January 3, 2025

Newsnap Kannada

The World at your finger tips!

kannada1

ಕನ್ನಡ ಸಾಹಿತ್ಯ – ಪರಂಪರೆ

Spread the love
ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದ ದಿನ. ಪ್ರತಿ ಕನ್ನಡಿಗನ, ಕರುನಾಡಿದ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು ಏಕೀಕರಣಗೊಳಿಸಲಾಯಿತು. 1973ರಲ್ಲಿ ಮೈಸೂರು ರಾಜ್ಯ ಎಂದು ಕರೆಯುತ್ತಿದ್ದ ನಮ್ಮ ರಾಜ್ಯವನ್ನು  "ಕರ್ನಾಟಕ'' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ನಾವು 65ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. 

ನ್ಯೂಸ್ ಸ್ನ್ಯಾಪ್ ನಲ್ಲಿ ಒಂದು ತಿಂಗಳು ಪೂರ್ತಿ ಕವಿ, ಕೃತಿ, ಪರಂಪರೆ ಬಗ್ಗೆ ತಿಳಿಸಿಕೊಡುವ ಸಣ್ಣ ಪ್ರಯತ್ನ.ನಮ್ಮ ನಾಡಿನ ಆದಿಕವಿ ಪಂಪನಿಂದ ಲೇಖನ ಮಾಲೆ ಆರಂಭ.

ಆದಿ ಕವಿ ಪಂಪ

pampa

ಆರಂಕುಶವಿಟುಡಂ ನೆನೆಯುದಂ ಮನ ಬನವಾಸಿ ದೇಶವಂ
ಎಂದು ಆದಿ ಮಾಹಾಕವಿ ಪಂಪ ೯ ನೇ ಶತಮಾನದಲ್ಲಿ ಕನ್ನಡ ನಾಡು, ನುಡಿ ಬಗ್ಗೆ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ.

ಕ್ರಿಸ್ತ ಶಕ 902ರ ದುಂದುಭಿ ನಾಮ ಸಂವತ್ಸರದಲ್ಲಿ ಕನ್ನಡದ ಆದಿಕವಿ ಪಂಪನ ಜನನವಾಯಿತು. ತಂದೆ ವೈದಿಕ ಬ್ರಾಹ್ಮಣರಾದ ಅಭಿರಾಮ ದೇವರಾಯ ಮತ್ತು ತಾಯಿ ಅಬ್ಬಣಬ್ಬೆ. ನಂತರ ಇವರೆಲ್ಲ ಜೈನಧರ್ಮದ ಅನುಯಾಯಿಗಳಾಗುತ್ತಾರೆ.

ಹುಟ್ಟಿದ ಊರು ಈಗಿನ ಆಂಧ್ರದ ಪ್ರಮುಖ ಪಟ್ಟಣ ರಾಜಮಂಡ್ರಿಯ ಸಮೀಪದ ವೆಂಗಿಪಳು ಎಂಬ ಅಗ್ರಹಾರ. ಪಂಪನು ಗಣಿತ, ವ್ಯಾಕರಣ, ಅಲಂಕಾರ, ಸಂಗೀತ, ನಾಟ್ಯ, ಶಿಲ್ಪ, ವೈದ್ಯ ಮತ್ತು ವೇದಶಾಸ್ತ್ರವನ್ನು ಈತನ ಗುರುಗಳಾದ ದೇವೇಂದ್ರಮುನಿಗಳ ಗುರುಕುಲದಲ್ಲಿ ಅಭ್ಯಾಸ ಮಾಡಿದ್ದನು. ಇವನು ವೆಂಗಿ ಚಾಲುಕ್ಯವಂಶದ ಎರಡನೆಯ ಅರಿಕೇಸರಿಯ ಆಸ್ಥಾನ ಪಂಡಿತನಾಗಿದ್ದನು.

ಕನ್ನಡ ಚಂಪೂಕಾವ್ಯವಾಗಿ ಮೂಡಿರುವ ‘ಆದಿಪುರಾಣ’ ಪಂಪನ ಮೊದಲಕೃತಿ. ಇದರಲ್ಲಿ ಪ್ರಮುಖವಾಗಿ ಆದಿತೀರ್ಥಂಕರನಾದ ವೃಷಭದೇವ ಮತ್ತು ಅವನ ಮಕ್ಕಳಾದ ಭರತ ಮತ್ತು ಬಾಹುಬಲಿಗಳ ಪ್ರಸಂಗವನ್ನು ಚಿತ್ರಿಸಿದ್ದಾನೆ ಮತ್ತು ಜೈನಧರ್ಮದ ವರ್ಣನೆಯ ಜೊತೆಗೆ ಸರ್ವಧರ್ಮದ ಸಮನ್ವಯವನ್ನು ಕೊಂಡಾಡಿದ್ದಾನೆ.

ವಿಕ್ರಮಾರ್ಜುನ ವಿಜಯ ಕನ್ನಡದಲ್ಲಿ ಪಂಪಭಾರತವೆಂದೇ ಪ್ರಸಿದ್ಧಿ. ಇದರಲ್ಲಿ ವ್ಯಾಸರಚಿತವಾದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಪಂಪನಿಗೆ ಸಲ್ಲುತ್ತದೆ. ಪಂಪ ಭಾರತದಲ್ಲಿ ಅರ್ಜುನನನ್ನು ಪ್ರಧಾನ ಭೂಮಿಕೆಯಲ್ಲಿ ನಿಲ್ಲಿಸಿ ತನ್ನ ದೊರೆ ಅರಿಕೇಸರಿಗೆ ಹೋಲಿಸಿದ್ದಾನೆ. ಮಹಾಭಾರತದ ಕಾವ್ಯದ ವರ್ಣನೆಯ ಜೊತೆಗೆ ಪಂಪ ತನ್ನ ಕಾಲದ ಸಮಾಜದ ನಾಗರೀಕತೆ, ಸಂಪ್ರದಾಯ, ಸಂಸ್ಕೃತಿ ಹಾಗೂ ಜನ ಸಾಮನ್ಯರ ಜೀವನದ ಪೂರ್ಣ ಚಿತ್ರಣನೀಡಿದ್ದಾನೆ. ಅವನು ಅಂದಿನ ಕಾಲದ ಆಟಗಳು, ವಿದ್ಯಾಭ್ಯಾಸ ಪದ್ಧತಿ, ಜನರ ವಿಲಾಸಿಜೀವನ, ಪ್ರಕೃತಿ ಸೌಂದರ್ಯವನ್ನು ಸೊಗಸಾಗಿ ವರ್ಣಿಸಿದ್ದಾನೆ.

ಪಂಪನಿಗೆ ಅನೇಕ ಬಿರುದುಗಳಿದ್ದವು. ಅವುಗಳು ಆದಿಕವಿ, ಕನ್ನಡ ಕಾವ್ಯಗಳ ಜನಕ, ಸಂಸಾರ ಸಾರೋದಯ, ಸರಸ್ವತೀ ಮಣಿಹಾರ, ಕವಿತಾಗುಣಾರ್ಣವ, ನಾಡೋಜ ಮತ್ತು ನೂತನ ಯುಗ ಪ್ರವರ್ತಕ ಎಂಬುದಾಗಿವೆ.

ಪಂಪ ಮನುಷ್ಯ ಜೀವನವನ್ನು ಒಂದು ಪದ್ಯದಲ್ಲಿ ಹೀಗೆ ವಿವರಿಸಿದ್ದಾನೆ. ಜೀವನಕ್ಕೆ ಮುಖ್ಯವಾಗಿ ಬೇಕಾದದ್ದು ಧರ್ಮ, ಅರ್ಥ ಮತ್ತು ಕಾಮ. ಇವುಗಳಲ್ಲಿ ಧರ್ಮವು ಎಲ್ಲಕ್ಕೂ ಪ್ರಧಾನ ಎಂದರೆ ಮುಖ್ಯ. ಅರ್ಥ ಎಂದರೆ ಸಂಪತ್ತು ಅಥವಾ ಧನ, ಅದು ಧರ್ಮವೆಂಬ ಮರದ ಫಲ ಎಂದು ತಿಳಿಯಬೇಕು. ಆ ಫಲದ ರಸ ಅಥವಾ ಸಾರವೇ ಕಾಮ ಅರ್ಥಾತ್ ಅಗತ್ಯ ಅಥವಾ ಬಯಕೆಗಳ ಈಡೇರಿಕೆ. ಧರ್ಮದಿಂದ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂಬುದು ಕವಿಯ ಭಾವ.
ತಾನಿದ್ದ ಬನವಾಸಿ ರಾಜ್ಯವನ್ನು (ಅವನು ದೇಶವೆಂದು ಕರೆದಿದ್ದಾನೆ. ದೇಶಕ್ಕೆ ಪ್ರ್ಯಾಂತ ಅನ್ನುವ ಅರ್ಥವೂ ಇದೆ ) ಹೊಗಳುತ್ತ ಮನುಷ್ಯನಾಗಿ ಹುಟ್ಟಿದರೆ ಎಲ್ಲಾ ಸಮೃದ್ಧವಾಗಿರುವ ಬನವಾಸಿ ದೇಶದಲ್ಲಿ ಹುಟ್ಟಬೇಕು, ಮನುಷ್ಯಜನ್ಮ ದೊರೆಯದಿದ್ದರೆ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯಾಗಿಯೋ ಅಲ್ಲಿ ಹುಟ್ಟಬೇಕು ಎಂದು ತನ್ನ ಅಭಿಲಾಷೆಯನ್ನು ಮತ್ತೊಂದು ಕಾವ್ಯದಲ್ಲಿ ಹೊರಹಾಕಿದ್ದಾನೆ .

ಯಾರು ಏನೇ ಹೇಳಲಿ, ಯಾರು ಏನೇ ಮಾಡಲಿ, ಯಾರು ಬೇಡವೆಂದು ತಡೆದರೂ, ಯಾರು ನನ್ನನ್ನು ಅಂಕುಶದಿಂದ ತಿವಿದರೂ, ನನ್ನ ಮನಸ್ಸು ಬನವಾಸಿ ದೇಶವನ್ನು ಸದಾ ನೆನೆಯುವುದು ಎಂದು ಪಂಪ ಬನವಾಸಿ ದೇಶದ ಬಗ್ಗೆ ತನಗಿದ್ದ ಒಲವು ಮತ್ತು ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾನೆ. ನಿಜ ಅರ್ಥದಲ್ಲಿ ಕನ್ನಡದ ಕಣ್ಮಣಿ ಎಂಬುದನ್ನು ಸಾಬೀತುಪಡಿಸಿದ್ದಾನೆ. ಅಂತಹ ಆದಿಕವಿಯನ್ನು ಪಡೆದ ಕನ್ನಡನಾಡು ಮತ್ತು ಕನ್ನಡಿಗರು ಧನ್ಯರು.

GST prabhu
ಜಿ ಎಸ್ ಟಿ ಪ್ರಭು,
ಬೆಂಗಳೂರು
Copyright © All rights reserved Newsnap | Newsever by AF themes.
error: Content is protected !!