December 23, 2024

Newsnap Kannada

The World at your finger tips!

deepa1

ಪ್ರಚೋದನೆ ಸ್ವಾರ್ಥಕ್ಕಾಗಿ ಅಲ್ಲ, ಸುಧಾರಣೆಗಾಗಿ…….

Spread the love

ಪ್ರಚೋದಿಸುತ್ತಲೇ ಇರುತ್ತೇನೆ,
ದ್ವೇಷದ ದಳ್ಳುರಿ ನಶಿಸಿ,
ಪ್ರೀತಿಯ ಒರತೆ ಚಿಮ್ಮುವವರೆಗೂ….

ಪ್ರಚೋದಿಸುತ್ತಲೇ ಇರುತ್ತೇನೆ,
ಮನುಷ್ಯರಲ್ಲಿ ಮಾನವೀಯತೆಯ ಬೆಳಕು ಮೂಡುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಮೌಢ್ಯದ ವಿರುದ್ಧ ವೈಚಾರಿಕ ಪ್ರಜ್ಞೆ ಬೆಳಗುವವರೆಗೂ,……..

ಪ್ರಚೋದಿಸುತ್ತಲೇ ಇರುತ್ತೇನೆ,
ಹಿಂಸೆಯ ವಿರುದ್ಧ ಅಹಿಂಸೆ ಜಯ ಸಾಧಿಸುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಸುಳ್ಳಿನ ವಿರುದ್ಧ ಸತ್ಯ ಗೆಲ್ಲುವವರೆಗೂ,….

ಪ್ರಚೋದಿಸುತ್ತಲೇ ಇರುತ್ತೇನೆ ಮುಖವಾಡಗಳು ಬಯಲಾಗಿ ಸಹಜತೆ ಕಾಣುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಜಾತಿಯ ಅಸಮಾನತೆ ತೊಲಗುವವರೆಗೂ,…..

ಪ್ರಚೋದಿಸುತ್ತಲೇ ಇರುತ್ತೇನೆ,
ಕುತಂತ್ರಿಗಳ ಮುಖವಾಡ ಬಯಲಾಗುವವರೆಗೂ,…….

ಪ್ರಚೋದಿಸುತ್ತಲೇ ಇರುತ್ತೇನೆ,
ಶೋಷಿತರ ದೌರ್ಜನ್ಯ ನಿಲ್ಲುವವರೆಗೂ……..

ಪ್ರಚೋದಿಸುತ್ತಲೇ ಇರುತ್ತೇನೆ,
ಜೀವನಮಟ್ಟ ಸುಧಾರಣೆಯ ಆಗುವವರೆಗೂ,…….

ಪ್ರಚೋದಿಸುತ್ತಲೇ ಇರುತ್ತೇನೆ,
ಯೋಚಿಸುವ ಮನಸ್ಸುಗಳು ವಿಶಾಲವಾಗುವವರೆಗೂ,….

ಪ್ರಚೋದಿಸುತ್ತಲೇ ಇರುತ್ತೇನೆ,
ಜನರ ಕಣ್ಣುಗಳಲ್ಲಿ ನೆಮ್ಮದಿಯ ಆಶಾಕಿರಣ ಕಾಣುವವರೆಗೂ,…

ಪ್ರಚೋದಿಸುತ್ತಲೇ ಇರುತ್ತೇನೆ,
ಹೃದಯಗಳು ಬೆಸೆಯುವವರೆಗೂ,…

ಪ್ರಚೋದಿಸುವುದು,
ಏನು ಯೋಚನೆ ಮಾಡಬೇಕೆಂದಲ್ಲ,
ಹೇಗೆ ಯೋಚನೆ ಮಾಡಬೇಕೆಂದು…..

ಅಂದರೆ,
ಒಂದು ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಹೇಗೆ ನೋಡಬೇಕೆಂದು,
ಅದರ ಒಳಿತು ಕೆಡುಕುಗಳ ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕೆಂದು,
ಸ್ವಲ್ಪ ಆಸಕ್ತಿ, ಸ್ವಲ್ಪ ಸಹನೆ, ಸ್ವಲ್ಪ ಸಹಾನುಭೂತಿ, ಸ್ವಲ್ಪ ತಾಳ್ಮೆ, ಸ್ವಲ್ಪ ಬುದ್ಧಿವಂತಿಕೆ, ಸ್ವಲ್ಪ ಒಳ್ಳೆಯತನ, ಸ್ವಲ್ಪ ಪ್ರೀತಿ ವಿಶ್ವಾಸ ಕರುಣೆ, ಸ್ವಲ್ಪ ಅಧ್ಯಯನ, ಸ್ವಲ್ಪ ಸ್ಥಿರ ಪ್ರಜ್ಞತೆ, ಸ್ವಲ್ಪ ವಾಸ್ತವಿಕತೆ…
ಹೀಗೆ ಎಲ್ಲಾ ಆಯಾಮಗಳ ಅವಲೋಕನ…..

ನಮ್ಮ ಸ್ವಾತಂತ್ರ್ಯ ಉಳಿಸಿಕೊಂಡು, ಇತರರ ಸ್ವಾತಂತ್ರ್ಯ ಗೌರವಿಸುತ್ತಾ….

ಪ್ರಚೋದಿಸುತ್ತಲೇ ಇರುತ್ತೇನೆ,
ಕೊನೆಯ ಉಸಿರೆಳೆಯುವವರೆಗೂ……
ಬರೆಯುವ ಕೈಗಳು ಸ್ತಬ್ಧವಾಗುವವರೆಗೂ………

ಪ್ರಚೋದನೆ ಸ್ವಾರ್ಥಕ್ಕಾಗಿಯಲ್ಲ,
ಸಮಾಜದ ಸುಧಾರಣೆಗಾಗಿ…..

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!