December 23, 2024

Newsnap Kannada

The World at your finger tips!

gudihalli

ಪತ್ರಕರ್ತ, ಸಂಘಟನಾಕಾರ ಗುಡಿಹಳ್ಳಿಯ ಸೇವೆ ಸ್ಮರಣೆ

Spread the love
  • ಪತ್ರಕರ್ತ ಗುಡಿಹಳ್ಳಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಂತಾಪ ಬಹುಮುಖ ಪ್ರತಿಭೆಯ ಗುಡಿಹಳ್ಳಿ ನಾಗರಾಜ ಅವರು ಪತ್ರಕರ್ತರಾಗಿ, ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕರಾಗಿ, ರಂಗಕರ್ಮಿಯಾಗಿ, ಪತ್ರಕರ್ತರ ಸಂಘಟನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು.

ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು.

ಗುಡಿಹಳ್ಳಿ ಅವರು ಪತ್ರಕರ್ತರಾಗಿ ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ತಮ್ಮ ಅಧಿಕಾರದ ಅವಧಿಯಲ್ಲಿ ಎರಡು ರಾಜ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಮಾಡಿದ್ದರು. ಅವರೊಬ್ಬ ಸಂಘಟನಾ ಚತುರರಾಗಿ ಜನಾನುರಾಗಿದ್ದರು ಎಂದು ಸ್ಮರಿಸಿದರು.

ಪತ್ರಕರ್ತ, ಸಾಹಿತಿ ಆರ್ ಜಿ ಹಳ್ಳಿ‌ ನಾಗರಾಜ ಮಾತನಾಡಿ, ಚಿತ್ರದುರ್ಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುವಾಗ ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮಾಡಿ, ಅಲ್ಲಿನ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ದಾಖಲೆ ಉಳಿಸಿ ಹೋಗಿದ್ದಾರೆ. ಅವರ ಬದುಕಿನ ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗಿದ್ದರು. ರಂಗಭೂಮಿ ಬೆಳವಣಿಗೆಗೆ ಪ್ರಾಮಾಣಿಕ ಕೆಲಸ ಮಾಡಿದರು ಎಂದು ನೆನೆದರು.

ರಂಗ ಕಲಾವಿದೆ ಮಾಲತಿಶ್ರೀ ಮೈಸೂರು ಅವರು ಮಾತನಾಡಿ, ಉತ್ತರ ಕರ್ನಾಟಕದ ಅನೇಕ ಕಲಾವಿದರನ್ನು ಮಾಧ್ಯಮದ ಮೂಲಕ ಪರಿಚಯಿಸಿ ಅವರನ್ನು ಬೆಳಕಿಗೆ ತಂದರು. ಬರೆಯದೇ ಇದ್ದ ನನ್ನಿಂದ ಆತ್ಮಚರಿತ್ರೆ ಬರೆಯಿಸಿ ವಾರಪತ್ರಿಕೆಯಲ್ಲಿ ಪ್ರಕಟವಾಗುವಂತೆ ಮಾಡಿ ಪ್ರೋತ್ಸಾಹಿಸಿದ್ದ ನಿಜವಾದ ಪತ್ರಕರ್ತ. ವೃತ್ತಿ ರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಗೆ ಕೊಂಡಿಯಾಗಿ ಕೆಲಸ ಮಾಡಿದರು ಎಂದು ನೆನಪು ಮಾಡಿಕೊಂಡರು.

ಹಿರಿಯ ಪತ್ರಕರ್ತೆ ಮಾಲತಿಭಟ್ ಮಾತನಾಡಿ, ತಮಗೆ ಹಿರಿಯ ಸಹೋದ್ಯೋಗಿಗಳಾಗಿ ಹಲವು ರೀತಿಯಲ್ಲಿ ಮಾರ್ಗದರ್ಶನ ಮಾಡಿದರು ಎಂದರು.

ಪತ್ರಕರ್ತರ ಭವನ ಕಟ್ಟಡ ಸಮಿತಿ ಸದಸ್ಯ ಎಚ್.ಬಿ. ಮದನಗೌಡ ಅವರು ಗುಡಿಹಳ್ಳಿ ನಾಗರಾಜರ ಸಂಘಟನಾ ಶಕ್ತಿ ಸ್ಮರಿಸಿ, ಪತ್ರಕರ್ತರ ಸಂಘಕ್ಕೆ ಸಲ್ಲಿಸಿದ ಸೇವೆ ನೆನಪಿಸಿದರು.

ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರ ಗಾಂಧಿ ಮಾತನಾಡಿ ಆರ್ಥಿಕ ವಿಚಾರದಲ್ಲಿ ಅವರು ತೊಡಕಿನಲ್ಲಿ ಸಿಕ್ಕಾಕಿಕೊಂಡರೂ, “ರಂಗ ನೇಪಥ್ಯ” ಎಂಬ ಪತ್ರಿಕೆಯನ್ನು ಕೋವಿಡ್ ಸಂದರ್ಭದಲ್ಲೂ ನಿಲ್ಲಿಸದೆ ಪ್ರಕಟಿಸಿ ವೃತ್ತಿ ಗೌರವ ಮೆರೆದರು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಅವರು ಗುಡಿಹಳ್ಳಿ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.
ನಗರ ಘಟಕದ ಪ್ರಧಾನ ಕಾರ್ಯದರ್ಶಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!