ಕನ್ನಡ ಸಾಹಿತ್ಯ – ಪರಂಪರೆ: ಭಾಗ- 19

Team Newsnap
4 Min Read

ಕನ್ನಡ ಕಥನ ಕವನಗಳ ಸಾಮ್ರಾಟ

ekkundi
ಶ್ರೀ ಸು ರಂ ಎಕ್ಕುಂಡಿ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಸರಾಗಿರುವ ಹೆಮ್ಮೆಯ ಕವಿ ಶ್ರೀ ಸು ರಂ ಎಕ್ಕುಂಡಿ ಅವರು… ಇವರು ಹೊಸಗನ್ನಡ ಸಾಹಿತ್ಯದ ಅದ್ಭುತ ಬರಹಗಾರರಲ್ಲೊಬ್ಬರು…

ರವಿ ಕಾಣದ್ದನ್ನು ಕವಿ ಕಂಡ
ಕವಿ ಕಾಣದ್ದನ್ನು ಕಲಾವಿದ ಕಂಡ
ಅಂತಹ ಸಾವಿರಾರು ಕವಿ, ಕಲಾವಿದರನ್ನು ಸೃಷ್ಟಿಸಬಲ್ಲ ಗುರುವಿನ ಸ್ಥಾನ ಅತ್ಯಮೂಲ್ಯ ಗೌರವಾದರದ ಪ್ರತೀಕ ,ಹೀಗೆ ಪವಿತ್ರ ಶಿಕ್ಷಕ ವೃತ್ತಿಯಲ್ಲಿ ತೊಡಗಿ ಅದ್ಭುತವಾದ ಬರಹಗಳ ಮೂಲಕ ಕವಿಗಳಾಗಿ ಹೆಸರಾದ ಸು.ರಂ.ಎಕ್ಕುಂಡಿ ಅವರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮದೇ ಹೆಗ್ಗುರುತು ಮೂಡಿಸಿದ್ದಾರೆ. ಶ್ರೀಯುತರ ಪರಿಚಯಿಸುವ ಪುಟ್ಟ ಪ್ರಯತ್ನ ನನ್ನದಾಗಿದೆ…

ಬಾಲ್ಯಜೀವನ:

ಸು.ರಂ. ಎಕ್ಕುಂಡಿ. ಅವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ…
ಸು ರಂ ಎಕ್ಕುಂಡಿ ಅವರು ಜನವರಿ ಇಪ್ಪತ್ತು ಸಾವಿರದ ಒಂಬೈನೂರಾ ಇಪ್ಪತ್ಮೂರರಲ್ಲಿ (೨೦-೧-೧೯೨೩) ಯಾಲಕ್ಕಿ ಕಂಪಿನ ನಗರ ಎಂದು ಖ್ಯಾತವಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನಲ್ಲಿ ಜನಿಸಿದ್ದಾರೆ.. ತಂದೆಯವರಾದ ಶ್ರೀ ರಂಗಣ್ಣ/ರಂಗನಾಥ/ ರಂಗಾಚಾರ್ಯ ರವರು ತುಂಬಾ ಸರಳ, ಸೌಜನ್ಯ ವ್ಯಕ್ತಿಗಳು.. ತಾಯಿಯವರಾದ ರಾಜಕ್ಕ ಮಮತಾಮಯಿ..

ಶಿಕ್ಷಣ :
ಪ್ರಾಥಮಿಕ ಶಿಕ್ಷಣ ಸ್ಥಳೀಯ ಶಿಕ್ಷಣ ಕೇಂದ್ರದಲ್ಲಿ ನಂತರದ ಲ್ಲಿ ಬಿ.ಎ ಆನರ್ಸ್ ಪದವಿ ಪಡೆದುಕೊಂಡರು… ಇವರು ವಿಲ್ಲಿಂಗ್ ಡನ್ ಕಾಲೇಜು ,ಸಾಂಗ್ಲಿ ಸಾಹಿತ್ಯ ವಿದ್ಯಾರ್ಥಿಯಾಗಿ ಶಿಕ್ಷಣ ಪೂರೈಸಿದರು…

ವೃತ್ತಿ:

ಅಧ್ಯಾಪಕರಾಗಿ ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲ ಪ್ರೌಢಶಾಲೆಯಲ್ಲಿ ಸುಮಾರು ೩೫ ವರ್ಷಗಳ ಸೇವೆಯಲ್ಲಿ ತೊಡಗಿದ್ದರು.. ಜೊತೆಗೆ ಕವಿಗಳಾಗಿ ಅತ್ತ್ಯುತ್ತಮ ಬರಹಗಳ ಮೂಲಕ ಜನಮನಸ ಗೆದ್ದರು.

ಕೃತಿಗಳು: ಸು ರಂ ಎಕ್ಕುಂಡಿ ಅವರ ಅದ್ಭುತ ಬರಹದ ಮೊಟ್ಟ ಮೊದಲ ಕವನಸಂಕಲನ * ಸಂತಾನ ಇದನ್ನು *ರಂ ಶಿ ಮುಗಳಿ ಅವರು ಪ್ರಕಟಿಸಿದ್ದಾರೆ.. ಇವರು ರಚಿಸಿರುವ “”ಶ್ರೀ ಆನಂದತೀರ್ಥರು”” ಖಂಡಕಾವ್ಯ ರೂಪದಲ್ಲಿದೆ. ಸು ರಂ ಎಕ್ಕುಂಡಿ ಅವರ “ಹಾವಾಡಿಗರ ಹುಡುಗ” * , “ಮತ್ಸ್ಯಗಂಧಿ” , *”ಬೆಳ್ಳಕ್ಕಿಗಳು” ತುಂಬಾ ಅದ್ಭುತವಾದ ಕಾವ್ಯ ಕಲ್ಪನೆ ಕಟ್ಟಿಕೊಡುತ್ತವೆ.


ಇವರ ಕಥಾಸಂಕಲನ ನೆರಳು ಓದುಗರನ್ನು ಓದಿಸಿಕೊಂಡು ಹೋಗುವ ಶಕ್ತಿ ಹೊಂದಿದೆ. ಸು ರಂ ಎಕ್ಕುಂಡಿ ಅವರು ರಚಿತ ಸುಂದರ ಕಾದಂಬರಿ ಪ್ರತಿಬಿಂಬಗಳು ಸುಂದರ ನೆನಪುಗಳ ಸ್ಮರಣೆಗೆ ಓದುಗರನ್ನು ಸೆಳೆಯುತ್ತದೆ.. ಶ್ರೀ ಪು ತಿ ನರಸಿಂಹಾಚಾರ್ಯರು ಕುರಿತು ಪರಿಚಯ ಕೃತಿಯನ್ನು ಸಹ ರಚಿಸಿದ್ದಾರೆ.


ಶ್ರೀ ಸು ರಂ ಎಕ್ಕುಂಡಿ ಬಹುಭಾಷಾ ಪರಿಣಿತರಾಗಿದ್ದು ಎರಡು ರಶಿಯನ್ ಕಾದಂಬರಿಗಳ ಅನುವಾದವನ್ನು ಮಾಡಿದ್ದಾರೆ..ಇವರ ಅತ್ಯಂತ ಸುಪ್ರಸಿದ್ಧ ಬರಹ ಬಕುಲದ ಹೂವುಗಳು ಕಥನ ಕವನಸಂಕಲನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದುಕೊಂಡಿದೆ. ಅಷ್ಟೇ ಅಲ್ಲ ಅನೇಕ ವಿಭಾಗಗಳಲ್ಲಿ ಶಾಲಾ, ಕಾಲೇಜಿನ ಪಠ್ಯದಲ್ಲಿ ಸಹ ಕವನಸಂಕಲನ ಪ್ರಕಟಗೊಂಡಿವೆ. ಒಟ್ಟಿನಲ್ಲಿ ಸು ರಂ ಎಕ್ಕುಂಡಿ ಅವರು ಅನುಭವದ ಮೂಲಕ ಅನಾಯಾಸವಾಗಿ ಬದುಕಿನ ತತ್ವ ಸಿದ್ಧಾಂತಗಳನ್ನು ತಮ್ಮ ಕಾವ್ಯ ರೂಪದಲ್ಲಿ ಸೆರೆಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ. ತನ್ಮಯತೆ ಎಕ್ಕುಂಡಿ ಅವರ ಕಾವ್ಯದ ಜೀವಾಳ.

ಇವರು ತಮ್ಮ ಆನಂದಾಶ್ರಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರತಿವರ್ಷ ಹೆಸರಾಂತ ಕವಿ ಸಾಹಿತಿಗಳನ್ನು ಕರೆಯಿಸಿ ಬಂಕಿಕೊಡ್ಲ ಜನತೆಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ.. ಬೇಂದ್ರೆ,ಮಾಸ್ತಿ, ಗೌರೀಶ್ ಕಾಯ್ಕಿಣಿ ಇನ್ನೂ ಮುಂತಾದ ಅನೇಕ ಸತ್ವಭರಿತ ಸಾಹಿತಿಗಳನ್ನು ಶಾಲೆಗೆ ಕರೆಯಿಸಿ ಜನತೆಗೆ ಪರಿಚಯಿಸುವ ಕಾರ್ಯ ಮಾಡಿದ್ದರು. ತಮ್ಮ ಅನೇಕ ಕಾವ್ಯಗಳಲ್ಲಿ ಸು ರಂ ಎಕ್ಕುಂಡಿ ಅಂದಿನ ಕಾಲದ ಪಾತ್ರಗಳನ್ನು ಇಂದಿನ ವಾಸ್ತವ ಅಂಶಗಳನ್ನು ಒಳಗೊಂಡ ಪಾತ್ರಗಳೊಂದಿಗೆ ಹೋಲಿಕೆ ನೀಡಿ ಬರೆಯುವ ಬರಹಶೈಲಿ ಅಮೋಘವಾಗಿದೆ..


ಪ್ರಶಸ್ತಿ ಪುರಸ್ಕಾರಗಳು:
ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸು ರಂ ಎಕ್ಕುಂಡಿ ಅವರನ್ನು ಅರಸಿ ಬಂದಿದ್ದವು.. ಅವುಗಳಲ್ಲಿ ಬಹು ಮುಖ್ಯವಾಗಿ “” ಬಕುಲದ ಹೂವುಗಳು” ಕಥನ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಮತ್ತೊಂದು ಕವನಸಂಕಲನ ಮತ್ಸ್ಯಗಂಧಿ ಸಹ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಪಡೆಯಿತು. ಸು ರಂ ಎಕ್ಕುಂಡಿ ಅವರ “ಬೆಳ್ಳಕ್ಕಿಗಳು” ಎಂಬ ಹಸ್ತಪ್ರತಿಗೆ ೧೯೮೨ ರಲ್ಲಿ ಮುದ್ದಣ್ಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಅಷ್ಟೇ ಅಲ್ಲ ಇವರು ರಚಿಸಿರುವ “ಲೆನಿನ್ನರ ನೆನಪಿಗೆ” ಎನ್ನುವ ಕೃತಿಗೆ ೧೯೭೦ರಲ್ಲಿ *ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ ದೊರೆತಿದೆ.. ಹೀಗೆ ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸು ರಂ ಎಕ್ಕುಂಡಿ ಅವರನ್ನು ಹುಡುಕಿಕೊಂಡು ಬಂದವು.


ಯಾವುದಕ್ಕೂ ಮೋಹಗೊಳ್ಳದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಸು ರಂ ಎಕ್ಕುಂಡಿ ಅವರದಾಗಿತ್ತು. ಇವರು ಅನುಸರಿಸುತ್ತಿದ್ದ ಜೊಸೆಫ್ ಕಾರ್ನಾಡ್ ಅವರ ಮಾತು “ನಮ್ಮ ಕನಸುಗಳಂತೆಯೇ ನಾವು ಒಂಟಿಯಾಗಿ ಬಾಳುತ್ತೇವೆ” ಅರ್ಥಪೂರ್ಣ ನುಡಿಗಳಲ್ಲಿ ಕಾವ್ಯ ಸ್ವರೂಪ ಕಟ್ಟಿಕೊಡುವ ಅದ್ಭುತವಾದ ಕವಿಗಳು ಈ ನಮ್ಮ ಸು ರಂ ಎಕ್ಕುಂಡಿ.

ಶಿಕ್ಷಕಸಾಹಿತಿಗಳು…
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೆಸರಾಗಿರುವ ಸು ರಂ ಎಕ್ಕುಂಡಿ ಅವರು ೧೯೯೫ ಆಗಸ್ಟ್ ೨೦ರಂದು ತಮ್ಮ ಕೊನೆಯುಸಿರೆಳೆದರು.. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನೋವು ತುಂಬಲಾರದ ನಷ್ಟ ಉಂಟಾದ ದಿನವದು.. ಒಬ್ಬ ಸಾಮಾನ್ಯ ಶಿಕ್ಷಕರಾಗಿ ಅದ್ಭುತವಾದ ಬರಹದ ಮೂಲಕ ಶ್ರೇಷ್ಠ ಕವಿಗಳಾದ ಸು ರಂ ಎಕ್ಕುಂಡಿ ಅವರ ಕಾವ್ಯಗಳನ್ನು ಓದುಗ ಪ್ರಭುಗಳಾದ ತಾವುಗಳು ಓದಿ ಕನ್ನಡ ಸಾಹಿತ್ಯ ಅಭಿರುಚಿಯನ್ನು ಜೀವಂತವಾಗಿರಿಸಿರೆಂದು ಕೇಳಿಕೊಳ್ಳುತ್ತಾ ಸು ರಂ ಎಕ್ಕುಂಡಿ ಅವರ ಪರಿಚಯ ಬರಹಕ್ಕೆ ವಿರಾಮ ನೀಡುತ್ತೇನೆ..
ಜೈ ಭುವನೇಶ್ವರಿ ಜೈ ಕನ್ನಡಾಂಬೆ ಜೈ ಕರ್ನಾಟಕ..

ramesh badiger
ರಮೇಶ ಮೌನೇಶಚಾರಿ ಬಡಿಗೇರ ರಾಣೇಬೆನ್ನೂರು
Share This Article
Leave a comment