ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ತಾರತಮ್ಯಗಳಿವೆ. ಅವುಗಳು ನಿವಾರಣೆಯಾಗದ ಹೊರತು ಜಾನಪದ ಕಲಾವಿದರ ಬಿಕ್ಕಟ್ಟು ಬದಲಾಗುವುದಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಆರ್.ಶ್ರೀವತ್ಸ ಭಾನುವಾರ ಅಭಿಪ್ರಾಯ ಪಟ್ಟರು.
ಮಂಡ್ಯ ದ ಕರ್ನಾಟಕ ಜಾನಪದ ಅಕಾಡೆಮಿ, ಕರ್ನಾಟಕ ಸಂಘ, ಜನಪದ ಜನ್ನೆಯರು ಸಂಘಟನೆ ಸಹಕಾರದೊಂದಿಗೆ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ನಡೆದ ಕೊರೊನಾ ಕಾಲದಲ್ಲಿ ಜನಪದ ಕಲಾವಿದರ ಬಿಕ್ಕಟ್ಟುಗಳು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಶ್ರೀವತ್ಸ ಮಾತನಾಡಿ ಸಾಮಾನ್ಯವಾಗಿ ಕಾರ್ಯಕ್ರಮ ನೀಡಿದ ಗಾಯಕರು, ನಟರು ಸೇರಿದಂತೆ ಕಲಾವಿದರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ನೀಡುತ್ತಾರೆ. ಕಾರ್ಯಕ್ರಮಗಳ ಪ್ರಾರಂಭದಲ್ಲಿ ಕಿಲೋ ಮೀಟರ್‌ಗಟ್ಟಲೇ ಜನಪದ ಕಲಾವಿದರು ಸಾಗಿ ಸಂಸ್ಕೃತಿಯ ಸಾರವನ್ನು ಎತ್ತಿ ಹಿಡಿದರೂ ಅವರಿಗೆ ಐದು ನೂರು ಅಥವಾ ಒಂದು ಸಾವಿರ ನೀಡುತ್ತಾರೆ. ಅವರ ಕಲೆಗೆ ಬೆಲೆಯೇ ಇಲ್ಲದಂತಾಗಿದ್ದು, ಮೊದಲು ಈ ತಾರತಮ್ಯ ಬದಲಾಗಬೇಕು ಎಂದು ಹೇಳಿದರು.
ಜಾನಪದರು ಮೊದಲು ಮೇಲು ಕೀಳು ತಾರತಮ್ಯ ಎದುರಿಸಬೇಕು. ಜನಪದ ಕಲಾವಿದರು ಎಂದರೆ ಕೆಲವರು ಅನುಮಾನದಿಂದ ನೋಡುತ್ತಾರೆ. ಅದಕ್ಕೆ ಯಾವುದೇ ಕಾರಣಕ್ಕೆ ಕುಗ್ಗಬಾರದು. ಅನುಮಾನ, ಅವಮಾನ ಎದುರಿಸಿದಾಗ ತನ್ನಿಂದ ತಾನೇ ಸನ್ಮಾನ, ಸ್ಥಾನ ಮಾನಗಳು ಸಿಗುತ್ತದೆ. ಜಾನಪದರು ಎಂದಿಗೂ ಯಾವುದಕ್ಕೂ ಆಸೆ ಪಡುವುದಿಲ್ಲ. ಜಾನಪದದಲ್ಲಿ ಎಲ್ಲವೂ ಇದ್ದು, ತಾನಾಗೆ ಒಲಿದು ಬರುತ್ತದೆ ಎಂದು ಹೇಳಿದರು.
ನಟ, ನಟಿಯರು ನಮ್ಮ ನಿಜವಾದ ಐಕಾನ್‌ಗಳಲ್ಲ. ಐಕಾನ್‌ಗಳು ಎಂದುಕೊಂಡಿದ್ದವರು ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೈಲಿನಲ್ಲಿದ್ದಾರೆ. ಜಾನಪದ ಕಲಾವಿದರು ಎಂದಿಗೂ ಈ ರೀತಿಯ ಕೆಲಸಗಳನ್ನು ಮಾಡಿಲ್ಲ. ಜಾನಪದ ಕಲಾವಿದರು ಎಂದರೆ ಗೌರವ ತಂತಾನೆ ಬರುತ್ತದೆ. ನಮ್ಮ ನಿಜವಾದ ಯೂತ್ ಐಕಾನ್‌ಗಳ ಜನಪದ ಕಲಾವಿದರು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಲಾವಿದರೇ, ರೈತರು ಒಂದು ರೀತಿಯಲ್ಲಿ ಕಲಾವಿದರೇ. ಅವರು ಉಳುವ, ನಾಟಿ ಮಾಡು, ಕಟಾವು ಮಾಡುವ ಎಲ್ಲಾ ಕೆಲಸಗಳು ಒಂದು ಕಲೆಗಳೇ ಆಗಿವೆ. ಆಯುರ್ವೇದವೂ ಸಹ ಜಾನಪದ ಕಲೆಯೇ ಆಗಿದೆ. ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೇ ಗುಣವಾಗದ ಕಾಯಿಲೆಗಳು ಆಯುರ್ವೇದ, ನಾಟಿ ಔಷಧಿಯಿಂದ ಗುಣವಾಗಿದೆ. ಕೊರೊನಾ ಕಾಲದಲ್ಲಿಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮೂಲಿಕೆಗಳಾಗಿ ಅರಿಶಿಣ, ಶುಂಠಿ, ಮೆಣಸು ಕೆಲಸ ಮಾಡಿವೆ ಎಂದು ವಿವರಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿದರು. ಕೊರೊನಾ ಲಾಕ್‌ಡೌನ್ ನಂತರದ ದಿನಗಳಲ್ಲಿ ಮಾಡುತ್ತಿರುವ ಮೊದಲ ಈ ಕಾರ್ಯಕ್ರಮದಲ್ಲಿ ಹಿರಿಯ ಸೋಬಾನೆ ಕಲಾವಿದೆ ಹನುಮಮ್ಮ ಅವರನ್ನು ಸನ್ಮಾನಿಸಲಾಯಿತು. 5 ಸಾವಿರ ರು ನಗದು ನೀಡಲಾಯಿತು.
ಕೊರೊನಾ ಕಾಲದ ಜನಪದ ಕಲಾವಿದರ ತಲ್ಲಣ ಮತ್ತು ಕಂಡುಕೊಂಡ ಪರ್ಯಾಯಗಳು ಕುರಿತು ಜಾನಪದ ವಿದ್ವಾಂಸ ಡಾ.ಅರುಣ್ ಜೋಳದ ಕೂಡ್ಲಗಿ, ಜನಪದರು ಸಾಂಕ್ರಾಮಿಕ ರೋಗಗಳನ್ನು ಎದುರಿಸುವ ಬಗೆ ವಿಷಯದ ಕುರಿತು ಸರ್ಕಾರಿ ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಕೆಂಪಮ್ಮ ವಿಚಾರ ಮಂಡಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನಮ್ರತಾ ಇದ್ದರು.
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!