ಅಭಿನಯ ಶಾರದೆ ಜಯಂತಿ ಇನ್ನಿಲ್ಲ

Team Newsnap
1 Min Read

ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ(76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು.

ಅಭಿನಯ ಶಾರದೆ ಎಂದೇ ಖ್ಯಾತರಾದ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಪುತ್ರ ಕೃಷ್ಣ ಕುಮಾರ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

jayanthi3

ಕಳೆದ ರಾತ್ರಿ ಊಟ ಮಾಡಿ ಮಲಗಿದ್ದ ಜಯಂತಿ ಬೆಳಗ್ಗೆ ಏಳಲಿಲ್ಲ.‌ ರಾತ್ರಿ ಹೇಗೆ ಈ ಘಟನೆ ಸಂಭವಿಸಿತು ಗೊತ್ತಿಲ್ಲ. ಬೆಳಗ್ಗೆ ಎದ್ದೇಳಿಸೋಕೆ ನೋಡಿದೆವು ನಮಗೆ ಆಗಲೇ ತಿಳಿದಿದ್ದು, ಹೃದಯಾಘಾತವಾಗಿರಬಹುದು ಎಂದು ಕುಟುಂಬದ ಮೂಲಗಳು ಹೇಳಿವೆ.

ಬಳ್ಳಾರಿಯಲ್ಲಿ ಜನನ

1950 ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ.

ಹಿರಿಯ ಪುತ್ರಿ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

ತಾಯಿಗೆ ಜಯಂತಿಯನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇತ್ತು. ಹೀಗಾಗಿ ಚಂದ್ರಕಲಾರವರ ನೃತ್ಯಶಾಲೆಗೆ ಸೇರಿಸಿದರು.

jayanthi 1

ಇಲ್ಲಿ ಜಯಂತಿಯವರ ಸಹಪಾಠಿಯಾಗಿದ್ದ ಮನೋರಮಾರವರು ಮುಂದೆ ಪ್ರಖ್ಯಾತ ತಮಿಳು ನಟಿಯಾದರು. ಕನ್ನಡ ನಿರ್ದೇಶಕ ವೈ.ಆರ್.ಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು.

ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದವರು ಸ್ವಾಮಿಯವರೇ. ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ.

Share This Article
Leave a comment