Editorial

ದಾರಿ ದೀಪ – 7

ಡಾ.ಶ್ರೀರಾಮ ಭಟ್ಟ

ಮೌಲ್ಯಸಮೂಹವೆ ಧರ್ಮ


ಧಾರಣಾತ್ ಧರ್ಮ ಇತ್ಯಾಹುಃ ಧರ್ಮೋ ಧಾರಯತೇ ಪ್ರಜಾಃ
ಯತ್ ಸ್ಯಾತ್ ಧಾರಣಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ

(ಮಹಾಭಾರತ: ಕರ್ಣಪರ್ವ ಮತ್ತು ಶಾಂತಿಪರ್ವ)
“ಧಾರಣೆ ಅಂದರೆ ಎತ್ತಿಹಿಡಿಯುವುದೆ ಧರ್ಮ ಎನ್ನಲಾಗಿದೆ. ಧರ್ಮವು ಚರಾಚರ ಸೃಷ್ಟಿಯನ್ನೆಲ್ಲ ಬದುಕಗೊಡುವುದು. ಯಾವುದು ಧಾರಣವನ್ನು ಒಳಗೊಂಡಿದೆಯೊ ಅದೆ ಧರ್ಮ ಎನ್ನುವುದು ನಿಶ್ಚಯ.”


ಇಂದು ನಮಗೆ ಧರ್ಮ ಪದ ಗೊಂದಲದ ಗೂಡು. ಅದರ ಯಥಾರ್ಥ ತಿಳಿಯಲು ಹಿಂದಕ್ಕೇ ಹೋಗಬೇಕು. ವೇದದಲ್ಲೂ ವಾಲ್ಮೀಕಿ ರಾಮಾಯಣದಲ್ಲೂ ಧರ್ಮ ಪದ ಮತ್ತೆ ಮತ್ತೆ ಕಾಣಿಸಿಕೊಂಡರೂ ಆ ಪದದ ನಿರ್ವಚನ ಅಥವಾ ವಿಶ್ಲೇಷಣೆ ಅಲ್ಲಿ ಕಾಣಸಿಗದು. ಧರ್ಮ ಪದದ ಈ ನಿರ್ವಚನ ಮೊದಲು ಕಾಣುವುದು ಮಹಾಭಾರತದಲ್ಲಿ. ಕರ್ಣಪರ್ವದಲ್ಲೂ ಶಾಂತಿಪರ್ವದಲ್ಲೂ ಅದೇ ಮಾತು ಪುನರಾವರ್ತನೆ ಗೊಳ್ಳುವ ಮೂಲಕ ಅದರ ಮಹತ್ವ ಸೂಚಿತವಾಗಿದೆ.


ಧರ್ಮ ಪದವು ಧೃಞ್ ಧಾತುವಿನಿಂದ ನಿಷ್ಪನ್ನವಾಗಿದೆ (ಧೃಞ್ ಧಾರಣೇ). ಎತ್ತಿಹಿಡಿ, ಧರಿಸು ಎನ್ನುವುದು ಅದರ ಅರ್ಥ. ಸ್ವಹಿತವನ್ನೂ ಪರಹಿತವನ್ನೂ ಒಟ್ಟಿಗೆ ಧರಿಸುವುದು ಅಂದರೆ ಸಾಧಿಸುವುದು ಧರ್ಮ. ಅದಕ್ಕೆ ಬೇಕಾದ ಆಚರಣೆ ಅಂದರೆ ನಡತೆಯೇ ಧರ್ಮ (ಆಚಾರಃ ಪರಮೋ ಧರ್ಮಃ). ಅರ್ಥ ಕಾಮಗಳ ವಿನಿಯೋಜನೆಗಾಗಿ ಈ ಧರ್ಮದ ಪರಿಕಲ್ಪನೆ. ಧರ್ಮ ಅರ್ಥ ಕಾಮ ಇವು ‘ತ್ರಿವರ್ಗ’ ಎಂದು ಕರೆಯಲಾದ ಸರಣಿ. ಧರ್ಮ ಇಲ್ಲದೆ ಅರ್ಥ ಕಾಮಗಳು ಅನರ್ಥಕಾರಿ. ಕಾಮ ಎಂದರೆ ಕಾಮನೆ-ಬಯಕೆಗಳು. ನಾದ ಸ್ಪರ್ಶ ರೂಪ ರಸ ಗಂಧ ಈ ಐದು ‘ವಿಷಯ’ಗಳನ್ನು ಇಂದ್ರಿಯಗಳ ಮೂಲಕ ಮನಸ್ಸು ಆಸ್ವಾದಿಸಲು ಸದಾ ಬಯಸುತ್ತಿರುತ್ತದೆ. ಅದಕ್ಕೆ ಮಿತಿ ಇಲ್ಲ. ಅರ್ಥ ಯಾವತ್ತೂ ಮಿತ. ಅರ್ಥ ಎಂದರೆ ಸ್ಥೂಲವಾಗಿ ಸಂಪಾದನೆ (ಮನುಷ್ಯಾಣಾಂ ವೃತ್ತಿಃ ಅರ್ಥಃ-ಕೌಟಿಲ್ಯ) ಮಿತವಾದ ಅರ್ಥದಿಂದ ಮಿತಿಯಿಲ್ಲದ ವಿಷಯಗಳನ್ನು ಹೊಂದಿಸಿಕೊಳ್ಳಬೇಕಾದ ಸಮಸ್ಯೆಯನ್ನು ಮನುಕುಲ ಎಂದಿನಿಂದಲೂ ಎದುರಿಸುತ್ತಲೇ ಇದೆ. ಹೇಗಾದರಾಗಲಿ, ಬಯಸಿದ್ದು ಸಿಗಲೇಬೇಕು, ಅಡ್ಡದಾರಿ ಹಿಡಿದರೂ ಸರಿಯೇ ಎಂದು ಹೊರಟಾಗ ಏನಾಗುತ್ತದೆ? ಹಿಂಸೆ ವಂಚನೆ ಭ್ರಷ್ಟಾಚಾರ ಸುಲಿಗೆ ಶೋಷಣೆ ತಾರತಮ್ಯ ಒಂದೆ? ಎರಡೆ? ನೂರು ನೂರು ಅಪಮೌಲ್ಯಗಳು ವಿಜೃಂಭಿಸುತ್ತವೆ. ಬಲಶಾಲಿ ಬದುಕುತ್ತಾನೆ; ದುರ್ಬಲ ಸೋತು ಸುಣ್ಣವಾಗುತ್ತಾನೆ. ಕೌಟಿಲ್ಯನ ಮಾತಿನಲ್ಲಿ ಇದು ಮತ್ಸ್ಯನ್ಯಾಯ – ದೊಡ್ಡ ಮೀನು ಸಣ್ಣ ಮೀನನ್ನು ನುಂಗಿ ಬದುಕುವ ಜೀವನ ವಿಧಾನ. ಇದನ್ನು ಅಲ್ಲಗಳೆಯುವ ಪರಿಕ್ರಮವಾಗಿ ಧರ್ಮ ವ್ಯವಸ್ಥೆ ಕಾಣಿಸಿಕೊಂಡಿತು. ‘ಅರ್ಥ ಕಾಮಗಳನ್ನು ನಿಯಂತ್ರಿಸುವ ವ್ಯವಸ್ಥೆಯೇ ಧರ್ಮ’ ಎಂದು ಪು.ತಿ.ನ. ಒಮ್ಮೆ ಮಾತಿನ ನಡುವೆ ಸೂತ್ರರೂಪವಾಗಿ ಹೇಳಿದ್ದರು. ನಿಯಂತ್ರಣ ಮಾರ್ಗ ಮೌಲ್ಯಾನುಸರಣೆ. ಅಹಿಂಸೆ ಸತ್ಯ ಪ್ರಾಮಾಣಿಕತೆ ದಯೆ ತನ್ನಂತೆ ಪರರ ಬಗೆವುದು ದುಡಿಮೆ ಉದಾರತೆ ಸಮತೆ ಮುಂತಾಗಿ ನೂರು ನೂರು ಮೌಲ್ಯಗಳೆ ಒಟ್ಟಾಗಿ ಧರ್ಮ ಎನಿಸಿತು.

ಮಹಾಭಾರತದಲ್ಲೂ ಸ್ಮೃತಿಗ್ರಂಥಗಳಲ್ಲೂ ಮೌಲ್ಯಗಳ ಸಮುದಾಯವನ್ನೆ ಧರ್ಮ ಎಂದು ಸ್ಪಷ್ಟವಾಗಿ ಹೆಸರಿಸಲಾಗಿದೆ. ಇಂದಿನ ಗೊಂದಲದ ಸನ್ನಿವೇಶದಲ್ಲಿ ‘ಧರ್ಮ’ ಎನ್ನುವ ಪದ ವಿಚಿತ್ರವಾಗಿ ಕೇಳಿಸುತ್ತದೆ. ಇಂದು ಧರ್ಮ ಎಂದರೆ ‘ಮತಧರ್ಮ’ ಎನ್ನುವ ಅರ್ಥ ಸಾರ್ವತ್ರಿಕ ಮನದಲ್ಲಿ ಸ್ಥಾಪಿತವಾಗಿಬಿಟ್ಟಿದೆ. ಎಂಥ ದುಃಸ್ಥಿತಿ! ಯಾವನೋ ಪುಣ್ಯಾತ್ಮ ಅದ್ಯಾವ ಗಳಿಗೆಯಲ್ಲಿ ಇಂಗ್ಲಿಷ್‌ನ ‘ರಿಲಿಜನ್’ ಪದವನ್ನು ‘ಧರ್ಮ’ ಎಂದು ಅನುವಾದಿಸಿದನೋ! ನಮ್ಮ ನೂರು ಮತಗಳನ್ನೆಲ್ಲ ಧರ್ಮ ಎಂದೇ ಕರೆಯತೊಡಗಿದೆವು. ಅದಕ್ಕೆ ಹಿಂದೆ ಮತವು ಧರ್ಮ ಎನಿಸಿರಲಿಲ್ಲ. ಪಂಪನು ಜಿನಾಗಮ, ಜಿನಮತಾರುಚಿ ಎಂದು ಮುಂತಾಗಿ ಕರೆಯುವುದನ್ನು ಗಮನಿಸಬೇಕು. ಆ ದೃಷ್ಟಿಯಲ್ಲಿ ಹಿಂದೂಧರ್ಮ ಎನ್ನುವುದು ಮತವೂ ಅಲ್ಲ; ಧರ್ಮವೂ ಅಲ್ಲ. ಧರ್ಮ ಮತಾತೀತ; ಅದಕ್ಕೆ ಮತದ ಹಂಗಿಲ್ಲ. ಅದು ವಿಶ್ವಾತ್ಮಕ; ವಿಶ್ವಕ್ಕೇ ಸಲ್ಲುವಂಥದು. ವಿಶ್ವಮಾನವ ಅನ್ನುವುದು ಕೂಡ ಮನುಷ್ಯಸೀಮಿತ.

ಸಕಲ ಸೃಷ್ಟಿಯ ಹಿತವನ್ನು ಎತ್ತಿ ಹಿಡಿಯುವ ಮೌಲ್ಯವೆ ಧರ್ಮ.
ಮೌಲ್ಯ (Values) ಅಥವಾ ಜೀವನ ಮೌಲ್ಯ (Values of life) ಇಂಗ್ಲಿಷಿನ ಅನುವಾದ; ಆಧುನಿಕ ಸಂವೇದನೆಗೆ ಸೂಕ್ತವಾದ ಪದ. ಅದೇ ಪ್ರಾಚೀನ ಪರಿಭಾಷೆಯಲ್ಲಿ ಧರ್ಮ. ವ್ಯಾಸ ಮುನಿಯ ಮಾತು ನೋಡಿ : ಧರ್ಮಮೂಲಃ ಸದೈವಾರ್ಥಃ ಕಾಮೋ ಅರ್ಥಫಲಮುಚ್ಯತೇ(ಉದ್ಯೋಗ ಪರ್ವ ೧೨೩.೪). ಯಾವಾಗಲೂ ಅರ್ಥದ ಬೇರು ಧರ್ಮ; ಅರ್ಥದ ಫಲ ಕಾಮ. ಇಲ್ಲಿ ಜೀವವೃಕ್ಷದ ಚಿತ್ರ ಮರೆಯಲ್ಲಿದೆ. ಪಂಪ ಅದನ್ನು ಹೆಚ್ಚು ಕಾವ್ಯಾತ್ಮಕವಾಗಿಸಿದ್ದಾನೆ.


ಧರ್ಮಾರ್ಥಕಾಮಮೆಂಬಿವು
ಧರ್ಮಾರ್ಥಿ ಜನಕ್ಕೆ ನೆರ್ಮಂತವಱೊಳ್
ಧರ್ಮಂ ಪ್ರಧಾನಮರ್ಥಂ
ಧರ್ಮಾಂಘ್ರಿಪದ ಫಲಮದರ್ಕೆ ರಸಮದು ಕಾಮಂ
(ಆದಿಪುರಾಣ)
ಧರ್ಮವನ್ನು ಬಯಸುವ ಜನಕ್ಕೆ ಧರ್ಮ ಅರ್ಥ ಕಾಮ ಇವು ಆಧಾರ. ಅವುಗಳಲ್ಲಿ ಧರ್ಮ ಪ್ರಧಾನ. ಅರ್ಥವು ಧರ್ಮವೃಕ್ಷದ ಫಲ. ಆ ಹಣ್ಣಿನ ರಸವೆ ಕಾಮ. ತುಂಬ ಸಾರ್ಥಕವಾದ ಮನೋಜ್ಞ ಪದ್ಯ ಇದು. ಇಲ್ಲಿ ವೃಕ್ಷ(ಅಂಘ್ರಿಪ)ದ ಚಿತ್ರ ಬದುಕಿನ ಬಗೆಗೆ ಪಂಪನ ಪೂರ್ಣದೃಷ್ಟಿಯನ್ನು ಧ್ವನಿಸಿದೆ.


ಧಾರಣ ಶಕ್ತಿಯ ಹಿನ್ನೆಲೆಯಿಂದಲೇ ಧರ್ಮ ಪದಕ್ಕೆ ಸ್ವಭಾವ, ಕರ್ತವ್ಯ ಮುಂತಾದ ಅರ್ಥಗಳೂ ಒದಗಿವೆ. ಪರಮಾತ್ಮ ಅಥವಾ ಪರಮ ಚೈತನ್ಯವನ್ನೂ ಧರ್ಮ ಎಂದು ವ್ಯಾಸ ಕರೆದಿದ್ದಾನೆ. ಮಣ್ಣಿನ ಕಣ್ಣಿಗೆ ಕಾಣದ ವಿಶ್ವಾತ್ಮಕ ಚೈತನ್ಯವು ವಿಶ್ವದ ಅಂತರಂಗದಲ್ಲಿದ್ದು ಸಕಲವನ್ನೂ ಧಾರಣ ಮಾಡಿದೆ; ಜಡ ಜಗವು ಚೇತನಶೀಲವಾಗಲು ಕಾರಣವಾಗಿದೆ ಎಂಬ ಅರ್ಥದಲ್ಲಿ. ಆದರೂ ಕವಿ ವ್ಯಾಸ ಈ ಬದುಕಿನಲ್ಲಿ ಕಣ್ಣು ನೆಟ್ಟಿದ್ದಾನೆ. ಶಾಂತಿಪರ್ವದಲ್ಲಿ ವ್ಯಾಸ ಹೇಳುತ್ತಾನೆ: ಅಹಿಂಸಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಮ್-ಸಕಲ ಜೀವಿಗಳ ಅಹಿಂಸೆಯನ್ನು ಹೇಳುವುದಕ್ಕಾಗಿ ಧರ್ಮಪ್ರವಚನವನ್ನು ಮಾಡಬೇಕಾಯಿತು. ಸ ವೈ ಧರ್ಮೋ ಯತ್ರ ನ ಪಾಪಮಸ್ತಿ- ಯಾವುದು ಕೇಡನ್ನು ಉಂಟುಮಾಡದೋ ಅದೇ ಧರ್ಮ. ಧರ್ಮ ಕೇವಲ ಪ್ರವಚನವಾಗುವುದಕ್ಕಿಂತ ಆಚಾರ (ನಡೆ) ಆಗುವುದು ಮುಖ್ಯ-ಧರ್ಮಸ್ಯ ನಿಷ್ಠಾ ತು ಆಚಾರಃ ಎಂದು ಹೇಳಲು ವ್ಯಾಸ ಮರೆಯುವುದಿಲ್ಲ.

Team Newsnap
Leave a Comment
Share
Published by
Team Newsnap

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024