ಅ25 ರಂದು ಗೋಚರಿಸುವ ಸೂರ್ಯ ಗ್ರಹಣದ ಬಗ್ಗೆ ಭೌತ ವಿಜ್ಞಾನಿ ಭಟ್ ಬಿಚ್ಚಿಟ್ಟ ಒಂದಷ್ಟು ಮಾಹಿತಿ

Team Newsnap
2 Min Read
Solar eclipse tomorrow: Entry restrictions to many temples in the state ನಾಳೆ ಸೂರ್ಯಗ್ರಹಣ : ರಾಜ್ಯದ ಹಲವು ದೇವಸ್ಥಾನಗಳಿಗೆ ಪ್ರವೇಶ ನಿರ್ಬಂಧ

ಈ ಬಾರಿಯ ಸಂಜೆಯ ಸೂರ್ಯಗ್ರಹಣ ಕಣ್ತುಂಬಿಕೊಳ್ಳಲು ಜನ ಸಿದ್ದರಾಗಿದ್ದಾರೆ. ಆಶ್ವಯುಜ ಮಾಸದ ಅಂತ್ಯದಲ್ಲಿ ಬರುವ ಅಮಾವಾಸ್ಯೆ ಚಂದ್ರ, ಈ ವರ್ಷ ಅ 25ರಂದು ವರ್ಷದ 2ನೇ ಸೂರ್ಯಗ್ರಹಣವನ್ನು ನೋಡಬಹುದು.

ಸೂರ್ಯಗ್ರಹಣವೆಂದರೇನು?

ಗ್ರಹಣ ಆಗೋದು ಹೇಗೆ?

ಜನ ಏನ್ಮಾಡಬೇಕು? ಹೇಗೆ ಗ್ರಹಣ ನೋಡಬೇಕು ಅಂತ ಹಿರಿಯ ಭೌತಶಾಸ್ತ್ರಜ್ಞ ಉಡುಪಿಯ ಎ.ಪಿ ಭಟ್ ವಿವರಿಸಿದ್ದಾರೆ.

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ, ಇರುವ ಕಾಲವನ್ನು ಸೂರ್ಯಗ್ರಹಣ ಎಂದು ಕರೆಯುತ್ತೇವೆ.

ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯೆ ಹಾದು ಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಸುತ್ತುವ ಚಲನೆಯ ಸಮತಲ ಹಾಗೂ ಸೂರ್ಯನ ಸಮತಲ (ಭೂಮಿಯದೃಷ್ಟಿಯಿಂದ)ಗಳ ನಡುವಿನಲ್ಲಿ 5 ಡಿಗ್ರಿಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭಸುವುದಿಲ್ಲ.

ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ ಸೂರ್ಯಗ್ರಹಣ ಸಂಭವಿಸುತ್ತದೆ.

ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ, ಅದು ಪಾರ್ಶ್ವ ಸೂರ್ಯಗ್ರಹಣ ಆಗಿರುತ್ತದೆ. ಅದೇ ರೀತಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಅದು ಖಗ್ರಾಸ ಸೂರ್ಯಗ್ರಹಣ. ಅ.25ರ ಸೂರ್ಯಗ್ರಹಣವು ಗೋಚರಿಸುವ ಎಲ್ಲಾ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣವಾಗಿರುತ್ತದೆ.

ಸಾಮಾನ್ಯವಾಗಿ ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8ರಂದು ಚಂದ್ರಗ್ರಹಣವನ್ನು (ಚಂದ್ರ ಮತ್ತು ಸೂರ್ಯನ ಮಧ್ಯೆ ಭೂಮಿ ಬರುವ ಸಂದರ್ಭ) ನೋಡಬಹುದು.

ಯಾವ ಪ್ರದೇಶಗಳಲ್ಲಿ ಗೋಚರ?

ಈ ಗ್ರಹಣವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಯೂರೋಪ್ ಮತ್ತು ಏಷ್ಯಾದ ಮಧ್ಯಭಾಗದ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ. ರಷ್ಯಾದಲ್ಲಿ ಈ ಗ್ರಹಣವು ಗೋಚರಿಸುವಾಗ ಚಂದ್ರನು ಸೂರ್ಯನನ್ನು ಗರಿಷ್ಠ ಅಂದರೆ ಶೇ.82ರಷ್ಟನ್ನು ಆವರಿಸಿಕೊಂಡಿರುತ್ತಾನೆ. ಭಾರತದಲ್ಲಿ ಈ ಗ್ರಹಣವು ಉತ್ತರದ ಲೇಕ್‌ನಲ್ಲಿ ಶೇ.54ರಷ್ಟು ಹಾಗೂ ದೆಹಲಿಯಲ್ಲಿ ಶೇ.44ರಷ್ಟು ಸೂರ್ಯನನ್ನು ಆವರಿಸಿರುವುದು ಕಂಡು ಬರುತ್ತದೆ.

ಕರ್ನಾಟಕದಲ್ಲಿ ಗ್ರಹಣ ನೋಡಬಹುದೇ? :

ಕರ್ನಾಟಕದ ಎಲ್ಲಾ ಭಾಗಗಳಿಂದ ಗ್ರಹಣವನ್ನು ನೋಡಬಹುದು. ರಾಜ್ಯದ ನಾನಾ ಸ್ಥಳಗಳಲ್ಲಿ ಈ ಗ್ರಹಣವು ಸಂಜೆ 5 ರಿಂದ 6 ಗಂಟೆಗೆ ನಡೆಯಲಿರುವ ಸೂರ್ಯಾಸ್ತದವರೆಗೂ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯದ ಕಡೆ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ. ಸಮುದ್ರ ತೀರದಲ್ಲಿ ಗ್ರಹಣ ಬಹಳ ಚೆನ್ನಾಗಿ ಕಾಣುತ್ತದೆ.

ಬೆಂಗಳೂರಿನಲ್ಲಿ ಈ ಗ್ರಹಣ ಶೇ.10ರಷ್ಟು ಮಾತ್ರ ಕಂಡುಬರುತ್ತದೆ. ಸುಂದರ ಪ್ರಾಕೃತಿಕ ದೃಶ್ಯದೊಂದಿಗೆ ಕಡಲ ತೀರಕ್ಕೆ ಸಮೀಪವಿರುವ ಉಡುಪಿಯು ಈ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಉಡುಪಿಯಲ್ಲಿ ಈ ಗ್ರಹಣವು ಸಂಜೆ 5.08ಕ್ಕೆ ಪ್ರಾರಂಭಗೊಂಡು 5:50ರ ಸುಮಾರಿಗೆ ಗರಿಷ್ಠ ಪ್ರಮಾಣದಲ್ಲಿ ಗೋಚರಿಸುತ್ತದೆ.

Share This Article
Leave a comment