2023 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ – ರೇವಣ್ಣ

Team Newsnap
3 Min Read

2023 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿಬ ಎಚ್.ಡಿ.ದೇವೇಗೌಡರ ಆಸೆಯಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಅಧಿಕಾರ ಬರುತ್ತದೆ. ದೇವೇಗೌಡರ ರಾಜಕಾರಣ ಮುಗಿದೇ ಹೋಯ್ತು ಎಂದು ಹೇಳಿದ್ದವರಿಗೆ ಅಚ್ಚರಿ ಫಲಿತಾಂಶ ಮೂಲಕ ಜೆಡಿಎಸ್ ಪಕ್ಷದ ತಾಕತ್ತು ಗೊತ್ತಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಜೆಡಿಎಸ್ ಪಕ್ಷದಿಂದ ಆಯೋಜಿಸಿದ್ದ ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳಿಗೆ ನಡೆದ ಅಭಿನಂದನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಜೆಡಿಎಸ್ ಪಕ್ಷದ ವರಿಷ್ಟ ಎಚ್.ಡಿ.ದೇವೇಗೌಡರನ್ನು ತುಮಕೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡಿ ಉದ್ದೇಶಪೂರ್ವಕವಾಗಿ ಸೋಲಿಸಿದರು. ನಮಗೂ ರಾಜಕೀಯ ಮಾಡೋದಿಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

26 PND P5

ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಬಜೆಟ್ ಮಂಡಿಸುತ್ತಾರೋ ಅಥವಾ ಶಿವಮೊಗ್ಗ ಬಜೆಟ್ ಮಂಡಿಸುತ್ತಾರೋ ಎಂದು ರಾಜ್ಯದ ಜನತೆ ಕಾಯುತ್ತಿದ್ದಾರೆ. ಬಿಜೆಪಿ ಬಜೆಟ್ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿಬಿಟ್ಟಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ಇತರೆ ಜಿಲ್ಲೆಗಳನ್ನೂ ಸ್ವಲ್ಪ ಗಮನಹರಿಸಬೇಕಾಗಿದೆ ಎಂದರು.

ನಾನು ಸಚಿವನಾಗಿದ್ದಾಗ ನನ್ನ ಇಲಾಖೆಯಲ್ಲಿ ಏನಾದರೂ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಿ ಎಂದು ವಿಧಾನಸಭೆ ಶಾಸನಸಭೆಯಲ್ಲಿ ಸವಾಲ್ ಹಾಕಿದ್ದೆ. ಆದರೆ ಈಗಿನ ಬಿಜೆಪಿ ಸರ್ಕಾರದ ಸಚಿವರು ತಾಕತ್ತಿದ್ದರೆ ವಿಧಾನಸಭೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಧೈರ್ಯವಾಗಿ ಹೇಳಲಿ ನೋಡೋಣ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಎಲ್ಲಾ ಇಲಾಖೆಯಲ್ಲಿ ಪರ್ಸೆಂಟೇಜ್ ದಂಧೆ ನಡೆಯುತ್ತಿದೆ. ಎಲ್ಲೆಲ್ಲೂ ವರ್ಗಾವಣೆ ಹೆಸರಿನಲ್ಲಿ ಹಣವನ್ನು ಲೂಟಿ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ತಮ್ಮ ಸಚಿವರ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆ ನಡೆಸುವರೆ ಎಂದು ಪ್ರಶ್ನಿಸಿದರು.

ಸಮಾರಂಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಾವೇರಿ ನದಿ ವಿಚಾರದಲ್ಲಿ ಹೋರಾಟ ಅನಿವಾರ್ಯವಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೋರಾಟಕ್ಕೆ ನಾವೆಲ್ಲರೂ ಒಗ್ಗೂಡಿ ಬೆಂಬಲ ನೀಡೋಣ, ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸೋಣ ಎಂದು ಕರೆ ನೀಡಿದರು.

ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಹೇಳಿದ್ದರು, ಈಗ ಗೊತ್ತಾಯ್ತು ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷಕ್ಕೆ ಓಟು ಹಾಕಿ ಜೆಡಿಎಸ್ ಪಕ್ಷ ಇದೆ ಎಂದು ತೋರಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಮೇಯರ್ ಜೆಡಿಎಸ್ ಪಕ್ಷಕ್ಕೆ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಮಾರಂಭದ ನೇತೃತ್ವವನ್ನು ಶಾಸಕ ಸಿ.ಎಸ್.ಪುಟ್ಟರಾಜು ವಹಿಸಿದ್ದರು. ವೇದಿಕೆಯಲ್ಲಿ ಆಸೀನರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಪಕ್ಕಕ್ಕೆ ಶಾಸಕ ಸಾ.ರಾ.ಮಹೇಶ್ ಅವರನ್ನು ಕರೆದು ಕೂರಿಸಿಕೊಂಡು ಕೆಲಕಾಲ ಚರ್ಚೆ ನಡೆಸಿದ್ದು ಕಂಡು ಬಂದಿತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡುವಾಗ ಮಂಡ್ಯ ಜಿಲ್ಲೆಯ ಹೋರಾಟಗಾರರನ್ನು ಪಕ್ಷಾತೀತವಾಗಿ ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು. ಜೆಡಿಎಸ್ ಮುಖಂಡರು ಪಕ್ಷದ ನಾಯಕರ ಭಾವಚಿತ್ರವುಳ್ಳ ಶಾಲು ಧರಿಸಿದ್ದು ಗಮನ ಸೆಳೆಯಿತು. ವೇದಿಕೆಯಲ್ಲಿ ಬೃಹತ್ ಬ್ಯಾನರ್‌ನಲ್ಲಿ ಮೈಸೂರು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ಭಾವಚಿತ್ರ ಹಾಕಲಾಗಿತ್ತು. ಆದರೆ ಸಮಾರಂಭಕ್ಕೆ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು.

ಪಾಂಡವಪುರದಲ್ಲಿ ನಡೆದ ಸಮಾರಂಭಕ್ಕೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಬಹುಪಾಲು ದಂಪತಿ ಸಮೇತ ಜೊತೆಜೊತೆಯಲ್ಲಿ ಆಗಮಿಸಿದ್ದು ಕಂಡು ಬಂದಿತು.

ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ ಮೈಸೂರು ಮಲ್ಲಿಗೆ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೇದಿಕೆ ಗಣ್ಯರು ಸೇರಿದಂತೆ ನೆರೆದಿದ್ದ ಜನರು ಮಾಸ್ಕ್ ಧರಿಸಿ ಕುಳಿತಿದ್ದರು. ಸಮಾರಂಭದಲ್ಲೇ ಸಾವಿರಾರು ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಲಾಯಿತು. ಜೆಡಿಎಸ್ ಬೃಹತ್ ಅಭಿನಂದನಾ ಸಮಾರಂಭಕ್ಕೆ ಸಾವಿರಾರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಗಮಿಸಿದ್ದರು.

ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಸಾವಿರಾರು ಮಂದಿಗೆ ಮಾಂಸಹಾರಿ ಭೋಜನ ಹಾಗೂ ಪಾಂಡವ ಕ್ರೀಡಾಂಗಣದಲ್ಲಿ ಸಸ್ಯಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Share This Article
Leave a comment