ಕರುನಾಡಿನ ಒಂದೊಂದು ಜಿಲ್ಲೆಗಳ ಕಿರು ಪರಿಚಯ – 2 – ಕಲಬುರಗಿ

Team Newsnap
1 Min Read

ಕಲಾವತಿ ಪ್ರಕಾಶ್

ಕಲ್ಲಿನಿಂದ ಕೂಡಿದ ನೆಲವಿದು
ಕಲಬುರಗಿ ಎಂದು ಹೆಸರು ಪಡೆದಿದೆ
ಆರನೇ ಶತಮಾನದಿಂದಲೇ
ಅಸ್ತಿತ್ವವನು ಹೊಂದಿದೆ

ಕಲಬುರಗಿಯ ಕೋಟೆಯಲ್ಲಿ
ರಾಷ್ಟ್ರಕೂಟ ಹೊಯ್ಸಳರು
ಬಹಮನಿ ರಾಜ ದೆಹಲಿ ಸುಲ್ತಾನರು
ಆಳ್ವಿಕೆಯನ್ನು ಮಾಡಿದರು

ಕೋಟೆಯೊಳಗೆ ಇರುವ ಫಿರಂಗಿಯು
ಜಗದೊಳಗೇನೇ ದೊಡ್ಡದು
ಕೋಟೆಯಲ್ಲಿನ ಜಮಾ ಮಸೀದಿಯು
ಮೋರಿಷ್ ವಾಸ್ತು ಶಿಲ್ಪದಲ್ಲಿಹುದು

ವಾರಂಗಲ್ ರಾಜ ಗುಲ್ಚಂದ್ರವರು
ಇಲ್ಲಿನ ಕೋಟೆ ಕಟ್ಟಿದರು
ಬಂದೇ ನವಾಜೆಂಬ ಸೂಫಿ ಸಂತರ
ಸಮಾಧಿ ಇಲ್ಲೇ ಮಾಡಿಹರು

ಕಬ್ಬಿಣ ಮ್ಯಾಂಗನೀಸ್ ಚಿನ್ನ ಬೆಳ್ಳಿಯ
ನಿಕ್ಷೇಪಗಳು ಇಲ್ಲಿ ಸಿಕ್ಕಿವೆ
ಕರ್ನಾಟಕದೆರಡನೇ ದೊಡ್ಡ ಜಿಲ್ಲೆಯೊಳು
ಭೀಮಾ ಕೃಷ್ಣೆಯರೆಂಬ ನದಿಗಳಿವೆ

ತೊಗರಿ ಕಡಲೆ ಉದ್ದು ಜೋಳ ಇಲ್ಲಿನ ಮುಖ್ಯ ಬೆಳೆ
ಕೃಷ್ಣ ಭೀಮೆಯರು ಹರಿದು ತಂಪಾಗಿಸಿವೆ ಇಳೆ
ಶರಣಬಸಪ್ಪನ ಕೆರೆ ಅಪ್ಪನ ಗುಡಿ ಈ ಊರಿಗೇ ಕಳೆ
ಜಿಲ್ಲೆಯ ಸಮೃದ್ಧ ಗೊಳಿಸಿವೆ ಈ ವಿಶೇಷತೆಗಳೇ

ಶರಣ ಬಸವೇಶ್ವರರ ಧಾರ್ಮಿಕ
ನೆಲೆಯೂ ಈ ಊರು
ಹದಿನೆಂಟನೆ ಶತಮಾನದಲ್ಲೇ
ಮಹಾನ್ ದಾಸೋಹಿಯಾಗಿದ್ದವರು

ಭಾರತದಲ್ಲೇ ಅತಿ ಹಿರಿದೆಂಬ ಹೆಸರು
ಬುದ್ಧವಿಹಾರಕೆ ಸಿಕ್ಕಿಹುದು
ಸಾಹಿತ್ಯ ಸೇವೆಯೊಳಗನೇಕ ಮೊದಲುಗಳ
ಮಾನ್ಯತೆ ಪಡೆದ ಜಿಲ್ಲೆಯಿದು

ಕೇಂದ್ರ ಸಾಹಿತ್ಯದಕಾಡೆಮಿಯ
ಹಂಪಿ ವಿಶ್ವ ವಿದ್ಯಾಲಯದ
ನಾಡೋಜ ಪ್ರಶಸ್ತಿಗಳ ಪಡೆದ
ಮೊದಲ ಮಹಿಳಾ ಸಾಹಿತಿಯಾದ

ಕರ್ನಾಟಕ ಸಾಹಿತ್ಯ ಅಕಾಡೆಮಿಯ
ಪ್ರಥಮ ಮಹಿಳಾ ಅಧ್ಯಕ್ಷೆಯಾದ
ಗೀತಾ ನಾಗಭೂಷಣ್ ನಮ್ಮಯ ಹೆಮ್ಮೆಯ
ಕಲಬುರಗಿ ಜಿಲ್ಲೆಯ ಮನೆ ಮಗಳಿವಳು.

Share This Article
Leave a comment