ಬೆಳಕ ಧಾರೆಯಾಗೋಣು ಬಾ. . . .

Team Newsnap
3 Min Read

ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.
ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಅಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
‘ತಮಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ,
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.
ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
‘ನನ್ನ ಹಣತೆ’ ಕವನದಲ್ಲಿ ಜಿ ಎಸ್ ಶಿವರುದ್ರಪ್ಪನವರು ಹಣತೆಯನ್ನು
ರೂಪಕವಾಗಿಸಿದ ರೀತಿಗೆ ಕನ್ನಡಕ್ಕೆ ಕನ್ನಡವೇ ಶರಣಾಯಿತು.
ಬೆಳಕಿನ ಹಬ್ಬ ಬಂತೆಂದರೆ ಈ ಕವನವನ್ನು ನೆನೆಯದೇ
ಇರಲಾದೀತೇ?

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಎನ್ನುತ್ತ ಪುಟ್ಟಕಡ್ಡಿ ಗೀರಿ ದೀಪದ ನಗೆಯ ಬೀರಿ ಬೆಳಕಿನ ಹಬ್ಬವನ್ನು ಆಚರಿಸುತ್ತೇವೆ. ದೀಪಾವಳಿಯೆಂದರೇ ಬೆಳಕಿನ ಹಬ್ಬ. ನಮ್ಮೆಲ್ಲ ದುಃಖ ದುಮ್ಮಾನಗಳಿಗೊಂದು ಪುಟ್ಟ ವಿರಾಮ ಹಾಕುವ ಸಮಯ.

ಭಾರತೀಯ ಸಂಸ್ಕೃತಿಯಲ್ಲಿ ಎಲ್ಲ ಹಬ್ಬಗಳೂ ಋತುಗಳ ಉತ್ಸವವೇ. ಪ್ರಕೃತಿಯಲ್ಲಿನ ಎಲ್ಲ ಋತುಗಳನ್ನೂ ಒಂದೊಂದು ರೀತಿಯಲ್ಲಿ ಪೂಜಿಸುತ್ತೇವೆ; ತನ್ಮೂಲಕ ಪ್ರಕೃತಿಗೆ ಕೃತಜ್ನತೆಯನ್ನು ಸಲ್ಲಿಸುತ್ತೇವೆ. ದೀಪಾವಳಿಗೆ ಯಕ್ಷರಾತ್ರಿ ಎಂದೂ ಕರೆಯಲಾಗುತ್ತದೆ. ತಮವೆಂದರೆ ಎಲ್ಲರಿಗೂ ದಿಗಿಲು. ತಮವ ಕಳೆವ ಬೆಳಕೆಂದರೆ ಸಂಭ್ರಮ. ವರ್ಷದ ಎಲ್ಲ ತಿಂಗಳುಗಳಿಗೂ ಹೋಲಿಸಿದರೆ, ಕಾರ್ತಿಕ ಮಾಸ ಹೆಚ್ಚು ಅಂಧಕಾರವನ್ನು ಹೊಂದಿರುತ್ತದೆ. ಹಾಗಾಗಿ ಸಂಜೆ ಮುಂದು ದೀಪ ಹಚ್ಚುವುದು ಭಯದಿಂದಲೂ, ಅಪಾಯದಿಂದಲೂ ಪಾರಾಗುವ ಉಪಾಯವೂ ಹೌದು.

ದೀಪ ಬೆಳಗುವ ಕ್ರಿಯೆಯೆಂದರೆ ಅದು ಎಣ್ಣೆ ಬತ್ತಿ ಉರಿಯುವ ಪ್ರಕ್ರಿಯೆ ಮಾತ್ರವಲ್ಲ, ನಮ್ಮೊಳಗೆ ಅಡಗಿರುವ
ಅಜ್ನಾನ, ಮೌಢ್ಯ, ಋಣಾತ್ಮಕ ಅಂಶಗಳನ್ನು ಹೋಗಲಾಡಿಸಿಕೊಳ್ಳಬೇಕಾದ ಪ್ರಕ್ರಿಯೆಗೆ ಚಾಲನೆಯೂ.
ಏಕೆಂದರೆ ದೀಪ ಊರ್ಧ್ವಮುಖಿ. ಹೇಗೆ ತನ್ನ ತಾ ಸುಟ್ಟುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ, ಹಾಗೆ ತನ್ನ
ಕೆಟ್ಟತನವನ್ನು ಸುಟ್ಟುಕೊಂಡು ಇತರರಿಗೆ ಒಳಿತನ್ನೇ ಮಾಡಲಿ ಎಂಬರ್ಥವೂ.

‘ವೇದದಲ್ಲಿ ಬರುವ ಶ್ರೀಸೂಕ್ತದಲ್ಲಿ ಮಣಿನಾಸಹ ಎಂಬುದಿದೆ, ಅಂದರೆ ಲಕ್ಷ್ಮಿಯನ್ನು ಇಲ್ಲಿ ಯಕ್ಷನ ತಂಗಿಯಾಗಿ ಕಾಣಲಾಗುತ್ತದೆ. ಯಕ್ಷರು ನಮಗೆ ಹಣವನ್ನು ಕೊಡುವಂತವರು. ರಾತ್ರಿ ಕಾಲದಲ್ಲಿ ಯಕ್ಷರನ್ನು ಪೂಜೆ ಮಾಡಲಾಗುತ್ತದೆ. ಕುಬೇರ ಯಕ್ಷರ ಅಧಿಪತಿ. ಕುಬೇರನನ್ನು ಮತ್ತು ಅವನ ತಂಗಿಯಾದ ಲಕ್ಷ್ಮಿ ಇವರಿಬ್ಬರನ್ನು ಪೂಜಿಸಿ ಧನಸಂಪತ್ತಿನೊಂದಿಗೆ ಬಾ ಎಂದು ಭಕ್ತಿಯಿಂದ ಆರಾಧಿಸುತ್ತೇವೆ’ ಎನ್ನುತ್ತಾರೆ ಸಂಸ್ಕೃತಿ ಚಿಂತಕರಾದ
ಡಾ.ವಿ.ಬಿ. ಆರತಿ ಅವರು.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು
ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ.

ದೀಪಾವಳಿ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ಕೊನೆಯಲ್ಲಿ ಆಚರಿಸಲಾಗುತ್ತದೆ.
ವಿಕ್ರಮಶಕೆ ಹೆಚ್ಚಾಗಿ ಉತ್ತರ ಭಾರತದಲ್ಲಿ ಗಣನೆಗೆ ತೆಗೆದುಕೊಳ್ಳುವುದರಿಂದ ಅಲ್ಲಿ ದೀಪಾವಳಿ ಹೊಸವರ್ಷದ ಹಬ್ಬವೂ ಹೌದು. ವೃದ್ಧಾಪ್ಯ ಶಾಪವಲ್ಲ ವಯೋವೃದ್ಧತೆ – ಬೆಳಕಿನ ಹಣತೆ

ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸದ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ.

ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಅಮಾವಾಸ್ಯೆಯ ಹಿಂದಿನ ದಿನ ನರಕ ಚತುರ್ದಶಿ ಆಚರಿಸಲಾಗುತ್ತದೆ, ಬಲಿಚಕ್ರವರ್ತಿಯನ್ನು ವಾಮನರೂಪೀ ನಾರಾಯಣ ದಮನ ಮಾಡಿದ ದಿನ ಎಂದು ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು
ಆಚರಿಸಲಾಗುತ್ತದೆ.

ಸೂರ್ಯ ಚಂದ್ರರಿರದಿದ್ದರೂ
ಸುತ್ತಲೂ ಕತ್ತಲಾವರಿಸಿರೆಯೂ
ಆತ್ಮವಿಶ್ವಾಸ ಕಳೆದುಕೊಳ್ಳದ
ಹಣತೆಯಂತೆ ಬಾಳುವಾ

ತನ್ನ ತಾ ಉರಿಸುತ್ತ

ಮಿಥ್ಯಾಹಂಕಾರವ ಸುಡುತ್ತ
ಒಳಗಿನರಮನೆಯ ತಮವ ಕಳೆದು
ಜಗಕೆ ಕುಡಿಬೆಳಕನೀವ
ಹಣತೆಯಾಗೋಣು ಬಾ
ಬೆಳಕ ಧಾರೆಯಾಗೋಣು ಬಾ

IMG 20180306 WA0008 1 edited
-ಡಾ.ಶುಭಶ್ರೀಪ್ರಸಾದ್, ಮಂಡ್ಯ
Share This Article
Leave a comment