ಲಕ್ಷ್ಮಿ ವಿಲಾಸ್ ಬ್ಯಾಂಕ್ ದಿವಾಳಿಯತ್ತ? ಹಣ ಹಿಂಪಡೆಯಲು ₹25,000 ಮಿತಿ

Team Newsnap
1 Min Read

ಲಕ್ಷ್ಮಿ ವಿಲಾಸ್ ಬ್ಯಾಂಕ್‌ ಮೇಲೆ ಸರ್ಕಾರವು ಒಂದು ತಿಂಗಳ ತಾತ್ಕಾಲಿಕ ನಿಷೇಧ ಹೇರಿದೆ. ಬ್ಯಾಂಕ್‌ ಖಾತೆದಾರರಿಗೆ ಹಣ ಹಿಂಪಡೆಯುವ ಗರಿಷ್ಠ ಮಿತಿ ₹25,000 ವಿಧಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಸಲಹೆ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಖಾಸಗಿ ವಲಯದ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಹಣಕಾಸು ಪರಿಸ್ಥಿತಿ ಹದಗೆಡುತ್ತಿದ್ದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ. ಬ್ಯಾಂಕ್‌ನ ನಿರ್ದೇಶಕರ ಮಂಡಳಿಯನ್ನು ರದ್ದು ಪಡಿಸಲಾಗಿದೆ.

ಆರ್‌ಬಿಐ ಪ್ರಕಟಣೆಯಲ್ಲಿ ‘ಠೇವಣಿದಾರರ ಹಿತಾಸಕ್ತಿ ರಕ್ಷಿಸಲು, ಹಣಕಾಸು ಮತ್ತು ಬ್ಯಾಂಕಿಂಗ್‌ ವಲಯದ ಭದ್ರತೆಗಾಗಿ ಕೇಂದ್ರ ಸರ್ಕಾರದಿಂದ ತಾತ್ಕಾಲಿಕ ನಿರ್ಬಂಧ ಹೇರುವ ಹೊರತು ಬೇರೆ ಮಾರ್ಗಗಳು ಕಂಡು ಬಂದಿಲ್ಲ. ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್‌ 45ರ ಅಡಿಯಲ್ಲಿ ನಿರ್ಬಂಧ ವಿಧಿಸಲಾಗಿದೆ’ ಎಂದು ತಿಳಿಸಿದೆ.

ಆರ್‌ಬಿಐನ ಮನವಿಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರವು, 30 ದಿನಗಳ ವರೆಗೂ ಬ್ಯಾಂಕ್‌ ಮೇಲೆ ನಿರ್ಬಂಧ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಆರ್‌ಬಿಐ ಅನುಮತಿ ಇಲ್ಲದೆಯೇ ಯಾವುದೇ ಕಾರಣದಿಂದಲೂ ಲಕ್ಷ್ಮಿ ವಿಲಾಸ್ ಬ್ಯಾಂಕ್‌, 25 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನ ಗ್ರಾಹಕರಿಗೆ ನೀಡುವಂತಿಲ್ಲ. ಕೆನರಾ ಬ್ಯಾಂಕ್‌ನ ಮಾಜಿ ನಾನ್‌–ಎಕ್ಸಿಕ್ಯುಟಿವ್‌ ಚೇರ್ಮನ್‌ ಟಿ.ಎನ್‌.ಮನೋಹರನ್‌ ಅವರನ್ನು ಬ್ಯಾಂಕ್‌ನ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.

Share This Article
Leave a comment