ಜಪಾನ್ ದೇಶದ ಟೋಕಿಯೋ ಒಲಿಂಪಿಕ್ ಸಂದರ್ಭದಲ್ಲಿ ಭಾರತದ ಕ್ರೀಡಾ ಲೋಕ…….,
ಕ್ರಿಕೆಟಿನಲ್ಲಿ ಭಾರತದ ಸಾಧನೆ ಇತ್ತೀಚಿನ ವರ್ಷಗಳಲ್ಲಿ ತುಂಬಾ ತುಂಬಾ ಚೆನ್ನಾಗಿದೆ. ವಿಶ್ವ ಮಟ್ಟದಲ್ಲಿ ಒಂದು ಅತ್ಯಂತ ಪ್ರಬಲ ತಂಡವಾಗಿದೆ. ತುಂಬಾ ಸಂತೋಷ ಮತ್ತು ಹೆಮ್ಮೆ.
ಆದರೆ……………
ಭಾರತದ ಒಟ್ಟು ಕ್ರೀಡಾ ಸಾಧನೆ ಇಲ್ಲಿನ ಜನಸಂಖ್ಯೆ ಮತ್ತು ಇತರ ಕ್ಷೇತ್ರದಲ್ಲಿ ಸಾಧನೆ ಗಮನಿಸಿದಾಗ ತುಂಬಾ ಕೆಳಮಟ್ಟದಲ್ಲಿ ಇದೆ. ಕಾರಣ ಏನಿರಬಹುದು ?
ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಅಮೆರಿಕದವರು ಒಲಿಂಪಿಕ್ ಕ್ರೀಡೆಗಳಲ್ಲಿ ಒಟ್ಟು 2552 ಪದಕಗಳನ್ನು ಗೆದ್ದಿದ್ದಾರೆ. ಭಾರತ 28 ಪದಕಗಳನ್ನು ಮಾತ್ರ ಗೆದ್ದಿದೆ ಮತ್ತು ಅದರಲ್ಲಿ 11 ಹಾಕಿಯಲ್ಲಿ ಬಂದಿದೆ.
ಈ ಆಧಾರದಲ್ಲಿ ಭಾರತದ ಕ್ರೀಡೆಯ ಸಾಮರ್ಥ್ಯ ಎಷ್ಟು ಹಿಂದುಳಿದಿದೆ ಎಂಬುದನ್ನು ಊಹಿಸಬಹುದು.
ಮೊದಲಿನ ಬಹುಮುಖ್ಯ ಕಾರಣ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ಹಣದ ಕೊರತೆ.
ಹಾಗಾದರೆ ಹಣ ಇದ್ದರೆ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಗೆಲ್ಲಬಹುದೆ ?
ಖಂಡಿತ ಗೆಲ್ಲಬಹುದು. ಹಣದಿಂದ ನೇರವಾಗಿ ಗೆಲ್ಲಲು ಸಾಧ್ಯವಿಲ್ಲ. ಆದರೆ ಇಡೀ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿ, ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿ, ಕ್ರೀಡೆಯಲ್ಲಿ ಭಾಗವಹಿಸಲು ಸಾಮರ್ಥ್ಯವನ್ನೇ ಮುಖ್ಯವಾಗಿಸಿ, ಎಲ್ಲಾ ಕಡೆಯ ಪ್ರತಿಭೆಗಳನ್ನು ಹುಡುಕಿ, ವಿಶ್ವದ ಅತ್ಯುತ್ತಮ ತರಬೇತಿ ಮತ್ತು ತಂತ್ರಜ್ಞಾನ ಉಪಯೋಗಿಸಿಕೊಂಡು ಪದಕ ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಇದಕ್ಕೆಲ್ಲ ಹಣದ ಹರಿವು ಮುಖ್ಯವಾಗಿದೆ.
ಕ್ರಿಕೆಟಿನಲ್ಲಿ ಆಗಿರುವುದು ಇದೇ. ಕ್ರಿಕೆಟ್ ಭಾರತದಲ್ಲಿ ಜನಪ್ರಿಯ ಕ್ರೀಡೆಯಾದ ಕಾರಣ ಅಪಾರ ಹಣ ಹರಿದು ಬಂದಿತು. ಅದಕ್ಕೆ ತಕ್ಕಂತೆ ಎಲ್ಲಾ ಅಂಶಗಳು ಪೂರಕವಾಗಿ ಬೆಳೆದು ಇಂದು ವಿಶ್ವದ ಬಲಿಷ್ಠ ತಂಡವಾಗಿದೆ.
ಇತರ ಕ್ರೀಡೆಗಳಿಗೆ ಹಣದ್ದೇ ಬಹುದೊಡ್ಡ ಕೊರತೆ. ಅದರಿಂದಾಗಿಯೇ ಅನೇಕ ಗುಣಮಟ್ಟದ ಸೌಕರ್ಯಗಳಿಂದ ಆಟಗಾರರು ವಂಚಿತರಾಗಿದ್ದಾರೆ. ಇನ್ನೂ ಕೆಲವು ಪ್ರತಿಭಾವಂತರು ಕೇವಲ ಸರ್ಕಾರಿ ಉದ್ಯೋಗ ಪಡೆಯುವ ಸಲುವಾಗಿ ಒಂದಷ್ಟು ರಾಷ್ಟ್ರೀಯ ಮಟ್ಟದ ಸಾಧನೆ ಮಾಡಬಹುದೇ ಹೊರತು ಒಲಿಂಪಿಕ್ ಪದಕ ಗೆಲ್ಲುವ ಹಂತಕ್ಕೆ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ತಲುಪಿದ್ದಾರೆ.
ಹೌದು, ಭಾರತೀಯರ ವಂಶವಾಹಿ ಗುಣಗಳು ಮತ್ತು ದೇಹ ರಚನೆಯಲ್ಲಿ ಒಂದಷ್ಟು ವ್ಯತ್ಯಾಸಗಳು ಇದೆ. ಹೆಚ್ಚು ದೈಹಿಕ ದೇಹದಾಡ್ಯತೆ ಬಯಸುವ ಕ್ರೀಡೆಯಲ್ಲಿ ತುಂಬಾ ಹಿಂದುಳಿದಿದ್ದೇವೆ. ಆದರೆ ಕ್ರೀಡಾ ತರಬೇತಿ ಮತ್ತು ಆಧುನಿಕ ತಂತ್ರಜ್ಞಾನದ ಬಲದಿಂದ ಅದನ್ನು ಮೀರುವ ಎಲ್ಲಾ ಸಾಧ್ಯತೆ ಇದೆ.
ನಾವು ಕ್ರೀಡೆಗೆ ಖರ್ಚು ಮಾಡುವ ಹಣ ತುಂಬಾ ಕಡಿಮೆ ಇದೆ. ಆ ಕಾರಣಕ್ಕಾಗಿ ಕ್ರೀಡಾ ಪ್ರೋತ್ಸಾಹ ಸಹ ಸಾಮೂಹಿಕವಾಗಿ ಸಿಗುತ್ತಿಲ್ಲ. ಅದೊಂದು ಹವ್ಯಾಸ ಅಥವಾ ಅನಿವಾರ್ಯವಾಗಿ ಮಾತ್ರ ಬೆಳೆದು ಬಂದಿದೆ. ಪೋಷಕರು ಸಹ ಮಕ್ಕಳ ಆರ್ಥಿಕ ಭವಿಷ್ಯ ಯೋಚಿಸಿ ಕ್ರೀಡೆಗೆ ಹೆಚ್ಚಿನ ಬೆಂಬಲ ಕೊಡುವುದಿಲ್ಲ.
ಕ್ರೀಡೆಗಾಗಿ ತುಂಬಾ ಹಣ ಖರ್ಚು ಮಾಡುವಷ್ಟು ಸಾಮರ್ಥ್ಯ ಕೂಡ ನಮ್ಮ ದೇಶದಲ್ಲಿ ಸದ್ಯಕ್ಕೆ ಇಲ್ಲ. ಊಟ, ಬಟ್ಟೆ, ವಸತಿಗಾಗಿಯೇ ಬಹುತೇಕ ಜೀವನದ ಎಲ್ಲಾ ಸಮಯವನ್ನು ವಿನಿಯೋಗಿಸುವ ಅನಿವಾರ್ಯತೆ ಇರುವಾಗ, ಸರ್ಕಾರಗಳು ಬಡತನ ನಿರ್ಮೂಲನೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿಯೇ ಹಣ ಹೊಂದಿಸಲು ಪರದಾಡುತ್ತಿರುವಾಗ ಇನ್ನು ಕ್ರೀಡೆಗೆ ಸಾಕಷ್ಟು ಹಣ ಹೊಂದಿಸಲು ಹೇಗೆ ಸಾಧ್ಯ.
ದೇಶದ ಒಟ್ಟು ಅಭಿವೃದ್ಧಿಯ ಜೊತೆ ಮಾತ್ರ ಕ್ರೀಡೆ ಬೆಳೆಯಲು ಸಾಧ್ಯ. ಅದೊಂದೇ ವಿಭಾಗವನ್ನು ಬೆಳೆಸುವ ಪರಿಸ್ಥಿತಿಯಲ್ಲಿ ನಾವು ಇಲ್ಲ. ಒಟ್ಟಿನಲ್ಲಿ ಸಮಗ್ರ ಆರ್ಥಿಕ ಅಭಿವೃದ್ಧಿ ಮಾತ್ರ ನಮ್ಮ ಗುರಿಯಾಗಬೇಕಿದೆ. ಅಲ್ಲಿಯವರೆಗೂ ಅವರವರ ವೈಯಕ್ತಿಕ ಸಾಮರ್ಥ್ಯದಿಂದ ಮತ್ತು ಕೆಲವೊಮ್ಮೆ ವಿಶೇಷ ಪ್ರತಿಭೆಯಿಂದ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಬಹುದು.
- ವಿವೇಕಾನಂದ. ಹೆಚ್.ಕೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ