ಐಎಂಎ ಹಗರಣ: ಚಾರ್ಜ್ ಶೀಟ್‌ನಲ್ಲಿ 28 ಆರೋಪಿಗಳು

Team Newsnap
2 Min Read

ಐಎಂಎಯ 4000 ಕೋಟಿಗಳ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ 28 ಆರೋಪಿಗಳ ಹೆಸರನ್ನು ಸೇರಿಸಿ ಬೆಂಗಳೂರಿನ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಸಿಬಿಐ ಐಎಂಎ ಸಂಸ್ಥೆಯ ಎಂಡಿ ಮತ್ತು ಸಿಇಒ ಮೊಹಮ್ಮದ್ ಮನ್ಸೂರ್ ಖಾನ್, ಐಎಂಎ ನಿರ್ದೇಶಕರಾದ ನಿಜಾಮುದ್ದೀನ್, ನಸೀರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ಕರ್, ವಸೀಮ್, ಅರ್ಷದ್ ಖಾನ್, ಮತ್ತು ಅಫ್ಸರ್ ಪಾಷಾ, ಹೇಮಂತ್ ನಿಂಬಾಳ್ಕರ್, (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ಬೆಂಗಳೂರು ನಗರ ಪೊಲೀಸ್), ಅಜಯ್ ಹಿಲೋರಿ (ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್), ಇ.ಬಿ. ಶ್ರೀಧರ ಡೆಪ್ಯೂಟಿ ಎಸ್‌ಪಿ (ಸಿಐಡಿ), ಕಮರ್ಷಿಯಲ್ ಸ್ಟ್ರೀಟ್ ನ ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ಎಂ ರಮೇಶ್ , ಕಮರ್ಷಿಯಲ್ ಸ್ಟ್ರೀಟ್‌ ನ ಆಗಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ಗೌರಿಶಂಕರ್, ಮತ್ತು ಬೆಂಗಳೂರು ಉತ್ತರ ಉಪವಿಭಾಗದ ಆಗಿನ ಸಹಾಯಕ ಆಯುಕ್ತ ಎಲ್.ಸಿ. ನಾಗರಾಜ್ ಮುಂತಾದ ಅಧಿಕಾರಿಗಳ ಹೆಸರನ್ನು ಚಾರ್ಜ‌ಶೀಟ್‌ನಲ್ಲಿ ನಮೂದಿಸಿದೆ.

ಶಿಕ್ಷಣ ಯೋಜನೆ, ಮದುವೆ ಯೋಜನೆ ಹೀಗೆ ಮುಂತಾದ ಯೋಜನೆಗಳ ಹೆಸರನ್ನು ಹೇಳಿ‌ ಐಎಂಎ ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದ ಪ್ರಕರಣ 2018ರಲ್ಲಿ ಬೆಳಕಿಗೆ ಬಂದಿತ್ತು. ಆಗ ತನಿಖೆ ನಡೆಸಿದ್ದ ಪೋಲೀಸ್ ಅಧಿಕಾರಿಗಳು ಮತ್ತು‌ ಕಂದಾಯ ಅಧಿಕಾರಿಗಳು ಐಎಂಎ ಯಾವುದೇ ಹಗರಣ ಮಾಡಿಲ್ಲವೆಂದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ. ಅಲ್ಲದೇ ಐಎಂಎಯಲ್ಲಿ‌ ಹೂಡಿಕೆ ಮಾಡಿದ ಹೂಡಿಕೆದಾರರಿಂದ ಬಂದ ದೂರುಗಳನ್ನೂ ಸಹ ಮುಚ್ಚಿ ಹಾಕಲಾಗಿದೆ ಎಂದು ಸಿಬಿಐ ಆರೋಪ ಮಾಡಿತ್ತು.

ಐಎಂಎ ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬಳಿಕ ಸಿಬಿಐ, ತನ್ನ ತನಿಖಾಧಿಕಾರಿಗಳನ್ನು ಒಳಗೊಂಡ ಬಹು ಶಿಸ್ತಿನ ತನಿಖಾ ತಂಡವನ್ನು (MDIT) ರಚಿಸಿತ್ತು, ಈ ತಂಡವು ಚಾರ್ಟರ್ಡ್ ಅಕೌಂಟೆಂಟ್ಸ್, ಫೊರೆನ್ಸಿಕ್ ಆಡಿಟರ್, ಕಂಪ್ಯೂಟರ್ ಫೊರೆನ್ಸಿಕ್ ತಜ್ಞರು ಮತ್ತು ಬ್ಯಾಂಕರ್‌ಗಳ ಸಹಾಯ ಪಡೆಯುತ್ತಿತ್ತು.

ಐಎಂಎಯ ಪ್ರಕರಣದಲ್ಲಿ‌ ಸರ್ಕಾರದ ಹಾಗೂ ಪೋಲೀಸ್ ಅಧಿಕಾರಿಗಳ ಕೈವಾಡವಿದೆ ಎಂದು‌ ಅರಿತ ಸಿಬಿಐ ಅಂತಹ ಅಧಿಕಾರಿಗಳ ವಿಚಾರಣೆಗೆ ಅವಕಾಶ ಕೋರಿ ಸರ್ಕಾರಕ್ಕೆ ಮನವಿಯನ್ನು ಮಾಡಿತ್ತು. ಸಿಬಿಐ ಮನವಿಯನ್ನು ಪುರಸ್ಕರಿಸಿದ ಸರ್ಕಾರ ವಿಚಾರಣೆಗೆ ಅವಕಾಶ ನೀಡಿತ್ತು.

ವಿಚಾರಣೆಯನ್ನು ಪೂರ್ಣಗೊಳಿಸಿರುವ ಸಿಬಿಐ ಪೂರಕ ದೋಷಾರೋಪ ಪಟ್ಟಿ‌ (ಚಾರ್ಜ್‌ಶೀಟ್)ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ‌.

ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈ ಹಿಂದೆಯೂ ನಾಲ್ಕು ಪ್ರಕರಣಗಳನ್ನು ದಾಖಲಿಸಿತ್ತು. ಐಎಂಎ ಹಗರಣ ಪ್ರಕರಣದಲ್ಲಿ ಸಿಬಿಐ ಈ ಹಿಂದೆಯೂ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತ್ತು.

ಪ್ರಸ್ತುತ ಮನ್ಸೂರ್ ಖಾನ್ 2019ರ ಜುಲೈ 19ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

Share This Article
Leave a comment