January 10, 2025

Newsnap Kannada

The World at your finger tips!

shubashree 1

ಶುಭಶ್ರೀ ಕೃತಿಗಳಲ್ಲಿ ಒಳ‌ಮನದ ಮಾಂತ್ರಿಕ ಸ್ಪರ್ಶ – ಲೀಲಾ ಅಪ್ಪಾಜಿ‌

Spread the love

ಜೀವನದ ಹೊರ ಆವರಣದ ತಲ್ಲಣಗಳಿಗೆ ಲೇಖಕಿ ಶುಭ ಶ್ರೀ ಪ್ರಸಾದ್ ಕೃತಿಗಳಲ್ಲಿ ಒಳಮನದ ಮಾಂತ್ರಿಕ ಸ್ಪರ್ಶ ನೀಡುವುದನ್ನು ಕಾಣಬಹುದು ಎಂದು ನಿವೃತ್ತ ಪ್ರಾಂಶುಪಾಲ ಡಾ. ಲೀಲಾ ಅಪ್ಪಾಜಿ ಶನಿವಾರ ಅಭಿಪ್ರಾಯ ಪಟ್ಟರು.

ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಐಡಿಯಲ್ ಪಬ್ಲಿಕೇಷನ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಸಮಾರಂಭದಲ್ಲಿ ಲೇಖಕಿ ಶುಭಶ್ರೀ ಪ್ರಸಾದ್ ಅವರ ‘ಒಳಮನ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

shubashree

ಮಹಿಳೆ ಎಂದರೆ ಅಡುಗೆ ಮನೆಯ ಪ್ರೀತಿಯನ್ನು ಉಳಿಸಿಕೊಂಡು ಜೀವನದ ಉಳಿದ ಮಗ್ಗಲುಗಳನ್ನು ಪ್ರೀತಿಸುವಂತಹ ಜೀವನ ರೂಪಿಸಿಕೊಳ್ಳಬೇಕು.
ಅಂತಹ ಕೆಲಸವನ್ನು ಶಿಷ್ಯೆ ಶುಭಶ್ರೀ ಸಮರ್ಥವಾಗಿ ಮಾಡುತ್ತಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.

ಸಾಹಿತ್ಯ ಕೃತಿಗಳು ತೃಪ್ತಿ, ಸಮಾಧಾನ ಕೊಡಬೇಕು:

‘ಒಳಮನ’ ಕೃತಿಯ ಬಗ್ಗೆ ಸಾಹಿತಿ, ಉಪನ್ಯಾಸಕ ನೀ. ಗೂ ರಮೇಶ್ ಮಾತನಾಡಿ ಸಮಾಜದಲ್ಲಿ ಕಂಡು ಬರುವ ವಿವಿಧ ರೀತಿಯ ಘಟನೆಗಳನ್ನು ನೋಡುವ ಸಾಮಾನ್ಯ ಜನ ಸಿಟ್ಟು, ಗೊಣಗಾಟ,ನೋವು ಪ್ರದರ್ಶಿಸಿ ಸುಮ್ಮನಾಗಬಹುದು. ಸಾಹಿತಿಯಾದವನು ಹೊರ ಆವರಣದ ತಲ್ಲಣಗಳನ್ನು ಮಾಧ್ಯಮವಾಗಿಸಿಕೊಂಡು ಅಭಿವ್ಯಕ್ತಿಸಿ ಸಾಹಿತ್ಯವನ್ನು ನಿರ್ಮಿಸುತ್ತಾನೆ.ಇಂತಹ ಸಾಹಿತ್ಯ ಕೃತಿಗಳನ್ನು ಓದಿದಾಗ ತೃಪ್ತಿ, ಸಮಾಧಾನ ಕೊಡಬೇಕು ಎಂದರು.

ಸಾಹಿತ್ಯ ಕೃತಿ ಓದಿದಾಗ ತೃಪ್ತಿ, ಸಮಾಧಾನ, ಸಂತೋಷ ಕೊಡದಿದ್ದರೂ ಸಹ ಒಂದು ಪ್ರಶ್ನೆ ಅಸಮಾಧಾನ ಇಲ್ಲವೇ ಸಂಘರ್ಷವನ್ನು ಹುಟ್ಟು ಹಾಕಬೇಕು. ಇದಾವುದು ಉಂಟಾಗದಿದ್ದರೆ ಆ ಕೃತಿ ಒಂದು ಲೆಕ್ಕದಲ್ಲಿ ಸೋತಂತೆ ಎಂದು ಅಭಿಪ್ರಾಯಪಟ್ಟರು.

ಶುಭಶ್ರೀ ಅವರ ಈ ಕೃತಿಯಲ್ಲಿ ತೃಪ್ತಿ ಸಮಾಧಾನ ದೊರಕುತ್ತದೆ. ಅವರು ತಮ್ಮ ಉದ್ಯೋಗ, ಕುಟುಂಬ,ಮಕ್ಕಳ ಚಟುವಟಿಕೆ, ಸ್ನೇಹವಲಯ ಮುಂತಾದ ಕಡೆಗಳಲ್ಲಿ ಕಂಡುದನ್ನು ಸೂಕ್ಷ್ಮವಾಗಿ ಗ್ರಹಿಸಿ ಒಂದುಗೂಡಿಸಿ ಕೃತಿಯನ್ನಾಗಿ ಪ್ರಕಟಿಸಿದ್ದಾರೆ. ಈ ಕೃತಿ ಮನೋವೈಜ್ಞಾನಿಕವಾಗಿ ಕೆಲಸ ಮಾಡುತ್ತದೆ.ಭಾವಪೂರ್ವಕ ಬಾಂಧವ್ಯದ ಲೋಕವನ್ನು ಅನಾವರಣಗೊಳಿಸುತ್ತದೆ ಎಂದರು.‌

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ಡಾ.ಪ್ರದೀಪ ಕುಮಾರ್ ಹೆಬ್ರಿ ಮಾತನಾಡಿ ಮುಂದಿನ ಪೀಳಿಗೆಗೆ ಹಿರಿಯರು ಕೊಡುಗೆ ನೀಡಬೇಕು ಎನ್ನುವ ವಾತಾವರಣದಲ್ಲಿ ಇಂತಹ ಸಮಾರಂಭಗಳಿಗೆ ಕಿರಿಯರು ಬರುತ್ತಿಲ್ಲ.ಬದುಕು ಬದಲಾವಣೆಗಳತ್ತ ಸಾಗುವಾಗ ಸಮಾಜಕ್ಕೆ ಏನನ್ನು ಕೊಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ.ಆದರೆ ಡಾ.ಲೀಲಾ ಅಪ್ಪಾಜಿಯವರು ಶಿಷ್ಯರಿಗೆ ಅಕ್ಷರ ಕೃತಿ ನೀಡಿದ ಕಾರಣದಿಂದ ಅವರ ಶಿಷ್ಯಂದಿರಾದ ಶುಭಶ್ರೀ,ವಸುಂಧರಾ ಅಂತಹವರಿಂದ ಅಕ್ಕರೆಯ ಸಾಹಿತ್ಯ ಕೃತಿಗಳು ಹೊರಬರುತ್ತಿವೆ ಎಂದು ಮೆಚ್ಚುಗೆ ಸೂಚಿಸಿದರು.

ಕವಯಿತ್ರಿ,ಕತೆಗಾರ್ತಿ ಕೆ.ಎಂ.ವಸುಂಧರಾ, ಶುಭಶ್ರೀ ಪ್ರಸಾದ್ ಅವರ ‘ಒಳಮನ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.‌

ಇದೇ ಸಂದರ್ಭದಲ್ಲಿ ಲೇಖಕಿ ಶುಭಶ್ರೀ ಮತ್ತು ಪ್ರಸಾದ್ ದಂಪತಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕೃತಿ ಕರ್ತೃ ಶುಭಶ್ರೀ ಪ್ರಸಾದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್,ಪೂರ್ಣಿಮಾ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!