ಕನ್ನಡ ಚಿತ್ರ ಸಾಹಿತ್ಯದ ಧ್ರುವತಾರೆ ಚಿ.ಉದಯಶಂಕರ್
…ಹುಟ್ಟುಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಕಾಣದಿರುವ ಎರಡು ಮುಖಗಳು, ಹರುಷವೊಂದೆ ಯಾರಿಗುಂಟು ಹೇಳು ಜಗದಲಿ, ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ…..ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ ಏಕೆ ಕನಸು ಕಾಣುವೆ ನಿಧಾನಿಸು, ನಿಧಾನಿಸು’ ಇದು ಡಾ. ರಾಜ್‍ಕುಮಾರ್ ಅಭಿನಯದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಬರುವ ಕಿವಿಗೆ ಇಂಪಾದ, ಮನಸ್ಸಿಗೆ ಮುದ ನೀಡುವ ಗೀತೆ.
ಶಬ್ಧಗಳ ಮಾಂತ್ರಿಕ
ವಿದ್ವಾಂಸರು ಶಬ್ದ ಚಮತ್ಕಾರದಿಂದ ತಿಳಿಸುವ ಜೀವನದ ಸಾರವನ್ನು ಜನಸಾಮಾನ್ಯರಿಗೆ ನಾಟುವಂತೆ ಹೇಳಿದ್ದಾರೆ ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ಚಿ. ಉದಯಶಂಕರ್.
ಬಿಳಿ ಷರ್ಟು ಅದೇ ಬಣ್ಣದ ಪಂಚೆ, ಹಣೆಯಲ್ಲಿ ಒಂದು ಬೆರಳಗಲದ ವಿಭೂತಿ, ದೊಡ್ಡಕನ್ನಡಕ ಧರಿಸಿ ಮಂದಸ್ಮಿತರಾಗಿರುತ್ತಿದ್ದ ಚಿ .ಉದಯಶಂಕರ್ ಕನ್ನಡ ಚಿತ್ರರಂಗದ ಸಾಹಿತ್ಯ ಕ್ಷೇತ್ರದಲ್ಲಿ ಧ್ರುವತಾರೆಯಂತೆ ಬೆಳಗಿದರು. ಕನ್ನಡಿಗರ ಕಣ್ಮಣಿ ಡಾ. ರಾಜ್ ಅವರ ಮೂಲಕ ಅವರ ಬಾಯಿಯಿಂದ ನುಡಿಸುತ್ತಿದ್ದ ನುಡಿಮುತ್ತುಗಳು ಅಸಂಖ್ಯಾತ ಕನ್ನಡಿಗರಿಗೆ ಅದರಲ್ಲೂ ಅವರ ಅಭಿಮಾನಿಗಳಲ್ಲಿ ಮೂಡಿಸುತ್ತಿದ್ದ ಸಂತಸಕ್ಕೆ ಪಾರವೇ ಇಲ್ಲ. ಇದರ ಹಿಂದಿದ್ದವರು ಚಿ.ಉದಯಶಂಕರ್ ಎನ್ನುವುದನ್ನು ಚಿತ್ರೋದ್ಯಮದವರು ಒಪ್ಪುತ್ತಾರೆ.
ಬಿಕ್ಕಟ್ಟಿನ ಸನ್ನಿವೇಶವನ್ನು ತಿಳಿಯಾಗಿಸುವ ಕಲೆಕರಗತಮಾಡಿಕೊಂಡಿದ್ದ ಉದಯಶಂಕರ್ ಬಹಳ ಸಂಕೋಚದ ಸ್ವಭಾವದವರು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದ್ದ ವಿಷಯ. ಡಾ. ರಾಜ್‍ಗೆ ಇದ್ದ ಕೆಲವೇ ಆತ್ಮೀಯರಲ್ಲಿ ಚಿ.ಉದಯಶಂಕರ್ ಅವರೂ ಒಬ್ಬರು. ಹೊಸ ಸಿನಿಮಾ ಕುರಿತ ಚರ್ಚೆಯಲ್ಲಿ ವರನಟರೊಂದಿಗೆ ಉದಯಶಂಕರ್ ಇರಲೇಬೇಕು. ಕಾಳಿದಾಸ-ಭೋಜರಾಜರಂತೆ ಇದ್ದವರು ಡಾ.ರಾಜ್ ಮತ್ತು ಉದಯಶಂಕರ್. ಆದರೆ ನಟಸಾರ್ವಭೌಮರ ಪ್ರಭಾವವನ್ನು ತಮ್ಮ ವೈಯಕ್ತಿಕ ಜೀವನಕ್ಕೆ ಬಳಸಿಕೊಳ್ಳದಂತೆ ನಡೆದವರು ಎಂಬ ಮಾತು ಪ್ರಚಲಿತದಲ್ಲಿತ್ತು.
ಮಾತುಗಳೇ ಹಾಡಾಗುತ್ತಿತ್ತು
ಮಾತು- ಮಾತನಾಡುತ್ತಿದ್ದಂತೆ ಹಾಡನ್ನು ಬರೆಯುವ ಸಾಮರ್ಥ್ಯ ಅವರಿಗಿತ್ತು. ಕ್ಲಿಷ್ಟಕರ ವಿಚಾರವನ್ನು ಸುಲಿದ ಬಾಳೆಹಣ್ಣು ತಿಂದಂತೆ ಸುಲಭವಾಗಿ ಪ್ರೇಕ್ಷಕರಿಗೆ ತಿಳಿಸುವ ಸಂಭಾಷಣೆ ಅವರ ಲೇಖನಿಯಿಂದ ಮೂಡುತ್ತಿತ್ತು. ಡಾ.ರಾಜ್ ಅವರ ಜನಪ್ರಿಯತೆ ಹೆಚ್ಚಲು ಅವರ ಅಭಿನಯದ ಜತೆಗೆ ಉದಯಶಂಕರ್ ಸಾಹಿತ್ಯವೂ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿರರ್ಗಳವಾಗಿ,ಅಭಿಮಾನಿಗಳು ಸಿಳ್ಳೆ ಹಾಕುವಂತೆ ಚಿತ್ರದಲ್ಲಿ ಅಣ್ಣೋರು ಹೇಳುವ ಮಾತುಗಳ ಹಿಂದೆ ಇದ್ದದ್ದು ಚಿ.ಉದಯಶಂಕರ್ ಅವರ ಆಕರ್ಷಕ ಸಾಹಿತ್ಯ. ಕನ್ನಡಿಗರನ್ನು ಬಡಿದೆಬ್ಬಿಸುವ, ಕನ್ನಡತನವನ್ನು ಸಾರುವ ರಸಭರಿತ ನುಡಿಗಳು ಡಾ. ರಾಜ್ ಅವರಿಂದ ಬರುವಲ್ಲಿ ಉದಯಶಂಕರ್ ಪಾತ್ರ ಬಹಳವೆನ್ನಬಹುದು.
ಸಂತ ತುಕಾರಾಂನಿಂದ ಸಾಹಿತ್ಯ ಕೃಷಿ
ಚಿತ್ರ ಸಾಹಿತಿ ಚಿ. ಸದಾಶಿವಯ್ಯ ಅವರ ಪುತ್ರರಾದ ಚಿ.ಉದಯಶಂಕರ್ ಸಣ್ಣವಯಸ್ಸಿನಲ್ಲೇ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಛಾಪುಮೂಡಿಸಿದವರು. ಚಿತ್ರಸಾಹಿತಿಗಳಿಗೆ, ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದ ಅಂದಿನ ಮದ್ರಾಸ್ ಈಗಿನ ಚೆನ್ನೈಗೆ ತಂದೆಯೊಂದಿಗೆ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಿಂತನಹಳ್ಳಿ (ಈಗಿನ ಚಂದ್ರಶೇಖರಪುರ)ಯಲ್ಲಿ 18 ಫೆ. 1934ರಲ್ಲಿ ಜನಿಸಿದ ಉದಯಶಂಕರ್ ಗೆ ತಂದೆಯವರಿಂದಲೇ ದೊರೆಯಿತು ಮಾರ್ಗದರ್ಶನ. ಸಾಕಷ್ಟು ಕನ್ನಡ ಚಿತ್ರಗಳಿಗೆ ಸಾಹಿತ್ಯ ನೀಡಿದ್ದ ಚಿ. ಸದಾಶಿವಯ್ಯ ಅವರಿಂದಲೇ ಅನುಭವ ಪಡೆದ ಉದಯಶಂಕರ್ ಸ್ವತಂತ್ರಸಾಹಿತಿಯಾಗಿ ಕೆಲಸ ಮಾಡಿದ್ದು 1963ರಲ್ಲಿ. ಡಾ.ರಾಜ್‍ಕುಮಾರ್ ಅಭಿನಯದ ಸಂತತುಕಾರಾಂ ಚಿತ್ರಕ್ಕೆ ಸಂಭಾಷಣೆ ಬರೆದದ್ದು. ಅಲ್ಲಿಂದ ಪ್ರಾರಂಭವಾದ ಅವರ ಕನ್ನಡ ಚಿತ್ರರಂಗದ ನಂಟು ಸುಮಾರು ಮೂರುದಶಕಗಳ ಕಾಲ ಗಟ್ಟಿಯಾಗಿತ್ತು.
ಆರಂಭದ ಕೆಲವು ವರ್ಷಗಳು ಡಾ. ರಾಜ್ ಸೇರಿದಂತೆ ಹಲವು ನಟರ ಚಿತ್ರಗಳಿಗೆ ಕೆಲವು ಹಾಡು ಬರೆಯುತ್ತಿದ್ದ ಉದಯಶಂಕರ್ ಕಾಲ ಉರುಳಿದಂತೆ ವರನಟರ ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆಯುವ ಹೊಣೆ ಹೊತ್ತುಕೊಂಡರು. ನಟಸಾರ್ವಭೌಮ- ಸಾಹಿತ್ಯರತ್ನರ ಜೋಡಿ ಚಿತ್ರರಸಿಕರ ಹೃದಯಗೆದ್ದಿತು. ಡಾ. ರಾಜ್ ಚಿತ್ರವೆಂದರೆ ಅಲ್ಲಿ ಸಾಹಿತ್ಯ ಚಿ. ಉದಯಶಂಕರ್ ಅವರದ್ದು ಎಂಬ ವಾತಾವರಣ ನಿರ್ಮಾಣವಾಯಿತು. ಗುರುರಾಯರ ಪರಮಭಕ್ತರಾಗಿದ್ದ ಡಾ. ರಾಜ್ ಅವರು ಹಾಡಿದ ರಾಯರ ಕುರಿತ ಭಕ್ತಿಗೀತೆಗಳು ಮೂಡಿಬಂದಿದ್ದು ಉದಯಶಂಕರ್ ಅವರಿಂದಲೇ ಎಂಬುದು ಇಲ್ಲಿ ತಿಳಿಸಬೇಕಾದ ವಿಷಯ.
ಡಾ. ರಾಜ್ ಅವರ 85 ಚಿತ್ರಗಳಿಗೆ ಹಾಡು, ಸಂಭಾಷಣೆ ಬರೆದಿರುವ ಉದಯಶಂಕರ್ 3000ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿ ಚಿತ್ರರಸಿಕರನ್ನು ರಂಜಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ವಿಷ್ಣುವರ್ಧನ್, ಅಂಬರೀಷ್, ಅನಂತ್‍ನಾಗ್, ಶಂಕರ್ ನಾಗ್ಅವರ ಚಿತ್ರಗಳಿಗೂ ಚಿ ಉದಯಶಂಕರ್ ಹಾಡುಗಳನ್ನು ಬರೆದಿದ್ದಾರೆ. ಡಾ. ರಾಜ್ ಅವರ ಕಾದಂಬರಿ ಆಧಾರಿತ ಹಲವು ಚಿತ್ರಗಳ ಜನಪ್ರಿಯತೆಯಲ್ಲಿ ಉದಯಶಂಕರ್ ಅವರ ಸಾಹಿತ್ಯದ ಪಾತ್ರವೂ ಪ್ರಮುಖವಾಗಿದೆ ಎನ್ನಬಹುದು.
ಮೃದು ಮನಸ್ಸು, ಗಟ್ಟಿ ಸಾಹಿತ್ಯ
ಸಾಕಷ್ಟು ಕಾದಂಬರಿಗಳನ್ನು ಓದುತ್ತಿದ್ದ ಪಾರ್ವತಮ್ಮ ರಾಜ್‍ಕುಮಾರ್ ಅವರು, ಈ ಕಥೆ ಚಿತ್ರಮಾಡಲು ಚೆನ್ನಾಗಿದೆ ಎಂದು ಪತಿ ಡಾ. ರಾಜ್ ಅವರಲ್ಲಿ ಹೇಳಿದಾಗ, ಚಿ.ಉದಯಶಂಕರ್ ಅವರ ಅಭಿಪ್ರಾಯವನ್ನೂ ಪಡೆದರೆ ಒಳ್ಳೆಯದಲ್ಲವೇ ಎಂದು ಹೇಳುತ್ತಿದ್ದರಂತೆ. ಇದು ಉದಯಶಂಕರ್ ಅವರ ಸಾಹಿತ್ಯಶಕ್ತಿಯಲ್ಲಿ ವರನಟರು ಇರಿಸಿದ್ದ ವಿಶ್ವಾಸವನ್ನು ತೋರಿಸುತ್ತದೆ. ಜನಪ್ರಿಯ ಚಿತ್ರಸಾಹಿತಿಯಾಗಿದ್ದ ಉದಯಶಂಕರ್ 1968ರಲ್ಲಿ ಮಂಕುದಿಣ್ಣೆ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಡಾ. ರಾಜ್ ಅವರ ಅಭಿಮಾನಪೂರ್ವಕದ ಒತ್ತಾಯಕ್ಕೆ ಮಣಿದು ಗಿರಿಕನ್ಯೆ, ಶಂಕರ್ ಗುರು, ನೀ ನನ್ನ ಗೆಲ್ಲಲಾರೆ ಚಿತ್ರಗಳಲ್ಲಿ ಸಣ್ಣಪಾತ್ರಗಳಲ್ಲಿ ನಟಿಸಿದ್ದರು. ಇದಕ್ಕೂ ಮುನ್ನ 60ರ ದಶಕದಲ್ಲಿ ಬಂದ ಹಾಸ್ಯ ಚಿತ್ರ ಲಗ್ನಪತ್ರಿಕೆ ಚಿತ್ರದಲ್ಲೂ ಒಂದು ಪಾತ್ರಕ್ಕೆ ಬಣ್ಣಹಚ್ಚಿದ್ದರು. ಉದಯ ಶಂಕರ್ ಸಂಭಾಷಣೆ ಬರೆದ ಕುಲಗೌರವ, ನಾಗರಹಾವು ಚಿತ್ರಗಳಿಗೆ ಮತ್ತು ಉತ್ತಮ ಚಿತ್ರಕಥೆಗಾಗಿ ಭಾಗ್ಯದ ಲಕ್ಷ್ಮಿ ಬಾರಮ್ಮ, ಆನಂದ್ ಚಿತ್ರಕ್ಕೆ ರಾಜ್ಯಸರ್ಕಾರ ಪ್ರಶಸ್ತಿ ಲಭಿಸಿದೆ.
ಸಂಭಾಷಣೆಯಲ್ಲಿ ಗಟ್ಟಿತನ ತೋರುತ್ತಿದ್ದ ಚಿ. ಉದಯಶಂಕರ್ ಸ್ವಭಾವದಲ್ಲಿ ಬಹಳ ಮೃದು. ಅವರ ಒಳ್ಳೆಯತನವನ್ನು ಚಿತ್ರರಂಗದಲ್ಲಿ ಹಲವರು ದುರುಪಯೋಗ ಪಡಿಸಿಕೊಂಡಿದ್ದಾರೆ. ಒಂದು ಹಾಡಿಗೆ 200ರೂ. ಸಂಭಾವನೆ ಪಡೆಯುತ್ತಿದ್ದ ಇವರಿಗೆ ಆ ಹಣ ನೀಡಲು ಹಿಂದೇಟು ಹಾಕಿದವರೂ ಇದ್ದಾರೆ. ಹಣ ಆಮೇಲೆ ಕೊಡುತ್ತೆನೆ ಎಂದು ಹೇಳಿ ಹಾಡು ಬರೆಸಿಕೊಂಡು ನಂತರ ದುಡ್ಡು ನೀಡಿದ ನಿರ್ಮಾಪಕರು ಇದ್ದರು. ಆದರೆ ಅವರು ಈ ಬಗ್ಗೆ ತಲೆಕೆಡಿಸಿಕೊಂಡವರಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲ ಚಿತ್ರನಿರ್ದೇಶಕರೊಬ್ಬರು ಹೇಳಿದ್ದರು. ಉದಯ ಶಂಕರ್ ಅವರ ಪುತ್ರರಾದ ಚಿ.ಗುರುದತ್ ಹಾಗು ರವಿಶಂಕರ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ದುರಂತವೆಂದರೆ ಎರಡನೇ ಪುತ್ರ ರವಿಶಂಕರ್ ರಸ್ತೆ ಅಪಘಾತದಲ್ಲಿ ಮೃತಪಟ್ಟನಂತರ ಉದಯಶಂಕರ್ ಸಾಕಷ್ಟು ಕುಗ್ಗಿಹೋದರು. ತಾಳ್ಮೆ ಹಾಗೂ ಸಹನೆಯ ಮೂರ್ತಿಯಂತಿದ್ದ ಚಿ.ಉದಯಶಂಕರ್ 1993ರ ಜುಲೈ3ರಂದು ತಮ್ಮ ಜೀವನಯಾನ ಮುಗಿಸಿದರು. ಆಗ ಅವರಿಗೆ 59 ವರ್ಷ ವಯಸ್ಸು. ಇತ್ತೀಚೆಗಷ್ಟೆ ಅವರ ಪತ್ನಿ ಶಾರದಮ್ಮ ನಿಧನರಾದರು.
ಕನ್ನಡದ ಸಾಂಸೃತಿಕ ಪ್ರತಿನಿಧಿಯೆಂದು ಡಾ. ರಾಜ್ ಅವರನ್ನು ಬಣ್ಣಿಸಿದರೆ ಅವರ ಚಿತ್ರಗಳಿಗೆ ಸಾಹಿತ್ಯ ಶಕ್ತಿ ತುಂಬಿದವರು ಚಿ. ಉದಯಶಂಕರ್ ಎಂದರೆ ಅತಿಶಯೋಕ್ತಿಯಲ್ಲ. ಕನ್ನಡ ರಾಜ್ಯೋತ್ಸವ ಮಾಸವಾದ ನವಂಬರ್ ಮಾಸದಲ್ಲಿ ಈ ಸರಸ್ವತಿಪುತ್ರನನ್ನು ಸ್ಮರಿಸುವುದು ಕನ್ನಡಚಿತ್ರರಸಿಕರ ಕರ್ತವ್ಯವೂ ಹೌದು.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ