ನಿಂಬೆ ಸ್ವಾಮಿ ಮಠ……

Team Newsnap
2 Min Read

ಹೀಗೂ ಉಂಟೆ………

ಚಿಕ್ಕ ವಯಸ್ಸಿನಲ್ಲಿ ನನಗೆ ಅತಿಯಾಗಿ ಹಸಿ ಮಣ್ಣು ತಿನ್ನುವ ಅಭ್ಯಾಸವಿತ್ತು,

ಅಪ್ಪಾ ಅಮ್ಮ ಎಷ್ಟೇ ಹೊಡೆದರೂ ಆ ಅಭ್ಯಾಸ ನಿಲ್ಲಲಿಲ್ಲ. ಆರೋಗ್ಯವೂ ಚೆನ್ನಾಗಿತ್ತು,

ನಂತರದ ದಿನಗಳಲ್ಲಿ ನಿಂಬೆ ಹಣ್ಣು ತಿನ್ನುವ ಅಭ್ಯಾಸ ಶುರುವಾಯಿತು,

ಪ್ರತಿನಿತ್ಯವೂ ಬೇಬಿನಲ್ಲಿ ನಿಂಬೆ ಹಣ್ಣು ತುಂಬಿರುತ್ತಿದ್ದವು,
ಮನೆಯಲ್ಲಿ – ಅಕ್ಕಪಕ್ಕದವರ ತೋಟಗಳಲ್ಲಿ ನಿಂಬೆ ಹಣ್ಣು ಕದಿಯುತ್ತಿದ್ದೆ,

ನನ್ನ ಬಗ್ಗೆ ತಿಳಿದಿದ್ದ ಕೆಲವರು ಗದರಿಸುತ್ತಿದ್ದರೂ ಹೆಚ್ಚಿನ ತೊಂದರೆ ಕೊಡುತ್ತಿರಲಿಲ್ಲ,

ಒಮ್ಮೆ ಒಂದು ಹೆಂಗಸು ಜಗಲಿ ಕಟ್ಟೆಯ ಮೇಲೆ ಕುಳಿತು ತುಂಬಾ ಹೊಟ್ಟೆ ನೋವಿನಿಂದ ನರಳುತ್ತಿತ್ತು,

ನಾನು ಅದನ್ನು ನೋಡಿ ತಡೆಯಲಾರದೆ ಜೇಬಿನಲ್ಲಿದ್ದ ನಿಂಬೆಹಣ್ಣುನ್ನು ಆಕೆಗೆ ತಿನ್ನಿಸಿದೆ,

ಆಶ್ಚರ್ಯ, ಆಕೆಯ ಹೊಟ್ಟೆನೋವು ಮಾಯ.
ಆಕೆಯಿಂದ ನನಗೆ ಹೊಗಳಿಕೆಯ ಮಹಾಪೂರ,

ಹೀಗೆ ಇನ್ನೊಮ್ಮೆ ರೈತರೊಬ್ಬರು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅದನ್ನು ಗಮನಿಸಿದ
ನಾನು ಜೇಬಿನಿಂದ ನಿಂಬೆ ಹಣ್ಣು ತೆಗೆದು ದೇವರಿಗೆ ವಂದಿಸಿ ಅವರಿಗೆ ನೀಡಿದೆ‌,

ಅರೆ ಮತ್ತೂ ಆಶ್ಚರ್ಯ. ಅವರ ನೋವು ಕಡಿಮೆಯಾಯಿತು.
ಅವರು ಈ ವಿಷಯವನ್ನು ಊರಿನಲ್ಲೆಲ್ಲಾ ಹೇಳಿಕೊಂಡು ತಿರುಗಾಡಿದರು,

ಕೆಲವರು ನನ್ನ ಬಳಿ ಬಂದು ನಾನು ದೇವರಿಗೆ ಮಂತ್ರಿಸಿದ ನಿಂಬೆ ಹಣ್ಣು ಪಡೆದು ಹೋಗತೊಡಗಿದರು,

ಇದು ಬರಬರುತ್ತಾ ಹೆಚ್ಚಾಯಿತು. ಒಂದಕ್ಷರವೂ ತಲೆಗೆ ಹತ್ತದ ನನಗೆ ನಿಂಬೆ ಹಣ್ಣು ಕೊಡುವುದೇ ಕೆಲಸವಾಯಿತು,

ಜನ ಮನೆಯ ಬಳಿಗೇ ಬರತೊಡಗಿದರು.
ಈಗ ನಿಂಬೆ ಹಣ್ಣಿಗೆ ಹರಿಶಿನ, ಕುಂಕುಮ ಹಚ್ಚಿ ಕೊಡತೊಡಗಿದೆ,

ಜನ ಅದಕ್ಕಾಗಿ ತಮಗೆ ತೋಚಿದಷ್ಟು ಹಣ ಕೊಡತೊಡಗಿದರು,

ಹೊಟ್ಟೆನೋವಿನ ಜೊತೆಗೆ ಸಣ್ಣಪುಟ್ಟ ತಲೆನೋವು, ಜ್ವರ, ಮಕ್ಕಳ ಖಾಯಿಲೆಗೂ ನನ್ನಬಳಿ
ಬರತೊಡಗಿದರು,

ಪ್ರತಿನಿತ್ಯ ನನಗೆ ಇದೇ ಕೆಲಸವಾಯಿತು. ನನ್ನ ಆದಾಯವೂ ಹೆಚ್ಚಿತು.

ಮುಂದೆ ಇದೇ ಹಣದಲ್ಲಿ ಮನೆಯ ಹತ್ತಿರವೇ ಒಂದು ಕಾಳಿಮಾತೆಯ ವಿಗ್ರಹ ಕೂಡಿಸಿ,
ದೇವಸ್ಥಾನವನ್ನು ಕಟ್ಟಿಸಿದೆ,

ಸುತ್ತಮುತ್ತಲಿನ ಊರಿನಲ್ಲೆಲ್ಲಾ ನನ್ನ ಹೆಸರು ಹರಿದಾಡತೊಡಗಿತು,

ನನ್ನ ಕೈಗುಣದ ಬಗ್ಗೆ ಎಲ್ಲಾ ಕಡೆಯೂ ಚರ್ಚೆಯಾಗತೊಡಗಿತು,

ಟಿವಿಯಲ್ಲಿ ನನ್ನ ಬಗ್ಗೆ ಒಂದು ಕಾರ್ಯಕ್ರಮವೂ ಪ್ರಸಾರವಾಯಿತು,

ಜನರೆಲ್ಲಾ ಸೇರಿ ನನಗೆ “ಶ್ರೀ ಶ್ರೀ ಶ್ರೀ ಕೈಗುಣಾನಂದ ಸ್ವಾಮಿ “ಎಂದು ಹೆಸರಿಸಿದರು,

ನನ್ನ ದೇವಸ್ಥಾನ ಈಗ “ನಿಂಬೆ ಸ್ವಾಮಿ ಮಠ “ಆಯಿತು,

ನಂಬಿಕೆ, ಭಕ್ತಿ, ಭಕ್ತರು ಹೆಚ್ಚಾದರು,

ನಾನೀಗ ನಿಂಬೆ ಸ್ವಾಮಿ ಮಠದ ಜಗದ್ಗುರು.
ಅನೇಕ ಸಭೆ ಸಮಾರಂಭಗಳಿಗೆ ಅತಿಥಿ.

ಅನೇಕ ಖ್ಯಾತ ರಾಜಕಾ ರಣಿಗಳು, ಉದ್ಯಮಿಗಳು, ಸಿನಿಮಾ ನಟನಟಿಯರು ನನ್ನ ಮಠದ ಭಕ್ತರಾಗಿದ್ದಾರೆ,

ನಿಮಗೂ ಆಸಕ್ತಿ, ಭಕ್ತಿ ಇದ್ದರೆ ನಿಂಬೆ ಸ್ವಾಮಿ ಮಠಕ್ಕೆ ಒಮ್ಮೆ ಭೇಟಿ ಕೊಡಿ,

ಸಲಹೆ ಉಚಿತ – ಪರಿಹಾರ ಖಚಿತ…..,……,…….

ಜನ ಮರುಳೋ ಜಾತ್ರೆಯ ಮರುಳೋ……

ಪ್ರಜಾಪ್ರಭುತ್ವ ಬೇರುಗಳನ್ನು ಹುಡುಕುತ್ತಾ…….

ಜನರ ಜಾಗೃತಿಗಾಗಿ.

  • ವಿವೇಕಾನಂದ ಎಚ್ ಕೆ
Share This Article
Leave a comment