ನನ್ನಂತಹ ಹತ್ತಾರು ಗೆಳೆಯರಿಗೆ ತೀರಾ ಅಪರೂಪದ ವ್ಯಕ್ತಿಯಾಗಿ , ನಮ್ಮ ಕಾಲದ ಯುವ ಪೀಳಿಗೆಯ (ನಮ್ಮೆಲ್ಲರಿಗೂ) ಅಗೋಚರ ಶಕ್ತಿಯಾಗಿದ್ದ ಹಿರಿಯ ಪತ್ರಕರ್ತ ಈಚನೂರು ಕುಮಾರ್ (ಈಕು)ಮುಗುಳು ನಗೆಯ ಸರದಾರ. ಇಂದು ನಮ್ಮನ್ನೆಲ್ಲಾ ಅಗಲಿದ ವಿ಼ಷಾದದ ದಿನವೂ ಹೌದು. ಅವರ ‘ ನಗೆ ‘ಇನ್ನು ಕಣ್ಣಿಗೆ ಕಟ್ಟಿದೆ. ಅವಿಸ್ಮರಣೀಯ ವ್ಯಕ್ತಿಯೂ ಆಗಿ ಈಕು ನೆನಪಿನಲ್ಲೇ ಉಳಿದು ಹೋದರು.
ವಿಶಿಷ್ಠ ಬದುಕು , ವಿಭಿನ್ನ ಬರಹದ ಸದಾ ಕಾಳಜಿ ತೋರುತ್ತಿದ್ದ ಈಕುಗೂ ಕೂಡ ನಮ್ಮೆಲ್ಲರ ಬದುಕಿಗೆ ಒಗ್ಗಿ ಹೋಗಿದ್ದ ಬಡತನವೇ ಅವರ ಜನ್ಮಕ್ಕೂ ಅಂಟಿಕೊಂಡಿತ್ತು. ಆದರೆ ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ. ಕೈ ಚಾಚಿ ಯಾರನ್ನೂ, ಯಾವತ್ತು ಬೇಡಿದವರಲ್ಲ. ಬ್ರಹ್ಮಚಾರಿಗಳ ಜೊತೆಯಲ್ಲೇ ಬದುಕು , ಬರಹ ನೀಗಿಸಿ ಜೀವನ ತೂಗಿಸಿದ ಈಕು ಹೊಸ ತಲೆಮಾರಿನ ಪೀಳಿಗೆಗೂ ಮಾದರಿಯಾಗಿ ಬದುಕಿದವರು. ಅವರ ಆದರ್ಶಗಳು ಆಗಿನ ಕಾಲದ ನಮ್ಮಂತಹ ಯುವ ಪೀಳಿಗೆಯ ಪತ್ರಕರ್ತರಿಗೆ ಮಾರ್ಗದರ್ಶನದ ಕೈಪಿಡಿ ಆಗಿತ್ತು ಎಂಬುದು ಇನ್ನೂ ನೆನಪಿನಿಂದ ಮಾಸಿಲ್ಲ.
ಮೈಸೂರಿನ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸತನ , ಇತಿಹಾಸ, ಪರಂಪರೆಗಳ ಟಚ್ ನೀಡಿದ ಈಚನೂರು ಕುಮಾರ್ ನಮಗಿಂತಲೂ ಹಿರಿಯರಾದರೂ ಕಿರಿಯರ ಜೊತೆ ತುಂಬಾ ಫ್ರೆಂಡ್ಲಿ ಹಾಗೂ ಜಾಲಿ ಮೂಡ್ ನಲ್ಲೇ ಇರುತ್ತಿದ್ದರು. ಅದು ಅವರ ಸರಳ ಜೀವನದ ಸಂದೇಶವೂ ಆಗಿತ್ತು.
ಮೈಸೂರಿನ ಸಯ್ಯಾಜಿರಸ್ತೆಯಲ್ಲಿರುವ ‘ವೆಂಕಟೇಶ್ವರ ಭವನ’ ಈಕು ಸೇರಿದಂತೆ ನಮಗೆಲ್ಲಾ ಕಾಫಿ , ತಿಂಡಿ ಒದಗಿಸುವ ಅಡ್ಡೆಯಾಗಿತ್ತು. ಚೀಪ್ ಅ್ಯಂಡ್ ಬೆಸ್ಟ್ ಮತ್ತು ಸಾಲ ಕೊಡುತ್ತಿದ್ದ ನಮ್ಮ ಪಾಲಿಗೆ ಏಕ ಮಾತ್ರ ಹೋಟೆಲ್ ಅದಾಗಿತ್ತು. ನಾವೆಲ್ಲಾ ಈಕು ಗೆಳೆಯರ ಬಳಗಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ತಿಂಗಳ ಕೊನೆಗೆ ವೆಂಕಟೇಶ್ವರ ಭವನವೇ ನಮಗೆ ಗತಿಯಾಗಿತ್ತು. ಲಕ್ಷ್ಮೀ ಟಾಕೀಸ್ ಮುಂದಿನ ರಸ್ತೆಯಲ್ಲಿದ್ದ ಎಸ್ ಕೆ ಮೆಸ್ ಊಟಕ್ಕೆ ಫೇಮಸ್ . ಈಕು ಕುಟುಂಬದವರು ಊರಿಗೆ ಹೋದಾಗ ಕೆಎನ್ಆರ್ ಇವತ್ತು ಅನ್ನದಾತರಾಗುತ್ತೀರಾ? ಎಂದು ಮೆಲ್ಲನೆಯ ಧ್ವನಿಯಲ್ಲಿ ಪ್ರೀತಿಯಿಂದ ಕೇಳುತ್ತಿದ್ದರು. ‘ಬನ್ನಿ ಸಾರ್ ‘ಎಂದು ಹೇಳಿದ ಕೂಡಲೇ ಬೆನ್ನುಗೊಂದು ಪ್ರೀತಿಯ ಗುದ್ದು.
‘ಮೈಸೂರು ಮಿತ್ರ’ ನಮ್ಮ ಬದುಕು ರೂಪಿಸಿದ, ವ್ಯಕ್ತಿತ್ವ ಕಟ್ಟಿಕೊಟ್ಟ ಅಚ್ಚು ಮೆಚ್ಚಿನ ಸಂಸ್ಥೆ. ಕೆಬಿಜಿ (ಗಣಪತಿ ಸರ್) ಅಧಿಪತಿಯಾದರೂ ಎಂಆರ್ ಎಸ್ ಉತ್ತರಾಧಿಕಾರಿಯಾಗಿ ಸಂಸ್ಥೆ ಕಟ್ಟಿದರು. 1990 ರಿಂದ 93 ರ ತನಕ ನಮ್ಮ ದೊಡ್ಡ ಟೀಂ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಕೆಲಸ ಮಾಡಿದ ಆ ದಿನಗಳೂ ಕೂಡ ಅವಿಸ್ಮರಣೀಯ.
ಎಂಆರ್ ರವಿ, ನಂದಿನಿ ಶ್ರೀನಿವಾಸ್, ಮರಿಯಾ , ಸಂಜೀವಿ, ಎಸ್ ವಿ ನಾಗೇಶ್ , ಆನಂದ್ , ಎಂ ನಾಗರಾಜ್,
ಕೆ ಎನ್ ರವಿ, ಕೆಸಿಎಸ್ಪಿ, ಪಾ ಶ್ರೀ ಅನಂತ್ ರಾಮು, ಎಂಎನ್ ಗುರುಮೂರ್ತಿ ,ಎಚ್ ಆರ್ ರಂಗನಾಥ್, ಅನಂತ ಚಿನಿವಾರ್, ಟಿ ಎಸ್ ಗೋಪಿನಾಥ್ , ಗಣೇಶ್ , ಮಹದೇವ, ಹೀಗೆ ಆಂಜನೇಯ ಬಾಲದ ರೀತಿಯಲ್ಲಿದ್ದ ಗೆಳೆಯರ ದಂಡು ಈಕು ಜೊತೆಗೆ ಕೆಲಸ ಮಾಡಿದ್ದು , ಅವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದನ್ನು ಇನ್ನೂ ಮರೆಯಲಾರದ ಅನುಭವ.
ಸರಳ ವ್ಯಕ್ತಿತ್ವ, ಜಾಣ ನಡೆ , ಪರಿಶುದ್ಧ ಬದುಕು, ಶ್ರೀಮಂತಿಕೆಗೆ ಹಾತೊರೆಯದ ಜೀವ , ಪಾಲಿಗೆ ಬಂದಿದ್ದೇ ಬಯಸಿದ್ದು, ನಿರಾಶೆ ತೋರಿಸದ ವ್ಯಕ್ತಿತ್ವ ರೂಪಿಸಿಕೊಂಡು ಬದುಕಿದವರು ನಮ್ಮ ಈಕು.
ಮೈಸೂರು ಅರಮನೆ, ಚಿಗುರು ಎಲೆ, ಅಂಬಾರಿ , ರಾಜರು , ರಾಜರ ವೈಭವ, ಲಾನ್ಸ್ ಡೌನ್ ಬಿಲ್ಡಿಂಗ್ , ದೇವರಾಜ ಮಾರುಕಟ್ಟೆ, ಹೀಗೆ ಮೈಸೂರಿನ ಇತಿಹಾಸದ ಬಗ್ಗೆ ಬರೆಯಬೇಕೆಂದರೆ ಈಕು ಎನ್ಸೈಕ್ಲೋಪಿಡಿಯಾದಂತೆ (ಈಗಿನ ಕಾಲದ ಗೂಗಲ್ ಮಾದರಿ) ಮಾಹಿತಿ ಮಾರ್ಗದರ್ಶನ ಮಾಡಿದ್ದಾರೆ.
ಮೂರು ದಶಕಗಳ ಹಿಂದಿನ ತಲೆ ಮಾರುಗಳ ಪತ್ರಕರ್ತರ ಆದರ್ಶ, ಸಾಮಾಜಿಕ ಚಿಂತನೆ, ಸರಳತೆಗೆ ಮಾದರಿಯಾಗಿದ್ದ ಈಚನೂರು ಕುಮಾರ್ ಸಾರ್ಥಕ ಬದುಕು ಸವೆಸಿದ ಹಿರಿಯ ಜೀವ. ಅವರ ಆತ್ಮಕ್ಕೆ ಶಾಂತಿ ಬಯಸುವುದೊಂದೇ ನಮಗೆ ಉಳಿದಿರುವ ದಾರಿ. ಇದನ್ನು ಓದಿ –ಬೀಟ್ರೂಟ್ ಓಟ್ಸ್ ಚಿಕ್ಕಿ
- ಕೆ ಎನ್ ರವಿ
ಸಂಪಾದಕರು ವರ್ತಮಾನ ಮೈಸೂರು
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ