ದಸರಾ ಉದ್ಘಾಟನೆ: ಬೊಮ್ಮಾಯಿಯವರಿಂದ ಹೊಸ ಸಂಪ್ರದಾಯಕ್ಕೆ ನಾಂದಿ-ಸಂಸದ ಸಿಂಹ ಶ್ಲಾಘನೆ

Team Newsnap
1 Min Read

ಮೈಸೂರು ದಸರಾ ಉದ್ಘಾಟನೆಯ ಹೊಣೆಯನ್ನು ಯಶಸ್ವಿ ರಾಜಕಾರಣಿಗೂ ವಹಿಸುವ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಶ್ಲಾಘಿಸಿದ್ದಾರೆ.


ಈವರೆಗೆ ಸಾಹಿತ್ಯ, ಸಂಗೀತ ಕ್ಷೇತ್ರದ ಗಣ್ಯರು, ಚಲನಚಿತ್ರ ಕಲಾವಿದರಿಗೆ ದಸರಾ ಉದ್ಘಾಟನೆ ಸೀಮಿತವಾಗಿತ್ತು ಎಂದು ಅವರು ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜಕೀಯ ಭಿನ್ನಾಭಿಪ್ರಾಯ ದೂರವಿರಿಸಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಸೇವೆ ನೋಡಬೇಕಾಗಿದೆ. ಮೈಸೂರಿನ ಅಭಿವೃದ್ಧಿಗೂ ಅವರು ಕೊಡುಗೆ ನೀಡಿದ್ದಾರೆ. ಹಾಗಾಗಿ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.


20 ವರ್ಷಗಳ ಹಿಂದೆಯೇ ಮೈಸೂರು-ಬೆಂಗಳೂರು ಹೆದ್ದಾರಿ ಅಭಿವೃದ್ಧಿ, ಮೈಸೂರಿನ ವರ್ತುಲ ರಸ್ತೆ ನಿರ್ಮಾಣದಲ್ಲಿ ಅವರ ಪಾಲು ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿರುವ ಕೃಷ್ಣರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಿರುವುದು ಸ್ವಾಗತಾರ್ಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.


ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕೇವಲ ಕಾಂಗ್ರೆಸ್ ಅಲ್ಲ. ಆ ಪಕ್ಷದ ಮುಖಂಡರನ್ನು ಹೊರತುಪಡಿಸಿ ಅನೇಕರು ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣರು ಎಂಬುದನ್ನು ಮರೆಯಬಾರದು ಎಂದೂ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.


ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ ಎಂದು ಹೇಳಿಲ್ಲ. ಕಾಂಗ್ರೆಸ್‌ನಲ್ಲಿ ಒಳ್ಳೆಯ ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ ನೆಹರೂ ಕುಟುಂಬವೊಂದೇ ಅಭಿವೃದ್ಧಿ ಮಾಡಿದೆ ಎಂದು ಹೇಳುವುದು ತಪ್ಪು ಎಂದು ಸಂಸದರು ಸ್ಪಷ್ಟಪಡಿಸಿದರು.

Share This Article
Leave a comment