ಸೃಷ್ಟಿ ಎಂದರೆ ಸಮತೋಲನ. ಸೂರ್ಯ, ಚಂದ್ರ, ಭೂಮಿ, ಋತುಗಳು, ಜೀವಿಗಳು ಹೀಗೆ ಪ್ರತಿಯೊಂದು ಒಂದಕ್ಕೊಂದು ಪೂರಕ ಸಮತೋಲನದಲ್ಲಿವೆ.( Balance)
ಬೆಳಗಾದರೆ ಸಾಕು ಸಸ್ಯ ಪ್ರಪಂಚ ಆಹಾರ ಉತ್ಪಾದಿಸುತ್ತವೆ. ಪ್ರಾಣಿ ಪ್ರಪಂಚ ಚಲನಾಶೀಲವಾಗುತ್ತವೆ. ರಾತ್ರಿ ಆಗುತ್ತಿದ್ದಂತೆ ಪ್ರಾಣಿ-ಪಕ್ಷಿಗಳು ತಮ್ಮ ಗೂಡು ಸೇರಿ ನಿದ್ರೆಗೆ ಜಾರುತ್ತವೆ. ಮನುಷ್ಯನನ್ನು ಹೊರತು ಪಡಿಸಿ, ಕೈಗಡಿಯಾರ ಕಟ್ಟದೆ ಪ್ರಕೃತಿಗೆ ಪೂರಕವಾಗಿ ಈ ಎಲ್ಲಾ ಜೀವಿಗಳು ಜೀವಿಸುತ್ತಿವೆ. ಆದರೆ ಈ ಮನುಷ್ಯ ಮಾತ್ರ ನಿಸರ್ಗದ ನಿಯಮಗಳಿಗೆ ಎದುರಾಗಿ ಈಜುವ ಸಾಹಸ ಮಾಡುತ್ತ ತನ್ನೊಳಗಿರುವ ಜೈವಿಕ ಗಡಿಯಾರವನ್ನು (ಸರ್ಕ್ಯಾಡಿಯನ್ ರಿಥಮ್) ಅಸಮತೋಲನಗೊಳಿಸಿಕೊಂಡಿದ್ದಾನೆ. ಈ ಮಾನವನ ದೇಹ ಮತ್ತು ಮನಸ್ಸು ಒಂದಕ್ಕೊಂದು ಪೂರಕವಾಗಿ ಕಾರ್ಯ ಮುಖಿಯಾಗದೆ ಮಾನಸಿಕ ಖಿನ್ನತೆ, ಆತಂಕ, ಕ್ಷೋಬೆ, ಸಿಟ್ಟು, ದ್ವೇಷ ಹೀಗೆ ಅರಿಷಡ್ವರ್ಗಗಳ ಆಧೀನದಲ್ಲಿ ಬಂದು ಕೊಚ್ಚಿ ಹೋಗಿದ್ದಾನೆ.
ಈ ಹಿನ್ನೆಲೆಯಲ್ಲಿ ಸಾವಿರಾರು ವರ್ಷಗಳ ಹಿಂದಿನಿಂದ ಈ ಮನಸ್ಸು ಮತ್ತು ದೇಹವನ್ನು ಪ್ರಕೃತಿಗೆ ಪೂರಕವಾಗಿಸಿ ಸಮತೋಲನ ತರುವ ಹಲವು ಪ್ರಯತ್ನಗಳ ಫಲವಾಗಿ ಯೋಗಭ್ಯಾಸ ಹುಟ್ಟಿಕೊಂಡಿದೆ.
ಯೋಗ ಇದೊಂದು ಒಳಗಿನ ವಿಜ್ಞಾನ ವಾಗಿದ್ದು ಶಾರೀರಿಕ ಪ್ರಕ್ರಿಯೆಗಳನ್ನು ಹದ್ದು ಬಸ್ತಿಗೆ ತಂದು ದೇಹಕ್ಕೆ ಪೂರಕವಾಗಿಸಿದಾಗ ಮಾತ್ರ ದೇಹ ಆರೋಗ್ಯದಿಂದ ಕೆಲಸ ಮಾಡುತ್ತದೆ. ದೇಹ ಆರೋಗ್ಯವಾಗಿದ್ದಾಗ ಮಾತ್ರ ಮನಸ್ಸು ಕೂಡ ಶಾಂತವಾಗಿರುತ್ತದೆ. ಈ ದೇಹ ಮತ್ತು ಮನಸುಗಳನ್ನು ಏಕಕಾಲಿಕವಾಗಿ ಸಮ್ಮಿಳಿಸಿದಾಗ (ಸಿಂಕ್ರೋನೈಸ್), ಪರಿಣಾಮಗಳು ಮತ್ತು ತೀರ್ಮಾನಗಳು ಅದ್ಭುತವಾಗಿ ಹೊರಹೊಮ್ಮುತ್ತವೆ. ಆ ಅದ್ಭುತ ತೀರ್ಮಾನಗಳ ಮೇಲೆ ಸಮಾಜದ ಸಾಮರಸ್ಯ ನಿಂತಿದೆ. ಈ ಸೂಕ್ಷ್ಮವಾದ ವೈಜ್ಞಾನಿಕ ಕಾರಣಗಳ ಹಿನ್ನೆಲೆಯಲ್ಲಿ ಯೋಗವಿಜ್ಞಾನ ಸಮಾಜಮುಖಿಯಾಗಿದೆ ಮತ್ತು ಇಂದಿನ ಪ್ರಪಂಚಕ್ಕೆ ಅವಶ್ಯಕವಾಗಿ ಬೇಕಾಗಿದೆ.
ಇಂತಹ ದೇಹ ಮತ್ತು ಮನಸ್ಸು ಒಂದಾದಾಗ ಸ್ವಯಂ ಸಾಕ್ಷಾತ್ಕಾರವಾಗುತ್ತದೆ (Self realization). ಆಗ ಇಹ-ಪರಗಳ ಗೊಡವೆಗಳಿಂದ ಮನುಷ್ಯ ಮುಕ್ತಿ ಹೊಂದುತ್ತಾನೆ. ಮೋಕ್ಷವನ್ನು ಪಡೆಯುತ್ತಾನೆ. ಭಾರತ ಸಂಸ್ಕೃತಿಯಲ್ಲಿ ಮನುಷ್ಯ ಜೀವನದ ಮುಖ್ಯ ಉದ್ದೇಶವೇ ಮೋಕ್ಷವನ್ನು ಪಡೆಯುವುದಾಗಿದೆ. ಹೀಗಾಗಿ ಯೋಗದ ಮುಖ್ಯ ಗುರಿ ಸ್ವಯಂ ಸಾಕ್ಷಾತ್ಕಾರವಾಗಿದೆ. ಹೀಗಾದಾಗ ಮನುಷ್ಯ ಎಲ್ಲಾ ಬಳಲುವಿಕೆಯಿಂದ ಹೊರಬಂದು ಮೋಕ್ಷ ಪಡೆಯುತ್ತಾನೆ. ಹೀಗೆ ಜೀವನದ ಪ್ರತಿ ಹೆಜ್ಜೆಯಲ್ಲಿ ಸರ್ವ ಸ್ವತಂತ್ರನಾಗಿ, ಆರೋಗ್ಯದೊಂದಿಗೆ ಸಾಮರಸ್ಯ ಸೃಷ್ಟಿಸಿಕೊಂಡು ಬದುಕುವುದೇ ಈ ಯೋಗದ ಮುಖ್ಯ ಉದ್ದೇಶವಾಗಿದೆ.
ಈ ಯೋಗವೆಂಬ ಒಳ ವಿಜ್ಞಾನದಲ್ಲಿ ನೂರಾರು ಪ್ರಕಾರಗಳಿವೆ ಈ ವೈಜ್ಞಾನಿಕ ಯೋಗವೆಂಬ ಅಜರಾಮರವಾದ ಸಾಂಸ್ಕೃತಿಕ ಹೊರಹರಿವು ಕ್ರಿ. ಶ 2700 ರ ಸಿಂಧೂ ಬಯಲಿನ ನಾಗರಿಕತೆಯಿಂದ ಎಂಬ ಮಾತು ಕೂಡ ಇದೆ. ಆ ಸಿಂಧೂ ಬಯಲಿನ ನಾಗರಿಕತೆಯ ಪ್ರದೇಶದಲ್ಲಿ ಸಿಕ್ಕಿರುವ “ಯೋಗಿಕ್ ಮುದ್ರೆ”ಗಳು ಇದಕ್ಕೆ ಸಾಕ್ಷಿಯಾಗಿವೆ. ಅಗಸ್ತ್ಯ ಮುನಿ, ಪತಂಜಲಿ ಮುನಿಗಳ ಯೋಗಗಳ ಕ್ರೂಡಿಕರಿಸಿದ ಗ್ರಂಥಗಳು ನಮಗೆ ಇಂದಿಗೂ ದಾರಿದೀಪವಾಗಿವೆ. ಇದಲ್ಲದೆ ಯೋಗಭ್ಯಾಸದ ಮಹತ್ವದ ಬಗ್ಗೆ ಅನೇಕ ಪ್ರಾಚೀನ ಗ್ರಂಥಗಳು, ಕೃತಿಗಳು, ವೇದ ಉಪನಿಷತ್ ಗಳು, ಸ್ಮೃತಿಗಳಲ್ಲಿ ಅಷ್ಟೇ ಅಲ್ಲದೆ ಬೌದ್ಧ ಧರ್ಮ, ಜೈನ ಧರ್ಮದ ಬೋಧನೆಗಳಲ್ಲಿ, ರಾಮಾಯಣ-ಮಹಾಭಾರತ ಮಹಾ ಕಾವ್ಯಗಳಲ್ಲಿ, ಪುರಾಣಗಳಲ್ಲಿ ಕೂಡ ಉಲ್ಲೇಖಿತವಾಗಿವೆ. ಭಾರತೀಯರು ಆರಾಧಿಸುವ ಭಗವದ್ಗೀತೆಯಲ್ಲಿ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ ಎಂಬ ಮೂರು ಯೋಗವಿಧಗಳ ವಿವರಣೆಯನ್ನು ಕಾಣಬಹುದಾಗಿದೆ.
ಅನಂತರ ಬರುವ ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಇವರ ಜೊತೆಗೆ ಸುರದಾಸ, ತುಳಸಿದಾಸ, ಪುರಂದರದಾಸ, ಮೀರಾಬಾಯಿ ಇವರ ಕೃತಿಗಳಲ್ಲಿಯೂ ಕೂಡ ಯೋಗದ ಉಲ್ಲೇಖವಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ನೋಡಿದಾಗ ಯೋಗ ವಿಜ್ಞಾನವು ಪ್ರಾಚೀನ ಭಾರತದ ಅದ್ಭುತ ಕೊಡುಗೆಯಾಗಿದೆ. ಆಧುನಿಕ ದಾವಂತದ ಬದುಕಿನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದೊಂದು ನಂಬಿಕೆಯ ಸೂತ್ರವಾಗಿದೆ.
ಇಂತಹ ಯೋಗ ಎಂಬ ಶಬ್ದವು ಸಂಸ್ಕೃತ ಮೂಲದ ‘ಯುಜ್’ ಆಗಿದ್ದು, ‘ಯುಜ್’ ಎಂದರೆ ಒಂದುಗೂಡಿಸು ಎಂದರ್ಥ. ಇದು ದೇಹ -ಮನಸುಗಳ, ವಿಚಾರ-ಕ್ರಿಯೆಗಳ, ಸಂಯಮ-ಈಡೇರಿಕೆಗಳ ಏಕತೆಯ ಪ್ರತೀಕವಾಗಿದೆ.
ಹಲವು ಶತಮಾನಗಳಿಂದ ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಈ ವಿಜ್ಞಾನವನ್ನು “ವಸು ದೈವ ಕುಟುಂಬಕಂ” ಎಂಬ ಪರಿಕಲ್ಪನೆಯಲ್ಲಿ ಗಾಢವಾದ ನಂಬಿಕೆ ಹೊಂದಿದ ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ರವರು ಪ್ರಪಂಚಕ್ಕೆ ಪರಿಚಯಿಸುವ ಸತತ ಪ್ರಯತ್ನದ ಫಲವಾಗಿ “ಜೂನ್ -21” ನ್ನು “ಅಂತರಾಷ್ಟ್ರೀಯ ಯೋಗ ದಿನ” ವೆಂದು ವಿಶ್ವಸಂಸ್ಥೆಯು ಘೋಷಿಸಿದೆ. ಬದುಕಿನ ಪ್ರತಿ ಹಂತದಲ್ಲಿ ಸಮತೋಲನ ಬಹುಮುಖ್ಯ ಎಂಬ ವಾದವನ್ನು ವಿಶ್ವ ಸಂಸ್ಥೆಯು ಭಾರತದ ಪ್ರಧಾನಿಯ ಮೂಲಕ ಭಾರತದ ಪ್ರಾಚೀನ ಯೋಗವಿಜ್ಞಾನವನ್ನು ಒಪ್ಪಿಕೊಂಡಂತಾಗಿದೆ. ಇದು ಭಾರತೀಯರ ಹೆಮ್ಮೆ.
ಇಂತಹ ಯೋಗ ವಿಜ್ಞಾನವನ್ನು ನಾವು ನೀವು ಕೂಡ ಪ್ರತಿದಿನ ಯೋಗಭ್ಯಾಸ ಮಾಡುತ್ತಾ ಸ್ವಯಂ ಸಾಕ್ಷಾತ್ಕಾರದ ಕಡೆಗೆ ಹೆಮ್ಮೆಯಿಂದ ಹೆಜ್ಜೆ ಇಡೋಣ.
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
More Stories
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
ಯೋಗ ಗುರು ಶರತ್ ಜೋಯಿಸ್ ಹೃದಯಾಘಾತದಿಂದ ನಿಧನ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟಿ20 ಸರಣಿ