವಲ್ಲದ್ದನ್ನು ಗುರುತಿಸಲಿಕ್ಕೆ ಕಾರಣರಾಗಬಲ್ಲವರೇ (ಸದ್ ಅಸದ್ ವ್ಯಕ್ತಿ ಹೇತವಃ) ನಿಜವಾದ ಓದುಗರು (ಸಂತಃ). ಅವರು ತನ್ನ ಕಾವ್ಯವನ್ನು ಕೇಳಬೇಕೆಂದು ಕವಿ ಬಯಸಿದ್ದಾನೆ. ಚಿನ್ನದ ಅದಿರಿನ ರೂಪಕ ಅದನ್ನೆ ಹೇಳುತ್ತದೆ. ತನ್ನ ಕಾವ್ಯ ಚಿನ್ನದ ಅದಿರು ಎನ್ನುವ ಆತ್ಮವಿಶ್ವಾಸವೂ ಇಲ್ಲಿದೆ. ಅಸದಂಶ ಸಂಭಾವ್ಯ ಎನ್ನುವ ಎಚ್ಚರವೂ ಕವಿಗೆ ಇದೆ. ಆ ಎಚ್ಚರವೆ ಕವಿಯ ವಿನಯ. ‘ಮಂದನಾದರೂ ಕವಿಯ ಕೀರ್ತಿಯನ್ನು ಬಯಸಿ ಎತ್ತರದ ಹಣ್ಣಿಗೆ ಕೈ ಎತ್ತಿದ ಕುಬ್ಜನಂತೆ ನಗೆಪಾಟಲಾಗಿದ್ದೇನೆ. ಸೂರ್ಯನಿಂದ ಉದಯಿಸಿದ ರಘುವಂಶವೆಲ್ಲಿ! ವಿಸ್ತರದ ಅನುಭವವಿಲ್ಲದ ನನ್ನ ಮತಿಯೆಲ್ಲಿ! ಸಣ್ಣ ದೋಣಿಯಿಂದ ಅಪಾರ ಸಾಗರ ದಾಟಬಯಸಿದ್ದೇನೆ.’ ಹೀಗೆನ್ನುತ್ತಲೇ ಕವಿ ಆತ್ಮವಿಶ್ವಾಸದ ಮಾತನ್ನಾಡುತ್ತಾನೆ. ಕವಿಯ ವಿನಯ ವಿಶ್ವಾಸಗಳನ್ನು ವಿಮರ್ಶೆಯ ಬೆಂಕಿ ಸುಟ್ಟು ಹಾಕಬಾರದೆನ್ನುವ ಆಶಯವೂ ಈ ಮಾತಿನ ಹಿಂದೆ ಇದ್ದೀತು. ಕಾಳಿಕೆಯನ್ನು ಕಳೆಯುತ್ತಲೇ ಅಪರಂಜಿಯನ್ನು ಬೆಂಕಿ ಬೆಳಗಬೇಕು. ವಿಮರ್ಶೆ ಬೆಳಗುವ ಬೆಂಕಿ; ಸುಡುವಂಥದಲ್ಲ. ಅದು ವಿಮರ್ಶೆಯ ವಿನಯ. ವಿಮರ್ಶೆಗೆ ಬೆಂಕಿಯ ರೂಪಕ ಲಾಗಾಯ್ತಿನಿಂದಲೂ ಇದೆ. ‘ಭಾಸನ ನಾಟಕಗಳನ್ನು ಪರೀಕ್ಷಿಸಲೆಂದು ವಿಮರ್ಶಕರು ಬೆಂಕಿಗೆ ಎಸೆದರಂತೆ! ಆದರೂ ‘ಸ್ವಪ್ನವಾಸವದತ್ತ’ ಮಾತ್ರ ಸುಟ್ಟುಹೋಗಲಿಲ್ಲ’ ಎನ್ನುತ್ತದೆ ಸಂಸ್ಕೃತದ ಪ್ರಸಿದ್ಧ ಪ್ರಾಚೀನೋಕ್ತಿ.


ವಿಮರ್ಶೆಯ ಅವಜ್ಞೆಗೆ ಅಥವಾ ಅವಜ್ಞೆಯ ವಿಮರ್ಶೆಗೆ ಕವಿಯ ಒಳಗನ್ನು ಸುಡುವ ಶಕ್ತಿ ಇದೆಯೆಂದು ತೋರುತ್ತದೆ. ಆದರೂ ಆತ್ಮವಿಶ್ವಾಸದ ಹಾಗೂ ಆಶಾವಾದದ ಕವಿ ಅದನ್ನು ದಾಟಬಲ್ಲ ಎನ್ನುವ ಸುಳಿವು ಮತ್ತೊಬ್ಬ ಪ್ರಸಿದ್ಧ ನಾಟಕಕಾರ ಭವಭೂತಿಯ ಈ ಮಾತಿನಲ್ಲಿದೆ

.
“ನನ್ನ ಕಾವ್ಯಕ್ಕೆ ಅವಜ್ಞೆಯನ್ನು ತೋರುವರಲ್ಲ! ಅವರಿಗೇನು ಗೊತ್ತಾಗುತ್ತೆ! ಅಂಥವರಿಗೆಂದು ನಾನು ಬರೆದದ್ದಲ್ಲ. ನನ್ನ ಸಮಾನಮನಸ್ಕನು ಮುಂದೆಂದೋ ಹುಟ್ಟುವನು. ಕೊನೆಯಿಲ್ಲದ್ದು ಕಾಲ; ವಿಶಾಲವಾಗಿದೆ ನೆಲ.”


ಯೇ ನಾಮ ಕೇಚಿದಿಹ ನಃ ಪ್ರಥಯಂತ್ಯವಜ್ಞಾಮ್
ಜಾನಂತಿ ತೇ ಕಿಮಪಿ ತಾನ್ ಪ್ರತಿ ನೈಷ ಯತ್ನಃ
ಉತ್ಪತ್ಸö್ಯತೇಸ್ತಿ ಮಮ ಕೋಪಿ ಸಮಾನಧರ್ಮಾ
ಕಾಲೋ ಹ್ಯಯಂ ನಿರವಧಿಃ ವಿಪುಲಾ ಚ ಪೃಥ್ವೀ
Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024