December 22, 2024

Newsnap Kannada

The World at your finger tips!

karnataka flag

ಕನ್ನಡ ರಾಜ್ಯೋತ್ಸವ

Spread the love

ನಮ್ಮ ಕನ್ನಡ ನಾಡು ಕಲಾ ಶ್ರೀಮಂತಿಕೆಯ ತವರೂರು. ಐತಿಹಾಸಿಕ ಪರಂಪರೆ ಹಾಗೂ ಸಾಟಿ ಇಲ್ಲದ ಸಂಸ್ಕೃತಿ ಸಂಪ್ರದಾಯಗಳು ಈ ಮಣ್ಣಿನ ಅಸ್ಮಿತೆ, ಗೌರವವನ್ನು ಎತ್ತಿ ಹಿಡಿದು ಭವಿಷ್ಯದ ಪೀಳಿಗೆಗೆ ಮಾದರಿಯಾಗಿ ಪ್ರತಿನಿಧಿಸುತ್ತಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಜೊತೆ ಜೊತೆಗೆ ಕನ್ನಡದ ಉಳಿವಿಗಾಗಿ, ಕನ್ನಡದ ಬೆಳವಣಿಗೆಗಾಗಿ ಕರ್ನಾಟಕ ಏಕೀಕರಣಕೆ ಪಣ ತೊಟ್ಟು ಹೋರಾಡಿದವರು ಹಲವು ಮಂದಿ. ಹಲವಾರು ಹಿರಿಜೀವಗಳು, ಶ್ರೇಷ್ಠ ಸಾಹಿತಿಗಳು, ಕವಿಗಳು, ಚಿಂತನಕಾರರು ಕನ್ನಡ ಭಾಷಿಗರ ಒಗ್ಗಟ್ಟಿನ ಸೂತ್ರ ಹಿಡಿದು,ತ್ಯಾಗ ಮನೋಭಾವದಿಂದ ಹೋರಾಟದಲ್ಲಿ ಭಾಗಿಯಾದವರನ್ನ ನಾವು ಈ ಶುಭ ದಿನದಂದು ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಕನ್ನಡ ಭಾಷೆ ಮಾತನಾಡುವ ಐದು ಪ್ರಾಂತ್ಯಗಳನ್ನು ಗುರುತಿಸಿ ಅವರಲ್ಲಿ ಕನ್ನಡ ಏಕೀಕರಣದ ಬೀಜ ಬಿತ್ತಿ ಕನ್ನಡಪರ ಚಳುವಳಿಗಳನ್ನು ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದವರು ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು. ಇವರೊಂದಿಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ್, ಕೆಂಗಲ್ ಹನುಮಂತಯ್ಯ, ಗುದ್ದೆಪ್ಪ ಹಳ್ಳಿಕೇರಿ ಮೊದಲಾದ ಪ್ರಮುಖರು ಪ್ರತ್ಯೇಕ ಕನ್ನಡ ರಾಜ್ಯದ ಅಸ್ಥಿತ್ವಕ್ಕಾಗಿ ಅವಿರತವಾಗಿ ಹೋರಾಡಿ ಅಲ್ಲಲ್ಲಿ ಹಂಚಿ ಹೋದ ಕನ್ನಡಪರ ಪ್ರಾಂತ್ಯಗಳನ್ನ ಒಂದುಗೂಡಿಸಿ ಪ್ರತ್ಯೇಕ ಕನ್ನಡ ರಾಜ್ಯವನ್ನಾಗಿ ಗುರುತಿಸಲು ಹೋರಾಡಿದವರು. ಈ ಎಲ್ಲಾ ಹೋರಾಟದ ಫಲಶ್ರುತಿಯಾಗಿ ನವೆಂಬರ್ ೧, ೧೯೫೬ ರಂದು ಮೈಸೂರು ರಾಜ್ಯ ರಚನೆಯಾಗಿ ಸಂವಿಧಾನದ ಅಡಿಯಲ್ಲಿ ಪ್ರತ್ಯೇಕವಾಗಿ ಘೋಷಣೆ ಮಾಡಿದರು. ನಂತರದ ದಿನಗಳಲ್ಲಿ ೧೯೭೩ ನವೆಂಬರ್ ೧ರಂದು ರಾಜ್ಯದ ಹೆಸರನ್ನು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು.
ಈ ದೃಢನಿರ್ಧಾರದ ಸಂದರ್ಭದಲ್ಲಿ ದೇವರಾಜ್ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಅಂದು ಕರ್ನಾಟಕ ರಾಜ್ಯ ರಚನೆಯಾದಾಗ ಕೇವಲ ೧೯ ಜಿಲ್ಲೆಗಳಿದ್ದು ಈದೀಗ ೩೧ ಜಿಲ್ಲೆಗಳು ಅಸ್ತಿತ್ವದಲ್ಲಿದೆ.

ಕರ್ನಾಟಕದಾದ್ಯoತ ಪ್ರತಿ ವರ್ಷ ನವೆಂಬರ್ ೧ ರಂದು ಕನ್ನಡ ಪರ ಹೋರಾಟಗಾರರಾದ ಎಂ ರಾಮಮೂರ್ತಿಯವರು ಅಂದು ಸಿದ್ಧಪಡಿಸಿದ ಹಳದಿ ಕೆಂಪು ಬಳಸಿದ ಕನ್ನಡ ಧ್ವಜವನ್ನು ಧ್ವಜಾರೋಹಣ ಮಾಡುವ ಮೂಲಕ ಎಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಹಳದಿ ಬಣ್ಣ ಶಾಂತಿ ಮತ್ತು ಸಾಮರಸ್ಯವನ್ನು ಸೂಚಿಸಿದರೆ ಕೆಂಪು ಕ್ರಾಂತಿಯನ್ನು ಸೂಚಿಸುತ್ತದೆ. ಅರಿಶಿನ ಕುಂಕುಮ ಶೋಭಿತೆ, ತಾಯಿ ಕನ್ನಡಾಂಬೆಯ ಆರಾಧನೆಯು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ನಡೆಯಲ್ಪಡುತ್ತದೆ.ರಾಜ್ಯದೆಲ್ಲಡೆ ಅತ್ಯಂತ ಸಂಭ್ರಮ ಸಡಗರದಿಂದ ಎಲ್ಲಾ ಜಾತಿ ಧರ್ಮಗಳ ಜನರು ಒಗ್ಗೂಡಿ ಕನ್ನಡ ಹಬ್ಬವನ್ನು ಆಚರಣೆ ಮಾಡುತ್ತಾರೆ. ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ನಾಡಗೀತೆಯನ್ನು ಹಾಡಿ ಧ್ವಜಾರೋಹಣ ಮಾಡಿ, ನಾಡ ಸಂಸ್ಕೃತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅರ್ಥಪೂರ್ಣವಾದ ರಾಜ್ಯೋತ್ಸವದ ಆಚರಣೆಯನ್ನು ನಡೆಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡ ಸಾಧಕರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಗೌರವಗಳನ್ನು ನೀಡಿ ಅಭಿನಂದಿಸುವ ಕಾರ್ಯಕ್ರಮವು ನಡೆಯುತ್ತದೆ.ನಮ್ಮ ರಾಜ್ಯದ ಸುವರ್ಣ ಪರಂಪರೆಯ ಉಳಿವಿಗಾಗಿ, ನಾಡು ನುಡಿಯ ಅಭಿವೃದ್ಧಿಗಾಗಿ ಶ್ರಮ ವಹಿಸಿದ ಧೀಮಂತರನ್ನ ಈ ವಿಶೇಷ ಸಂದರ್ಭದಲ್ಲಿ ಸ್ಮರಿಸಲಾಗುವುದು.

ಕನ್ನಡದಲ್ಲಿ ಹಲವಾರು ಉಪಭಾಷೆಗಳು (ಪ್ರಭೇದ )ಸಮುದಾಯಗಳ ಜಾತಿ ಲಿಂಗಗಳ ಆಧಾರದ ಮೇಲೆ ತನ್ನದೇ ಆದ ಸಾಂಪ್ರದಾಯಿಕ ನಿಲುವುಗಳಿಂದ ಪ್ರಚಲಿತವಾಗಿ ಹುಟ್ಟಿಕೊಂಡಿದೆ. ಆದರೆ ಅನ್ಯ ಭಾಷೆಗಳ ಪ್ರಭಾವ ಅದರಲ್ಲೂ ಇಂಗ್ಲಿಷ್, ತೆಲುಗು,ಮಲಯಾಳಂ, ವ್ಯಾಮೋಹ ಹೆಚ್ಚುತ್ತಿರುವ ಹಿನ್ನೆಲೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ಒಂದು ರೀತಿಯ ಸವಾಲಾಗಿದೆ. ಇಂದು ಕನ್ನಡವನ್ನು ಉಳಿಸುವುದು ಬೆಳೆಸುವುದರೊಂದಿಗೆ ಇತರ ಭಾಷೆಗಳಿಗೆ ಪ್ರೋತ್ಸಾಹ ನೀಡಿದಂತೆ ನಮ್ಮ ಮಾತೃಭಾಷೆಗೆ ಪ್ರೀತಿ ಮತ್ತು ಗೌರವ ನೀಡುವುದು ಮುಖ್ಯವಾಗಿದೆ.

ರಾಜ್ಯೋತ್ಸವದ ಸಂಭ್ರಮ ಸಡಗರವು ಕೇವಲ ನವೆಂಬರ್ ತಿಂಗಳ ೧ ನೇ ತಾರೀಖಿಗೆ ಮಾತ್ರ ಸೀಮಿತವಾಗದೆ ಪ್ರತಿ ದಿನವು ಕನ್ನಡ ಹಬ್ಬದ ಸಂಭ್ರಮದ ನಿಲುವಲ್ಲಿ ಪ್ರಯತ್ನ ಸಾಗಲಿ, ನಮ್ಮ ಹಿರಿಯರು ನಮ್ಮ ಭಾಷೆಯ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದರೋ ಅದೇ ರೀತಿ ನಾವು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ಧಾರಿಯನ್ನು ಅರ್ಥೈಸುವ ಕಾರ್ಯಕ್ಕೆ ಕೈ ಜೋಡಿಸಬೇಕಿದೆ.

ಎಲ್ಲಾದರೂ ಇರು,ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

image

ಆಶಾ ಅಡೂರ್
ಉಜಿರೆ

Copyright © All rights reserved Newsnap | Newsever by AF themes.
error: Content is protected !!