ಮಾದಕವಸ್ತು ಪ್ರಕರಣದ ಮಾಹಿತಿ ಸೋರಿಕೆ – ಎಸಿಪಿ‌ ಅಮಾನತು

Team Newsnap
1 Min Read

ಚಂದನವನದಲ್ಲಿ ನಡೆಯುತ್ತಿರುವ ಮಾದಕವಸ್ತು ಮಾಫಿಯಾವನ್ನು ಸಿಸಿಬಿ ಪೋಲೀಸರು ಬಹುಜಾಣ್ಮೆಯಿಂದ ಭೇದಿಸುತ್ತಿದ್ದಾರೆ. ಯಾರೊಬ್ಬರಿಗೂ ಅವರ ನಡೆಯ ಕುರುಹು ಕೂಡ ತಿಳಿಯದಂತೆ ವ್ಯೂಹ ರೂಪಿಸುತ್ತಿದ್ದಾರೆ‌. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ, ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯ ಸಹಾಯಕ ಪೋಲೀಸ್ ಆಯುಕ್ತ ಮುದವಿ ಎನ್ನುವ ಅಧಿಕಾರಿ ಆರೋಪಿಗಳ ಕಡೆಯವರಿಗೆ ಮಾಹಿತಿ‌ ಸೋರಿಕೆಯಾಗುವಲ್ಲಿ‌ ಸಹಕರಿಸಿರುವ ವಿಚಾರ ಇದೀಗ ಬಯಲಾಗಿದೆ.

ವಾಸ್ತವದಲ್ಲಿ ಮುದವಿಯವರು ಮಾದಕವಸ್ತು ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದ ಭಾಗವೇ ಆಗಿರಲಿಲ್ಲ ಎಂದು ಜಂಟಿ ಪೋಲೀಸ್ ಆಯುಕ್ತ ಸಂದೀಪ್ ಪಾಟೀಲರು ಹೇಳಿದ್ದಾರೆ. ‘ವಿಚಾರಣೆಯ ಸಂದರ್ಭದಲ್ಲಿ ಅವರು ಆರೋಪಿಗಳ ಸಹಚರರೊಂದಿಗೆ ಸಂಪರ್ಕ ಹೊಂದಿದ್ದರು ಹಾಗೂ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದರು’ ಎಂದು ಅವರು ಹೇಳಿದ್ದಾರೆ.

ಮುದವಿ ಹಾಗೂ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ‌. ಆರೋಪಿ ವಿನೋದ್ ಖನ್ನಾ ತನ್ನ ಸಹಚರರೊಡನೆ ಮಾತನಾಡಲು ತಮ್ಮ ಮೊಬೈಲ್ ನ್ನು ಹಸ್ತಾಂತರಿಸಿದ್ದಾರೆ. ಈಗ ಮುದವಿಯವರ ಮೊಬೈಲ್ ನ್ನು ಅಧಿಕಾರಿಗಳು ವಶ ಮಾಡಿಕೊಂಡಿದ್ದಾರೆ ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಲಾಗುತ್ತಿದೆ.

ಮಾದಕವಸ್ತು ತನಿಖೆಯ ಪ್ರಗತಿಯ ಬಗೆಗಿನ ಮಾಹಿತಿ‌ ಸೋರಿಕೆ ಆಗಿರುವುದು ತಿಳಿದ ತಕ್ಷಣ ಸಿಸಿಬಿ ಆಂತರಿಕ ತನಿಖೆ ನಡೆಸಿದೆ. ಎಸಿಪಿ ಮುದವಿಯವರ ಕೈವಾಡವಿರುವುದು ತಿಳಿದು ಬಂದಿದೆ. ಮುದವಿಯವರು ದಾಳಿಯ ಸುಳಿವುಗಳು, ತಂತ್ರಗಳು, ದಾಳಿ‌ಗೊಳಗಾಗಬಹುದಾದ ವ್ಯಕ್ತಿಗಳ ಹೆಸರುಗಳು, ತನಿಖೆಯ ಮಾಹಿತಿಗಳು ಮುಂತಾದವುಗಳನ್ನು ಆರೋಪಿ ವೀರೇನ್ ಖನ್ನಾ ಸಹಚರರಿಗೆ ರವಾನೆ ಮಾಡುತ್ತಿದ್ದರು ಎಂದು ಆಂತರಿಕ ತನಿಖೆ ಬಯಲು ಮಾಡಿದೆ.
ಈ ಹಿನ್ನೆಲೆಯಲ್ಲಿ ಎಸಿಪಿ ಮುದವಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ.

Share This Article
Leave a comment