December 9, 2024

Newsnap Kannada

The World at your finger tips!

Bankers dairy

ಬದುಕು ಬಲು ಹಿರಿದು(ಬ್ಯಾಂಕರ್ಸ್ ಡೈರಿ)

Spread the love
IMG 20180306 WA0008 1 edited
ಡಾ. ಶುಭಶ್ರೀಪ್ರಸಾದ್, ಮಂಡ್ಯ

ಬ್ಯಾಂಕು ಅನೇಕ ಅನುಭವಗಳ ಗಣಿ. ಒಳಿತು ಕೆಡಕು ಮಾತುಗಳೆಲ್ಲವೂ ಇಲ್ಲಿ ಸಹಜವಾಗಿಯೇ ಕಿವಿಗೆ ಬೀಳುತ್ತವೆ. ಅನೇಕ ಬಾರಿ ನಾವು ಕೇಳಿ ತಿದ್ದಿಕೊಳ್ಳುವುದೂ ಇರುತ್ತದೆ; ಇಲ್ಲ ಸಲ್ಲದ ಮಾತುಗಳನ್ನು ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟುಬಿಡಬೇಕಾಗುತ್ತದೆ ಕೂಡ.

ಅನೇಕ ಗ್ರಾಹಕರು ನಮ್ಮನ್ನು ತಮ್ಮ ಕುಟುಂಬದ ಹಿತೈಷಿಗಳೆಂದೇ ಭಾವಿಸಿ ಕಷ್ಟ ಸುಖವನ್ನು ಹೇಳಿಕೊಳ್ಳುವಷ್ಟು ಬಳಕೆಯನ್ನೂ ಮತ್ತು ಆತ್ಮೀಯತೆಯನ್ನೂ ಬೆಳೆಸಿಕೊಂಡುಬಿಟ್ಟಿರುತ್ತಾರೆ. ಅದು ನಮಗೇ ಕೆಲವೊಮ್ಮೆ ಅಚ್ಚರಿಯನ್ನು ತಂದುಬಿಡುತ್ತದೆ. ಬ್ಯಾಂಕರುಗಳಾಗಿ ನಮ್ಮ ನಡವಳಿಕೆ ಗ್ರಾಹಕರ ಮೇಲೆ ಬೀರುವ ಪರಿಣಾಮವನ್ನು ನಾವು ಅನೇಕ ಬಾರಿ ಊಹಿಸಿಯೇ ಇರುವುದಿಲ್ಲ. ನಮ್ಮ ನಗುಮುಖ ಹಾಗು ಸಿಡುಕುಮುಖಗಳು ನಮ್ಮನ್ನು ಮಾತ್ರವೇ ಚಿತ್ರಿಸದೆ ನಮ್ಮ ಸಂಸ್ಥೆಯ ಚಿತ್ರಣವನ್ನು ಕಟ್ಟಿಕೊಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ.
ಹುಟ್ಟು ಸಾವು ನಮ್ಮ ಕೈಯ್ಯಲ್ಲಿಲ್ಲ. ಆದರೆ ಬದುಕನ್ನು ಚಂದಮಾಡಿಕೊಳ್ಳುವುದು ನಮ್ಮ ಕೈಯ್ಯಲ್ಲಿದೆ.

ಈ ಹಿಂದಿನ ಬ್ಯಾಂಕರ್ಸ್ ಡೈರಿಯಲ್ಲಿ ನಾ ಹೇಳಿದ್ದ ನೆನಪು: ಯಾರಾದರೂ ಚಿಕ್ಕ ಅಥವಾ ಮಧ್ಯವಯಸ್ಕ ಹುಡುಗರು ತಲೆಯಲ್ಲಿ ಕೂದಲಿಲ್ಲದೇ ಬಂದರೆ ನನ್ನೊಳಗೆ ಸಣ್ಣ ಕಂಪನ ಉಂಟಾಗುತ್ತದೆ. ನಮ್ಮ ಯಾವ ಗ್ರಾಹಕರು ಹೋಗಿಬಿಟ್ಟರೋ ಎಂದು. ಅದರಲ್ಲೂ ಕೋವಿಡ್ ಸಮಯದಲ್ಲಿ ಓಹ್…. ಅನೇಕರನ್ನು ಕಳೆದುಕೊಂಡಿದ್ದೇವೆ.

ಎರಡನೆಯ ಅಲೆಯ ಕೋವಿಡ್ ಉತ್ತುಂಗದಲ್ಲಿದ್ದಾಗ ನಮ್ಮ ಗ್ರಾಹಕರೊಬ್ಬರು ನಮ್ಮ ಅಕೌಂಟೆಂಟ್‍ಗೆ ಕನ್ನಡದಲ್ಲಿ ಬರೆದಿದ್ದ ಒಂದು ಪತ್ರವನ್ನು ಕೈಗೆ ಕೊಟ್ಟು ಒಂದಿಷ್ಟೊತ್ತು ಅವರ ಮುಂದೆ ಕುಳಿತು ಏನೇನೋ ಮಾತನಾಡಿ ಹೋಗಿದ್ದರು. ಮಧ್ಯಾಹ್ನ ಅವರು ನನಗೆ ಆ ಪತ್ರವನ್ನು ಕೊಟ್ಟು ‘ಮೇಡಂ ಇವರು ಹೋಗ್ಬಿಟ್ಟಿದ್ದಾರಂತೆ. ಪಿಂಚಣಿ ಸ್ಥಗಿತ ಮಾಡಬೇಕು’ ಎಂದು ಹೇಳಿದರು. ‘ಆಗಲಿ ಸರ್’ ಎಂದು ಹೇಳಿ ಎಂದು ಆ ಪತ್ರವನ್ನು ಓದಿದೆ.
ಗೆ….. ಇಂದ ಶುರುವಾಗಿ ಮಾನ್ಯರೇ ಹೇಳಿ ‘ನಮ್ಮ ತಾಯಿಯವರು ಕೋವಿಡ್ ಇಂದ ಇಂದಿಗೆ ನಾಲ್ಕು ದಿನಗಳ ಹಿಂದೆ ತೀರಿಕೊಂಡಿದ್ದಾರೆ. ಆದ್ದರಿಂದ ಅವರ ಪಿಂಚಣಿಯನ್ನು ನಿಲ್ಲಿಸಿ ಎಂದು ಮನವಿ. ಮರಣ ಪ್ರಮಾಣ ಪತ್ರವನ್ನು ಪಡೆದ ಕೂಡಲೇ ಬ್ಯಾಂಕಿಗೆ ಸಲ್ಲಿಸುವೆ’ ಎಂದಿತ್ತು ಒಕ್ಕಣೆ. ನಾನು ಸುಮ್ಮನಿರಬಾರದೇ? “ಸರ್ ನಿಮ್ ಹತ್ರಾನೇ ಅಷ್ಟು ಹೊತ್ತು ಕೂತಿದ್ದ ಆಯಪ್ಪ. ಅವರಮ್ಮ ಹೋಗಿದ್ದು ಕೋವಿಡ್ ಇಂದ. ನೀವೂ ಹೋಗಿ ಚೆಕ್ ಮಾಡಿಸಿಕೊಳ್ಬೇಕಾಗುತ್ತೆ” ಅಂದೆ. ಕನ್ನಡ ಬಾರದಿದ್ದ ನಮ್ಮ ಅಕೌಂಟೆಂಟ್ ಹೌಹಾರಿದರು. ಪತ್ರ ಕೊಟ್ಟ ಆಸಾಮಿಗೆ ಹಿಡಿಶಾಪ ಹಾಕಿದರು. ಮರುದಿನದಿಂದಲೇ ಅವರಿಗೆ ತಲೆನೋವು, ಸಣ್ಣ ಜ್ವರ, ಕೆಮ್ಮು ಎನ್ನುತ್ತಿದ್ದರು. ಅದು ಮಾನಸಿಕವಾಗಿ ಬಿದ್ದ ಏಟೆಂಬುದು ನನಗೆ ಗೊತ್ತಿತ್ತು. ಮಾನಸಿಕವಾಗಿ ಕುಗ್ಗಿದಾಗ ದೇಹವೂ ಕುಗ್ಗುತ್ತದೆ. ಆದರೆ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಬಂದಿತ್ತು.

ಮೂರನೇ ಅಲೆಯ ವೇಳೆಗೆ ಎಲ್ಲರೂ ಗಟ್ಟಿಯಾಗಿದ್ದೆವು. ನಮ್ಮ ಕಿರಿಯ ಸಹೋದ್ಯೋಗಿಯೊಬ್ಬನಿಗೆ ಮೂರು ದಿನ ಜ್ವರ ಕಾಣಿಸಿಕೊಂಡು ಅವನು ಟೆಸ್ಟ್ ಮಾಡಿಸಿಕೊಂಡು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಆಸ್ಪತ್ರೆಯಿಂದ ಕರೆ ಬಂದು ಪಾಸಿಟಿವ್ ಎಂದರು. ಹಾಗೆ ಕಾಲ್ ಬಂದಾಗ ನಾನು ಅವನ ಕ್ಯಾಬಿನ್ನಿನಲ್ಲೇ ಅವನ ಪಕ್ಕದಲ್ಲೇ ನಿಂತು ಏನೋ ಹೇಳಿಕೊಡುತ್ತಿದ್ದೆ. “ಮೇಡಂ ನಂಗೆ ಪಾಸಿಟಿವ್ ಅಂತೆ” ಎಂದು ನಕ್ಕ. ನಾನೂ “ಕಂಗ್ರಾಜುಲೇಷನ್ಸ್. ಒಂದು ವಾರ ವೆಕೇಷನ್” ಎಂದು ರೇಗಿಸಿದ್ದೆ. ಆ ಮಟ್ಟಿಗೆ ನಾವೆಲ್ಲರೂ ಬದಲಾಗಿದ್ದೆವು.

ಇವೆಲ್ಲ ಯಾತಕ್ಕಾಗಿ ಈಗ ಹೇಳುತ್ತಿದ್ದೇನೆಂದರೆ ಕೆಲವು ಮಹಿಳಾ ಗ್ರಾಹಕರು ತಮ್ಮ ವೈಯಕ್ತಿಕ ನೋವನ್ನು ನಮ್ಮ ಬಳಿ ಹೇಳಿಕೊಂಡಾಗ ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದ್ದಿದೆ ಹಾಗೂ ಆಶ್ಚರ್ಯವನ್ನೂ….

ಕೋವಿಡ್ ಸಮಯದಲ್ಲಿ ಸಾವು ತಾಂಡವವಾಡುತ್ತಿತ್ತು. ಬದುಕು ಹೋರಾಟ ನಡೆಸುತ್ತಿತ್ತು. ಅನೇಕ ಘಟನೆಗಳು ನಮ್ಮನ್ನು ಹಣ್ಣಾಗಿಸುತ್ತಿದ್ದವು; ಟಿ.ವಿ ಹಾಕಿದರಂತೂ ನಾವು ಭೂಮಿಯಲ್ಲಿ ಇದ್ದೇವೆಯೋ ಯಮಲೋಕದಲ್ಲಿದ್ದೇವೆಯೋ ಎಂಬ ಅನುಮಾನ ಮೂಡುತ್ತಿತ್ತು.

ಅಂದು ಕವಿತಾ (ಹೆಸರು ಬದಲಿಸಲಾಗಿದೆ) ಚಿನ್ನದ ಸಾಲಕ್ಕೆಂದು ಬ್ಯಾಂಕಿಗೆ ಬಂದಿದ್ದರು. ಅವರದ್ದು ಕೆ.ಜಿಗಟ್ಟಲೇ ಚಿನ್ನವಿತ್ತೆನಿಸುತ್ತದೆ. ಆಗಾಗ ಬಂದು ಇಡುತ್ತಿದ್ದರು. ನನಗೆ ಅವರ ಪರಿಚಯವಿತ್ತು. ಅವರ ಕುಟುಂಬದವರ ಬಗ್ಗೆ ಏನೂ ತಿಳಿದಿರಲಿಲ್ಲ. ಹಾಗೇ ಸುಮ್ಮನೆ ಒಮ್ಮೆ “ನಿಮ್ಮ ಹಸ್ಬೆಂಡ್ ಏನ್ಮಾಡ್ತಾರೆ” ಎಂದು ಲೋಕಾಭಿರಾಮವಾಗಿ ಕೇಳಿದೆ. “ಲಾಯರ್” ಎಂದು ಹೇಳಿದರು. ಅವರ ಗಂಡನ ಹೆಸರನ್ನು ವಿಳಾಸದಲ್ಲಿ ಓದಿದ್ದೆ. ಲಾಯರ್ ಅಂದಿದ್ದಕ್ಕೂ, ಆ ಹೆಸರನ್ನು ಓದಿದಾಗ ಎಲ್ಲೋ ಕೇಳಿದ ಹಾಗೆ ನೆನಪಾಗಿದ್ದಕ್ಕೂ ಒಂದೇ ಆಯಿತು. ಏಕೆಂದರೆ ಅವರದ್ದು ಅಪರೂಪದ ಹೆಸರು. ಹಾಗಾಗಿ ಪತ್ರಿಕೆಯಲ್ಲಿ ಓದಿದ ನೆನಪಾಯಿತು. “ಕಳೆದ ತಿಂಗಳು ಇದೇ ಹೆಸರಿನ ಲಾಯರ್ ಬಗ್ಗೆ ಓದಿದ್ದೆ ಪೇಪರಿನಲ್ಲಿ” ಎಂದು ಅನುಮಾನದಿಂದ ಹೇಳಿದೆ. ಆಕೆ “ಹೌದು ಮೇಡಂ ಅವರೇ ನನ್ನ ಹಸ್ಬೆಂಡ್. ಕಳೆದ ತಿಂಗಳು ಹೋಗ್ಬಿಟ್ರು. ನನ್ನ ಎಷ್ಟು ಚೆನ್ನಾಗಿ ನೋಡ್ಕೋತಿದ್ರು. ಇದ್ದಕ್ಕಿದ್ದ ಹಾಗೆ ನಡುನೀರಿನಲ್ಲಿ ಬಿಟ್ಬಿಟ್ಟು ಹೋಗ್ಬಿಟ್ರು. ಗೆಳೆಯರೆಲ್ಲ ಕ್ಲಬ್ಬಿನಲ್ಲಿ ಯುಗಾದಿಯ ಮರುದಿನ ಕಾರ್ಡ್ಸ್ ಆಡುತ್ತಿದ್ದರು. ಎ.ಸಿ. ರೂಮು ಯಾರಿಂದ ಯಾರಿಗೆ ಹಬ್ಬಿತೋ ಇಬ್ಬರು ಮೂವರಿಗೆ ಕೋವಿಡ್ ಅಟ್ಯಾಕ್ ಆಯಿತು. ಮಿಕ್ಕವರಿಗೆ ಆಯುಷ್ಯ ಗಟ್ಟಿ ಇತ್ತು. ಇವ್ರು ಹೋಗ್ಬಿಟ್ರು. ಬೇಕಾದಷ್ಟು ಆಸ್ತಿ ಮಾಡಿಟ್ಟಿದ್ದಾರೆ. ಯಾವ್ದಕ್ಕೂ ಕೊರತೆ ಇಲ್ಲ. ಅವರಿಲ್ಲ ಅನ್ನೋದನ್ನು ಬಿಟ್ರೆ. ಅದ್ಕೆ ನಾನು ಅವರಿಲ್ಲ ಅಂತ ಅಂದ್ಕೊಳೋದೇ ಇಲ್ಲ. ದಿನವೂ ನಾನು ಅವ್ರು ಕೋರ್ಟಿಗೆ ಹೋಗಿದಾರೆ ಬರ್ತಾರೆ… ಬರ್ತಾರೆ ಅಂತಾನೇ ಅಂದ್ಕೋತಿರ್ತೀನಿ. ಆಗ ಒಂಟಿ ಅನಿಸಲ್ಲ” ಎಂದು ಅಂಚಿನಲ್ಲಿ ಜಿನುಗುವಂತಿದ್ದ ಹನಿಯನ್ನು ಕೆಳಗೆ ಜಾರಲು ಬಿಡದೆ ಒರೆಸಿಕೊಂಡರು. “ಮೇಡಂ ಹೊರಗಿನವರ ಪೈಕಿ ನಿಮಗೆ ಮಾತ್ರವೇ ನಾನು ಈ ವಿಚಾರ ಹೇಳಿಕೊಂಡಿರೋದು. ಅವರಿಲ್ಲ ಅಂತ ಅನ್ನಲ್ಲ ಮೇಡಂ. ಎಲ್ಲೂ ನಾನು ಅವರ ಹೆಸರಿನ ಹಿಂದೆ ಲೇಟ್ ಅಂತ ಹಾಕಲ್ಲ” ಎಂದರು. ನನ್ನೊಳಗು ಕಲಕಿಹೋಯಿತು.

ಅನೇಕರು ಇದ್ದಾಗ ಬೆಲೆ ತಿಳಿಯದ ದಂಪತಿಗಳು ಕಳೆದುಕೊಂಡ ಮೇಲೆ ತಿಳಿದುಕೊಳ್ಳುತ್ತಾರಲ್ಲ ಏನು ಪ್ರಯೋಜನ ಎನಿಸಿತು. ಆ ಕ್ಷಣ “ಡಿಫೆನ್ಸ್ ನಲ್ಲಿದ್ದ ಗಂಡ ಇನ್ನೂ ನನ್ನ ಅಲ್ಲೇ ಕೆಲಸದಲ್ಲಿ ಇದ್ದಾರೆ ಎಂದುಕೊಳ್ಳುತ್ತೇನೆ ಮೇಡಂ. ಅವರು ಹೋಗಿಬಿಟ್ಟಿದ್ದಾರೆ ಅಂತ ನಾನು ಅಂದುಕೊಳ್ಳೋದೇ ಇಲ್ಲ. ಅಲ್ಲಿದ್ದಾಗಲೂ ಅಪರೂಪಕ್ಕೆ ಮನೆಗೆ ಬರುತ್ತಿದ್ದರು. ಈಗಲೂ ಅವರು ಬರ್ತಾರೆ ಅಂತಾನೇ ಅಂದ್ಕೋತೀನಿ. ಆಗ ನನಗೆ ಸಮಾಧಾನವಾಗಿರುತ್ತೆ” ಎನ್ನುವ ಯೋಧನೊಬ್ಬನ ಪತ್ನಿಯ ಮಾತೂ ನೆನಪಿಗೆ ಬಂತು.

ಕಳೆದುಕೊಂಡವರ ಕುಟುಂಬದ ನೋವು ಅವರಿಗೆ ಮಾತ್ರವೇ ಅರ್ಥವಾಗುತ್ತದೆ. ಹಾಗಂತ ಹೋದವರ ಹಿಂದೆ ಯಾರೂ ಹೋಗಲಾಗದು. ಕಳೆದುಹೋದವರ ನೆನಪು ಅಳಿಸದಂತೆ ಬದುಕುವುದರ ಜೊತೆಗೆ, ಇರುವವರ ಬದುಕೂ ದೊಡ್ಡದು ಎಂಬ ದೊಡ್ಡ ಸತ್ಯವನ್ನು ಕೋವಿಡ್ ಕಲಿಸಿತು.

ಸಾವು ಬಂದಾಗ ಮಾತ್ರ ಸಾವಲ್ಲ; ಬದುಕಿರುವವರ ಮನದಿಂದ ಅಳಿಸಿಹೋದರೂ ಸಾವೇ. ದೈಹಿಕವಾಗಿ ಕೊನೆಯಾದರೂ ಅನೇಕರ ಮನದಲ್ಲಿ ಉಳಿದರೆ ಅದೂ ಬದುಕಿದಂತೆಯೇ. ಹಾಗೆ ಬದುಕಬೇಕಾದರೆ ನಮ್ಮ ಸ್ವಾರ್ಥವನ್ನು ಮೀರಿ ನಾಲ್ಕಾರು ಜನರಿಗೆ ಉಪಕರಿಸಬೇಕು.

Copyright © All rights reserved Newsnap | Newsever by AF themes.
error: Content is protected !!