ಬನ್ನೇರುಘಟ್ಟದಲ್ಲಿ ಚಿರತೆ ಸಾವು: ಮೃಗಾಲಯದಲ್ಲಿ ಮುನ್ನೆಚ್ಚರಿಕೆ ಕ್ರಮ – ಈಶ್ವರ ಖಂಡ್ರೆ

Team Newsnap
2 Min Read

ರಾಜ್ಯದ ಯಾವುದೇ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅರಣ್ಯಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಳು ಚಿರತೆ ಮರಿಗಳು ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್‌ನಿಂದ ಸಾವನ್ನಪ್ಪಿರುವುದು ಪಶುವೈದ್ಯರು ಮತ್ತು ತಜ್ಞರಲ್ಲಿ ಆತಂಕ ಮೂಡಿಸಿದೆ.

ಸೋಂಕಿನಿಂದ 7 ಚಿರತೆ ಮರಿಗಳು ಮತ್ತು ಉದರ ಸಂಬಂಧಿ ಕಾಯಿಲೆ (ಹೆಮೊರೈಜಿಕ್ ಎಂಟ್ರೈಟಿಸ್ ಮತ್ತು ಎಂಡೋಕಾರ್ಡೈಟಿಸ್) ಯಿಂದ ಹಾಗೂ ಪರಸ್ಪರ ಸಂಘರ್ಷದಿಂದ 16 ಜಿಂಕೆಗಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಉದ್ಯಾನಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಬಳಿಕ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಈ ಉದ್ಯಾನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೇ ಸಿಬ್ಬಂದಿ ರಾಜ್ಯದ ಬೇರೆ ಯಾವುದೇ ಮೃಗಾಲಯಕ್ಕೆ ಭೇಟಿ ನೀಡದಂತೆ ಆದೇಶ ನೀಡಿದರು.

ಮೈಸೂರಿನ ಜಗದ್ವಿಖ್ಯಾತ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಇತರ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಯ ಪ್ರಾಣಿಗಳು ಅಂದರೆ ಚಿರತೆ, ಸಿಂಹ, ಹುಲಿ, ಕಾಡು‌ಬೆಕ್ಕು ಇತ್ಯಾದಿಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಿದರು.

ಮೃಗಾಲಯ ಅತ್ಯಂತ ಸುರಕ್ಷಿತ ಮತ್ತು ಸಂರಕ್ಷಿತ ತಾಣವಾಗಿದ್ದು ಇಲ್ಲಿ ಇಟ್ಟು ಪ್ರಮಾಣದಲ್ಲಿ ಮೃಘಳ ಸಾವು ನಿಜಕ್ಕೂ ಆಘಾತಕಾರಿ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆವಹಿಸಿ ಎಂದು ಸಚಿವರು ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚನೆ ನೀಡಿದರು.

ಅರಣ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಮನ್ವಯದೊಂದಿಗೆ ಎಲ್ಲ ಪ್ರಾಣಿಗಳನ್ನು ಗಮನವಿಟ್ಟು ಪರೀಕ್ಷಿಸಿ ಅವುಗಳ ಆರೈಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು ಯಾವುದೇ ವೈಮನಸ್ಯ ಮನಸ್ತಾಪದಿಂದ ಸಂಸ್ಥೆಗೆ ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಯಾವುದೇ ವನ್ಯಮೃಗಗಳು ಹಠಾತ್ ಅಥವಾ ಅನುಮಾಸ್ಪದ ಸಾವಿಗೀಡಾದರೆ ತಕ್ಷಣವೇ ಸರ್ಕಾರಕ್ಕೆ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಆದೇಶಿಸಿದರು.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಕಾರ್ಯದರ್ಶಿ (ಅರಣ್ಯ ವಿಭಾಗ) ಸಂಜಯ್ ಬಿಜ್ಜೂರ್ ವನ್ಯಜೀವಿ ಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಶ್ ಮಾಲ್ಕಡೆ, ಅರಣ್ಯ ಪಡೆಯ ಮುಖ್ಯಸ್ಥರಾದ ರಾಜೀವ್ ರಂಜನ್
ಮತ್ತು ಅಧಿಕಾರಿಗಳು ಹಾಜರಿದ್ದರು.

Share This Article
Leave a comment