ತೃಪ್ತಿಯೇ ನಿತ್ಯ ಹಬ್ಬ….
ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ 24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.
ಪಾಶ್ಚಿಮಾತ್ಯರು ಜನವರಿ 1 ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ.
ಒಂದೊಂದು ನಾಗರಿಕತೆಯಲ್ಲಿ ಒಂದೊಂದು ದಿನವನ್ನು ಪ್ರಾರಂಭದ ದಿನವಾಗಿ ಗುರುತಿಸಲಾಗಿದೆ. ಭಾರತೀಯ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪ್ರಾರಂಭದ ದಿನವನ್ನು ಹೊಸ ವರ್ಷ ಎಂತಲೂ ಫಾಲ್ಗುಣದ ಕೊನೆಯ ದಿನವನ್ನು ಅಂತ್ಯ ಎಂತಲೂ ಕರೆಯಲಾಗುತ್ತದೆ.
ಸೃಷ್ಟಿಯ ಸಹಜ ಕ್ರಿಯೆಯನ್ನು ಯಾರು ಏನೇ ಕರೆದುಕೊಳ್ಳಲ್ಲಿ ಅಂತಹ ವಿಶೇಷವೇನು ಇಲ್ಲ. ಆದರೆ ರೂಢಿಗತವಾಗಿ ಯುವ ಸಮೂಹ ಕ್ಯಾಲೆಂಡರ್ ನ ಜನವರಿ 1 ಹೊಸ ವರ್ಷದ ಸ್ವಾಗತ ಸಮಾರಂಭವಾಗಿ ಆಚರಿಸುತ್ತಾರೆ. ಸಂಭ್ರಮಕ್ಕೆ ಯಾವ ದಿನವಾದರೇನು….
ನೇಸರನ ಕಿರಣಗಳು,
ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ,
ಗಿಡಮರಬಳ್ಳಿಗಳನ್ನು ಹಾದು,
ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ,
ಇಬ್ಬನಿಯ ಜೊತೆಗೂಡಿ
ಪ್ರತಿಫಲನ ಹೊಂದಿ,
ಧೂಳಿನ ಕಣಗಳನ್ನು ಭೇದಿಸಿ,
ಕಿಟಕಿಯ ಸರಳುಗಳೊಳಗೆ ಹರಿದು,
ಕಣ್ಣ ರೆಪ್ಪೆಯ ಬಳಿ ಸರಿದಾಗ,
ಉದಯವಾಗುವುದು,….
2021…………….
ಕಳೆದ ವರ್ಷದ ಆತಂಕ ಭಯ ನಿರಾಸೆಯನ್ನು ಮೆಟ್ಟಿ ನಿಲ್ಲುವ ಸವಾಲುಗಳು ನಮ್ಮ ಮುಂದಿವೆ. ವಾಸ್ತವ ಪರಿಣಾಮಕ್ಕಿಂತ ಭ್ರಮಾ ಲೋಕದ ಪ್ರಾಣ ಭಯದಿಂದ ನಾವುಗಳು ನಲುಗಿದ್ದೇ ಹೆಚ್ಚು. ಅಣುವಿನ ಕಣದ ವೈರಸ್ ನಮ್ಮನ್ನು ಈ ಮೂಲಕ ಆತ್ಮಾವಲೋಕನಕ್ಕೆ ದೂಡಿದೆ.
ಆದರೆ, ಇದೇನಿದು. ಹೊಸ ವರ್ಷದ ಆಚರಣೆಯೆಂದರೆ ದುರ್ಘಟನೆಯೇ, ಯುದ್ದವೇ, ಗಂಭೀರ ವಿಷಯವೇ ?
ಪೋಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ನೋಡಿದರೆ ಯಾರೋ ಅನಾಗರಿಕರೋ, ದರೋಡೆಕೋರರೋ ಹೊಸ ವರ್ಷ ಆಚರಿಸಲು ಅಲ್ಲಿ ಸೇರಿದಂತಿದೆ.
ಕುಡಿದು ತೂರಾಡಿ ಅಸಭ್ಯವಾಗಿ ವರ್ತಿಸಿ ಹೊಸ ವರ್ಷ ಸ್ವಾಗತಿಸುವುದಾದರೆ ನಮ್ಮ ಸಮಾಜದ ಯುವಕ ಯುವತಿಯರ ಮನೋವೈಕಲ್ಯದ ಬಗ್ಗೆ ಮರುಕ ಉಂಟಾಗುತ್ತದೆ. ಒಂದು ಸಂಭ್ರಮವನ್ನು ಇತರರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದೆ ಸಂಯಮದ ರೀತಿ ನೀತಿಗಳಂತೆ ಆಚರಿಸಲು ಸಾಧ್ಯವಾಗದಿದ್ದರೆ ಅದನ್ನು ಏನೆಂದು ಅರ್ಥಮಾಡಿಕೊಳ್ಳುವುದು. ಇದು ನಾಚಿಕೆಗೇಡು. ಹೊಸ ವರ್ಷದ ಸ್ವಾಗತ ಉನ್ಮಾದದಿಂದ ಆಗಬಾರದು. ಅದೊಂದು ಹೊಸ ಉತ್ಸಾಹದ ಚಿಲುಮೆಯಂತಿರಬೇಕು.
ಅದಕ್ಕಾಗಿ……….
ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು……..
ವಿಷಯ ಯಾವುದೇ ಇರಲಿ,
ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ….
ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ………
ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ….
ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ…..
ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ…..
ಸಭ್ಯತೆ – ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ…
ಆಗ ಮೂಡುವ ಅರಿವಿನಿಂದ…..
ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ.
ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ.
ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ
ಸಾರ್ಥಕತೆಯತ್ತಾ ಸಾಗೋಣ……………
ಹೊಸ ವರುಷ ಎಂಬುದೇನಿಲ್ಲ
ಅರಿತವಗೆ,
” ಕಳೆದುಕೊಳ್ಳುವುದು ಏನೂ ಇಲ್ಲ
ಪಡೆದುಕೊಳ್ಳುವುದೇ ಎಲ್ಲವೂ………. “
- ವಿವೇಕಾನಂದ. ಹೆಚ್.ಕೆ
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ