ಕನ್ನಡ ಕಥಾ ಜಗತ್ತಿನ ಲೋಕದ ಅನರ್ಘ್ಯರತ್ನ ಡಾ.ಬೆಸಗರಹಳ್ಳಿ ರಾಮಣ್ಣ
ಮಂಡ್ಯದ ನೆಲದೊಡಲಿಂದ ಬಂದ ಅನರ್ಘ್ಯರತ್ನ ಡಾ.ಬೆಸಗರಹಳ್ಳಿ ರಾಮಣ್ಣ. ಇವರ ವೃತ್ತಿ ವೈದ್ಯಕೀಯವಾದರೂ ಅದರಾಚೆಗೂ ತಮ್ಮನ್ನು ತೆರೆದುಕೊಂಡಿದ್ದರು. ಕನ್ನಡ ಕಥಾ ಸಾಹಿತ್ಯದಲ್ಲಿ ಅವರದು ಅಜರಾಮರ ಸೇವೆ. ತಮ್ಮ ಸುತ್ತಲಿನ ಪರಿಸರವೇ ಅವರ ಕಥೆಗಳಿಗೆ ವಸ್ತುವಾಗಿದೆ. ಗ್ರಾಮೀಣ ಬದುಕಿನ ಜಂಜಾಟ, ದಿಕ್ಕು ಕಾಣದ ಯುವಜನರ ತಾಕಲಾಟಗಳು, ಬಡಜನರ ಬವಣೆಗಳು, ಶಿಥಿಲಗೊಳ್ಳುತ್ತಿರುವ ಕೌಟುಂಬಿಕ ವ್ಯವಸ್ಥೆ ಮೊದಲಾದ ಸ್ಥಳೀಯ ವಿಷಯಗಳೇ ಅವರ ಸಾಹಿತ್ಯದಲ್ಲಿ ವಿಜೃಂಭಿಸಿವೆ. ಇವರ ಕಥೆಗಳು ವಾಸ್ತವಿಕ ಬದುಕಿನ ಕನ್ನಡಿಯಂತಿವೆ. ‘ಮಂಡ್ಯವೇ ನನ್ನ ಇಂಡಿಯಾ’ ಎಂದು ನಂಬಿದ್ದರು. ಈ ನೆಲದ ಮಣ್ಣಿನ ಗಮಲು ಇವರ ಸಾಹಿತ್ಯದಲ್ಲಿ ಘಮಘಮಿಸಿದೆ. ತಮ್ಮ ಜೀವಿತದುದ್ದಕ್ಕೂ ಸಮಾನತೆ ಮತ್ತು ಸೋದರತ್ವಕ್ಕಾಗಿ ತುಡಿಯುತ್ತಿದ್ದರು. ಸ್ವತಂತ್ರ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ಶ್ರೀಮತಿ ದೊಡ್ಡತಾಯಮ್ಮ ಹಾಗೂ ಶ್ರೀ ಚಿಕ್ಕ ಎಲ್ಲೇಗೌಡರ ಮೂರನೇ ಮಗನಾಗಿ ೧೫-೦೮-೧೯೩೮ ರಲ್ಲಿ ಜನಿಸಿದರು. ಇವರು ಜನಿಸಿದÀ ಸಮಯದಲ್ಲಿ ಮಂಡ್ಯ ಜಿಲ್ಲೆಯು ಪ್ರತ್ಯೇಕವಾಗಿರಲಿಲ್ಲ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಬಾಲ್ಯದಲ್ಲಿ ಇವರು ಮುಂಗೋಪಿ ಹಾಗೂ ಹಠಮಾರಿಯಾಗಿದ್ದರು. ಮದ್ದೂರಿನಲ್ಲಿ ಪ್ರೌಢ ಶಿಕ್ಷಣ ಪಡೆದರು. ೧೯೫೭-೫೮ ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್‌ಗೆ ಪ್ರವೇಶ ಪಡೆದರು. ೧೯೫೮ ರಲ್ಲಿ ಇಂಟರ್ ಮೀಡಿಯೇಟ್‌ನಲ್ಲಿ ತೇರ್ಗಡೆ ಹೊಂದಿ ವೈದ್ಯಕೀಯ ವ್ಯಾಸಂಗಕ್ಕಾಗಿ ಮೈಸೂರು ಮೆಡಿಕಲ್ ಕಾಲೇಜಿಗೆ ಸೇರಿದರು. ೧೯೬೭ರಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದರು.
ನಾಗಮಂಗಲ ತಾಲ್ಲೂಕಿನ ಹರದನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು. ೧೯೭೪ರಲ್ಲಿ ಬಿಹಾರ ರಾಜ್ಯದಲ್ಲಿ ಸಿಡುಬುರೋಗ ನಿರ್ಮೂಲನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ೧೯೮೩ರಲ್ಲಿ ಡಿ.ಎ. (ಡಿಪ್ಲಮೋ ಇನ್ ಅನಸ್ತೇಸಿಯಾ) ಪೂರೈಸಿದರು. ೧೯೯೮ರಲ್ಲಿ ಮರಣ ಹೊಂದಿದರು.
೧೯೬೬ರಲ್ಲಿ ದೇಶಹಳ್ಳಿಯ ಛರ‍್ಮನ್ ಪುಟ್ಟಲಿಂಗಯ್ಯನವರ ದ್ವಿತೀಯ ಪುತ್ರಿ ಡಿ.ಪಿ.ರಾಜಮ್ಮ ಅವರನ್ನ ವರಿಸಿದರು. ಇವರಿಗೆ ಮೂವರು ಮಕ್ಕಳು. ಉನ್ನತ ಪೊಲೀಸ್ ಅಧಿಕಾರಯಾದ ಬಿ.ಆರ್.ರವಿಕಾಂತೇಗೌಡ ಅವರು ಮೊದಲ ಮಗ. ಅಣ್ಣಾದೊರೆ ಎರಡನೇ ಮಗ. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕೊನೆಯ ವರ್ಷದ ಬಿ.ಎ. ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ತಮಿಳುನಾಡಿನ ಅಣ್ಣಾದೊರೆ ನಿಧನರಾದಾಗ ಅವರ ಹೆಸರನ್ನೇ ತಮ್ಮ ಮಗನಿಗೆ ನಾಮಕರಣ ಮಾಡಿದ್ದರು. ಕರ್ನಾಟಕ ಆಡಳಿತ ಸೇವೆಯಲ್ಲಿರುವ ಬಿ.ಆರ್.ಪೂರ್ಣಿಮ ಅವರು ರಾಮಣ್ಣನವರ ಮಗಳು.
ರಾಮಣ್ಣ ಅವರಲ್ಲಿ ಸಾಹಿತ್ಯಾಸಕ್ತಿ ಮೂಡಿಸಿದವರು ‘ದೇಶಳ್ಳಿ ಅಮ್ಮ’ ಎಂದು ಹೆಸರಾಗಿದ್ದ ಚಿಕ್ಕತಾಯಮ್ಮ ಅವರು. ಇವರು ರಾಮಣ್ಣನವರ ತಂದೆಯ ಸೋದರಮಾವನ ಪತ್ನಿ. ರಾಮಣ್ಣನವರಿಗೆ ಚಿಕ್ಕಂದಿನಲ್ಲೇ ಅನೇಕ ಕಥೆಗಳನ್ನ ಹೇಳಿ ಸಾಹಿತ್ಯಾಸಕ್ತಿಯನ್ನು ಉದ್ದೀಪನಗೊಳಿಸಿದರು. ರಾಮಣ್ಣ ಅವರಲ್ಲಿ ಸಾಹಿತ್ಯಾಸಕ್ತಿ ಮೊಳಯಿಸಿದ ಮತ್ತೊಬ್ಬರೆಂದರೆ ಅವರ ಸೋದರಮಾವ ಬಿ.ಸಿ.ತಮ್ಮಯ್ಯ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಕಲಿಯುತ್ತಿದ್ದ ಸಮಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ‘ಲಲಿತ ಕಲಾಸಂಘ’ದ ವಸಂತ ಎಂಬ ವಾರ್ಷಿಕ ಪತ್ರಿಕೆಗಾಗಿ ‘ಹಸುವಿನ ಕಹಳೆ’ ಎಂಬ ಕಥೆಯನ್ನು ಬರೆದರು. ಆದರೆ ಕಥೆ ಪ್ರಕಟವಾಗಲಿಲ್ಲ. ೧೯೬೨ರಲ್ಲಿ ‘ಹಾವಿಲ್ಲದ ಹುತ್ತ’ ಎಂಬ ಕಥೆಯು ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರಕಟವಾಯಿತು. ಇದುವೇ ಅವರ ಅಧಿಕೃತ ಪ್ರಥಮ ಕಥೆಯಾಗಿದೆ. ‘ಮಳೆಗೆರೆಯಿತು ಬಾನು’ ಎಂಬ ಕಥೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಐವತ್ತು ರೂಪಾಯಿ ಗೌರವವನ್ನು ದೊರಕಿಸಿಕೊಟ್ಟಿತು. ೧೯೬೫ರಲ್ಲಿ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ‘ಸುಗ್ಗಿ’ ಕಥೆಯು ಪ್ರಥಮ ಬಹುಮಾನ ಗಳಿಸಿತು.
ಡಾ.ಬೆಸಗರಹಳ್ಳಿ ರಾಮಣ್ಣ ಅವರ ‘ನೆಲದ ಒಡಲು’ ಹಾಗೂ ‘ಗರ್ಜನೆ’ ಕಥಾಸಂಕಲನಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಉತ್ತಮ ಪುಸ್ತಕಗಳೆಂದು ಪ್ರಥಮ ಬಹುಮಾನ ನೀಡಿ ಗೌರವಿಸಿದೆ. ೧೯೯೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ೧೯೭೯ರಲ್ಲಿ ‘ಒಂದು ಹುಡುಗನಿಗೆ ಬಿದ್ದ ಕನಸು’ ಕಥಾ ಸಂಕಲನಕ್ಕೆ ‘ವರ್ಧಮಾನ’ ಪ್ರಶಸ್ತಿ ಲಭಿಸಿದೆ.೧೯೬೦ರ ದಶಕದಲ್ಲಿ ನವ್ಯ ಸಾಹಿತ್ಯದ ಪ್ರಭಾವ ದಟ್ಟವಾಗಿದ್ದ ಕಾಲದಲ್ಲಿ ರಾಮಣ್ಣನವರು ಕಥೆ ಬರೆಯಲು ಆರಂಭಿಸಿದರು. ನವ್ಯ ಪ್ರಭಾವದಿಂದ ಯಾವ ಲೇಖಕರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇತ್ತು. ಆದರೆ ರಾಮಣ್ಣ ಅವರು ನವ್ಯಕ್ಕೆ ಬದಲಾಗಿ ನವೋದಯದ ಮಾನವತಾವಾದಿ ಚಿಂತನೆಗೆ ಒಲವು ತೋರಿದರು. ನವೋದಯ- ಪ್ರಗತಿಶೀಲ ಪ್ರೇರಣೆಗಳ ನೆಲೆಯಲ್ಲಿ ತಮ್ಮ ಕಥೆಗಳನ್ನು ರೂಪಿಸಿದರು. ತಮ್ಮ ಕಥೆಗಳಲ್ಲಿ ಮಂಡ್ಯ ನೆಲದ ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇವರ ಸುಗ್ಗಿ, ಗಾಂಧಿ, ಒಂದು ಹುಡುಗನಿಗೆ ಬಿದ್ದ ಕನಸು, ಚೆಲುವನ ಪರಂಗಿಗಿಡಗಳು ಮುಂತಾದ ಕಥೆಗಳು ನಾಡಿನ ಹಲವು ವಿ.ವಿ.ಗಳ ಪಠ್ಯಕ್ರಮದಲ್ಲಿ ಸ್ಥಾನ ಪಡೆದಿವೆ. ಗಾಂಧಿ ಕಥೆಯಂತೂ ಇಂದಿನ ಗಾಂಧಿ ತತ್ವಗಳ ವಿನಾಶದ ವಿಡಂಬನೆಗೆ ಕನ್ನಡಿ ಹಿಡಿದಿದೆ. ಈ ಕಥೆ ಅವರ ಖ್ಯಾತಿಯನ್ನು ಉತ್ತುಂಗಕ್ಕೇರಿಸಿತು. ರಾಮಣ್ಣ ಅವರು ಬರೆದದ್ದು ಕಡಿಮೆಯಾದರೂ ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಡಾ.ಬೆಸಗರಹಳ್ಳಿ ರಾಮಣ್ಣ ಅವರ ಕೃತಿಗಳು
ಕಥೆ
ನೆಲದ ಒಡಲು (೧೯೬೭)
ಗರ್ಜನೆ (೧೯೭೨)ಸ
ಹರಕೆಯ ಹಣ (೧೯೭೬)
ಒಂದು ಹುಡುಗನಿಗೆ ಬಿದ್ದ ಕನಸು (೧೯೭೯)
ಕೊಳಲು ಮತ್ತು ಖಡ್ಗ (೧೯೯೮)
ಸಮಗ್ರ ಕಥೆಗಳು
ಕನ್ನಂಬಾಡಿ(೧೯೮೬)
ಕಾದoಬರಿ
ತೋಳಗಳ ನಡುವೆ (೧೯೮೨)
ರಕ್ತ-ಕಣ್ಣೀರು (೧೯೭೪)
ಕಾವ್ಯ
ಶೋಕಚಕ್ರ
ಅಪ್ರಕಟಿತ ಕೃತಿಗಳು
ಆತ್ಮಕತೆ
ಹೆತ್ತೊಡಲು (ಕಾದಂಬರಿ)
ಕಾಡುಗಿಣಿ
ಟಾಲ್‌ಸ್ಟಾಯ್‌ನ ಕೊನೆಯ ದಿನಗಳು
ಬಿಡಿ ಲೇಖನಗಳು
ಡಾ.ಎಂ.ವೈ.ಶಿವರಾಮು
ಮಂಡ್ಯ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ