ಕನಸು ಸಾಕಾರವಾಗಲು ಪರಿಶ್ರಮ ಬೇಕು – ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು

Team Newsnap
3 Min Read

ಇಂದಿನ ಯುವ ಪೀಳಿಗೆ ಸಾಧಕರನ್ನು ನೋಡಿ ಆ ಸ್ಥಾನಕ್ಕೆ ಏರಲು ಪ್ರಯತ್ನಿಸಬೇಕು. ಕೇವಲ ಕನಸುಗಳನ್ನು ಕಂಡರೆ ಸಾಲದು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಬದ್ಧತೆ ಇರಬೇಕು. ಕನಸು ಸಾಕಾರವಾಗಲು ಪರಿಶ್ರಮ ಬೇಕು ಎಂದು ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಅಭಿಪ್ರಾಯಪಟ್ಟರು.

pes shu1


ನಗರದ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಕೆ.ವಿ. ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ನಡೆದ ಡಾ.ಹೆಚ್.ಡಿ.ಚೌಡಯ್ಯನವರ 94 ನೇ ಜನ್ಮದಿನೋತ್ಸವ, 2021 ನೇ ಸಾಲಿನ ರಾಜ್ಯಮಟ್ಟದ ಡಾ.ಹೆಚ್.ಡಿ.ಚೌಡಯ್ಯ ಶಿಕ್ಷಣ,ಸಾಹಿತ್ಯ ಮತ್ತು ಕ್ರೀಡಾ ಪ್ರಶಸ್ತಿಗಳ ಪ್ರದಾನ ಹಾಗೂ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ವಿದ್ಯೆಯೆಂದರೆ ಕೇವಲ ಓದುವುದಲ್ಲ

ವಿದ್ಯೆಯೆಂದರೆ ಕೇವಲ ಓದುವುದಲ್ಲ. ಅದರ ಮೂಲಕವೇ ಸಾಧನೆ ಮಾಡುವುದು ಪ್ರತಿಭೆಯಲ್ಲ.ಇರುವ 64 ವಿದ್ಯೆಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಪ್ರತಿಭೆಯಾಗುತ್ತದೆ. ಹಾಡು-ನೃತ್ಯ ಕಲೆ ಯಾವುದೇ ಕ್ಷೇತ್ರದಲ್ಲಿ ವಿದ್ಯಾರ್ಥಿ ಆಸಕ್ತಿ ತೋರಿದರೂ ಕಡಿವಾಣ ಹಾಕದೆ ಪ್ರೋತ್ಸಾಹ ನೀಡುವ ಮನಸ್ಸು ಮಾಡಬೇಕು. ಅವರ ಶಕ್ತಿಯನ್ನು ಗುರುತಿಸಿ ನೀರೆರೆಯುವ ಕೆಲಸ ಮಾಡಬೇಕು.

ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಸರಿಯಾಗಿ ಗುರುತಿಸುತ್ತಿಲ್ಲ. ಪ್ರತಿಭೆ ಬೆಳಕಿಗೆ ಬಂದ ಮೇಲೆ ಗೌರವಿಸುವುದಕ್ಕಿಂತ ಪ್ರಾರಂಭದಲ್ಲಿಯೇ ಗುರುತಿಸಿ ಪೋಷಿಸುವುದು ಸೂಕ್ತ ಎಂದರು. ಮರದಲ್ಲಿ ನಾವು ಹಣ್ಣನ್ನು ಮಾತ್ರ ಇಷ್ಟಪಡುತ್ತೇವೆ. ಹಣ್ಣುಗಳಾಗಲು ಸಹಾಯ ಮಾಡುವ ಬೇರು, ಕಾಂಡ,ಎಲೆ,ಮಣ್ಣು ಇವುಗಳನ್ನು ಗಮನಿಸಬೇಕು. ಪಿಇಎಸ್ ಸಂಸ್ಥೆ ಒಂದು ಹೆಮ್ಮರವಾಗಿ ಹಣ್ಣುಗಳನ್ನು ಬಿಡುವ ಕೆಲಸ ಮಾಡುತ್ತಿದೆ.ಆ ಹಣ್ಣುಗಳು ನಾಡಿನಾದ್ಯಂತ ಪಸರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರು ದಿಗ್ಗಜರ ಸಕ್ಕರೆ ನಾಡಾಗಿದ್ದ ಮಂಡ್ಯವನ್ನು ಅಕ್ಷರದ ನಾಡಾಗಿ ಬದಲಾಯಿಸಿದ್ದಾರೆ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್ ಮಾತನಾಡಿ ಮಂಡ್ಯ ಜಿಲ್ಲೆಯ ಕೆ.ವಿ.ಶಂಕರಗೌಡ ಎಚ್.ಡಿ. ಚೌಡಯ್ಯ, ಜಿ.ಮಾದೇಗೌಡ ಈ ಮೂರು ದಿಗ್ಗಜರ ಸಕ್ಕರೆ ನಾಡಾಗಿದ್ದ ಮಂಡ್ಯವನ್ನು ಅಕ್ಷರದ ನಾಡಾಗಿ ಬದಲಾಯಿಸಿದ್ದಾರೆ. ಇಲ್ಲಿನ ಕಲೆ, ಸಾಹಿತ್ಯ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಯುವ ಪ್ರತಿಭೆಗಳು ಮುಂದೆ ಬರಲು ಪ್ರೋತ್ಸಾಹಿಸಿದ್ದಾರೆ ಎಂದು ಬಣ್ಣಿಸಿದರು.

ಮಂಡ್ಯದ ವಿ.ಸಿ. ಫಾರಂ ಸಂಶೋಧನಾ ಕೇಂದ್ರ ಕೃಷಿ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಲವು ತಳಿಗಳನ್ನು ನಿರ್ಮಿಸಿ ಕೃಷಿ ಕ್ಷೇತ್ರ ಮುಂಚೂಣಿಗೆ ಬರಲು ಸಹಕರಿಸಿದೆ.ಇಲ್ಲಿನ ವಿದ್ಯಾರ್ಥಿನಿ ಪ್ರಥಮ ರ‍್ಯಾಂಕ್ ಗಳಿಸಿ ಕೇಂದ್ರಕ್ಕೆ ಮಂಡ್ಯಕ್ಕೆ ಕೀರ್ತಿ ತಂದಿದ್ದಾಳೆ ಎಂದು ಪ್ರಶಂಸಿಸಿದರು. ಇಂತಹ ಕೃಷಿ ಕೇಂದ್ರದಲ್ಲಿ ರೈತರಿಗೆ ಅನುಕೂಲವಾಗಲು ರೈತ ಸಭಾಂಗಣವನ್ನು ವಿವಿ ವತಿಯಿಂದ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಬದುಕು, ಬರಹ ಬೇರೆಯಲ್ಲ

ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಶುಭಶ್ರೀ ಪ್ರಸಾದ್ ಮಾತನಾಡಿ ಬದುಕು, ಬರಹ ಬೇರೆಯಲ್ಲ ಬದುಕಿನ ಆಯಾಮಗಳನ್ನು ಸಾಹಿತ್ಯ ತೆರೆದಿಡುತ್ತದೆ. ಒಬ್ಬರ ಸಾಧನೆಗೆ ಹತ್ತಾರು ಜನ ಕಾರಣಕರ್ತರಾಗಿರುತ್ತಾರೆ. ಅಂತಹವರಿಗೆ ಕೃತಜ್ಞತೆ ಸಲ್ಲಿಸಬೇಕು. ಇಂದು ಕೃತಜ್ಞತಾ ಭಾವ ವ್ಯಕ್ತಪಡಿಸುವುದೇ ಕಡಿಮೆಯಾಗುತ್ತಿದೆ.

ನಮ್ಮ ಸಂಸ್ಕಾರ ಆ ರೀತಿ ಬೆಳೆಯುತ್ತಿದೆ. ಇಂದಿನ ಯುವ ಪೀಳಿಗೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗದೆ ಸಮಾಜದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗುವಂತಹ ಸಂಸ್ಕಾರ ಕಲಿಯಬೇಕು. ಅಂತಹ ಸಂಸ್ಕಾರವನ್ನು ಸಾಹಿತ್ಯ ಕಲಿಸುತ್ತದೆ ಎಂದರು. ಬದುಕು,ಬರಹಕ್ಕೆ ಪ್ರೇರಣೆಯಾದವರಿಗೆ ಹಾಗೂ ಪಿಇಟಿ ಸಂಸ್ಥೆಯ ಸಮಸ್ತರಿಗೂ ಕೃತಜ್ಞತೆ ಸಲ್ಲಿಸಿದರು.


ಮಾಜಿ ಶಾಸಕರು ಹಾಗೂ ಪಿಇಟಿ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಡಾ.ಹೆಚ್.ಡಿ. ಚೌಡಯ್ಯನವರ 94 ನೇ ಹುಟ್ಟುಹಬ್ಬದ ನಿಮಿತ್ತ ಅಭಿನಂದಿಸಲಾಯಿತು.
2021 ನೇ ಸಾಲಿನ ರಾಜ್ಯ ಮಟ್ಟದ ಡಾ.ಹೆಚ್.ಡಿ.ಚೌಡಯ್ಯ ಶಿಕ್ಷಣ ಪ್ರಶಸ್ತಿಯನ್ನು ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ, ಬೆಂಗಳೂರು ಇಲ್ಲಿನ ಕುಲಪತಿಗಳಾದ ಡಾ.ಎಸ್.ರಾಜೇಂದ್ರ ಪ್ರಸಾದ್ ಅವರಿಗೆ,ಸಾಹಿತ್ಯ ಪ್ರಶಸ್ತಿಯನ್ನು ಖ್ಯಾತ ಅಂಕಣಗಾರ್ತಿ ಡಾ.ಶುಭಶ್ರೀ ಪ್ರಸಾದ್ ಅವರಿಗೆ ಮತ್ತು ಕ್ರೀಡಾ ಪ್ರಶಸ್ತಿಯನ್ನು ರಾಷ್ಟ್ರ ಮಟ್ಟದ ಟೆನ್ನಿಸ್ ಕ್ರೀಡಾಪಟು, ಪಿ.ಇ.ಟಿ. ಟೆನ್ನಿಸ್ ಅಕಾಡೆಮಿಯ ಕು.ಕಶ್ವಿ ಸುನಿಲ್ ಅವರಿಗೆ ತಲಾ 20 ಸಾವಿರ ರೂಗಳ ನಗದಿನೊಡನೆ ಪ್ರದಾನ ಮಾಡಲಾಯಿತು.


2021 ನೇ ಸಾಲಿನ ಪ್ರತಿಭಾ ವಿದ್ಯಾರ್ಥಿ ಪ್ರಶಸ್ತಿ ಪುರಸ್ಕಾರವನ್ನು ಸರ್ಕಾರಿ ಪ್ರೌಢಶಾಲೆಯ ಹೊಳಲಿನ ಕು. ಅರ್ಪಿತಾ, ಚಿ. ನಿತಿನ್.ಎಸ್, ಚಿ.ಮನಿಶ್ ಹೆಚ್.ಜೆ ಅವರಿಗೆ, ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಕು.ಚಂದನ.ಎಸ್.ಗೌಡ ಚಂದಗಾಲು ಅವರಿಗೆ ತಲಾ 2000 ರೂಗಳ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.


ಜನತಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಕೆ.ಎಸ್.ವಿಜಯ ಆನಂದ್ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿಗಳಾದ ಎಸ್.ಎಲ್. ಶಿವಪ್ರಸಾದ್, ಪಿಇಟಿ ಟ್ರಸ್ಟಿಗಳಾದ ಡಾ.ರಾಮಲಿಂಗಯ್ಯ,ಪ್ರಾಂಶುಪಾಲರಾದ ಸುವರ್ಣ ರಮೇಶ್ ಉಪಸ್ಥಿತರಿದ್ದರು.

Share This Article
Leave a comment