ಈಗ ಹೊರಗಿನ ವಾತಾವರಣ ಹೇಗಿದೆ ಎಂದರೆ ಮಳೆಗಾಲ ಮತ್ತು ಚಳಿಗಾಲ ಒಟ್ಟಿಗೆ ಬಂದು ಜನರ ಜೀವನವನ್ನು ಹೈರಾಣಾಗಿಸಿದೆ. ಸದಾ ಹೊರಗಿನ ವಾತಾವರಣದಲ್ಲಿ ಕೆಲಸ ಮಾಡುವ ಜನರಿಗೆ ಇದು ಸಹಿಸಿಕೊಳ್ಳಲು ಆಗದಂತಹ ವಾತಾವರಣ ಎಂದು ಹೇಳಬಹುದು. ಈ ಕಾಲದಲ್ಲಿ ಜ್ವರ, ಶೀತ, ಒಣ ಕೆಮ್ಮು.. ಹೀಗೆ ಹಲವು ಆರೋಗ್ಯ ಸಮಸ್ಯೆಗಳು ಬಾಧಿಸುವುದು ಸಾಮಾನ್ಯ. ಇಂಥ ಆರೋಗ್ಯ ಸಮಸ್ಯೆಗಳನ್ನು ಆಲಕ್ಷಿಸಿದರೆ ವಿಪರೀತ ತೊಂದರೆಗೆ ಎಡೆಮಾಡಿಕೊಡುತ್ತದೆ. ಒಮ್ಮೊಮ್ಮೆ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿಯೂ ಬರಬಹುದು.
ಇಂಥ ಕಾಯಿಲೆಗಳ ನಿಯಂತ್ರಣಕ್ಕಾಗಿ ನಿತ್ಯದ ಆಹಾರದ ಜೊತೆ ಜೊತೆಗೆ, ರುಚಿ ರುಚಿಯಾದ ಕಷಾಯಗಳನ್ನು ಮಾಡಿಕೊಂಡು ಆಗಾಗ ಕುಡಿಯುತ್ತಿರಬೇಕು. ಇದರಿಂದ ಆರೋಗ್ಯಕ್ಕೂ ಒಳ್ಳೆಯದು. ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಕಾಡುವ ಕಾಯಿಲೆಗಳು ಶಮನವಾಗಿ, ಹೊಸ ಕಾಯಿಲೆಗಳು ದೇಹ ಪ್ರವೇಶಿಸಿದಂತೆ ತಡೆಯುತ್ತವೆ. ನಿತ್ಯದ ಆಹಾರದೊಂದಿಗೆ ಸೇವಿಸಬಹುದಾದ ಹಾಗೂ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ಮಾಡಬಹುದಾದ ಕೆಲವು ಕಷಾಯಗಳ ರೆಸಿಪಿಯನ್ನು ನಾವಿoದು ತಿಳಿಯೋಣ.
- ಕೊತ್ತಂಬರಿ – ಜೀರಿಗೆ – ಜೇಷ್ಠಮಧು ಕಷಾಯ
ಬೇಕಾಗುವ ವಸ್ತುಗಳು: 1/2 ಚಮಚ ಕೊತ್ತಂಬರಿ, 7-8 ಕಾಳುಮೆಣಸು, 1/2 ಚಮಚ ಜೇಷ್ಠಮಧು ಪುಡಿ, 1/2 ಚಮಚ ಒಣಶುಂಠಿ ಪುಡಿ, 1/2 ಚಮಚ ಜೀರಿಗೆ, 1 ಲೋಟ ಹಾಲು, 1 ಚಮಚ ಬೆಲ್ಲ
ಮಾಡುವ ವಿಧಾನ: 1 ಕಪ್ ನೀರು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಕುದಿಸಿ. ಕೊತ್ತಂಬರಿ, ಕಾಳುಮೆಣಸು, ಜೀರಿಗೆ ಸ್ವಲ್ಪ ಬೆಚ್ಚಗೆ ಹುರಿದು ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಹಾಕಿ ತೊಳಸಿ. ನಂತರ ಬೆಲ್ಲ ಹಾಲು ಹಾಕಿ 10-15 ನಿಮಷ ಕುದಿಸಿ. ಶುಂಠಿ ಪುಡಿ, ಜೇಷ್ಠಮಧು ಪುಡಿ ಹಾಕಿ 5 ನಿಮಿಷ ಕುದಿಸಿ ಕೆಳಗಿಳಿಸಿ. ನಂತರ ಸೋಸಿ ಹಾಲು ಬೆರೆಸಿ ಕಪ್ ಗೆ ಹಾಕಿ ಕುಡಿಯಿರಿ. ಚಳಿಗಾಲದ ಶೀತ, ಗಂಟಲು ನೋವು, ಜ್ವರ, ಕೆಮ್ಮು, ದಮ್ಮಿಗೆ ಈ ಕಷಾಯ ಒಳ್ಳೆಯದು.
- ಒಣದ್ರಾಕ್ಷಿ – ಒಣ ಕರ್ಜೂರ ಕಷಾಯ
ಬೇಕಾಗುವ ಸಾಮಗ್ರಿಗಳು: ಒಣದ್ರಾಕ್ಷಿ – 15, ಉತ್ತುತ್ತೆ – 2, ಕೆಂಪು ಕಲ್ಲುಸಕ್ಕರೆ – 1ರಿಂದ 2 ಹರಳು, ನೀರು – 2 ರಿಂದ 3 ಲೋಟ
ತಯಾರಿಸುವ ವಿಧಾನ: ದ್ರಾಕ್ಷಿ, ಉತ್ತುತ್ತೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿ. ಅದಕ್ಕೆ ಕಲ್ಲುಸಕ್ಕರೆ ಹಾಕಿ 15 ನಿಮಿಷ ಕುದಿಸಿದರೆ ಕಷಾಯ ರೆಡಿ. ದಿನದಲ್ಲಿ ಎರಡು ಮೂರು ಬಾರಿ ಇದನ್ನು ಕುಡಿಯುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.
- ಧನಿಯಾ-ಜೀರಿಗೆ ಕಷಾಯ
ಬೇಕಾಗುವ ವಸ್ತುಗಳು : 1 ಚಮಚ ಧನಿಯಾ, 1 ಚಮಚ ಜೀರಿಗೆ, ¼ ಚಮಚ ಮೆಂತೆ, ¼ ಇಂಚು ಉದ್ದದ ಜೇಷ್ಠಮಧು, 10-12 ಕಾಳುಮೆಣಸು, 2-3 ಲವಂಗ, ¼ ಚಮಚ ಓಮ, 1 ಚಮಚ ಒಣಶುಂಠಿ ಪುಡಿ, ¼ ಇಂಚು ಉದ್ದದ ಹಿಪ್ಪಲಿ, ¼ ಚಮಚ ಅರಸಿನ , 1 ಚಮಚ ಬೆಲ್ಲ, 2-3 ಕಪ್ ನೀರು, ½ ಕಪ್ ಹಾಲು.
ಮಾಡುವ ವಿಧಾನ : ಬಾಣಲೆ ಒಲೆಯ ಮೇಲಿಟ್ಟು ಅನುಕ್ರಮವಾಗಿ ಧನಿಯಾ, ಜೀರಿಗೆ, ಮೆಂತೆ, ಜೇಷ್ಠಮಧು, ಕಾಳುಮೆಣಸು, ಲವಂಗ, ಓಮ, ಒಣಶುಂಠಿ ಪುಡಿ, ಹಿಪ್ಪಲಿ, ಅರಸಿನ ಹಾಕಿ ಸ್ವಲ್ಪ ಹುರಿದು ನುಣ್ಣಗೆ ಪುಡಿ ಮಾಡಿ. ನಂತರ ಕುದಿವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಬೆಲ್ಲ ಹಾಕಿ. ಕುದಿದ ನಂತರ ಶೋಧಿಸಿ. ನಂತರ ಕುದಿಸಿದ ಹಾಲು ಹಾಕಿ ಬೆರೆಸಿ ಕುಡಿಯಿರಿ. ಆರೋಗ್ಯಕ್ಕೆ ಇದು ಒಳ್ಳೆಯ ಕಷಾಯ. ಹೊಟ್ಟೆಯುರಿ, ಮೂತ್ರ ದೋಷ, ದೇಹಕ್ಕೆ ಉಷ್ಣವಾಗುವುದು ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತದೆ.
- ತುಳಸಿ ಮತ್ತು ಲವಂಗ ಕಷಾಯ
ಬೇಕಾಗುವ ಸಾಮಾಗ್ರಿಗಳು: ಅಂಗೈ ತುಂಬಾ ತುಳಸಿ ಎಲೆಗಳು,ಲವಂಗ – 3 ರಿಂದ 6, ನೀರು – ಒಂದೂವರೆ ಕಪ್
ಮಾಡುವ ವಿಧಾನ: ಲವಂಗ ಮತ್ತು ತುಳಸಿ ಎಲೆ ಹಾಕಿ ನೀರನ್ನು ಚೆನ್ನಾಗಿ ಕುದಿಸಿ. ನೀರು ಅರ್ಧಕ್ಕೆ ಇಂಗಬೇಕು. ನಂತರ ತಣ್ಣಗಾಗಲು ಬಿಡಿ. ಸ್ವಲ್ಪ ಕಲ್ಲುಪ್ಪು ಬೆರೆಸಿ ದಿನದಲ್ಲಿ 2 ರಿಂದ 3 ಸಲ ಕುಡಿಯಿರಿ.
- ದಾಲ್ಚಿನ್ನಿ ಚಹಾ
ಒಂದು ಕಪ್ ಬಿಸಿ ನೀರಿಗೆ ಒಂದು ಪಿಂಚ್ ಲವಂಗ ಪುಡಿಯೊಂದಿಗೆ ಶುಂಠಿ ಪುಡಿ, ಫೆನ್ನೆಲ್ ಬೀಜಗಳು ಮತ್ತು ದಾಲ್ಚಿನ್ನಿಯನ್ನು ಸೇರಿಸಿ. ಗಿಡಮೂಲಿಕೆಗಳು ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ.
- ಕರಿಬೇವಿನ ಎಲೆಯ ಕಷಾಯ
ಬೇಕಾಗುವ ವಸ್ತುಗಳು : 1 ಹಿಡಿ ಕರಿಬೇವಿನೆಲೆ, 2 ಕಪ್ ನೀರು, ¼ ಕಪ್ ಹಾಲು, 1 ಚಮಚ ಬೆಲ್ಲ, 1 ಲವಂಗ, ಸಣ್ಣ ತುಂಡು ಶುಂಠಿ, ½ ಚಮಚ ಧನಿಯಾ ಪುಡಿ.
ಮಾಡುವ ವಿಧಾನ : ಕರಿಬೇವಿನೆಲೆ ತೊಳೆದು, ಜಜ್ಜಿ ಯಾ ಮಿಕ್ಸಿಯಲ್ಲಿ ರುಬ್ಬಿ. ನಂತರ ನೀರು, ಬೆಲ್ಲ, ಲವಂಗ, ಜಜ್ಜಿದ ಶುಂಠಿ, ಧನಿಯಾ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. 1-1½ ಕಪ್ ಆದಾಗ ಒಲೆಯಿಂದ ಕೆಳಗಿಳಿಸಿ. ನಂತರ ಸೋಸಿ ಹಾಲು ಬೆರೆಸಿ ಕುಡೀಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ. ಅಧಿಕ ತೂಕ ಕಡಿಮೆಯಾಗಲು ಸಹಕಾರಿ.
- ಒಂದೆಲಗದ ಕಷಾಯ
ಬೇಕಾಗುವ ವಸ್ತುಗಳು: ಒಂದು ಹಿಡಿ ಬೇರು ಸಹಿತ ಒಂದೆಲಗದ ಎಲೆ, 1 ಚಮಚ ಕಾಳುಮೆಣಸು ಪುಡಿ, 2 ಚಮಚ ಜೇನುತುಪ್ಪ
ಮಾಡುವ ವಿಧಾನ : 2 ಕಪ್ ನೀರಿಗೆ ಬೇರು ಸಹಿತ ಸ್ವಚ್ಛವಾಗಿ ತೊಳೆದ ಒಂದೆಲಗದ ಎಲೆ, ಕಾಳುಮೆಣಸು ಪುಡಿಹಾಕಿ ಚೆನ್ನಾಗಿ 1 ಕಪ್ ಆಗುವಷ್ಟು ಕುದಿಸಿ. ನಂತರ ಇಳಿಸಿ ಶೋಧಿಸಿ, ಜೇನು ಹಾಕಿ ಸರಿಯಾಗಿ ಬೆರೆಸಿ, ಬಿಸಿಬಿಸಿಯಾಗಿ ಕುಡಿಯಿರಿ. ಇದು ಜ್ವರ ನೆಗಡಿಗಳಿಗೆ ಉತ್ತಮ ಪರಿಹಾರ.
- ದೊಡ್ಡಪತ್ರೆ ಕಷಾಯ
ಬೇಕಾಗುವ ವಸ್ತುಗಳು: 3-4 ದೊಡ್ಡಪತ್ರೆ ಎಲೆ, 1/2 ಚಮಚ ಜೀರಿಗೆ, 1/2 ಚಮಚ ಕಾಳುಮೆಣಸು, 2 ಚಮಚ ಜೇನುತುಪ್ಪ
ಮಾಡುವ ವಿಧಾನ : ಜೀರಿಗೆ, ಕಾಳುಮೆಣಸು ಪುಡಿಮಾಡಿ, 1 ಕಪ್ ನೀರಿಗೆ ತೊಳೆದ ದೊಡ್ಡಪತ್ರೆ ಎಲೆ, ಪುಡಿಮಾಡಿದ ಕಾಳುಮೆಣಸು, ಜೀರಿಗೆ ಪುಡಿ ಹಾಕಿ ಮುಚ್ಚಿ, 1 ನಿಮಿಷ ಕುದಿಸಿ ಇಳಿಸಿ. ನಂತರ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಪುನಹ ಪಾತ್ರೆಗೆ ಹಾಕಿ ಸ್ವಲ್ಪ ನೀರುಹಾಕಿ ಮುಚ್ಚಿ ಕುದಿಸಿ ನಂತರ ಒಲೆಯಿಂದ ಇಳಿಸಿ ನಂತರ ಸೋಸಿ ಜೇನುತುಪ್ಪ ಹಾಕಿ ಕುಡಿಯಿರಿ. ಕೆಮ್ಮು, ದಮ್ಮು, ಉಬ್ಬಸ, ಅಜೀರ್ಣ ಮುಂತಾದ ತೊಂದರೆಗಳ ಶಮನಕ್ಕೆ ಒಳ್ಳೆಯದು.
- ಶುಂಠಿ ಕಷಾಯ:
ಬೇಕಾಗುವ ವಸ್ತುಗಳು: 1 ಇಂಚು ಉದ್ದದ ಶುಂಠಿ, 2 ಕಪ್ ನೀರು, ಒಂದುವರೆ ಚಮಚ ಬೆಲ್ಲ, 1/4 ಕಪ್ ಹಾಲು
ತಯಾರಿಸುವ ವಿಧಾನ: ಶುಂಠಿ ತೊಳೆದು ಜಜ್ಜಿ, ಎರಡು ಕಪ್ ನೀರು ಹಾಕಿ, ಕುದಿಸಿ. ನಂತರ ಬೆಲ್ಲ ಹಾಕಿ ಹತ್ತು ನಿಮಿಷ ಕುದಿಸಿ ಕೆಳಗಿಳಿಸಿ. ಬಳಿಕ ಶೋಧಿಸಿ ಬಿಸಿಹಾಲು ಸೇರಿಸಿ ಬಿಸಿಯಿರುವಾಗಲೇ ಕುಡಿಯಿರಿ. ಗಂಟಲು ಕೆರೆತ, ಶೀತ, ಸೈನಸೈಟೀಸ್, ತಲೆಭಾರ ಈ ಸಮಸ್ಯೆಗಳಿಗೆ ಈ ಕಷಾಯ ಒಳ್ಳೆಯದು.
ಸೌಮ್ಯಾ ಸನತ್ ✍️🌹