ವರದಕ್ಷಿಣೆ ಎಂಬ ಭೂತ ತನ್ನ ತೀವ್ರತೆ ಕಳೆದುಕೊಂಡಿದೆಯೇ ?
ತನ್ನ ಭಯಾನಕ ರೂಪದ ವೇಷಭೂಷಣ ಕಳಚಿದೆಯೇ ?
ಕಾಲಕ್ಕೆ ತಕ್ಕಂತೆ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಿದೆಯೇ ?
ಆಧುನಿಕ ಹೆಣ್ಣು ಮಕ್ಕಳ ರೌದ್ರಾವತಾರ ನೋಡಿ ಸ್ವತಃ ಭೂತವೇ ಹೆದರಿದೆಯೇ ?………..
ಭಾರತೀಯ ಸಮಾಜದ ಅತಿ ದೊಡ್ಡ ಪಿಡುಗಾದ, ಅನೇಕ ಕುಟುಂಬಗಳನ್ನು ನಾಶಪಡಿಸಿದ, ತಾಯಂದಿರ ಪಾಲಿನ ಯಮದೂತನೇ ಆಗಿದ್ದ ವರದಕ್ಷಿಣೆ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ವ್ಯವಸ್ಥೆಯ ಬದಲಾವಣೆಯ ಕಾರಣದಿಂದಾಗಿ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ನೇಪಥ್ಯಕ್ಕೆ ಸರಿಯುತ್ತಿದೆ.
ಒಂದು ಕಾಲದಲ್ಲಿ ಹೆಣ್ಣಾಗಿ ಹುಟ್ಟುವುದೇ ಒಂದು ಶಾಪ ಎಂದು ಆಕೆಯ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆಯ ಕಾಟಕ್ಕೆ ಜನ ರೋಸಿ ಹೋಗಿದ್ದರು. ಅದರಲ್ಲೂ ಮಧ್ಯಮ ವರ್ಗದವರು ವರದಕ್ಷಿಣೆ ನೆನೆದು ಕನಸಿನಲ್ಲೂ ಬೆಚ್ಚುತ್ತಿದ್ದರು.
ಕೆಲವು ಗಂಡ ಹೆಂಡತಿಯ ಸಂಸಾರದಲ್ಲಿ ಜಗಳಗಳಾಗಿ ವರದಕ್ಷಿಣೆಯ ಪೀಡನೆ ಇದ್ದಾಗ ತಮ್ಮ ಮಗಳ ಆತ್ಮಹತ್ಯೆ ಅಥವಾ ಕೊಲೆಯ ಸುದ್ದಿ ಯಾವ ಕ್ಷಣದಲ್ಲಿಯಾದರೂ ಬರಬಹುದು ಎಂದು ಒಳಗೊಳಗೆ ಕೊರಗುತ್ತಿದ್ದರು. ಪ್ರತಿದಿನ ಪತ್ರಿಕೆಗಳಲ್ಲಿ ವರದಕ್ಷಿಣೆ ಸಾವಿನ ಕೆಲವು ಸುದ್ದಿಗಳು ಇದ್ದೇ ಇರುತ್ತಿದ್ದವು. ಪೋಲೀಸ್ ಠಾಣೆಗಳಲ್ಲಿ ಕಳ್ಳತನ ಮತ್ತು ಅಪಘಾತದ ನಂತರ ಅತಿಹೆಚ್ಚು ಕೇಸುಗಳು ವರದಕ್ಷಿಣೆಯದೇ ಆಗಿದ್ದಿತು. ವರದಕ್ಷಿಣೆ ಮತ್ತು ವಿಚ್ಚೇದನ ವಿಷಯ ಬಗೆಹರಿಸಲು ಪ್ರತ್ಯೇಕ ಕೌಟುಂಬಿಕ ನ್ಯಾಯಾಲಯಗಳನ್ನೇ ಸ್ಥಾಪಿಸಲಾಯಿತು.
ಹಾಗೆಂದು ಈಗ ಸಂಪೂರ್ಣ ಮಾಯವಾಗಿದೆ ಎಂದು ಭಾವಿಸಬೇಡಿ. ಪ್ರತ್ಯಕ್ಷ ಮತ್ತು ಪರೋಕ್ಷ ವರದಕ್ಷಿಣೆ ಈಗಲೂ ಭಾರತೀಯ ಸಮಾಜದ ಒಂದು ಭಾಗವೇ ಆಗಿದೆ. ಆದರೆ ತನ್ನ ತೀವ್ರತೆ ಕಳೆದುಕೊಂಡಿದೆ. ಕೆಲವು ಕಡೆ ಅಲ್ಪ ಪ್ರಮಾಣದಲ್ಲಿ ವಧು ದಕ್ಷಿಣೆಯ ರೂಪವನ್ನೂ ಪಡೆದಿದೆ.
ಒಂದು ಅಂಶವನ್ನು ಗಮನಿಸಿ. ಇತ್ತೀಚಿನ ದಿನಗಳಲ್ಲಿ ಮದುವೆಯಾಗುವ ಹುಡುಗರಿಗೆ ವಧುಗಳನ್ನು ಹುಡುಕುವುದೇ ಅನೇಕ ಪೋಷಕರಿಗೆ ಒಂದು ದೊಡ್ಡ ಸವಾಲಾಗಿದೆ. ಮೊದಲಿಗೆ ಹುಡುಗಿಯರು ಅನುಭವಿಸುತ್ತಿದ್ದ ಪ್ರಶ್ನೋತ್ತರ ಕಾರ್ಯಕ್ರಮ ಈಗ ವರ ಮತ್ತು ಆತನ ಕಡೆಯವರು ಎದುರಿಸಬೇಕಿದೆ. ಕೇವಲ ಹುಡುಗಿಯರಿಗೆ ಮಾತ್ರ ಅನ್ವಯವಾಗುತ್ತಿದ್ದ ವಯಸ್ಸು, ರೂಪ, ಉದ್ಯೋಗ, ಸ್ವಂತ ಮನೆ, ಆಸ್ತಿ ಮುಂತಾದ ಪ್ರಶ್ನೆಗಳು ಹುಡುಗರಿಗೂ ತೂರಿ ಬರುತ್ತಿದೆ. ಹೆಣ್ಣುಮಕ್ಕಳ ಬೇಡಿಕೆಗಳು ಸಹ ದೊಡ್ಡದಾಗುತ್ತಿದೆ. ವಧುವಿನ ಕಡೆಯವರು ಎಂಬ ಕೀಳರಿಮೆ ಕಡಿಮೆಯಾಗಿದೆ.
ಜಾಗತೀಕರಣದಿಂದ ಭಾರತದ ಅನೇಕ ಕ್ಷೇತ್ರಗಳಿಗೆ ದೊಡ್ಡ ಹೊಡೆತ ಬಿದ್ದಿರುವುದು ನಿಜ. ಸ್ಪರ್ಧೆ ಎದುರಿಸಲಾಗದೆ ಅನೇಕ ಸಾಂಪ್ರದಾಯಿಕ ಉದ್ಯಮಗಳ ಸಮುದಾಯಗಳು ನಾಶವಾದವು. ಆದರೆ ಆ ಜಾಗತೀಕರಣದಿಂದ ಅತಿಹೆಚ್ಚು ಲಾಭ ಪಡೆದದ್ದು ಭಾರತೀಯ ಆಧುನಿಕ ಮಹಿಳೆಯರು ಎಂಬುದು ನಿಸ್ಸಂಶಯ.
ನಿಧಾನವಾಗಿ ಮಹಿಳಾ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತಿದ್ದಂತೆ ಮುಕ್ತ ಮಾರುಕಟ್ಟೆಯ ಪ್ರವೇಶದಿಂದ ವಿದೇಶಿ ಕಂಪನಿಗಳು, ಐಟಿ ಬಿಟಿ ಸೇವೆಗಳ ಬೆಳವಣಿಗೆಯೊಂದಿಗೆ, ಸಂಪರ್ಕ ಕ್ರಾಂತಿಯ ಫಲವಾಗಿ ಮಹಿಳೆಯರ ಉದ್ಯೋಗಾವಕಾಶ ಯಥೇಚ್ಛವಾಗಿ ಸೃಷ್ಟಿಯಾದವು. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಯಿತು. ಅದರ ಪರಿಣಾಮ ನಗರೀಕರಣ ಹೆಚ್ಚಾಯಿತು. ಪುರುಷ ನಿರುದ್ಯೋಗ ಜಾಸ್ತಿಯಾಯಿತು. ಅವಿಭಕ್ತ ಕುಟುಂಬಗಳು ಅಸ್ತಿತ್ವ ಕಳೆದುಕೊಂಡವು. ಮಹಿಳಾ ಪರ ಕಾನೂನುಗಳು ಹೆಚ್ಚಾಗಿ ಜಾರಿ ಮಾಡಲಾಯಿತು. ಮಹಿಳೆಯರು ಸ್ವತಂತ್ರವಾಗಿ ಜೀವಿಸಬಹುದು ಎಂಬ ವಾತಾವರಣ ನಿರ್ಮಾಣವಾಯಿತು.
ಪತಿಯೇ ಪರದೈವ, ಮದುವೆ ಏಳೇಳು ಜನ್ಮದ ಸಂಬಂಧ, ಹೆಣ್ಣು ಗಂಡನ ಅಡಿಯಾಳು, ಹೆಣ್ಣು ಅಡುಗೆ ಮನೆಯ ಪರಿಚಾರಕಿ ಎಂಬ ನಂಬಿಕೆಯ ಸೌಧ ಕುಸಿಯ ತೊಡಗಿತು ಮತ್ತು ಈ ಬದಲಾವಣೆಗಳು ಅತಿವೇಗವಾಗಿ ಘಟಿಸಿದವು.
ಈ ಎಲ್ಲದರ ಪರಿಣಾಮ ವರದಕ್ಷಿಣೆ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಈಗಲೂ ಮದುವೆಯ ಸಂದರ್ಭಗಳಲ್ಲಿ ವರದಕ್ಷಿಣೆಯ ಮಾತುಕತೆಗಳು ನಡೆಯುತ್ತವೆ. ಆದರೆ ” ಆ ದಿನಗಳ ” ಬೇಡಿಕೆ – ಗತ್ತು ಈಗ ಉಳಿದಿಲ್ಲ. ಸೌಮ್ಯವಾಗಿ, ಸೌಹಾರ್ದಯುತವಾಗಿ, ಕೊಡು ಕೊಳ್ಳುವ ರೀತಿಯಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಹೆಚ್ಚು ಕಡಿಮೆಯಾದರೆ ಜೈಲೇ ಗತಿ ಎಂಬ ಭಯ ಕಾಡುತ್ತದೆ.
ಏನಾದರಾಗಲಿ, ಈಗ ವರದಕ್ಷಿಣೆ ಪಿಡುಗು ಕಡಿಮೆಯಾಗುತ್ತಿದೆ ಎಂಬ ವಿಷಯವೇ ಒಂದು ಸಂತೋಷಕರ ಮತ್ತು ಹೆಮ್ಮೆಯ ಸುದ್ದಿ.
ಆ,…,
ವರದಕ್ಷಿಣೆಯ ಸುಳ್ಳು ಆಪಾದನೆ ಮತ್ತು ಕಾಟದಿಂದ ಅನೇಕ ಕುಟುಂಬಗಳು ನರಕಯಾತನೆ ಅನುಭವಿಸಿದ ಬಹಳಷ್ಟು ಹೃದಯವಿದ್ರಾಕ ಘಟನೆಗಳು ಇದೇ ಸಮಾಜದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ. ಪುರುಷ ಶೋಷಣೆಯ ಅಸ್ತ್ರವಾಗಿ, ಬ್ಲಾಕ್ ಮೇಲ್ ಆಗಿ ಕೆಲವು ಕೆಟ್ಟ ಪೋಷಕರು ಮತ್ತು ಮಹಿಳೆಯರು ಇದನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಇದು ಅದರ ಇನ್ನೊಂದು ಮುಖವಾಗಿದೆ.
- ವಿವೇಕಾನಂದ. ಹೆಚ್.ಕೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ