ಅಬ್ದುಲ್ ಕಲಾಂ ಔದಾರ್ಯ
ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ವೇಳೆಯಲ್ಲಿ ಕಾರ್ಯ ನಿಮಿತ್ತ ಕಣ್ಣೂರ್ ಗೆ ಹೋಗಿದ್ದರು. ಆಗ ಕಣ್ಣೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ತೀವ್ರ ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ವೇಳೆ ರಾಷ್ಟ್ರಪತಿ ಕಲಾಂ ಮಾಣಿಕ್ ಶಾ ಅವರನ್ನು ಭೇಟಿಯಾಗಬೇಕು ಎಂದು ಬಯಸಿದರಂತೆ. ಕಲಾಂ ಬಯಕೆ ನಿಗದಿತ ಕಾರ್ಯಕ್ರಮದ ಪಟ್ಟಿಯಿಂದ ಹೊರತಾಗಿ ಇದ್ದುದ್ದರಿಂದ ಭದ್ರತಾ ಸಿಬ್ಬಂದಿಗಳಿಗೆ ತುಂಬಾ ಕಸಿವಿಸಿಯಾಯಿತು. ಆದರೂ ರಾಷ್ಟ್ರಪತಿಗಳ ಆಶಯದಂತೆ ಶಾ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡಿದ ನಂತರ ಕಲಾಂ ಆಸ್ಪತ್ರೆಗೆ ಹೋಗಿ ಶಾ ಅವರ ಉಭಯ ಕುಶಲೋಪರಿ ವಿಚಾರಿಸಿದರು. ಕಲಾಂ ಆಸ್ಪತ್ರೆಯಿಂದ ಹೊರಡುವ ಮುನ್ನ ನಿಮಗೇನಾದರೂ ಕೊರತೆಗಳಿವೆ? ಏನಾದರೂ ಸಹಾಯ, ಸಾಲಭ್ಯಗಳನ್ನು ಕಲ್ಪಿಸಿಕೊಡಬೇಕೆ?’ ಎಂದು ಶಾ ಅವರನ್ನು ಕೇಳಿದರಂತೆ. ಆಗ ಮಾಣಿಕ್ ಶಾ ಸಹಾಯ, ಸೌಲಭ್ಯ ಏನೂ ಬೇಡ ಸರ್. ಆದರೆ ನನಗೆ ಒಂದು ಕೊರತೆ ಇದೆ ಎಂದರಂತೆ. ಕಲಾಂ ಏನು ? ಎಂದು ಕೇಳಿದ್ದಕ್ಕೆ, ಮಾಣಿಕ್ ಶಾ ನಮ್ಮ ದೇಶದ ರಾಷ್ಟ್ರಪತಿಯಾದ ನಿಮಗೆ ನಾನು ಎದ್ದು ನಿಂತು ಸೆಲ್ಯುಟ್ ಮಾಡಲಾಗುತ್ತಿಲ್ಲ.
ಅದೇ ನಂಗೆ ಕೊರತೆ, ಕೊರಗು ಸರ್ ಎಂದು ಶಾ ಅಳಲು ತೋಡಿಕೊಂಡರಂತೆ. ಆಗ ಕಲಾಂ ಅಕ್ಕರೆಯಿಂದ ಮಾಣಿಕ್ ಶಾ ಮಲಗಿರುವಾಗಲೇ ಅಕ್ಕರೆಯಿಂದ ಮೈದಡವಿದವರು.
ಇದು ಕಥೆಯಲ್ಲ. ಸತ್ಯ ಘಟನೆ. ತಾವು ಒಬ್ಬ ರಾಷ್ಟ್ರದ ಪ್ರಥಮ ಪ್ರಜೆ ಎಂಬ ಯಾವ ಅಹಂ ಇಲ್ಲದಂತೆ, ಸರಳ ನಡವಳಿಕೆ ರೂಪಿಸಿಕೊಂಡವರು ಕಲಾಂ. ಹಾಗೆಯೇ ಒಬ್ಬ ನಿಷ್ಠಾವಂತ, ನಿಸ್ವಾರ್ಥ ವ್ಯಕ್ತಿತ್ವ ಹೊಂದಿರುವ ಕಲಾಂ ಅವರಿಗೆ ಅಷ್ಟೇ ಪ್ರಾಮಾಣಿಕ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ತಮ್ಮ ಅನಾರೋಗ್ಯದ ನಡುವೆಯೂ ಸೆಲ್ಯುಟ್ ಮಾಡಬೇಕು ಅಂದು ಕೊಂಡದ್ದು ಅವರ ದೇಶ ಭಕ್ತಿಯ ನಿದರ್ಶನ. ಇಡೀ ಭಾರತದ ರಾಜಕಾರಣ ಇತಿಹಾಸದಲ್ಲೇ ಕಲಾಂರಂತಹ ವ್ಯಕ್ತಿತ್ವ ಹಾಗೂ ಮಾನವತಾವಾದಿಯ ಗುಣಗಳಿರುವ ವ್ಯಕ್ತಿ ಸಿಗುವುದು ತೀರಾ ಅಪರೂಪ.
ರಾಜಕಾರಣದ ವಾಸ್ತವ ಸಂಗತಿ
ರಾಜಕೀಯ ಇಚ್ಛಾಶಕ್ತಿ ಇದ್ದಾಗಲೇ ಪ್ರಜೆಗಳ ಪಾಲನೆ ಮತ್ತು ಅಭಿವೃದ್ಧಿ ಕೆಲಸ ಮಾಡುವ ಅವಕಾಶ ಸಿಗುವುದು. ರಾಜಕಾರಣ ಪವಿತ್ರ ಕಾರ್ಯ ಎಂದರೆ ಈಗ ಅದು ಮೂರ್ಖತನ ಮಾತಾಗುತ್ತದೆ. ಪ್ರಜೆಗಳ ಬೇಕು, ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಪ್ರಜಾಪ್ರತಿನಿಧಿಗಳು ಪ್ರಜೆಗಳಿಗೆ ಮಾದರಿಯೂ ಆಗಬೇಕು. ಆದರೆ ಜನ ಪ್ರತಿನಿಧಿಯೊಬ್ಬರು ಸಂಬಳ, ಸಾರಿಗೆ ನಡೆಯುವ ಯಾವುದೇ ಇಚ್ಛಾಶಕ್ತಿ ಇಲ್ಲದೇ ಜನರ ವಿರುದ್ಧವಾಗಿ ಮಾಡುವ ಕೆಲಸಗಳು ಸಮಾಜಕ್ಕೆ ಮಾರಕವೇ ಅಗಿರುತ್ತವೆ.
ಈಗ ರಾಜಕಾಲವಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆ ಜಾರಿಯಾಗಿ 70 ವರ್ಷಗಳು ಮೀರಿವೆ. ಜನಪ್ರತಿನಿಧಿಗಳಿಗೆ ಜನರೇ ಸಾರ್ವಭೌಮರು ಎಂದು ಅಂದು ಕೊಳ್ಳಬೇಕಷ್ಟೆ. ಆದರೆ ಈಗ ಎಲ್ಲಾ ಉಲ್ಟಾ, ಜನ ಪ್ರತಿನಿಧಿಯೇ ಸಾರ್ವಭೌಮ.ಸರ್ವಾಧಿಕಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆನ್ನುವುದು ಮುಚ್ಚು ಮರೆ ಮಾಡುವ ಸಂಗತಿ ಅಲ್ಲ. ನಾವೇ ಆರಿಸಿ ಕಳಿಸಿದ ಪ್ರತಿನಿಧಿ ಸಾಲು ಸಾಲು ತಪ್ಪು ಮಾಡಿದರೂ ಸಹ ನಾವು ಒಂದೇ ಒಂದು ಪ್ರಶ್ನೆ ಕೇಳುವದಿಲ್ಲ. ಯಾಕೆ? ನಮ್ಮ ಮನಸ್ಸಿನಲ್ಲಿ ಸುಪ್ತವಾಗಿ ನೆಲೆಸಿರುವ ರಾಜಕೀಯದ ಬಗೆಗಿನ ನಿರ್ಲಕ್ಷ್ಯ ಮತ್ತು ರಾಜಕಾರಣಿಗಳ ಬಗೆಗಿನ ಜಿಗುಪ್ಸೆ ಮತ್ತು ಭಯ.
ಭಯದ ಹಿಂದಿರುವ ಬೀಭತ್ಸ
ಭಾರತದಲ್ಲಿ ಇಂದಿನ ಬಹುತೇಕ ರಾಜಕಾರಣಿಗಳು ಯಾವುದೋ ಒಂದು ಅಪರಾಧಿ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ! ಬಹುತೇಕ ಆರೋಪ ಹೊತ್ತ ರಾಜಕಾರಣಿಗಳ ಬೀಭತ್ಸ ಕಥೆಗಳು ಮೈಜುಂ ಎನಿಸುತ್ತವೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದರೂ ಅಭಿವೃದ್ಧಿ ವಿಷಯದಲ್ಲಿ ನಾವು ಇನ್ನೂ ಅಭಿವೃದ್ಧಿ ಶೀಲರೇ ಆಗಿದ್ದೇವೆ. ದೇಶದಲ್ಲಿ ಅಂದಾಜು 464 ರಾಜಕೀಯ ಪಕ್ಷಗಳಿವೆ. ಪ್ರತೀ ವರ್ಷ ಸುಮಾರು 8, 250 ಅಭ್ಯರ್ಥಿಗಳು ಚುಣಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಹೆಚ್ಚು ಕಡಿಮೆ ಭಾರತದಲ್ಲಿ ಸುಮಾರು 10,00,000 ಮತ ಕೇಂದ್ರಗಳು ಪ್ರತಿ ವರ್ಷ ಕಾರ್ಯನಿರ್ವಹಣೆ ಮಾಡುತ್ತವೆ. ಭಾರತ 130 ಕೋಟಿ ಜನ ಸಂಖ್ಯೆಯಲ್ಲಿ ಅರ್ಧದಷ್ಟು ಜನ ಮಾತ್ರ ಮತ ಚಲಾಯಿಸುತ್ತಾರೆ. ಯಾವುದಾದರೂ ಒಂದು ಹಂತದ ಮತದಾನ ನಡೆಯುತ್ತಲೇ ಇರುತ್ತದೆ.
ಅಂಕಿ-ಸಂಖ್ಯೆಗಳ ವಿಶ್ಲೇಷಣೆ
ಇಲ್ಲೊಂದು ಅಂಶವನ್ನು ಗಮನಿಸಬೇಕು. ನಮ್ಮ ದೇಶದಲ್ಲಿ ಅಪರಾಧ ಹಿನ್ನೆಲೆಯನ್ನು ಹೊಂದಿದ ರಾಜಕಾರಣಿಗಳ ಅಂಕಿ – ಸಂಖ್ಯೆಗಳ ಮಾಹಿತಿ ಇಲ್ಲಿದೆ.
- 2019ರ ಚುಣವಣೆಯಲ್ಲಿ ಗೆದ್ದ ಒಟ್ಟು ಅಭ್ಯಥರ್ಿಗಳಲ್ಲಿ ಶೇ. 43% ರಷ್ಟು ಜನ ಅಪರಾಧಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅದರಲ್ಲೂ ಕೇರಳದ ಇಡುಕಿ ಕ್ಷೇತ್ರದ ಕಾಂಗ್ರೆಸ್ ಸಂಸದ ಡೀನ್ ಕುರಿಯಕೋಸ್ ಒಟ್ಟು 204 ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಇವರೇ ದೇಶದಲ್ಲಿ ಅತೀ ಹೆಚ್ಚು ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.
- 2019ರ ಲೋಕಸಭೆಯ ಚುಣಾವಣೆಯಲ್ಲಿ ಗೆದ್ದ ಒಟ್ಟು 539 ವಿಜೇತರಲ್ಲಿ 233 ಸಂಸದರು ತಮ್ಮ ಕ್ರಿಮಿನಲ್ ಪ್ರಕರಣಗಳನ್ನು ಘೋಷಣೆ ಮಾಡಿದ್ದಾರೆ.
- 2019ರ ಚುಣಾವಣೆಯಲ್ಲಿ 159 ವಿಜೇತರು (ಅಂದರೆ 29%) ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಗಂಭೀರ
ಅಪರಾಧಗಳನ್ನು ಎದುರಿಸುತ್ತಿದ್ದಾರೆ.
ಈ ಬಾರಿಯ ಚುಣಾವಣೆಯಲ್ಲಿ 11 ಸಂಸದರು ಸೆಕ್ಷನ್ 302 (ಕೊಲೆ ಆರೋಪ) ಹಾಗೂ 307 (ಕೊಲೆ ಯತ್ನದ ಆರೋಪ) ರಂತಹ ಪ್ರಕರಣಗಳನ್ನು ಹೊಂದಿದ್ದಾರೆ.
17 ನೇ ಲೋಕಸಭೆಯ ಚುಣಾವಣೆಯಲ್ಲಿ ಗೆದ್ದ ಅಭ್ಯಥರ್ಿಗಳ ಆರೋಪದ ಹಿನ್ನೆಲೆಯ ಪಟ್ಟಿ ಹೀಗಿದೆ.
- ಬಿಜೆಪಿಯಿಂದ ಗೆದ್ದ ಅಭ್ಯರ್ಥಿಗಳು 301, ಅಪರಾಧ ಹಿನ್ನಲೆಯ ಅಭ್ಯರ್ಥಿಗಳು 116
- ಕಾಂಗ್ರೆಸ್ ನಿಂದ ಗೆದ್ದ ಅಭ್ಯರ್ಥಿಗಳು 51, ಅಪರಾಧ ಹಿನ್ನಲೆಯ ಅಭ್ಯರ್ಥಿಗಳು 29
- ಡಿಎಂಕೆ ಯಿಂದ ಗೆದ್ದ ಅಭ್ಯರ್ಥಿಗಳು 23, ಅಪರಾಧ ಹಿನ್ನಲೆಯ ಅಭ್ಯರ್ಥಿಗಳು 10
- ವೈ.ಎಸ್.ಆರ್.ಸಿ.ಪಿ ಯಿಂದ ಗೆದ್ದ ಅಭ್ಯರ್ಥಿಗಳು 22, ಅಪರಾಧ ಹಿನ್ನಲೆಯ ಅಭ್ಯರ್ಥಿಗಳು 10
- ಜೆಡಿ (ಯು) ನಿಂದ ಗೆದ್ದ ಅಭ್ಯರ್ಥಿಗಳು 16, ಅಪರಾಧ ಹಿನ್ನಲೆಯ ಅಭ್ಯರ್ಥಿಗಳು 13
- ಇನ್ನು ಇತರೆ ಪಕ್ಷಗಳಿಂದ ಒಟ್ಟು 44 ಅಭ್ಯರ್ಥಿಗಳು ಅಪರಾಧಿ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ.
ಮಾರಾಟದ ಸರಕಾಗಿರುವ ಮತ
ಭಾರತದಲ್ಲಿ ಬೇರೆ ಯಾವ ದೇಶದಲ್ಲೂ ನಡೆಯದಷ್ಟು ಭ್ರಷ್ಟಾಚಾರ ನಡೆಯುತ್ತದೆ. ಮತವೂ ಇಲ್ಲಿ ಮಾರಾಟವಾಗುತ್ತದೆ. ಖರೀದಿ ನಡೆಯುತ್ತದೆ. 2019 ರಲ್ಲಿ ನಡೆದ ಚುಣಾವಣೆಯಲ್ಲಿ ನಮ್ಮ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಮಾಡಿರುವ ಒಟ್ಟು ಖಚರ್ು ಬರೋಬರಿ 55,000 ಕೋಟಿ. ಜನ ಜ್ಞಾನಿಗಳಾದಷ್ಟು, ವಿದ್ಯಾವಂತರ ಮತಗಳ ಬಿಕರಿ ಆಗುತ್ತವೆ. ಈ ಚುಣಾವಣೆಯ ಖರ್ಚನ್ನು ನೋಡಿದರೆ ಇಂದಿನ ಒಂದು ಓಟಿನ ಬೆಲೆ ಸುಮಾರು 800 ರುಗಳು. ಅಂಕಿ – ಅಂಶಗಳು ಹೀಗಿವೆ.
- 1999ರ ಚುಣಾವಣೆಯಲ್ಲಿ 10,000 ಕೋಟಿ
- 2004 ರ ಚುಣಾವಣೆಯಲ್ಲಿ 14,000 ಕೋಟಿ
- 2009 ರ ಚುಣಾವಣೆಯಲ್ಲಿ 20,000 ಕೋಟಿ
- 2014 ರ ಚುಣಾವಣೆಯಲ್ಲಿ 30,000 ಕೋಟಿ
2019 ರಲ್ಲಿ 55,000 ಕೋಟಿ
ರಾಜಕೀಯ ಪಕ್ಷಗಳು ಚುನಾವಣೆಗಳಿಗೆ ಇಷ್ಟೊಂದು ಹಣ ಖರ್ಚು ಮಾಡಲು ಎಲ್ಲಿಂದ ಬಂತು? ನಾವು ಕೊಟ್ಟ ತೆರಿಗೆಯನ್ನೇ ತಾನೇ ರಾಜಕೀಯದವರು ಊಟ ಮಾಡಿ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಗಳಿಸಿ ಇಟ್ಟಿರುವುದು. ಇಂದಿನ ಧಾವಂತದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬ ಆಲೋಚನೆ ಮಾಡದೇ ನಾವು ಸುಮ್ಮನೇ ಮತ ಹಾಕುತ್ತಿದ್ದೇವೆ. ಆದರೆ ಗೊತ್ತಿಲ್ಲದಂತೆ ನಮ್ಮ ಗೋರಿಯನ್ನು ನಾವೇ ತೋಡಿ ಮಣ್ಣು ಮುಚ್ಚಿಕೊಳ್ಳುತ್ತಿದ್ದೇವೆ.
ನಮ್ಮ ತೆರಿಗೆ ಹಣವನ್ನು ಕನಿಷ್ಠ ಪಕ್ಷ ರಸ್ತೆಗಳ ಗುಂಡಿ ಮುಚ್ಚಲೂ ಕೂಡ ಹಾಕುವದಿಲ್ಲ ಈ ಸರ್ಕಾರ. ಇಂತಹ ಭ್ರಷ್ಟ ಸರ್ಕಾರಗಳಿಂದ ನಾವೇನು ನಿರೀಕ್ಷೆ ಮಾಡಬಹುದೆಂದು ಯಾರಾದರೂ ಕೇಳಿದರೆ, ಹಾಗೆ ಕೇಳುವ ನೈತಿಕ ಹಕ್ಕೇ ನಮಗೆ ಇಲ್ಲವೆನ್ನುತ್ತೇನೆ ನಾನು. ಈಗ ವಿಧಾನಸಭೆ, ಲೋಕ ಸಭೆಯಲ್ಲಿ ಗೆದ್ದು ಬೀಗುತ್ತಿರುವ ಎಲ್ಲ ನಾಯಕರೂ ನಾವು ಮಾಡಿದ ತಪ್ಪಿನ, ನಿರ್ಲಕ್ಷ್ಯದ ಒಂದು ಭಾಗ. ಇದು ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕಾರಣಿಗಳನ್ನು ಕುರಿತು ಹೇಳುವಂತಹದ್ದಲ್ಲ.
ರಾಜಕೀಯ ಪಕ್ಷಗಳಿಗೆ ದೇಣಿಗೆ ಎಷ್ಟು ಬಂದಿದೆ ?
ದೇಶದ ವಿವಿಧ ರಾಜಕೀಯ ಪಕ್ಷಗಳಿಗೆ ಹರಿದು ಬಂದಿರುವ ದೇಣಿಗೆಗಳ ಪ್ರಮಾಣದ ವಿವರ ಹೀಗಿದೆ
- ಬಿಜೆಪಿ ಪಕ್ಷಕ್ಕೆ 915.59 ಕೋಟಿ
- ಕಾಂಗ್ರೆಸ್ ಗೆ 55.36 ಕೋಟಿ
- ಎನ್.ಸಿ.ಪಿ ಗೆ 7, 737 ಕೋಟಿ
- ಸಿಪಿಎಮ್ ಗೆ 4.42 ಕೋಟಿ
- ಎಐಟಿಸಿಗೆ 2.03 ಕೋಟಿ
- ಸಿಪಿಐ ಗೆ 4 ಲಕ್ಷ ದೇಣಿಗೆ ಬಂದಿದೆ.
ಮತದಾರರು ಹಣ ಪಡೆಯದೇ ಸರಿಯಾಗಿ ಯೋಚನೆ ಮಾಡಿ ಒಳ್ಳೆಯ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಹೊಣೆಯಿಂದ ನಾವು ಎಂದೋ ನುಣುಚಿಕೊಂಡಿದ್ದೇವೆ.
ಹೀಗಾಗಿ ರಾಜಕೀಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿದೆ. ನಾವೂ ಕೂಡ ಭ್ರಷ್ಟಾಚಾರದ ಭಾಗವಾಗಿ ಇದ್ದೇವೆ. ದೇಶಭಕ್ತಿ ಎಂಬುದು ನಾವು ಕೇವಲ ಜೈ ಹಿಂದ್ ಹೇಳಲು ಮಾತ್ರ ಸೀಮಿತವಾಗಿದೆ. ದೇಶಕ್ಕೆ ಅವಮಾನ ಮಾಡಿದರೆ ಅವರನ್ನು ವಿರೋಧಿಸುವದಷ್ಟೇ ಅಲ್ಲ. ನಮ್ಮ ದೇಶವನ್ನು ಸ್ವಚ್ಚವಾಗಿ, ನಿರ್ಮಲವಾಗಿದ್ದುಕೊಂಡು ಭ್ರಷ್ಟಾಚಾರ ರಹಿತವಾಗಿರುವಂತೆ ನೋಡಿಕೊಳ್ಳುವುದು ಪ್ರಜೆಗಳ ಕರ್ತವ್ಯ, ಜವಾಬ್ದಾರಿಯೂ ಆಗಿದೆ. ದೇಶವನ್ನು ಭ್ರಷ್ಟ ಮುಕ್ತ ಮಾಡುವುದು ಪ್ರಜೆಗಳ ಹೊಣೆ.
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!