ಜ್ಞಾನ ಮತ್ತು ಗೌರವ ಸಮ್ಮಾನ

Team Newsnap
3 Min Read

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್

ಓರ್ವ ಮಹಾರಾಜನ ಆಸ್ಥಾನದಲ್ಲಿ ರಾಜಗುರುಗಳಿಗೆ ಅತ್ಯಂತ ಮಹತ್ವದ ಸ್ಥಾನವಿರುತ್ತದೆ. ಯಾವುದೇ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ರಾಜಗುರುಗಳ ಒಪ್ಪಿಗೆ ಅತ್ಯಂತ ಅವಶ್ಯಕ. ರಾಜ ಗುರುಗಳ ಮಾತನ್ನು ಯಾವುದೇ ಮಹಾರಾಜರು ತೆಗೆದು ಹಾಕಿದ್ದೇ ಇಲ್ಲ. ರಾಜ ಗುರುಗಳು ಕೇವಲ ರಾಜಕೀಯಕ್ಕೆ ಸಂಬಂಧಿಸಿದಂತೆ ಅಲ್ಲದೆ, ಭವಿಷ್ಯ, ಆಧ್ಯಾತ್ಮಿಕ, ಯುದ್ಧ, ವಿವಾಹ ಹೀಗೆ ಹತ್ತು ಹಲವು ವಿಷಯಗಳಲ್ಲಿ ಮಹಾರಾಜನಿಗೆ ಸಲಹೆಗಳನ್ನು ನೀಡುತ್ತಿದ್ದರು.

ಒಂದು ದಿನ ರಾಜನು ಒಡ್ಡೋಲಗದಲ್ಲಿ ಕುಳಿತಾಗ ಗುರುಗಳನ್ನು ಕುರಿತು ಜ್ಞಾನ ಮತ್ತು ಸಂಮಾನಗಳ ನಡುವಿನ ವ್ಯತ್ಯಾಸವೇನು?? ಎಂದು ಪ್ರಶ್ನಿಸಿದನು. ಕೂಡಲೇ ಇದಕ್ಕೆ ರಾಜಗುರುಗಳು ಉತ್ತರಿಸಲಿಲ್ಲ.

ಒಂದೆರಡು ದಿನಗಳಾದ ಬಳಿಕ ರಾಜ್ಯದ ಕೋಶಾಧಿಕಾರಿ ಓಡುತ್ತಾ ಬಂದು ಮಹಾರಾಜರಲ್ಲಿ ..ರಾಜರೇ, ನಮ್ಮ ರಾಜ ಗುರುಗಳು ಚಿನ್ನದ ನಾಣ್ಯಗಳನ್ನು ಕೋಶಾಗಾರದಿಂದ ಎತ್ತಿಕೊಂಡರು ಎಂದು ಹೇಳಿದನು. ರಾಜನು ಇದನ್ನು ನಂಬಲಿಲ್ಲ. ರಾಜಗುರುಗಳಿಗೆ ಹಣದ ಅವಶ್ಯಕತೆ ಇದ್ದರೆ ನನ್ನನ್ನೇ ಕೇಳುತ್ತಿದ್ದರು. ಅವರೇಕೆ ಕಳ್ಳತನ ಮಾಡುವರು ಎಂಬುದು ರಾಜನ ಅನಿಸಿಕೆಯಾಗಿತ್ತು. ಅಂತಯೇ ಅವರು ಕೋಶಾಧಿಕಾರಿಯ ಮಾತನ್ನು ತಳ್ಳಿ ಹಾಕಿದರು.

ಮುಂದೆ ಮತ್ತೊಂದೆರಡು ದಿನಗಳಲ್ಲಿ ರಾಜ್ಯದ ಮಹಾ ಮಂತ್ರಿಗಳು ಬಂದು ಮಹಾಗುರುಗಳು ಕೋಶಾಗಾರದಲ್ಲಿ ಮತ್ತೆ ಕೆಲವಷ್ಟು ಚಿನ್ನದ ನಾಣ್ಯಗಳನ್ನು ತೆಗೆದುಕೊಂಡು ಹೋದದ್ದನ್ನು ತಾನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿದರು. ಈಗಲೂ ರಾಜ ಅದನ್ನು ನಂಬಲಿಲ್ಲ, ಬದಲಾಗಿ ಮಂತ್ರಿಗಳನ್ನು ಅವರು ಬೇರೆ ಯಾರನ್ನಾದರೂ ನೋಡಿ ಅದು ರಾಜ ಗುರುಗಳು ಇರಬಹುದು ಎಂದು ಅನುಮಾನಿಸುತ್ತಿರಬಹುದು ಎಂದು ಅಭಿಪ್ರಾಯಪಟ್ಟರು.

ಅದೊಂದು ದಿನ ರಾಜನ ಅರಮನೆಯಲ್ಲಿ ಆತನ ಖಾಸಗಿ ಕೋಣೆಯಲ್ಲಿ ರಾಜಗುರುಗಳು, ಪ್ರಧಾನಿ ಮತ್ತು ಸೇನಾಪತಿಗಳೊಂದಿಗೆ ರಾಜ್ಯದ ಹಿತದ ಕುರಿತು ಮಾತುಕತೆ ನಡೆಸಿದರು. ಮಾತುಕತೆ ಮುಗಿದ ನಂತರ ಎಲ್ಲರೂ ಮಹಾರಾಜನ ಅಪ್ಪಣೆ ಕೋರಿ ಬೀಳ್ಕೊಂಡರು. ಆಗ ಮಹಾರಾಜನು ರಾಜ ಗುರುಗಳು ತಮ್ಮ ಉತ್ತರೀಯದ ಮರೆಯಲ್ಲಿ ಚಿನ್ನದ ತಟ್ಟೆಯೊಂದನ್ನು ಮರೆಮಾಡಿಕೊಂಡದ್ದನ್ನು ಗಮನಿಸಿದನು. ಇದನ್ನು ಖುದ್ದಾಗಿ ನೋಡಿದಾಗ ಆತನಿಗೆ ಆಘಾತವಾಯಿತು. ಮನಸ್ಸು ಪ್ರಕ್ಷುಬ್ಧವಾಯಿತು. ರಾಜಗುರುಗಳಂತಹ ದೊಡ್ಡ ವ್ಯಕ್ತಿಗಳು ಕಳ್ಳತನ ಮಾಡುವುದೆಂದರೇನು?? ಎಂದು ಬೇಸರವಾಯಿತು.

ಮರುದಿನ ಮುಂಜಾನೆ ಎಂದಿನಂತೆ ರಾಜನ ಆಸ್ಥಾನಕ್ಕೆ ರಾಜಗುರುಗಳು ಆಗಮಿಸಿದರು. ರಾಜ ಗುರುಗಳ ಗೌರವಾರ್ಥ ಎಲ್ಲ ಮಂತ್ರಿ ಮಾಗಧರು, ಸಭಿಕರು ಎದ್ದುನಿಂತರು. ವಾಡಿಕೆಯಂತೆ ಮಹಾರಾಜನು ಕೂಡ ಎದ್ದು ನಿಲ್ಲಬೇಕಾಗಿತ್ತು, ಆದರೆ ಮಹಾರಾಜನು ಎದ್ದು ನಿಲ್ಲದೆ ಕುಳಿತಲ್ಲಿಯೇ ಕೈ ಮುಗಿದನು. ಆತನ ಮುಖದಲ್ಲಿ ಅಸಡ್ಡೆ ತುಂಬಿತ್ತು.

ತಮ್ಮ ಪೀಠದಲ್ಲಿ ಕುಳಿತ ಬಳಿಕ ರಾಜಗುರುಗಳು ಮಹಾರಾಜನನ್ನು ಮತ್ತು ಇತರರನ್ನು ಕುರಿತು ಇದು ಜ್ಞಾನ ಮತ್ತು ಸನ್ಮಾನಗಳ ನಡುವಿನ ವ್ಯತ್ಯಾಸ ಎಂದು ಹೇಳಿದರು. ಮಹಾರಾಜನಾದಿಯಾಗಿ ಯಾರಿಗೂ ರಾಜ ಗುರುಗಳ ಮಾತು ಅರ್ಥವಾಗಲಿಲ್ಲ.

ಎಲ್ಲರೂ ರಾಜಗುರುಗಳತ್ತ ಗೊಂದಲದಿಂದ ನೋಡಿದರು. ಆಗ ರಾಜಗುರುಗಳು …”ಈ ನಾಡಿನ ರಾಜಗುರುವಾದ ನನ್ನಲ್ಲಿನ ಜ್ಞಾನ ಕಿಂಚಿತ್ತೂ ಕಡಿಮೆಯಾಗಿಲ್ಲ. ಆದರೆ ಕಳೆದ ಕೆಲ ದಿನಗಳಲ್ಲಿ ನಾನು ಮಾಡಿರುವ ಅಪರಾಧ ಎಂದರೆ, ರಾಜ್ಯದ ಕೋಶಾಗಾರದಿಂದ ಚಿನ್ನದ ನಾಣ್ಯಗಳನ್ನು ಮತ್ತು ಮಹಾರಾಜರ ಕೋಣೆಯಿಂದ ಚಿನ್ನದ ತಟ್ಟೆಯನ್ನು ನಾನು ಎತ್ತಿಕೊಂಡಿದ್ದೇನೆ. ಆದ್ದರಿಂದಲೇ ಮಹಾರಾಜರು ನೀಡುವ ಗೌರವ ಸಂಮಾನದಲ್ಲಿ ವ್ಯತ್ಯಾಸವಾಗಿದೆ. ಕಾರಣ ಜ್ಞಾನ ಕಣ್ಣಿಗೆ ಗೋಚರಿಸದೇ ಇದ್ದರೂ ನಾವು ಜೀವನದಲ್ಲಿ ಹೇಗೆ ನಡೆದುಕೊಳ್ಳುತ್ತೇವೆಂಬ ವ್ಯವಹಾರ ಎಲ್ಲರಿಗೂ ಗೋಚರವಾಗುತ್ತದೆ. ಕಾರಣ ನಾವು ನಮ್ಮ ನಡೆ ನುಡಿಯಲ್ಲಿ ಪರಿಶುದ್ಧರಾಗಿರಬೇಕು. ನಮ್ಮ ಮಾತು ಕೃತಿಗಳು ಒಂದಾಗಿರಬೇಕು” ಎನ್ನುತ್ತಾ ಸೇವಕರನ್ನು ಕರೆದು ತಾವು ತೆಗೆದುಕೊಂಡು ಹೋದ ಚಿನ್ನದ ನಾಣ್ಯಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ಮಹಾರಾಜರಿಗೆ ಮರಳಿಸಿದರು.

ಕೂಡಲೇ ರಾಜರಿಗೆ ತಾವು ಕೇಳಿದ ಜ್ಞಾನ ಮತ್ತು ಗೌರವಗಳ ನಡುವಿನ ವ್ಯತ್ಯಾಸದ ಅರಿವನ್ನು ಈ ರೀತಿಯಾಗಿ ಮಾಡಿಕೊಟ್ಟ ರಾಜ ಗುರುಗಳ ಮೇಲಿನ ಅಭಿಮಾನ, ಗೌರವ ಇಮ್ಮಡಿಯಾಯಿತು. ಅಂತೆಯೇ ಎದ್ದು ನಿಂತು ರಾಜಗುರುಗಳಿಗೆ ಅದೇ ಚಿನ್ನದ ತಟ್ಟೆಯಲ್ಲಿ ಅದೇ ನಾಣ್ಯಗಳನ್ನು ಸಮರ್ಪಿಸಿ ಶಿರಬಾಗಿ ನಮಸ್ಕರಿಸಿದನು.ಜಂಬೂಸವಾರಿ ( Jambusavari )

ಸ್ನೇಹಿತರೇ, ಅದೆಷ್ಟೇ ಓದು, ವಿದ್ಯೆ ನಮ್ಮಲ್ಲಿದ್ದರೂ ನಾವು ಗುರುಹಿರಿಯರಿಗೆ ನೀಡುವ ಗೌರವ ಪ್ರೀತಿ, ಸಂಗಾತಿಗೆ ನೀಡುವ ಆದರ, ಮಕ್ಕಳಿಗೆ ನೀಡುವ ಪ್ರೀತಿ, ಸಹೋದ್ಯೋಗಿಗಳೊಂದಿಗಿನ ವಿಶ್ವಾಸ, ಸ್ನೇಹಿತರೊಂದಿಗಿನ ಆತ್ಮೀಯತೆ,ಕಡಿಯದ ಬಂಧಗಳು ನಮ್ಮನ್ನು ಸಮಾಜದಲ್ಲಿ ಗುರುತಿಸಲು ಮುಖ್ಯವಾದ ಮಾನದಂಡಗಳಾಗುತ್ತವೆ. ಅದೆಷ್ಟೇ ವ್ಯಕ್ತಿ ಜ್ಞಾನಿ, ಶ್ರೀಮಂತಿಕೆ, ಅಧಿಕಾರ ಸ್ಥಾನಗಳನ್ನು ಹೊಂದಿದವನಾದರೂ ಉತ್ತಮ ಗುಣ ನಡತೆಗಳು ಅವನಲ್ಲಿಲ್ಲದಿದ್ದರೆ ಜನರು ಅವನನ್ನು ಖಂಡಿತವಾಗಿ ಕಡೆಗಣಿಸುತ್ತಾರೆ. ಆದ್ದರಿಂದಲೇ ನಾವೆಲ್ಲರೂ ಸಾಮಾಜಿಕ ನೀತಿ ನಡಾವಳಿಗಳನ್ನು ಅರಿತು ಕೌಟುಂಬಿಕವಾಗಿ, ಸಾಮಾಜಿಕವಾಗಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಹೊಂದಿಕೊಂಡು ಬಾಳಬೇಕು. ಇದುವೇ ನಿಜವಾದ ಜ್ಞಾನಿಯ ಲಕ್ಷಣ. ಅಂತಹವನಿಗೆ ಗೌರವ ಸಮ್ಮಾನಗಳು ತಾನಾಗಿಯೇ ಒಲಿದು ಬರುತ್ತವೆ…. ಏನಂತೀರಾ??

Share This Article
Leave a comment