November 23, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 15

Spread the love
bendre

ವರಕವಿ ಬೇಂದ್ರೆ ಬದುಕು-ಬರಹ

ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳಮೂಲಕ ನಾದದ ಗುಂಗು ಹಿಡಿಸಿದ ‘ಶಬ್ದ ಗಾರುಡಿಗ ವರಕವಿ ಸಾಧನಕೇರಿಯ ಅನರ್ಘ್ಯರತ್ನ’‘ಕನ್ನಡದ ಟಾಗೋರ್‌ ಸಹಜ ಕವಿ ರಸ ಋಷಿ ಎಂದೆಲ್ಲಾ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ  ದ.ರಾ. ಬೇಂದ್ರೆ ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದಜೀವಕ್ಕೆ ಸಾಂತ್ವನ ನೀಡಿ,  ಪ್ರೀತಿ ಪ್ರೇಮಗಳನ್ನು ಮೂಡಿಸಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು.  

ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿರುವದಾರ್ಶನಿಕ ಬೇಂದ್ರೆ ಈ ಯುಗದ ಮಹಾಕವಿ. ಉತ್ತಮವಾಗ್ಮಿ. ಆಡಿದ ಮಾತುಗಳನ್ನೆಲ್ಲಾ ಕವಿತೆಯಾನ್ನಾಗಿಸಬಲ್ಲಚತುರ. ದೇಶಪ್ರೇಮಿ, ದೇಶಭಕ್ತ. ಆಧ್ಯಾತ್ಮದ ವಿಷಯಗಳಲ್ಲಿಒಲವನ್ನು ಹೊಂದಿ, ಅರವಿಂದರ ವಿಚಾರಗಳಲ್ಲಿ ಆಸಕ್ತಿಬೆಳೆಸಿಕೊಂಡ ಯುಗದ ಕವಿ. ಜಾನಪದ ಧಾಟಿಯಿಂದಪ್ರೇರೇಪಿತರಾಗಿ ಜಾನಪದ ಸೊಗಡಿನ ಆಡುಭಾಷೆಯ ದೇಶೀಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡ ದೇಸೀಯ ಕವಿ. ಸುಶ್ರಾವ್ಯವಾಗಿ ಹಾಡಲು ಪೂರಕವಾಗುವಂತಹ ನಾದಮಾಧುರ್ಯವನ್ನು ತಮ್ಮ  ರಚನೆಗಳಲ್ಲಿ ತುಂಬಿದ ರಸಕವಿ. ‘ರಸವೆ ಜನನ, ವಿರಸವೆ ಮರಣ, ಸಮರಸವೆಜೀವನ’  ಎಂದು ಜೀವನವನ್ನು ಸರಳವಾಗಿವ್ಯಾಖ್ಯಾನಿಸಿದಧೀಮಂತ ಕವಿ. ಅಸದೃಶವಾದ ಸೃಜನಶೀಲ ಪ್ರತಿಭೆ. ಬದುಕನ್ನೇ ಕಾವ್ಯವಾಗಿಸಿದ ಸಹಜ ಕವಿ.  ಕಾವ್ಯ ವಾಚನದಿಂದ ಅದ್ಭುತ ಅನುಭವವನ್ನು ಸೃಷ್ಟಿಸಿ,ರೋಮಾಂಚನವನ್ನುಂಟುಮಾಡಿದ ಮಾಂತ್ರಿಕ ಕವಿ. 

ಇವರ ಪೂರ್ಣ ಹೆಸರು ದತ್ತಾತ್ರೇಯ ರಾಮಚಂದ್ರಬೇಂದ್ರೆ. ಕಾವ್ಯನಾಮ ಅಂಬಿಕಾತನಯದತ್ತ. ಜನಿಸಿದ್ದುಮಾಘಶುದ್ಧ ‘ಗುರುಪ್ರತಿಪದಾ’ ಮನ್ಮಥನಾಮ ಸಂವತ್ಸರ 1896 ಜನವರಿ  31 ಧಾರವಾಡದ ಮಂಗಳವಾರಪೇಟೆಯಪೋತನೀಸ್ ಗಲ್ಲಿಯಲ್ಲಿದ್ದ ಗುಣಾರಿಯವರ ಮನೆಯಲ್ಲಿ. ಅರ್ಥಾತ್ ಅಜ್ಜಿ ಗಂಗೂಬಾಯಿ ಮನೆಯಲ್ಲಿ. ತಂದೆರಾಮಚಂದ್ರ ಪಂತರು, ತಾಯಿ ಅಂಬೂತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರು ಮೂಲತಃ ಠೋಸರ ಮನೆತನದ ವೈದಿಕ ವೃತ್ತಿಯ ಕುಟುಂಬದವರು. ಇವರಪೂರ್ವಜರು ಬಹಳ ಹಿಂದೆಯೇ ಮಹಾರಾಷ್ಟ್ರದ ರತ್ನಗಿರಿಯಿಂದ ಸಾಂಗ್ಲಿ ಸಂಸ್ಥಾನಕ್ಕೆಸೇರಿದ್ದ ಗದಗ ಸಮೀಪದ  ಶಿರಹಟ್ಟಿಯಲ್ಲಿ ಬಂದುನೆಲೆಸಿದರು. ಹಾಗಾಗಿಯೇ ‘ಬೇಂದ್ರೆ’ಮನೆತನದ ಮೂಲಬೇರುಗಳು ಗದಗ ಜಿಲ್ಲೆ ಶಿರಹಟ್ಟಿ ಎಂದು ಗುರುತಿಸುತ್ತಾರೆ. ಇವರ ಮುತ್ತಜ್ಜ ರಾಮಭಟ್ಟರು ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರು. ಇವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ  ಪಡೆದಿದ್ದರು. ಇವರುಸತ್ಯನಾರಾಯಣ ವ್ರತಕಥೆಯನ್ನು ರಚಿಸಿದ್ದರೆಂದುಹೇಳುತ್ತಾರೆ. 

ಇವರ ಪೂರ್ವಜರು ಋಕ್ ಮಂತ್ರಗಳನ್ನುಬಲ್ಲವರಾಗಿದ್ದರಿಂದ ಇವರನ್ನು ಬೇಂದ್ರೆಗಳೆಂದುಕರೆಯುತ್ತಿದ್ದರು.‘ಬೇಂದ್ರ’ ಅಥವಾ ‘ಬೇನ್’ ಅಂದರೆದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರುಎಂಬ ಅರ್ಥವಿದೆ. ಹೀಗೆ ಬೇಂದ್ರೆಯವರಿಗೆ ವಂಶ ಸುಸಂಸ್ಕೃತಿ ಹಾಗೂ ಸಹಜ ಕಾವ್ಯ ಶಕ್ತಿಯು ಪಾರಂಪರ್ಯವಾಗಿ ರಕ್ತಗತವಾಗಿಯೇ ಬಂದಿತ್ತು. ಜೊತೆಗೆ ಬಡತನವೂ ಬೆಂಬಿಡದ ಬೇತಾಳನಂತೆ ಕಾಡಿತ್ತು.

ಜೀವನ

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಬೇಂದ್ರೆಯ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದುದು ರಾಮಚಂದ್ರ ಭಟ್ಟರ ಸಾವು. ಆಗ ಬೇಂದ್ರೆಯವರಿಗೆ ಇನ್ನೂ ಹನ್ನೊಂದು ವರ್ಷ. ಗಂಡಮಾಲಿ ರೋಗದಿಂದ ತಂದೆ ತೀರಿಕೊಂಡ ಮೇಲೆ ಚಿಕ್ಕಪ್ಪ ಬಂಡೋಪಂತರ ಆಸರೆಯನ್ನು ಬೇಂದ್ರೆಯವರ ಬಡಕುಟುಂಬ ಪಡೆಯಿತು. ಚಿಕ್ಕಪ್ಪನ ಆಶ್ರಯದಲ್ಲಿಯೇ ಬೇಂದ್ರೆಯವರು ವಿದ್ಯಾಭ್ಯಾಸ ಮುಂದುವರಿಸಿದರು. ಧಾರವಾಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. 1913ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ನಂತರ  ಪುಣೆಯ ಫರ್ಗೂಸನ್ ಕಾಲೇಜನ್ನು ಸೇರಿ 1918ರಲ್ಲಿ ಬಿ.ಎ.ಪದವಿಯನ್ನು ಪಡೆದರು. ಅದೇ ವರ್ಷ ‘ಪ್ರಭಾತ’ ಪತ್ರಿಕೆಯಲ್ಲಿ ‘ಬೆಳಗು’ ಇವರ ಮೊದಲ ಕವನವನ್ನು ಪ್ರಕಟಿಸಿದರು. ಮರುವರ್ಷವೇ ಅಂದರೆ 1919ರಲ್ಲಿ ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ಜೀವನ ಸಂಗಾತಿಯಾಗಿ ಸ್ವೀಕರಿಸಿದರು. ಜೀವನೋಪಾಯಕ್ಕಾಗಿ ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಸಾಹಿತ್ಯ ಸೇವೆಯ ಸಲುವಾಗಿ 1921ರಲ್ಲಿ ಧಾರವಾಡದಲ್ಲಿ ಗೆಳೆಯರ ಬಳಗವನ್ನು ಕಟ್ಟಿ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿದರು. ಆ “ಗೆಳೆಯರ ಗುಂಪು” ವಿ.ಕೃ.ಗೋಕಾಕ, ಕಾವ್ಯಾನಂದ ಮತ್ತು ಚೆನ್ನವೀರ ಕಣವಿ ಮುಂತಾದ ಕಾವ್ಯಾಸಕ್ತರನ್ನು ಒಳಗೊಂಡು ಚಿಂತನಪರ ಸಂಘಟನೆಯಾಯಿತು. 

ಕವನಗಳ ಮೂಲಕ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನ ಜಾಗೃತಿಗೆ ಕಾರಣರಾದರು. ಬ್ರಿಟಿಷರ ದಾಸ್ಯವನ್ನು ಪ್ರತಿಭಟಿಸಿ ನರಬಲಿ ಕವನವನ್ನು ಪ್ರಕಟಿಸಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೆಲಸ ಕಳೆದುಕೊಂಡರು. 3 ತಿಂಗಳು ಹಿಂಡಲಗಿಯಲ್ಲಿ ಕಾರಾಗೃಹವಾಸ ಶಿಕ್ಷೆಯನ್ನೂ ಅನುಭವಿಸಿದರು. ಜೊತೆಗೆ 1924ರಲ್ಲಿ ಮಾತೃವಿಯೋಗದಿಂದ ನೊಂದುಹೋದರು. ಕೆಲಸವಿಲ್ಲದೆ ಕೆಲಸಕ್ಕಾಗಿ ಅಲೆದಾಡಿದರು. 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಅಂದರೆ ಈಗಿನ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿ ವಿವಿಧ ಕ್ಷೇತ್ರಗಳಲ್ಲಿ ದುಡಿದರು. ಗದಗಿನ ವಿದ್ಯಾದಾನ ಸಮಿತಿಯಲ್ಲಿ ಕೆಲಕಾಲ ಮುಖ್ಯೋಪಾಧ್ಯಾಯರಾಗಿಯೂ ಸೇವೆಸಲ್ಲಿಸಿದರು. ರಾಷ್ಟ್ರೀಯ ಶಾಲೆ ಮತ್ತು ಸೊಂಡೂರು ಸಂಸ್ಥಾನದಲ್ಲೂ ನೌಕರಿಮಾಡಿದರು. 1935ರಲ್ಲಿ ಎಂ.ಎ. ಪದವಿಯನ್ನು ಪಡೆದುಕೊಂಡು, ಧಾರವಾಡದ ವಿಕ್ಟೋರಿಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ದುಡಿದರು. 1935ರಲ್ಲೇ ಪ್ರಥಮ ಕವನ ಸಂಕಲನ “ಕೃಷ್ಣ ಕುಮಾರಿ”ಯನ್ನು ಹೊರತಂದರು. 1935ರಿಂದ 1940ರವರೆಗೆ ಬರೋಬರಿ 5 ವರ್ಷಗಳ ಕಾಲ ನಿರುದ್ಯೋಗದ ಸಂಕಟವನ್ನನುಭವಿಸಿದರು.

ಮಾಸ್ತಿಯವರ ಬೆಂಬಲದಿಂದ ಪತ್ರಿಕಾ ರಂಗವನ್ನು ಪ್ರವೇಶಿಸಿ, ದುಡಿದರು. ‘ಜೀವನ’ ಪತ್ರಿಕೆಯ ಸಂಪಾದಕರಾದರು. ಜಯಕರ್ನಾಟಕ, ‘ಧರ್ಮ’ ಪತ್ರಿಕೆಗಳಲ್ಲಿ ವ್ಯವಸಾಯ ಮಾಡಿದರು. ಒಂದು ವರ್ಷ ಗದಗಿನ  ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿಯು,  ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ಶಿಕ್ಷಕರಾಗಿಯೂ ಸೇವೆಸಲ್ಲಿಸಿದರು. 1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ಸುಮಾರು 12 ವರ್ಷಗಳ ಕಾಲ ದುಡಿದರು. ತಮ್ಮ 60ನೆಯ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರು. ಪಿ.ಎಂ. ಲಾಡ್‌ರವರ ಸಹಕಾರದಿಂದ 1956ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಸಲಹೆಗಾರರಾಗಿ, ಮೊದಲ ಪ್ರೊಡ್ಯೂಸರ್ ಆಗಿ ಸೇವೆಸಲ್ಲಿಸಿದರು. ನಿರುದ್ಯೋಗ, ಬಡತನಗಳಿಂದ ನೊಂದಮನದಿಂದ ಕಾವ್ಯಗಳನ್ನು ಅರಳಿಸಿದರು.  “ಬಡತನ, ಸಿರಿತನ ಕಡೆತನಕ ಉಳಿದಾವೇನ?” ‘ನನ್ನ ಪಾಡು ನನಗಿರಲಿ’ ಎಂದು ಹಾಡಿದರು. 

ಪ್ರೇರಣೆ

ಜನ್ಮದಾತೆ ಅಂಬೂತಾಯಿಯೇ ಬೇಂದ್ರೆಯವರ ಬದುಕಿನ ಮೊದಲ ಪ್ರೇರಣಾ ಶಕ್ತಿ. ಅಂತೆಯೇ ಅವರ ಕಾವ್ಯನಾಮ ‘ಅಂಬಿಕಾತನಯದತ್ತ’ನಾದುದು. ಕನ್ನಡ ಕಾವ್ಯಾಸಕ್ತರಿಗೆ ಆಕರ್ಷಣೆಯ ತಾಣವಾಗಿರುವ ಧಾರವಾಡದ ಸಾಧನಕೇರಿ ದ.ರಾ. ಬೇಂದ್ರೆಯವರ ಸಾಧನೆಯ ಕೇರಿಯಾಗಿ ಇವರ ಕರ್ಮಭೂಮಿಯೂ ಆಯಿತು. ಬೇಂದ್ರೆಯವರು ಭರ್ತಿ ಐವತ್ತು ವರ್ಷಗಳು ವಾಸಿಸಿದ್ದ ನಾಡಹೆಂಚಿನ ಇವರ ಮನೆ ‘ಶ್ರೀಮಾತಾ’. ಮನೆಯ ಸುತ್ತ ಹಸಿರು ಮುಕ್ಕಳಿಸುವ ಗಿಡ-ಮರಗಳು. ಬೇಂದ್ರೆ ಅವರ ಪ್ರೀತಿಯ ಔದುಂಬರ, ಆಲ ಹಾಗೂ ಅರಳಿ ಮರಗಳು, ಸಾಧನಕೇರಿಯ ಕೆರೆ ಇವರ ಬಹುತೇಕ
ಕೃತಿಗಳಿಗೆ ಪ್ರೇರಣೆಯನ್ನು ನೀಡಿವೆ.

ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳಿಗೆ ಲೆಕ್ಕವೇ ಇಲ್ಲ. ಬಾಲ್ಯದುದ್ದಕ್ಕೂ ಆಸರೆಯಾಗಿದ್ದ ಕಕ್ಕ ಬಂಡೋಪಂತರು. ಅಕ್ಕರೆಯ ಅಜ್ಜಿ ಗಂಗೂಬಾಯಿ. ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದ  ಕವಿ ಹುಯಿಲಗೋಳ ನಾರಾಯಣರಾಯರು.  ಸೋದರ ವಾತ್ಸಲ್ಯವನ್ನು ನೀಡಿ ಇವರ ಕಷ್ಟಗಳಿಗೆ ಕೈಚಾಚಿದ ಮಾಸ್ತಿಯವರು. ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು. ಗೆಳೆಯರ ಬಳಗದ ಎಲ್ಲಾ ಮಿತ್ರರು. ಅಜ್ಜಿ ಗಂಗೂ ತಾಯಿ ನಡೆಸುತ್ತಿದ್ದ ಖಾನಾವಳಿಗೆ ಬಂದು ಹೋಗುತ್ತಿದ್ದವರು. ಸಾಧನಕೇರಿಗೆ ಬರುವ ಮುಂಚೆ ಬೇಂದ್ರೆಯವರ ಬಾಡಿಗೆ ಮನೆಗಳಿದ್ದ ಶುಕ್ರವಾರಪೇಟೆ ಹಾಗೂ ಕಾಮನ­ಕಟ್ಟಿಯ ಜನಸಮೂಹ, ಹಾವಾಡಿಗರು, ಕೋಲೆ ಬಸವನ ಹಿಂದೆ ಓಲಗ ಊದಿಕೊಂಡು ಬರುವವರು, ಕರಡಿ ಕುಣಿಸುವವರು, ಬುಡುಬುಡುಕೆಯವರು, ಕೊಲ್ಲಾಪುರದ ಮಹಾಲಕ್ಷ್ಮಿಯ ಉಪಾಸಕರು ಮುಂತಾದವರ ಹಾವಭಾವ, ಮನೋಭಾವ ನಡವಳಿಕೆಗಳು ಬೇಂದ್ರೆಯವರ ಮೇಲೆ ಗಾಢವಾದ ಪ್ರಭಾವ ಬೀರಿದವು. ಕಿತ್ತು ತಿನ್ನುವ ಬಡತನ, ಉದ್ಯೋಗ ನಿರುದ್ಯೋಗಗಳ ನಡುವಿನ ಮೇಲಾಟ. ಮೇಲಿಂದ ಮೇಲೆ ಸಂಭವಿಸುತ್ತಿದ್ದ ಕರುಳ ಕುಡಿಗಳ ಸಾವು ಕಾವ್ಯಗಳಾದವು.

ಜ್ಞಾನ ಭಂಡಾರದ ಕಡೆಗೆ ಮರುಳಾದುದು. ಪ್ರಪಂಚದ ಎಲ್ಲ ಶಾಸ್ತ್ರಗಳ ಬಗ್ಗೆ ಕುತೂಹಲತಳೆದುದು. ಭೌತಶಾಸ್ತ್ರ, ರಸಾಯನಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ತತ್ವಜ್ಞಾನ, ಖಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ – ಹೀಗೆ ಎಲ್ಲಾ ಕ್ಷೇತ್ರಗಳ ಅಧ್ಯಯನ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳ ಆತ್ಮೀಯ ಒಡನಾಟ. ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯಗಳು. ವಿಶ್ವದ ಮಹಾಕವಿಗಳು, ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಮುಂತಾದ ದಾರ್ಶನಿಕರ ಅನುಭವ ಚಿಂತನಾ ಸಾಗರದಲ್ಲಿ ಈಜಿದುದು. ಮರಾಠಿ ಮತ್ತು ಕನ್ನಡ ದ್ವಿಭಾಷೆಗಳ, ದ್ವಿಸಂಸ್ಕೃತಿಗಳ ವಾತಾವರಣದ ಜೊತೆಗೆ, ನಗರ ಹಾಗೂ ಜಾನಪದ ಸಂಸ್ಕೃತಿಗಳ ಪ್ರಭಾವ. ಅಧ್ಯಯನವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡುದು-ಮುಂತಾದವು ಬೇಂದ್ರೆಯವರ ಮೇಲೆ ಗಾಢವಾದ ಪ್ರಭಾವ ಬೀರಿದವು. ಈ ಎಲ್ಲಾ ಪ್ರೇರಣೆಗಳೂ ಬೇಂದ್ರೆಯವರನ್ನು ಸಮೃದ್ಧವಾಗಿ ಬೆಳೆಸಿ ಅದ್ಭುತ ಚೇತನವನ್ನಾಗಿಸಿವೆ. 

ಅಂಬಿಕಾತನಯ ದತ್ತರ ಸಾಹಿತ್ಯದ ವೈಶಿಷ್ಟ್ಯತೆ

ಜೀವನ, ಜನಪದ, ಕರ್ನಾಟಕ, ಧಾರವಾಡ, ಶ್ರಾವಣ- ಇವು ಇವರ ಕವನಗಳ ಪ್ರಮುಖ ಕೇಂದ್ರ ಬಿಂದು. ಬಡತನ, ನಿರುದ್ಯೋಗ, ಪ್ರಕೃತಿ, ಪರಿಸರ, ಸಾಮಾಜಿಕ ಅಸಮತೋಲನ, ಶೋಷಣೆ, ದೇಶಪ್ರೇಮಗಳು ಇವರ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿವೆ.

ಬೇಂದ್ರೆಯವರು ಕಥೆ, ಕವನ, ವಿಮರ್ಶೆ, ಅನುವಾದ, ಕ್ಷೇತ್ರಗಳಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ಕಷ್ಟಗಳನ್ನೇ ಕವಿತೆಯಾಗಿಸಿ ಕನ್ನಡ ಸಾಹಿತ್ಯ ರಂಗವನ್ನು ಶ್ರೀಮಂತಗೊಳಿಸಿದ್ದಾರೆ. ಎಲ್ಲಾ ಕಾಲಕ್ಕೂ ಜೀವಂತವಾಗಿರುವ ಕವನಗಳನ್ನು ರಚಿಸಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.

ಚಿಂತನೆ ಮತ್ತು ರಚನೆಗಳು ಗ್ರಾಹ್ಯವಾಗಬೇಕಾದರೆ ಕಾವ್ಯದ ಮೂಲ ಪಂಚ ಭೂತಗಳಿಂದಾಗಿರುವ ಜಗತ್ತು ಮತ್ತು ಭಾವಶುದ್ಧಿಯಿಂದ ಕೂಡಿರಬೇಕೆಂಬುದು ಅವರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲೇ ರಚಿತವಾಗಿರುವ ಇವರ ಪ್ರತಿಯೊಂದು ಕವನವೂ ವಿಶಿಷ್ಟವಾದ ಅನುಭವವನ್ನು ಕೊಡುವ ಚೈತನ್ಯವನ್ನು ಹೊಂದಿವೆ. ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ’, ‘ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ’, ‘ಮೂಡಲ ಮನೆಯ ಮುತ್ತನ ನೀರಿನ ಎರಕಾವಾ ಹೊಯ್ದ’, ‘ಶ್ರಾವಣ ಬಂದು ಶ್ರಾವಣ’, ’ಯುಗಯುಗಾದಿ ಕಳೆದರು’, “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ನೀ ಹಿಂಗ ನೋಡಿದರೆ ನಾ ಹೆಂಗೆ ನೋಡಲೇ ನಿನ್ನ’, ಮುಂತಾದ ಕವನಗಳು ಕಾವ್ಯಾಸಕ್ತರ ಮನಸ್ಸೂರೆಗೊಂಡಿವೆ. ನಿಸರ್ಗ ಗೀತೆಗಳಾದ ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ. ಮಾಂತ್ರಿಕ ಕವಿತೆಗಳಾದ ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು, ಸಾಮಾಜಿಕ ಕವನಗಳಾದ ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಮುಂದಾದ ಕವಿತೆಗಳು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿವೆ.

ಬೇಂದ್ರೆಯವರ ಅನುವಾದಿಸಿದ ಕೃತಿಗಳಲ್ಲೂ ಸ್ವಂತಿಕೆಯನ್ನು ಕಾಣುತ್ತೇವೆ. ಮೂಲ ಕಥೆಯ ಸೂಕ್ಷ್ಮ ಎಳೆಗಳು ಬೇಂದ್ರೆಯವರ ಪ್ರತಿಭೆಯ ಮೂಸೆಯಲ್ಲಿ ಪ್ರಜ್ವಲಿಸಿವೆ.

bendre1

ಕವನ ಸಂಕಲನಗಳು

  1. 1922: ಕೃಷ್ಣಾಕುಮಾರಿ
  2. 1932: ಗರಿ
  3. 1934: ಮೂರ್ತಿ ಮತ್ತು ಕಾಮಕಸ್ತೂರಿ
  4. 1937: ಸಖೀಗೀತ
  5. 1938: ಉಯ್ಯಾಲೆ
  6. 1938: ನಾದಲೀಲೆ  
  7. 1943: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ
  8. 1946: ಹಾಡುಪಾಡು
  9. 1952: ಗಂಗಾವತರಣ  
  10. 1956: ಮುಕ್ತಕಂಠ
  11. 1956:ಸೂರ್ಯಪಾನ
  12. 1956:ಹೃದಯಸಮುದ್ರ
  13. 1957: ಜೀವಲಹರಿ
  14. 1957:  ಚೈತ್ಯಾಲಯ
  15. 1957: ಅರಳು ಮರಳು  
  16. (‘ಮುಕ್ತಕಂಠ’, ‘ಸೂರ್ಯಪಾನ’, ‘ಹೃದಯಸಮುದ್ರ’, ‘ಚೈತ್ಯಾಲಯ’,  ‘ಜೀವಲಹರಿ’ – ಐದು ಸಂಕಲನಗಳಿಂದ ಕೂಡಿದ ಬೃಹತ್-ಕವನಸಂಕಲನ)
  17. 1958: ನಮನ  
  18. 1959: ಸಂಚಯ
  19. 1960: ಉತ್ತರಾಯಣ
  20. 1961: ಮುಗಿಲಮಲ್ಲಿಗೆ
  21. 1962: ಯಕ್ಷ ಯಕ್ಷಿ  
  22. 1964: ನಾಕುತಂತಿ
  23. 1966: ಮರ್ಯಾದೆ  
  24. 1968: ಶ್ರೀಮಾತಾ
  25. 1969: ಬಾ ಹತ್ತರ
  26. 1970: ಇದು ನಭೋವಾಣಿ
  27. 1972: ವಿನಯ
  28. 1973: ಮತ್ತೆ ಶ್ರಾವಣಾ ಬಂತು
  29. 1977: ಒಲವೇ ನಮ್ಮ ಬದುಕು
  30. 1978: ಚತುರೋಕ್ತಿ ಮತ್ತು ಇತರ ಕವಿತೆಗಳು
  31. 1982: ಕಾವ್ಯವೈಖರಿ
  32. 1982: ಪರಾಕಿ
  33. 1983: ತಾ ಲೆಕ್ಕಣಕಿ ತಾ ದೌತಿ  
  34. 1983: ಬಾಲಬೋಧೆ  
  35. 1986: ಚೈತನ್ಯದ ಪೂಜೆ
  36. 1987: ಪ್ರತಿಬಿಂಬಗಳು  ಚೈತನ್ಯದ ಪೂಜೆಗೆ

ನಾಟಕಗಳು

  1. ದೆವ್ವದ ಮನೆ
  2. ಹಳೆಯ ಗೆಣೆಯರು
  3. ಹೊಸಸಂಸಾರ
  4. ಸಾಯೋ ಆಟ
  5. ತಿರುಕರ ಪಿಡುಗು
  6. ಗೋಲ್
  7. ಹುಚ್ಚಾಟಗಳು
  8. ಉದ್ಧಾರ
  9. ಜಾತ್ರೆ
  10. ನಗೆಯ ಹೊಗೆ
  11. ಮಂದೀ ಮದಿವಿ
  12. ಮಂದೀ ಮಕ್ಕಳು
  13. ಮಂದೀ ಮನಿ
  14. ಆ ಥರಾ ಈ ಥರಾ
  15. ಶೋಭನಾ
  16. ಮಕ್ಕಳು ಅಡಿಗೆ ಮನೆ ಹೊಕ್ಕರೆ

ಅನುವಾದ

  1. ಉಪನಿಷತ್ ರಹಸ್ಯ ( ಮೂಲ: ಶ್ರೀ ರಾನಡೆ)
  2. ಭಾರತೀಯ ನವಜನ್ಮ (ಮೂಲ:ಶ್ರೀ ಅರವಿಂದ )
  3. ಶ್ರೀ ಅರವಿಂದರ ಯೋಗ, ಆಶ್ರಮ ಮತ್ತು ತತ್ಪೋಪದೇಶ
  4. ಚೀನಾದ ಬಾಳು ಬದುಕು
  5. ಗುರು ಗೋವಿಂದಸಿಂಗ
  6. ನೂರೊಂದು ಕವನ (ಮೂಲ: ಶ್ರೀ ರವೀಂದ್ರನಾಥ ಠಾಕೂರ)
  7. ಕಬೀರ ವಚನಾವಲಿ
  8. ಭಗ್ನಮೂರ್ತಿ (ಮೂಲ ಮರಾಠಿ: ಶ್ರೀ ಅ.ರಾ.ದೇಶಪಾಂಡೆ)
  9. ಶಾಂತಲಾ (ಮರಾಠಿ ಭಾಷೆಗೆ ಅನುವಾದ ಮೂಲ: ಕೆ.ವಿ.ಅಯ್ಯರ್)

ಮರಾಠಿ ಕೃತಿಗಳು

  1. ಸಂವಾದ
    ವಿಠ್ಠಲ ಸಂಪ್ರದಾಯ
    ಶಾಂತಲಾ( ಕನ್ನಡದಿಂದ ಅನುವಾದ: ಮೂಲ: ಕೆ.ವಿ.ಅಯ್ಯರ್)
    ಸಂತ, ಮಹಂತ,ಪೂರ್ಣ ಶಂಭೂ ವಿಠ್ಠಲ
  2. ವಿಠ್ಠಲ ಪಾಂಡುರಂಗ (ಕವನ ಸಂಗ್ರಹ)

ವಿಮರ್ಶೆ/ಗದ್ಯ

1937: ಸಾಹಿತ್ಯ ಮತ್ತು ವಿಮರ್ಶೆ
1940: ಸಾಹಿತ್ಯಸಂಶೋಧನೆ
1945: ವಿಚಾರ ಮಂಜರಿ
1954: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ
1959: ಮಹಾರಾಷ್ಟ್ರ ಸಾಹಿತ್ಯ
1962: ಕಾವ್ಯೋದ್ಯೋಗ
1968: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು
1974: ಸಾಹಿತ್ಯದ ವಿರಾಟ್ ಸ್ವರೂಪ
1976: ಕುಮಾರವ್ಯಾಸ ಪುಸ್ತಿಕೆ

ನಿರಾಭರಣ ಸುಂದರಿ ಕಥಾಸಂಕಲನ

ಇಂಗ್ಲಿಷ್ ನಲ್ಲಿ ರಚಿಸಿರುವ ಕೃತಿಗಳು. 

ಎ ಥಿಯರಿ ಆಫ್ ಇಮ್ಮೋರ್ಟಾಲಿಟಿ 
ಲ್ಯಾಗ್ವೇಜ್ – ಮ್ಯಾಥಮ್ಯಾಟಿಕ್ಸ್ -ಆಂಡ್ ಟ್ರುತ್ 

ಚಲನಚಿತ್ರಕ್ಷೇತ್ರಕ್ಕೆ ಕೊಡುಗೆ

ಹಲವು ಕವನಗಳನ್ನು ಕುಲವಧು, ಚಕ್ರತೀರ್ಥ, ಅರಿಷಿಣ ಕುಂಕುಮ, ಬೆಳ್ಳಿಮೋಡ ಮತ್ತು ಶರಪಂಜರ ಮುಂತಾದ ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದಾರೆ.
1954ರಲ್ಲಿ ‘ವಿಚಿತ್ರ ಪ್ರಪಂಚ’ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರು. 

ಪ್ರಶಸ್ತಿ- ಪುರಸ್ಕಾರಗಳು

ಮುಂಬಯಿಯಲ್ಲಿ ಕನ್ನಡ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷತೆ- 1935
ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- 1943
ಧಾರವಾಡ ‘ಗೆಳೆಯರ ಗುಂಪು’ ಹಾಗೂ ಅನೇಕ ಅಭಿಮಾನಿಗಳಿಂದ 50ನೆಯ ವರ್ಷದ ಹುಟ್ಟು ಹಬ್ಬ ಆಚರಣೆ, ಅಭಿನಂದನಾ ಗ್ರಂಥಸಮರ್ಪಣೆ, ಸಾರ್ವಜನಿಕರಿಂದ ಸನ್ಮಾನ ಸೊಲ್ಲಾಪುರ, ಧಾರವಾಡ ಅಭಿಮಾನಿಗಳಿಂದ ಹಾಗೂ ವಿವಿಧ ಸಂಸ್ಥೆಗಳಿಂದ 60ನೆಯ ವರ್ಷದ ಹುಟ್ಟುಹಬ್ಬ ಆಚರಣೆ- 1956*‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ದಿಲ್ಲಿಯಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ ನೆಹರು ಅವರಿಂದ ಪ್ರಶಸ್ತಿ ಪ್ರದಾನ.
ತುಮಕೂರಿನ ಪೌರಸಭೆಯ ಸನ್ಮಾನ- 1962
ಮೈಸೂರು ದಸರಾ ಮಹೋತ್ಸವ ಸನ್ಮಾನ- 1964
ಮರಾಠಿಯಲ್ಲಿ ರಚಿಸಿದ “ಸಂವಾದ” ವಿಮರ್ಶಾ ಲೇಖನ ಸಂಗ್ರಹ ಕೃತಿಗೆ ಕೇಳ್ಕರ್ ಬಹುಮಾನ- 1965
ಮೈಸೂರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
ಹೈದರಾಬಾದಿನ ಹಿಂದೀ ಪ್ರಚಾರ ಸಭಾದ ‘ಸಾಹಿತ್ಯ ಆಚಾರ್ಯ” ಪ್ರಶಸ್ತಿ.*ಶಿರಹಟ್ಟಿಯಲ್ಲಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಹಾಗೂ ನ್ಯಾಯಮೂರ್ತಿ ಟಿ.ಕೆ. ತುಕೋಳರ ಸಮ್ಮುಖದಲ್ಲಿ 70ನೆಯ ವರ್ಷದಹುಟ್ಟುಹಬ್ಬ ಆಚರಣೆ.
ಮೈಸೂರು ಸರಕಾರ (ಕರ್ನಾಟಕ)ದಿಂದ ಆಜನ್ಮ ವಿಶ್ರಾಂತಿ ವೇತನದ ಗೌರವ.
ಮೈಸೂರು (ಕರ್ನಾಟಕ) ರಾಜ್ಯದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ- 1966
‘ಪದ್ಮಶ್ರೀ’ ಪ್ರಶಸ್ತಿ- 1968
ಕೇಂದ್ರಸಾಹಿತ್ಯ ಅಕಾಡೆಮಿಯ ಫೆಲೊಷಿಪ್ ಗೌರವ- 1969
ಉಡುಪಿಮಠದಿಂದ ‘ಕರ್ನಾಟಕ ಕವಿಕುಲತಿಲಕ” ಬಿರುದು.
75ನೆಯ ಹುಟ್ಟುಹಬ್ಬದ ನೆನಪಿಗಾಗಿ ಕರ್ನಾಟಕರಾಜ್ಯ ಸರಕಾರದಿಂದ ಸಾಕ್ಷ್ಯಚಿತ್ರ  ಬಿಡುಗಡೆ.
ಸೊಲ್ಲಾಪುರದ ಮರಾಠಿ ಅಭಿಮಾನಿಗಳಿಂದ ಅಮೃತ ಮಹೋತ್ಸವ-1972
1973ರಲ್ಲಿ ‘ನಾಕುತಂತಿ” ಕವನ ಸಂಗ್ರಹಕ್ಕೆ ‘ಭಾರತೀಯ ಜ್ಞಾನಪೀಠ ಪ್ರಶಸ್ತಿ’. 8.11.1974ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ.
1974-75ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದ ನಿಮಿತ್ತ  ಕರ್ನಾಟಕ – ಮಹಾರಾಷ್ಟ್ರ ರಾಜ್ಯಗಳಲ್ಲಿ, ಮುಂಬೈ- ದಿಲ್ಲಿ ಇತ್ಯಾದಿ ಪಟ್ಟಣಗಳಲ್ಲಿವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ.
ವಾರಣಾಸಿಯ ‘ಕಾಶಿ ವಿದ್ಯಾಪೀಠ’ದಿಂದ ಗೌರವ ಡಾಕ್ಟರೇಟ್ ಪದವಿ- 1976
ಧಾರವಾಡ ಆಕಾಶವಾಣಿಯ ಸುವರ್ಣ ಮಹೋತ್ಸವ ಸನ್ಮಾನ- 1977
ವಿಜ್ಞಾನಿಗಳಾದ ಡಾ| ಎಚ್. ನರಸಿಂಹಯ್ಯ, ಡಾ| ಸುದರ್ಶನ ಅವರೊಡನೆ ಸಂದರ್ಶನ ಮತ್ತು ಸಂಖ್ಯಾಶಾಸ್ತ್ರ ಸಂಶೋಧನೆಯನ್ನು ಕುರಿತುಚರ್ಚೆ- 1980
ಕರ್ನಾಟಕ ವಾರ್ತಾಇಲಾಖೆಯ ‘ಜನಪದ’ ಪತ್ರಿಕೆಯಲ್ಲಿ ಪ್ರಶ್ನೋತ್ತರ ಪ್ರಕಟಣೆ- 1981
ಮುಂಬೈ ಆಕಾಶವಾಣಿಯಿಂದ ಬೇಂದ್ರೆಯವರ ಕವನದ ಕೊನೆಯ ವಾಚನ ಪ್ರಸಾರ- 1986 . ಕರ್ನಾಟಕದಲ್ಲಿ ಬೇಂದ್ರೆಯವರನ್ನು ಕರೆದು ಸತ್ಕರಿಸದ ಊರೇ ಇಲ್ಲ
ಹಿಂದಿನ ಕ್ರೈಸ್ಟ್ ಕಾಲೇಜು ಇಂದಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಕನ್ನಡ ಸಂಘವು ಪ್ರತಿವರ್ಷ ದ. ರಾ. ಬೇಂದ್ರೆಯವರ ಅಂತರ ಕಾಲೇಜು ಕವನಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ.

ನರಕ ಚತುರ್ದಶಿ ಬೆಳಕಿನ ಹಬ್ಬ. ದೀಪಾವಳಿ ದೀಪ ಬೆಳಗುವ ಹಬ್ಬ, ಬೆಳಕಿಗೂ ಬೇಂದ್ರೆಗೂ ಎಲ್ಲಿಲ್ಲದ ನಂಟು. 1981 ರ ಅಕ್ಟೋಬರ್ 26ರ ನರಕ ಚತುರ್ದಶಿ ಕನ್ನಡಿಗರ ಪಾಲಿಗೆ ಕರಾಳ ದಿನ.  ಕನ್ನಡ ಪ್ರತಿಭೆ, ಕಾವ್ಯಪ್ರಭೆ, ವರಕವಿ, ಗಾನಗಾರುಡಿಗ ಮುಂಬೈನ ಹರಿಕಿಶನ್ ಆಸ್ಪತ್ರೆಯಲ್ಲಿ ತಮ್ಮ ಜೀವನಯಾತ್ರೆಯನ್ನು ಮುಗಿಸಿ ಬೆಳಕಿನೊಳಗೆ ಐಕ್ಯವಾಗಿ ನಾವು ಕಾಣದ ಬೆಳಕಿನೂರಿನತ್ತ ಪಯಣಿಸಿದರು.

ಬದುಕನ್ನೇ ಕಾವ್ಯವಾಗಿಸುತ್ತಾ ಹೋದ ಪವಾಡ ಸದೃಶ ಶಕ್ತಿ ಬೇಂದ್ರೆಯವರು ಸಾಗಿದ ಸತ್ವಪೂರ್ಣ ಸಾರ್ಥಕ ಬದುಕಿನ ಪಥ ನಮ್ಮ ಮುಂದೆ ಇದೆ. ಆ ಹಾದಿ ನಮ್ಮಲ್ಲಿ ಜೀವನೋತ್ಸಾಹವನ್ನುಂಟು ಮಾಡಲಿ, ನಾಡು ನುಡಿಯ ಅಭಿಮಾನವನ್ನು ಉಕ್ಕಿಸಲಿ, ಕನ್ನಡ ನಾಡು ನುಡಿ ಏಳ್ಗೆಗೆ ಕಂಕಣ ಬದ್ಧರಾಗಿ ದುಡಿಯಲು ಪ್ರೇರಣೆಯಾಗಲಿ.

ಕನ್ನಡೇತರ ಭಾಷೆ ಕಲಿತರೂ ಕನ್ನಡವನ್ನು ಮರೆಯದಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂಬ ಕವಿ ಸಂದೇಶ ಕನ್ನಡಿಗರನ್ನು ಎಚ್ಚರಿಸಲಿ. ನಮ್ಮ ನಾಡಪ್ರೇಮ ಉಜ್ವಲವಾಗಲಿ. ಕನ್ನಡದ ಕವಿ ಸಾಹಿತಿಗಳ ಕೃತಿಗಳನ್ನು ಓದುವಂತೆ ಕನ್ನಡಿಗರೆಲ್ಲರನ್ನೂ ಪ್ರೇರೇಪಿಸಲಿ. 

supreetha 1
ಸುಪ್ರಿತಾ ಚಕ್ಕರೆ
Copyright © All rights reserved Newsnap | Newsever by AF themes.
error: Content is protected !!