ಜೆಡಿಎಸ್ ಪಟ್ಟಿ ನಾಳೆ ಅಂತಿಮ : ಹಾಸನ ಟಿಕೆಟ್ ಇನ್ನೂ ಗೊಂದಲ

Team Newsnap
1 Min Read

ಬೆಂಗಳೂರು: ವಿಧಾನಸಭಾ ಚುನಾವಣೆಗೆ ವಿವಾದಿತ ಹಾಸನ ಕ್ಷೇತ್ರ ಸೇರಿದಂತೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಏಪ್ರಿಲ್ 7ರಂದು ಅಂತಿಮಗೊಳಿಸಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಗುರುವಾರ ತಿಳಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಕ್ಷೇತ್ರದ ಟಿಕೆಟ್ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರದೊಳಗೆ ಪಕ್ಷ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆ ಪಟ್ಟಿಯಲ್ಲಿ ಹಾಸನದ ಅಭ್ಯರ್ಥಿಯ ಹೆಸರು ಇರಲಿದೆ ಎಂದು ತಿಳಿಸಿದರು.


ಭವಾನಿ ಅವರ ಬದಲಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಪದೇ ಪದೆ ಸ್ಪಷ್ಟಪಡಿಸುತ್ತಿದ್ದರೂ, ಭವಾನಿ ರೇವಣ್ಣ ಅವರು ಮಣಿಯದಿರುವ ಹಿನ್ನೆಲೆಯಲ್ಲಿ ಹಾಸನ ಸೀಟು ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಹಾಸನ ಟಿಕೆಟ್‍ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಎರಡನೇ ಪಟ್ಟಿ ವಿಳಂಬವಾಗುತ್ತಿದೆ.

ದೆಹಲಿಯಲ್ಲಿರುವ ಎಚ್‍ಡಿ ದೇವೇಗೌಡ ಅವರು ಪುತ್ರರಾದ ಕುಮಾರಸ್ವಾಮಿ ಮತ್ತು ಎಚ್‍ಡಿ ರೇವಣ್ಣ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಭವಾನಿ ಅವರಿಗೆ ಅವರ ಪತಿ ರೇವಣ್ಣ ಮತ್ತು ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ರೇವಣ್ಣ ಅವರ ಬೆಂಬಲವಿದೆ.

ಹಾಸನ ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಲಕ್ಷಣಗಳಿದ್ದು, ವಯೋಸಹಜ ಅನಾರೋಗ್ಯದಿಂದ ಕೆಲ ದಿನಗಳಿಂದ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ದೇವೇಗೌಡರು ತಮ್ಮ ಇಬ್ಬರು ಪುತ್ರರು ಹಾಗೂ ಭವಾನಿ ಜತೆ ಮಾತುಕತೆ ನಡೆಸಿದರು.

ಆದರೂ ಪ್ರಯೋಜನವಾಗಿರಲಿಲ್ಲ. ಡಿಸೆಂಬರ್‍ನಲ್ಲಿ ಜೆಡಿಎಸ್ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.ಇದನ್ನು ಓದಿ –10 ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ನಕಲು – ಮುಖ್ಯೋಪಾಧ್ಯಾಯ ಸೇರಿ 15 ಸಿಬ್ಬಂದಿ ಅಮಾನತು

Share This Article
Leave a comment