December 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 22

Spread the love
ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ಕಲಾವಿದ ಗಿರೀಶ್ ಕಾರ್ನಾಡ್
girish karnad

ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ  ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು.

ಬಾಲ್ಯ

1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು.

ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್‌ನಲ್ಲಿ ಹೈಸ್ಕೂಲ್ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು. ನಂತರ ರ್ಹೋಡ್ಸ್ ಸ್ಕಾಲರ್‌ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963 ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್‌ಫರ್ಡ್ ಯುನಿಯನ್ ಅಧ್ಯಕ್ಷರಾದರು.

ವೃತ್ತಿ ಜೀವನ

ಚೆನ್ನೈನಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ ಇವರು ನಂತರ ಅಮೇರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವೆಲ್ಲರ ಮಧ್ಯೆಯೇ ನಾಟಕ ಬರಹದಲ್ಲಿ ತೊಡಗಿದ್ದರು. ಇವರು ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

1980 ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆಯಾದರು.ದಂಪತಿಗಳಿಗೆ ಒಬ್ಬ ಪುತ್ರ ಮತ್ತು ಪುತ್ರಿಯರುಂಟು. 2011 ರಲ್ಲಿ ತಮ್ಮ ಆತ್ಮಕಥೆಯಾದ `ಆಡಾಡತ ಆಯುಷ್ಯ’ ವನ್ನು ರಚಿಸಿದರು.

ಕಾರ್ನಾಡರ ನಾಟಕ ಪ್ರಪಂಚ

ಇವರು ಬರೆದ `ನಾಗಮಂಡಲ’ ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿ ಕೊಟ್ಟಿತು. ಇದು ಮನು‍ಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತ ನಾಟಕವಾಗಿತ್ತು. ಇದು ಮುಂದೆ 1997 ರಲ್ಲಿ ಟಿ.ಎಸ್.ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತು.

nagamandala

ಮಹಾಭಾರತದ ಪಾತ್ರ ಯಯಾತಿ ಮೇಲೆ ಹೊರಬಂದ ನಾಟಕ ಯಯಾತಿ' ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹುರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ತುಘಲಕ್‌ನೊಂದಿಗೆ ಸಮೀಕರಿಸಿ ಐತಿಹಾಸಿಕತುಘಲಕ್’ ನಾಟಕ ರಚಿಸಿದರು.

ಕಥಾಸರಿತ್ಸಾಗರದ ಕಥೆಯಧಾರಿತ `ಹಯವದನ’ ಮನುಷ್ಯನ ಅಪೂರ್ಣತೆ , ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು.

hayavadana

ನಂತರ ಬಂದ ತೆಲೆದಂಡ' 12 ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೇ ನಡೆದಂತ ದಬ್ಬಾಳಿಕೆ, ಕಗ್ಗೋಲೆಗಳನ್ನು ತೆರೆದಿಟ್ಟಿತು. ಇವರ ಅಂಜು ಮಲ್ಲಿಗೆ  ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲುತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ.

ಸಿನಿಜೀವನ

1970 ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ’ ಚಿತ್ರದ ಮೂಲಕ ನಟನೆಗೆ ಇಳಿದರು. ಈ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು.

malgudi1

ನಂತರ ಶಂಕರ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್‌' ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ’ ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರ `ಕಾನೂರು ಹೆಗ್ಗಡತಿ’ ಕೃತಿಯನ್ನು ಪರದೆಗೆ ತಂದ ಕೀರ್ತಿ ಕಾರ್ನಾಡರದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿರುವ ಇವರು ಹಲವು ಕನ್ನಡ,ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಜೂನ್ 10, 2019 ರಂದು ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಗಿರೀಶ್ ಕಾರ್ನಾಡ್ ನಿಧನರಾದರು.

supreetha 1
ಸುಪ್ರೀಯಾ ಚಕ್ಕೆರೆ

  

Copyright © All rights reserved Newsnap | Newsever by AF themes.
error: Content is protected !!