December 24, 2024

Newsnap Kannada

The World at your finger tips!

deepa1

ಚಂದ್ರ ( ಗ್ರಹ ) ಲೋಕದಲ್ಲಿ ನಾವು……….

Spread the love

ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು……..

ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು ಅಮೆರಿಕನ್ನರು, ರಷ್ಯಾ ಸೇರಿದಂತೆ ಒಂದಷ್ಟು ಯೂರೋಪಿಯನ್ನರು, ಆಸ್ಟ್ರೇಲಿಯನ್ನರು, ಕೆಲವು ಚೀನಾ ಜಪಾನ್ ಕೊರಿಯಾದವರು ಮತ್ತು ಭಾರತೀಯರು ಹಾಗು ಇತರೆ ದೇಶದ ಅಲ್ಪ ಪ್ರಮಾಣದ ಜನ ಪ್ರಾರಂಭದಲ್ಲಿ ಅಲ್ಲಿಗೆ ಹೋಗುವ ಸಾಧ್ಯತೆ ಇದೆ.

ಮೊದಲಿಗೆ ಅಲ್ಲಿನ ಅನುಕೂಲಕ್ಕೆ ಅನುಗುಣವಾಗಿ ವಸತಿ, ಉಡುಗೆ, ಆಹಾರ ಪದ್ದತಿಯನ್ನು ಅನುಸರಿಸುತ್ತಾರೆ. ಸ್ವಲ್ಪ ದಿನ ಅನಿವಾರ್ಯವಾಗಿ ಎಲ್ಲರೂ ಒಟ್ಟಿಗೆ ಸಂತೋಷದಿಂದ ದಿನ ಕಳೆಯುತ್ತಾ ಜೀವನ ಸಾಗಿಸುತ್ತಾರೆ.

ಎಂದಿನಂತೆ ಅಲ್ಲಿಯ ವಾತಾವರಣದ ಬದಲಾವಣೆಯ ಕಾರಣದಿಂದಾಗಿ ಅವರು ನಿರೀಕ್ಷಿಸದ ಕೆಲವು ಭಯಂಕರ ಪ್ರಕೃತಿಯ ವಿಕೋಪಗಳು ಸಂಭವಿಸಬಹುದು. ಭೂಮಿಯ ಮೇಲಿನ ಮಳೆ ಗಾಳಿ ಕಾಡ್ಗಿಚ್ಚು ಜ್ವಾಲಾಮುಖಿ ಮುಂತಾದ ಸಾಮಾನ್ಯ ವೈಪರೀತ್ಯಗಳ ಬಗ್ಗೆ ಅವರಿಗೆ ಪರಿಚಯವಿರುತ್ತದೆ. ಆದರೆ ಅದನ್ನು ಮೀರಿ ಇನ್ನೇನೋ ಅನಿರೀಕ್ಷಿತ ಭಯಾನಕ ವಿಕೋಪ ಸಂಭವಿಸಿದಾಗ ವಿಜ್ಞಾನಿಗಳು ಸಹ ಅದನ್ನು ಗುರುತಿಸಲು ವಿಫಲವಾದಾಗ ಗಾಬರಿಯಾಗುತ್ತಾರೆ. ಜೀವ ಭಯದಿಂದ ನರಳುತ್ತಾರೆ.

ಆಗ ಸಹಜವಾಗಿ ದೇವರು ಮತ್ತು ‌ಧರ್ಮ ನೆನಪಾಗುತ್ತದೆ. ಭೂಮಿಯ ಮೇಲಿನ ಅನುಭವ ಅವರಿಗೆ ನೆನಪಾಗುತ್ತದೆ.

ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಮುಂತಾದವರು ಒಂದು ಚರ್ಚನ್ನು, ಅರಬರು ಮಸೀದಿಯನ್ನು, ಚೀನಾ ಜಪಾನ್ ಕೊರಿಯನ್ನರು ಬುದ್ದ ವಿಹಾರವನ್ನು, ಭಾರತೀಯರು ದೇವಸ್ಥಾನವನ್ನು ನಿರ್ಮಿಸುತ್ತಾರೆ. ಅಲ್ಲಿ ತಮ್ಮ ನಂಬಿಕೆಯ ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜೆ ಪ್ರಾರ್ಥನೆ ಶುರು ಮಾಡುತ್ತಾರೆ.

ಭೂಮಿಯ ಮೇಲಿನ ಅವರ ತಿಳಿವಳಿಕೆ ಮತ್ತು ಅನುಭವದ ಆಧಾರದ ಮೇಲೆ ತಮ್ಮ ಸ್ವಂತ ಧರ್ಮ – ದೇವರಿಗೂ ಮತ್ತು ಇತರರಿಗು ಇರುವ ವ್ಯತ್ಯಾಸವನ್ನು ಗುರುತಿಸಿ ಸ್ವಲ್ಪವೇ ಪ್ರತ್ಯೇಕತೆ ಉಂಟಾಗುತ್ತದೆ.

ಅಲ್ಲಿಯೂ ಕ್ರಿಸ್ಮಸ್, ರಂಜಾನ್, ಯುಗಾದಿ, ಬುದ್ದ ಪೂರ್ಣಿಮೆಯ ಆಚರಣೆಗಳು ಪ್ರಾರಂಭವಾಗಬಹುದು.

ಆರಂಭದಲ್ಲಿ ಅನ್ಯೋನ್ಯವಾಗಿದ್ದ ಅಲ್ಲಿನ ಜನಗಳು ಧರ್ಮದ ಕಾರಣಕ್ಕೆ ಒಂದಷ್ಟು ಭಿನ್ನಾಭಿಪ್ರಾಯ ಬೆಳೆಸಿಕೊಳ್ಳುತ್ತಾರೆ.

ಎಂದೋ ಒಮ್ಮೆ ಇದು ಸ್ಪೋಟವಾಗಿ ಗಲಭೆಗಳಾಗಬಹುದು. ಇದನ್ನು ನಿಯಂತ್ರಿಸಲು ಪೋಲೀಸ್ ನ್ಯಾಯಾಲಯಗಳನ್ನು ಸ್ಥಾಪಿಸಿಲಾಗುತ್ತದೆ.

ಕಾಲ ಸರಿದಂತೆ ಅಲ್ಲಿಯೂ ಜನಸಂಖ್ಯೆ ಹೆಚ್ಚಾಗುತ್ತದೆ. ಜನರ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಂತರ ಸೃಷ್ಟಿಯಾಗುತ್ತದೆ. ಆಕ್ರಮಣ, ಅತಿಕ್ರಮಣ ಯುದ್ದಗಳು ಸಂಭವಿಸಬಹುದು.

ತ್ಯಾಜ್ಯಗಳು ಚಂದ್ರನ ಸ್ವಾಭಾವಿಕ ಪರಿಸರದ ಮೇಲೆ ಪರಿಣಾಮ ಬೀರಿ ಕಲ್ಮಶವಾಗಬಹುದು.

ಆಹಾರದ ಕೊರತೆ, ಟ್ರಾಫಿಕ್ ಹಿಂಸೆ ಮುಂತಾದ ಎಲ್ಲವೂ ಸಹನೀಯ ಮಟ್ಟ ಬೀರಬಹುದು.

ನಿರುದ್ಯೋಗ ಭ್ರಷ್ಟಾಚಾರ ಚಳವಳಿ ಹೋರಾಟ ಬಂದ್ ಮುಂತಾದವುಗಳು ಜನ ಜೀವನದ ಭಾಗಗಳಾಗಬಹುದು.

ಜನರ ನೆಮ್ಮದಿಯ ಮಟ್ಟ ಕುಸಿದು ಚಂದ್ರನಲ್ಲಿ ವಾಸ ಮಾಡುವುದು ಕಷ್ಟವಾಗಿ ಮತ್ತೊಂದು ಗ್ರಹದಲ್ಲಿ ವಾಸ ಯೋಗ್ಯ ಸ್ಥಳದ ಹುಡುಕಾಟ ನಡೆಸಬಹುದು.

ಒಟ್ಟಿನಲ್ಲಿ ಮನುಷ್ಯರ ನಡವಳಿಕೆ ಆತನ ತಿಳಿವಳಿಕೆ ಹೆಚ್ಚಾದಂತೆ ಕೆಡುತ್ತಾ ಹೋಗುತ್ತದೆ. ಮುಗ್ದತೆಯ ಗುಣಗಳು ಕಳಚಿ ನಾಗರಿಕತೆ ಬೆಳೆದಂತೆ ಆತ ಸ್ವಾರ್ಥಿ ಮತ್ತು ಅತೃಪ್ತನಾಗುತ್ತಾ ಹೋಗುತ್ತಾನೆ.

ಒಂದು ವೇಳೆ ಚಂದ್ರನಲ್ಲಿ ವಾಸಿಸುವುದು ನಿಜವೇ ಆದಲ್ಲಿ 1/2 ವರ್ಷದ ಮಕ್ಕಳನ್ನು, ಈ ಲೋಕದ ಬಗ್ಗೆ ಹೆಚ್ಚಿನ ಅರಿವು ಇಲ್ಲದ ವಯಸ್ಸಿನಲ್ಲಿಯೇ ಅಲ್ಲಿಗೆ ಕಳುಹಿಸಿದರೆ ಬಹುಶಃ ಹೊಸ ನಾಗರಿಕ ತಲೆಮಾರು ಸೃಷ್ಟಿಯಾಗಬಹುದು. ಇಲ್ಲದಿದ್ದರೆ ಎಂದಿನಂತೆ ಭೂಲೋಕ ಚಂದ್ರಲೋಕ ಎರಡೂ ಒಂದೇ ಆಗುತ್ತದೆ.

ಇದು ಹಾಸ್ಯಭರಿತ ಒಂದು ನಕಾರಾತ್ಮಕ ಚಿಂತನೆ. ಆದರೆ ‌ಚಂದ್ರನಲ್ಲಿ ನಿಜವಾಗಿಯೂ ಒಂದು ಒಳ್ಳೆಯ ಸುಂದರ ಅತ್ಯುತ್ತಮ ನಾಗರಿಕ ಸಮ ಸಮಾಜ ನಿರ್ಮಾಣವಾಗಲಿ ಎಂದು ಆಶಿಸುತ್ತಾ…..

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!