ಶ್ರೀ ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ
ವಿಷಯ : ಅನಾರೋಗ್ಯದ ಭಯದಿಂದ ಆರೋಗ್ಯವಂತರನ್ನು ಅನಾರೋಗ್ಯಕ್ಕೆ ತಳ್ಳುತ್ತಿರುವ ಲಾಕ್ ಡೌನ್ ಭೂತದ ಬಗ್ಗೆ ಒಂದು ಮನವಿ…….
ಗೌರವಾನ್ವಿತರೇ…….
ಕೊರೋನಾ ವೈರಸ್ ಕರ್ನಾಟಕಕ್ಕೆ ಪ್ರವೇಶಿಸಿ ಸುಮಾರು 18/20 ತಿಂಗಳಾಗಿದೆ. ವಿಶ್ವ ಮಟ್ಟದಲ್ಲಿ ಬಹುಶಃ ಎರಡು ವರ್ಷ ಆಗಿರಬಹುದು. ಈಗಾಗಲೇ ವೈರಸ್ ಪರಿಣಿತರಿಗೆ ಅದರ ಗುಣಲಕ್ಷಣಗಳು, ಪರಿಣಾಮಗಳು, ತೀವ್ರತೆ ಎಲ್ಲದರ ಬಗ್ಗೆಯೂ ಸಾಕಷ್ಟು ಮಾಹಿತಿ ಇದೆ. ಜೊತೆಗೆ ಅನುಭವದ ಪಾಠವೂ ದೊರೆತಿದೆ. ಜನರು ಕೂಡ ಕ್ರಮೇಣ ನಿಧಾನವಾಗಿ ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳೇ ಕಳೆದ ವರ್ಷ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಿದಾಗ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ವಿಶ್ವವೇ ಗಾಬರಿಯಾಗಿದ್ದ ಸಂದರ್ಭದಲ್ಲಿ ಅದರ ದುಷ್ಪರಿಣಾಮಗಳ ಹೊರತಾಗಿಯೂ ಸ್ವಲ್ಪ ಸಹನೀಯ.
ಎರಡನೇ ಬಾರಿಗೆ ಅದು ಅಷ್ಟು ಉತ್ತಮ ನಿರ್ಧಾರವಾಗಿರಲಿಲ್ಲ. ಏಕೆಂದರೆ ಸಾಕಷ್ಟು ಸಮಯದ ನಂತರವೂ ವೈದ್ಯಕೀಯ ವಿಭಾಗ ಸಿದ್ದವಾಗಿರಲಿಲ್ಲ. ಈಗ ಮೂರನೆಯ ಬಾರಿ ಮೂರನೆಯ ಅಲೆಯ ಕಾರಣಕ್ಕಾಗಿ ಲಾಕ್ ಡೌನ್ ಪ್ರಹಸನ ಪ್ರಾರಂಭವಾಗಿದೆ. ಇದು ಬಹುಶಃ ಕರ್ನಾಟಕದ ಜನತೆಗೆ ಮತ್ತು ಸಮಾಜಕ್ಕೆ ಭವಿಷ್ಯದಲ್ಲಿ ತುಂಬಾ ದುಬಾರಿಯಾಗುವ ಸಾಧ್ಯತೆ ಇದೆ.
ಹೌದು ಸರ್ಕಾರದ ಮಟ್ಟದಲ್ಲಿ ಒಂದು ಅತ್ಯುತ್ತಮ ವಿಷಯ ತಜ್ಞರ ಸಮಿತಿ ಇದೆ. ಅದರ ಅಭಿಪ್ರಾಯ ನಿಮಗೆ ಮುಖ್ಯವಾಗುತ್ತದೆ. ಅದರ ಅರಿವು ನಮಗಿದೆ. ಆದರೂ….
ಮಾನ್ಯ ಮುಖ್ಯಮಂತ್ರಿಗಳೇ….
ಡಾಕ್ಟರ್, ಪೋಲೀಸ್, ಲಾಯರ್, ಆಡಿಟರ್….. ಮುಂತಾದ ಕ್ಷೇತ್ರದ ಪರಿಣಿತರು ಆಯಾಯಾ ಕ್ಷೇತ್ರದಲ್ಲಿ ತುಂಬಾ ನೈಪುಣ್ಯತೆ ಪಡೆದಿರುತ್ತಾರೆ ಎಂಬುದು ನಿಜ. ಅವರು ಆ ಕ್ಷೇತ್ರದ ಹಿತಾಸಕ್ತಿಯ ಪರವಾಗಿ ಇರುತ್ತಾರೆ ಎಂಬುದು ಅಷ್ಟೇ ವಾಸ್ತವ. ಆದರೆ ನೀವು ಇಡೀ ರಾಜ್ಯದ ಮುಖ್ಯಮಂತ್ರಿಗಳು. ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತ ಅಲ್ಲ. ಸಮಗ್ರ ಚಿಂತನೆಯ ಅವಶ್ಯಕತೆ ಇದೆ. ವೈದ್ಯರು ಆರೋಗ್ಯದ ಬಗ್ಗೆ, ಪೋಲೀಸರು ಕಾನೂನು ಸುವ್ಯವಸ್ಥೆಯ ಬಗ್ಗೆ, ವಕೀಲರು ನ್ಯಾಯದ ಬಗ್ಗೆ ಹೆಚ್ಚು ಯೋಚಿಸುವರು. ಆದರೆ ನೀವು ಇಡೀ ಸಮಾಜದ ಒಟ್ಟು ವ್ಯವಸ್ಥೆಯ ಬಗ್ಗೆ ಯೋಚಿಸಬೇಕಾದ ಜವಾಬ್ದಾರಿ ಹೊಂದಿರುವವರು. ಜನರ ಬದುಕಿನ ಸಂಪೂರ್ಣ ಹೊಣೆ ನಿಮ್ಮ ಮೇಲಿರುತ್ತದೆ.
20 ತಿಂಗಳ ಕೋವಿಡ್ ಮೇನಿಯಾ ಒಂದು ಇಡೀ ಸಮಾಜದ ಮಾನಸಿಕ ಸ್ಥಿತಿಯನ್ನೇ ಬದಲಾಯಿಸಿದೆ. ಶಿಕ್ಷಣ ಹೋಟೆಲ್ ಪ್ರವಾಸೋದ್ಯಮ ಮಾತ್ರವಲ್ಲ ಬಹುತೇಕ ಸಾಮಾನ್ಯ ಮಧ್ಯಮ ವರ್ಗ ಮತ್ತೆ ಬಡತನಕ್ಕೆ ಜಾರುತ್ತಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ನೋಡುತ್ತಿದ್ದೇವೆ.
ಇಂತಹ ಸಂದರ್ಭದಲ್ಲಿ ಜನರಲ್ಲಿ ಮಾನಸಿಕ ಧೈರ್ಯ ತುಂಬಿ ಅವರನ್ನು ಎಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸದೆ ಲಾಕ್ ಡೌನ್ ಭೂತದ ಬಾಯಿಗೆ ಬದುಕನ್ನೇ ನೀಡುತ್ತಿರುವುದು ತುಂಬಾ ಶೋಚನೀಯ.
ಮನೆ ಬಾಡಿಗೆ, ವಿದ್ಯುತ್ ನೀರಿನ ಬಿಲ್, ಶಾಲೆ ಆಸ್ಪತ್ರೆಯ ಖರ್ಚು, ಆಹಾರದ ಅವಶ್ಯಕತೆ ಎಲ್ಲವೂ ಆರ್ಥಿಕ ಚಟುವಟಿಕೆ ಎಂದಿನಂತೆ ನಡೆದರೆ ಮಾತ್ರ ಸಾಧ್ಯ. ಎಲ್ಲವೂ ಸಹಜವಾಗಿ ನಡೆಯುವಾಗಲೇ ಅನೇಕ ಸಮಸ್ಯೆಗಳು ಇರುತ್ತಿದ್ದವು. ಈಗ ಸಂಪೂರ್ಣ ಲಾಕ್ ಡೌನ್ ಆದರೆ ಅದರ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರವಾಗಿರುತ್ತದೆ.
ಆದ್ದರಿಂದ ದಯವಿಟ್ಟು ಯಾರಿಗೆ ಹೆಚ್ಚು ಕೊರೋನಾ ಆತಂಕ ಇದೆಯೋ ಅವರು ಸಾಧ್ಯವಾದಷ್ಟು ಮನೆಯಲ್ಲೇ ಇರಲಿ. ಅದು ಅವರ ಇಚ್ಛೆ. ಹಾಗೆಯೇ ಯಾರಿಗೆ ಬದುಕು ಅನಿವಾರ್ಯವೋ ಅವರು ಎಂದಿನಂತೆ ಸ್ವಲ್ಪ ರಿಸ್ಕ್ ತೆಗೆದುಕೊಂಡು ಕೆಲಸ ಮಾಡುವ ಸ್ವಾತಂತ್ರ್ಯ ನೀಡಿರಿ.
ಅನಾರೋಗ್ಯದ ಭಯದಿಂದ ಆರೋಗ್ಯವಂತ ವ್ಯಕ್ತಿಗಳನ್ನು ಮತ್ತು ಸಮಾಜವನ್ನು ಅನಾರೋಗ್ಯಕ್ಕೆ ದೂಡುತ್ತಿರುವುದು ಯಾವ ನ್ಯಾಯ. ತಿಂಗಳುಗಟ್ಟಲೆ ಲಾಕ್ ಡೌನ್ ಕೊರೋನಾ ತೊಲಗಿಸಬಹುದು. ಆದರೆ ಅದೇ ಸಮಯದಲ್ಲಿ ಅನೇಕ ಜನರನ್ನು ಅವರ ಬದುಕನ್ನು ಸಹ ಅದು ಇಲ್ಲವಾಗಿಸುತ್ತದೆ ಎಂಬುದು ವಾಸ್ತವ.
ಮಾಸ್ಕ್ ಸ್ಯಾನಿಟೈಸೇಷನ್ ಫಿಸಿಕಲ್ ಡಿಸ್ಟೆನ್ಸ್ ಕೋವಿಷೀಲ್ಡ್ ಕೋವಾಕ್ಸಿನ್ ನಂತರವೂ ಮತ್ತೆ ಲಾಕ್ ಡೌನ್ ಎಂದರೆ ಅವೆಲ್ಲವೂ ವಿಫಲ ಎಂದು ಭಾವಿಸಬಹುದೇ ? ದೇಹ ದಂಡಿಸುವ ಮೂಲಕ, ಆಹಾರದ ಗುಣಮಟ್ಟ ಹೆಚ್ಚಿಸುವ ಮೂಲಕ, ಮಾನಸಿಕ ದೃಢತೆ ಕಾಪಾಡುವ ಮೂಲಕ, ಸಾವಿನ ಸಹಜತೆ ಒಪ್ಪುವ ಮೂಲಕ ಸಹ ಕೊರೋನಾ ಆತಂಕ ಗೆಲ್ಲುವ ಸಾಧ್ಯತೆಗಳತ್ತ ಸಹ ಯೋಚಿಸಿ.
ಸರ್ಕಾರದ ಬಹುತೇಕ ಕೆಲಸಗಳು ಮತ್ತು ಅವರ ಸಂಬಳ, ಕಾಲಕಾಲಕ್ಕೆ ಚುನಾವಣೆಗಳು, ಸರ್ಕಾರದ ಬದಲಾವಣೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಸಾಮಾನ್ಯ ಜನರ ಬದುಕನ್ನು ಹೀಗೆ ಹಿಂಸಿಸುವುದು ಅನ್ಯಾಯವಲ್ಲವೇ ?
ಮಾಧ್ಯಮಗಳ ವಿವೇಚನಾರಹಿತ ಕಿರುಚಾಟದ ಒತ್ತಡವೇ ನಿಮ್ಮ ನಿರ್ಧಾರದ ಹಿಂದಿನ ಶಕ್ತಿಯೇ ?
ಬನ್ನಿ ಮುಖ್ಯಮಂತ್ರಿಗಳೇ ನಮ್ಮ ವಠಾರಕ್ಕೆ ಒಮ್ಮೆ,
ನಿಮ್ಮ ಅಧಿಕಾರಿಗಳು ಮತ್ತು ವಂಧಿಮಾಗದರನ್ನು ಬಿಟ್ಟು ಬನ್ನಿ. ಅಲ್ಲಿನ ಜನರೊಂದಿಗೆ ಮುಕ್ತವಾಗಿ ಚರ್ಚಿಸಿ. ವಾಹನ ಚಾಲಕರು, ಹಣ್ಣು ತರಕಾರಿ ಮಾರುವವರು,
ಸಣ್ಣ ಹೋಟೆಲ್ ನಡೆಸುವವರು, ಬೀದಿ ಬದಿಯ ವ್ಯಾಪಾರಿಗಳು, ದಿನಗೂಲಿ ನೌಕರರು, ಅನೇಕ ಅಂಗಡಿಗಳಲ್ಲಿ ಕೆಲಸ ಮಾಡುವವರು…..
ಮುಂತಾದವರ ಕಣ್ಣೀರಿನ ಕಥೆ ಕೇಳಿ.
ಕೊರೋನಾ ಉಂಟು ಮಾಡುವ ಭಯಕ್ಕಿಂತ ಬದುಕಿನ ಆತಂಕವೇ ಅವರನ್ನು ಕಿತ್ತು ತಿನ್ನುತ್ತಿದೆ. ಯಾವುದೇ ಹೊಸ ಉದ್ಯಮ ಅಥವಾ ಅಂಗಡಿ ಅಥವಾ ವ್ಯಾಪಾರ ಅಷ್ಟೇ ಏಕೆ ಯಾವುದೇ ಹೊಸ ಯೋಚನೆಯು ಯಾರಲ್ಲೂ ಮೂಡಲು ಲಾಕ್ ಡೌನ್ ಭೂತ ಬಿಡುತ್ತಿಲ್ಲ. ಶಿಕ್ಷಣ ಕ್ಷೇತ್ರ ಸರಿಪಡಿಸಲಾಗದಷ್ಟು ಹದಗೆಡುತ್ತಿದೆ.
ಅಧಿಕಾರಿಗಳಿಗೆ ಕೊರೋನಾ ಸಂಖ್ಯೆ ಕಡಿಮೆ ಮಾಡುವ ಒಂದೇ ಯೋಜನೆ ಇರುತ್ತದೆ. ಜನರ ಬದುಕಿನ ಸಮಗ್ರತೆಯ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಕರ್ನಾಟಕದ ಸುಮಾರು 7 ಕೋಟಿ ಜನರ ಪ್ರತಿನಿಧಿ.
ಮಾನ್ಯ ಮುಖ್ಯಮಂತ್ರಿಗಳೇ ಲಾಕ್ ಡೌನ್ ಭೂತಕ್ಕೆ ಪರ್ಯಾಯವಾಗಿ ಸಹಜ ಬದುಕಿನ ಸೂತ್ರಗಳನ್ನು ದಯವಿಟ್ಟು ಜಾರಿಗೆ ತರುವ ಬಗ್ಗೆ ಯೋಚಿಸಿ. ಒಂದು ಕಣ್ಣಿಗೆ ಕಾಣದ ವೈರಸ್ ಭಯ ಇಡೀ ಒಂದು ಜನಾಂಗದ ಭವಿಷ್ಯವನ್ನೇ ನುಂಗಿ ನಾಶ ಮಾಡದಂತೆ ಎಚ್ಚರವಹಿಸಿ ಎಂದು ನಿಮ್ಮನ್ನು ಈ ಮನವಿಯ ಮೂಲಕ ಎಚ್ಚರಿಸುತ್ತಾ
- ವಿವೇಕಾನಂದ ಎಚ್ ಕೆ
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ