ಅಧಿಕಾರ ಮತ್ತು ಜನಹಿತ ವಿರಸ
ಡಾ.ಶ್ರೀರಾಮ ಭಟ್ಟ
ನರಪತಿಹಿತಕರ್ತಾ ದ್ವೇಷ್ಯತಾಂ ಯಾತಿ ಲೋಕೇ
ಜನಪದಹಿತಕರ್ತಾ ತ್ಯಜ್ಯತೇ ಪಾರ್ಥಿವೇಂದ್ರೈಃ
ಇತಿ ಮಹತಿ ವಿರೋಧೇ ವರ್ತಮಾನೇ ಸಮಾನೇ
ನೃಪತಿಜನಪದಾನಾಂ ದುರ್ಲಭಃ ಕಾರ್ಯಕರ್ತಾ (ಪಂಚತಂತ್ರ: ಮಿತ್ರಭೇದ: ೧೪೨)
ರಾಜನನ್ನು (ಅಧಿಕಾರವನ್ನು) ಓಲೈಸುವವರು ಜನರ ತಿರಸ್ಕಾರಕ್ಕೆ ಒಳಗಾಗುವರು. ಜನಸಮೂಹದ ಒಳಿತಿಗಾಗಿ ದುಡಿಯುವವರನ್ನು ಅಧಿಕಾರ ಅಥವಾ ಆಡಳಿತ (ರಾಜವ್ಯವಸ್ಥೆ) ದೂರಮಾಡುವುದು. ಈ ಮಹಾ ವಿಸಂಗತಿ ಈ ಕಾಲಕ್ಕೂ ಸಮಾನವೇ. ಆಡಳಿತ ಮತ್ತು ಜನಸಮೂಹದ ಹಿತ ಒಟ್ಟಿಗೇ ಸಾಗುವುದು ತೀರ ವಿರಳ.
ಪಂಚತಂತ್ರದಲ್ಲಿ ರಾಜರಿಗೇ ಹೇಳಿದ ಮಾತು ಇದು. ನರಪತಿಯನ್ನು ಆಡಳಿತ ಅಥವಾ ಅಧಿಕಾರ ಎಂದು ಅರ್ಥೈಸಿಕೊಂಡರೆ ಈ ಕಾಲಕ್ಕೂ ಪ್ರಾಯಃ ಸಲ್ಲುವ ಚಿತ್ರ ಇದು.ಅರ್ಧ ಶತಮಾನಕ್ಕೂ ಮಿಕ್ಕು ಪಾಲಿಸಿಕೊಂಡು ಬಂದ ನಮ್ಮ ಪ್ರಜಾಪ್ರಭುತ್ವದ ಚರಿತ್ರೆ ಕೂಡ ಈ ಚೌಕಟ್ಟಿನೊಳಗೇ ನುಸುಳುತ್ತಿದೆ.
ಸ್ವಹಿತ ಸಾಧನೆಗಾಗಿಯೇ ರಾಜಕೀಯ ಅಧಿಕಾರ ಎನ್ನುವುದನ್ನು ರಾಜಕಾರಣ ಬಲವಾಗಿ ನಂಬಿದೆ; ನೆಚ್ಚಿದೆ; ನಡೆದಿದೆ. ಇಂದು ಅಪ್ಪಟ ಜನಹಿತ ಚಿಂತಕ, ನಿಜವಾದ ಅರ್ಥದ ಸಮಾಜಸೇವಕ ಚುನಾವಣೆಗೆ ನಿಂತು ಗೆಲ್ಲಲು ಸಾಧ್ಯವೆ! ಹಣ ಚೆಲ್ಲಿ ಆಸ್ತಿ ಲೂಟಿ ಮಾಡುವ ಪ್ರಕ್ರಿಯೆಯಲ್ಲಿ ಅಧಿಕಾರವನ್ನು ಓಲೈಸುವ ಹಿಂಬಾಲಕರ ಸಮೂಹ ಬೇಕು. ಆ ಸಮೂಹದಲ್ಲಿ ಸಾಹಿತ್ಯ ವಿಜ್ಞಾನ ಸಂಸ್ಕೃತಿ ಶಿಕ್ಷಣ ಧಾರ್ಮಿಕ ಜಾತಿ ಮತ ಬೌದ್ಧಿಕ ವಲಯಗಳ ‘ಕೆಲವು’ ಪ್ರಸಿದ್ಧರೂ ಅಪ್ರಸಿದ್ಧರೂ ಇರಬೇಕು; ಇದ್ದಾರೆ. ಹೆಚ್ಚಿನ ಚಿಂತಕರಿಗೂ ಇಸಮ್‌ಗಳ ಗರ ಹಿಡಿದಿದೆ. ಆಗ ವಿರಸವೇ ವಿನಾ ಸಮರಸವೆಲ್ಲಿ? ಆದರೆ ಕಾಲ ಮತ್ತು ಜನಸಮೂಹ ಅದನ್ನು ಬಹಳ ಕಾಲ ಸಹಿಸಿಕೊಳ್ಳದು. ತಿರಸ್ಕಾರ ಅಥವಾ ಮರೆವು ಅದಕ್ಕೆ ಜನಪ್ರತಿಕ್ರಿಯೆ ಆಗುತ್ತದೆ.
ಅಧಿಕಾರಕ್ಕೆ ಏರಿಸಿದವರಿಗೆ ಇಳಿಸುವ ಹಕ್ಕೂ ಇರಬೇಕೆಂದು ಜಯಪ್ರಕಾಶ್ ನಾರಾಯಣ್ ದೊಡ್ಡ ಚಳುವಳಿ ನಡೆಸಿದರು. ಬೆಂಬಲಕ್ಕೆ ಪ್ರಧಾನವಾಗಿ ವಿದ್ಯಾರ್ಥಿ ಸಮೂಹ. ಚಳುವಳಿಗೆ ನಿಂತ, ಅಂದು ವಿದ್ಯಾರ್ಥಿಗಳಾಗಿದ್ದವರು (ನಾವು) ಇಂದು ನಿವೃತ್ತರು. ಅಧಿಕಾರದ ಸ್ವಭಾವವೂ ಸ್ವರೂಪವೂ ಇಂದಿಗೂ ಹೆಚ್ಚು ಕಮ್ಮಿ ಹಾಗೇ ಇದೆ. ’ಜನಪದ ಹಿತಕರ್ತ’ ಜೆ ಪಿ ಅವರನ್ನು ಅಧಿಕಾರ ದೂರ ತಳ್ಳಿತು. ವಿವಿಧ ರಂಗಗಳಲ್ಲಿ ಜನಹಿತ ಚಿಂತಕರು ಅಧಿಕಾರದೊಂದಿಗೆ ಸೆಣಸುತ್ತಲೇ ಇದ್ದಾರೆ. ಅಧಿಕಾರಕ್ಕೆ ಅವರು ಆಪ್ತರಾಗಲಾರರು. ದೂರ ಮಾಡುವುದೊಂದೇ ದಾರಿ.
ಅಧಿಕಾರಿಗಳು ಅಧಿಕಾರದ ಅಧೀನ. ಅಧಿಕಾರಿಗಳಿಲ್ಲದೆ ರಾಜಕಾರಣ ನಡೆಯದು. ಅವರ ನಡುವಿನ ವ್ಯವಹಾರ ಪರಸ್ಪರ ನಿಬಂಧನ ರೂಪದ್ದಾಗಿದೆ. ಪಂಚತಂತ್ರದ ಅನುಭವವೂ ಅದೇ:
ನ ವಿನಾ ಪಾರ್ಥಿವೋ ಭೃತ್ಯೈಃ ನ ಭೃತ್ಯಾಃ ಪಾರ್ಥಿವಂ ವಿನಾ
ತೇಷಾಂ ಚ ವ್ಯವಹಾರೋ$ಯಂ ಪರಸ್ಪರನಿಬಂಧನಃ (ಪಂಚತಂತ್ರ: ಮಿತ್ರಭೇದ: ೮೭)
ರಾಜನಿಲ್ಲದೆ ಸೇವೆಯ ಅಧಿಕಾರಿಗಳಿಲ್ಲ; ಅಧಿಕಾರಿಗಳ ಸೇವೆ ಇಲ್ಲದೆ ರಾಜನಿಲ್ಲ. ಅವರ ವ್ಯವಹಾರ ಪರಸ್ಪರ ಸಂಬಂಧಿಸಿಯೇ ಇರುವಂಥದು. ಅಧಿಕಾರಿಗಳು ಜನಪರರಾಗುವುದು ಕಷ್ಟ. ಜನಪರರಾದಲ್ಲಿ ಅವರಿಗೂ ಬಗೆ ಬಗೆಯ ಕಷ್ಟ ತಪ್ಪಿದ್ದಲ್ಲ. ಪ್ರಾಮಾಣಿಕ ಅಧಿಕಾರಿಗಳಲ್ಲೂ ಹಲವರು ಜನಪರರಲ್ಲ; ಅರ್ಥ ಕಳೆದುಕೊಂಡ ಕಾನೂನಿನ ನಿಷ್ಠುರ ಪರಿಪಾಲಕರು ಮಾತ್ರ. ಪ್ರಾಮಾಣಿಕತೆಯ ದರ್ಪ ಮೆರೆಯುವಲ್ಲಿ ಬುದ್ಧಿಗೆ ಆಸ್ಪದವಾದೀತೇ ವಿನಾ ಹೃದಯಕ್ಕಲ್ಲ. ಅಲ್ಲಿಗೆ ಅಧಿಕಾರ ಮತ್ತು ಜನಹಿತ ವಿರುದ್ಧ ಧ್ರುವ ಗಳಾಗಿಬಿಟ್ಟಿವೆ. ಈ ವಿರಸ ಸಮರಸವಾಗುವುದನ್ನು ಜನ ಕಾಯುತ್ತಲೇ ಇದ್ದಾರೆ. ಕಾಯುವುದು ತಪ್ಪಲ್ಲ; ಇಂದಿಗೂ ತಪ್ಪಿಲ್ಲ.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ