November 16, 2024

Newsnap Kannada

The World at your finger tips!

deepa1

ನಾನು ಕಣ್ರೀ , ನಿಮ್ಮ ದೇವರು,ಅಯ್ಯೋ, ಹೌದುರೀ, ನಾನೇ,…..

Spread the love

ದೇವರ ಮಾತುಗಳು…
ಅದೇ, ಪ್ರತಿದಿನ – ಪ್ರತಿಕ್ಷಣ ನೀವು ನೆನಪಿಸಿಕೊಳ್ಳೋದಿಲ್ವೇನ್ರೀ,
ಪೂಜೆ ಮಾಡೋದಿಲ್ವೇನ್ರೀ, ಅದೇ,
ಬ್ರಹ್ಮ – ವಿಷ್ಣು – ಮಹೇಶ್ವರ – ಅಲ್ಲಾ – ಜೀಸಸ್ – ಮಾರಮ್ಮ – ಬೀರಮ್ಮ – ಮಾಂಕಾಳಮ್ಮ ಇನ್ನೂ ಇನ್ನೂ ಹೇಳ್ತಾ ಹೋದ್ರೆ ಟೈಂ ಸಾಕಾಗಲ್ಲ…….
ನಿಜ ಕಣ್ರೀ, ನಾನೇ ನಿಮ್ಮ ದೇವರು.
ಇಷ್ಟೂ ವರ್ಷ ಮರೆಯಾಗಿದ್ದವನು ಈಗ ಯಾಕೆ ಪ್ರತ್ಯಕ್ಷ ಆದ ಅಂತ ಆಶ್ಚರ್ಯನಾ ನಿಮಗೆ ?…….

ಅಯ್ಯೋ , ನಿಮ್ಮ ವಿವೇಕ ಇದ್ದಾನಲ್ಲ, ಅದೇ Facebook – Watsapp ಗಳಲ್ಲಿ ಬರೆದು ತಲೆತಿಂತಿರ್ತಾನಲ್ಲ ಅವನು ಬಹಳ ಗೋಳಾಡಿ ಕಾಡಿ ಬಿಟ್ಟ. ನೀನು ಬಂದು ಜನಗಳಿಗೆ ಏನಾದರೂ ಹೇಳಿದ್ರೇ ಸರಿ. ಇಲ್ಲಾ ಅಂದ್ರೆ ನೀನು ಇಲ್ಲೇ ಇಲ್ಲ ಅಂತ ಪ್ರಚಾರ ಮಾಡ್ತೀನಿ ಅಂತ ಹೆದರಿಸಿಬಿಟ್ಟ. ಅದಕ್ಕೆ ನಿಮ್ಮ ಮುಂದೆ ಬರಲೇಬೇಕಾಯ್ತು…….‌‌

ಇರಲಿ, ನನಗೂ ನಿಮ್ಮನ್ನೆಲ್ಲಾ ನೋಡ್ಬೇಕು ಅಂತ ತುಂಬಾ ಆಸೆ ಇತ್ತು. Personal ವಿಷಯ ಆಮೇಲೆ ಮಾತನಾಡೋಣ. ಈಗ ಮುಖ್ಯ ವಿಷಯಕ್ಕೆ ಬರೋಣ……

ರೀ, ಸ್ವಾಮಿ, ಮೊದಲು ಇಡೀ ವಿಶ್ವ – ಖಗೋಳ ಅಂದ್ರೆ ಈ ಭೂಮಿ – ಆಕಾಶ – ನಕ್ಷತ್ರಗಳು – ಸೂರ್ಯ – ಚಂದ್ರರು – ಎಲ್ಲಾ ಮೊದಲೇ ಇತ್ತು. ಅದು ಹೇಗೆ ಬಂತು ಅಂತ ನನಗೆ ಗೊತ್ತಿಲ್ಲ, ಅದನ್ನೇ ಸೃಷ್ಟಿ ಅಂತ ಕರೀತಿದ್ರು,
ಈ ಸೃಷ್ಟಿಯೇ ಭೂಮಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಆಕಾಶಕಾಯಗಳನ್ನು ಅದಕ್ಕೆ ಪೂರಕವಾಗಿಟ್ಟು ನೀರು ಗಾಳಿ ಬೆಳಕುಗಳನ್ನು ಉತ್ಪಾದಿಸಿ ಅನೇಕ ರೀತಿಯ ಸಸ್ಯ ಮತ್ತು ಪ್ರಾಣಿ ಜೀವಿಗಳನ್ನು
ಸೃಷ್ಟಿಸಿತು.

ಈ ಪ್ರಾಣಿಗಳಲ್ಲಿ ಬಹಳಷ್ಟು ವೈವಿಧ್ಯತೆಯನ್ನು ಉಂಟುಮಾಡಿ ಅದರಲ್ಲಿ ಮನುಷ್ಯನನ್ನು ವಿಶಿಷ್ಠವಾಗಿ ಸೃಷ್ಟಿಸಿ ಭಿನ್ನತೆಯನ್ನು ಕಾಪಾಡಿತು.
ಮನುಷ್ಯ ಪ್ರಾಣಿಯನ್ನು ತನ್ನ ಆಟದ ಬೊಂಬೆಯಾಗಿ ಮಾಡಿಕೊಳ್ಳಲು ಸ್ವತಂತ್ರ ಆಲೋಚನೆಯನ್ನು ಕೊಟ್ಟಿತು.

ಹೇಗೋ ಕಾಡು ಮೇಡು ಅಲೆದುಕೊಂಡು ಬದುಕುತ್ತಿದ್ದ ಈ ಪ್ರಾಣಿ ಯಾವ ಮಾಯದಲ್ಲೋ ದುರಾಸೆಗೆ ಬಿದ್ದ. ಸೃಷ್ಟಿಯ ಇತರ ಜೀವರಾಶಿಗಳ ಮೇಲೆಯೇ ನಿಯಂತ್ರಣ ಸಾಧಿಸುತ್ತಾ ಕೊನೆಗೆ ಅವನ ಸಂಖ್ಯೆ ಹೆಚ್ಚಾದಂತೆ ಭೂಮಿಯ ಬೇರೆ ಬೇರೆ ಅನುಕೂಲಕರ ವಾತಾವರಣದಲ್ಲಿ ನೆಲೆಸಿ ಅದು ನಿನ್ನದು ಇದು ನನ್ನದು ಎಂದು ಪ್ರದೇಶಗಳನ್ನೇ ಹಂಚಿಕೊಂಡು ಬೇಲಿಯೋ ಕೋಟೆಯೋ ನಿರ್ಮಿಸಿಕೊಂಡ.

ಹಾಳಾಗಲಿ ಎಂದರೆ ಬೇರೆ ಬೇರೆ ಪ್ರದೇಶಗಳ ಮೇಲೂ ಅಧಿಪತ್ಯ ಸಾಧಿಸಲು ಹೊರಟು ತನ್ನ ಸಹಚರರನ್ನೇ ಕೊಲ್ಲಲು ಪ್ರಾರಂಭಿಸಿದ. ಆಗ ಪ್ರಕೃತಿಯನ್ನು – ಈ ಜೀವರಾಶಿಗಳನ್ನು ಉಳಿಸಲು ಆ ಸೃಷ್ಟಿ ಕಳಿಸಿದ ದೂತನೇ ನಾನು. ನಿಮ್ಮ ಈಗಿನ ದೇವರು. ನನಗೆ ಸೃಷ್ಟಿಯ ಮೂಲಕವೇ ಇದೆಲ್ಲಾ ತಿಳಿದಿದ್ದು.

ನನ್ನನ್ನು ಕೆಲವು ಮಿತಿಗಳಿಗೆ ಒಳಪಡಿಸಿ ಆದರೆ ಸರ್ವಾಂತರ್ಯಾಮಿಯಾಗಿ ಪರಿವರ್ತಿಸಿ ಎಲ್ಲೂ ಪ್ರತ್ಯಕ್ಷನಾಗದೆ ಆದರೆ ಪರೋಕ್ಷವಾಗಿ ಇಡೀ ಮಾನವ ಸಂಕುಲವನ್ನು ನಿಯಂತ್ರಿಸುವ ಹೊಣೆ ಹೊರಿಸಲಾಯಿತು.

ನಾನು ಮೊದಲಿಗೆ ಈ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಬೇಕಂತಲೇ ಭಯಂಕರ ಗಾಳಿ ಮಳೆ ಬೆಂಕಿ ಮುಂತಾದ ಅನಿರೀಕ್ಷಿತ ಪ್ರಕೃತಿ ವಿಕೋಪಗಳನ್ನು ಸೃಷ್ಟಿಸಿ ಜನರಲ್ಲಿ ಭಯ ಉಂಟುಮಾಡಿದೆ. ಅಲ್ಲದೆ ಇದರಿಂದ ಅನೇಕ ಅಸಹಜ ಸಾವುಗಳು ಸಂಭವಿಸಿದವು. ಆಗ ಮನುಷ್ಯ ಪ್ರಾಣಿಗೆ ಬಹಳ ಭಯವಾಯಿತು.

ಓ ಹೋ ನಮ್ಮನ್ನು ನಿಯಂತ್ರಿಸುವ ಒಂದು ಶಕ್ತಿಯಿದೆ ನಾವು ಅದನ್ನು ಗೌರವಿಸಲೇಬೇಕು ಎಂಬ ನಂಬಿಕೆ ಅವರಲ್ಲಿ ಉಂಟಾಯಿತು. ನನ್ನ ಮೊದಲ ಪ್ರಯೋಗ ಯಶಸ್ವಿಯಾಯಿತು.

ಆದರೆ ಅವನ ವರ್ತನೆ ಮಾತ್ರ ತೀರಾ ಪಶುಸದೃಶವಾಗಿತ್ತು. ಒಂದು ಕ್ರಮಬದ್ಧತೆಯೇ ಇರಲಿಲ್ಲ. ಅದಕ್ಕಾಗಿ ಏನಾದರೂ ಮಾಡೋಣ ಎಂದು ಯೋಚಿಸುತ್ತಿರುವಾಗಲೇ ಈ ಮನುಷ್ಯ ಪ್ರಾಣಿಗಳಲ್ಲೇ ಸ್ವಲ್ಪ ಚಾಣಾಕ್ಷರಾದವರು ಜನರನ್ನು ನಿಯಂತ್ರಿಸಲು ಪ್ರಕೃತಿ ವಿಕೋಪಗಳನ್ನೇ ಮುಂದೆ ಮಾಡಿ ವಾಯು ವರುಣ ಅಗ್ನಿ ಜಲ ಮುಂತಾದ ಶಕ್ತಿಗಳನ್ನೇ ದೇವರೆಂದು ನಂಬಿಸಿ ಆಯಾಯ ಪ್ರದೇಶ ಮತ್ತು ಜನರ ಅವಶ್ಯಕತೆಗನುಗುಣವಾಗಿ ಒಂದೊಂದು ರೀತಿಯ ಜೀವನ ಶೈಲಿ ಮತ್ತು ಆಚಾರ ವಿಚಾರಗಳನ್ನು ರೂಪಿಸಿ ಧರ್ಮ ಎಂದು ಹೆಸರಿಟ್ಟು ಸ್ವಂತ ಧರ್ಮಗಳನ್ನು ತಾವೇ ಸೃಷ್ಟಿಸಿಕೊಂಡು ಅದಕ್ಕೆ ಒಂದೊಂದು ದೇವರನ್ನು ಸರ್ವಶಕ್ತನಂತೆ ರೂಪಿಸಿ ಸಾಮಾಜಿಕ ಬದುಕನ್ನು ಕಟ್ಟಿಕೊಂಡರು.

ನಾನು ಬಹಳ ವರ್ಷಗಳು ಇಡೀ ವ್ಯವಸ್ಥೆಯನ್ನು ಗಮನಿಸಿದೆ. ಸ್ವಲ್ಪ ಲೋಪಗಳಿದ್ದರೂ ಹೇಗೋ ಸಮಾಜ ನಡೆಯುತ್ತಿತ್ತು. ಆದ್ದರಿಂದ ನಾನೇ ಸೃಷ್ಟಿಗೆ ಮನವಿ ಮಾಡಿಕೊಂಡು ಹೇಗೂ ಮನುಷ್ಯರು ಇನ್ನು ಭೂಮಂಡಲವನ್ನು ಕಾಪಾಡಿಕೊಳ್ಳುತ್ತಾರೆ. ನಾನು ಇಲ್ಲಿದ್ದು ಪ್ರಯೋಜನವಿಲ್ಲ. ಅವಶ್ಯಕತೆ ಬಂದಾಗ ಮತ್ತೆ ಬಂದರಾಯಿತು ಎಂದು ಹೇಳಿ ಪುನಃ ಸೃಷ್ಟಿಯಲ್ಲಿ ಐಕ್ಯನಾದೆ.

ಅಂದು ಮರೆಯಾದ ನಾನು ಈಗ ಈ ಅವಿವೇಕನ ಕಾಟ ತಡೆಯಲಾರದೆ ನಿಮ್ಮ ಮುಂದೆ ಪ್ರತ್ಯಕ್ಷನಾಗಿದ್ದೇನೆ. ನನ್ನ ದಿವ್ಯ ದೃಷ್ಟಿಯಿಂದ ಈ ಭೂಮಂಡಲದಲ್ಲಿ ಆದ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಂಡಿದ್ದೇನೆ.

ಯಪ್ಪಾ ಯಪ್ಪಾ ಯಪ್ಪಾ ಎಂತ ಕಿರಾತಕರಯ್ಯ ನೀವು. ನಾನೇ ಭಯ ಪಡಿಸಿದ ವಿಷಯಗಳನ್ನೇ ಇಟ್ಟುಕೊಂಡು ಜನರನ್ನು ನಂಬಿಸಿ ಜೀವನ ಸಾಗಿಸುತ್ತಿದ್ದವರು ಈಗ ಅದೇ ದೇವರು ಧರ್ಮದ ಹೆಸರೇಳಿ ನಿಮ್ಮ ಸ್ವಾರ್ಥಕ್ಕಾಗಿ ಇಡೀ ಭೂಮಂಡಲವನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದೀರಿ. ಧರ್ಮದ ಹೆಸರಿನಲ್ಲಿ ಯುದ್ಧ ಮಾಡುತ್ತಿರುವಿರಿ.

ಮಾನ ಮರ್ಯಾದೆ ಇದೆಯಾ ನಿಮಗೆ.
ನಾನೀಗ ಮತ್ತೆ ಬಂದಿದ್ದೇನೆ. ಇನ್ನು ನಿಮ್ಮ ಆಟ ನಡೆಯುವುದಿಲ್ಲ. ಯಾವ ಶಿವ ಅಲ್ಲಾ ಜೀಸಸ್ ಯಾರೂ ಇಲ್ಲ.ಇರುವುದು ಸೃಷ್ಟಿ ಮಾತ್ರ.

ಷರೀಪ – ನಾರಾಯಣ – ವಿಕ್ಟರ್ ಎಲ್ಲಾ ಹೆಸರುಗಳು ಮಾತ್ರ. ನಿಮ್ಮಲ್ಲಿ ಹರಿಯುತ್ತಿರುವುದು ಸೃಷ್ಟಿಯ ಒಂದೇ ರಕ್ತ. ಗಾಳಿ ನೀರು ಬೆಳಕು ಎಲ್ಲಾ ಅವರದೇ. ಸಾವು ಎಲ್ಲರಿಗೂ ಸಮಾನವೇ.

ಮರ್ಯಾದೆಯಿಂದ ಮನುಷ್ಯರಾಗಿ ಬದುಕಿ. ಈ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಅದು ಇದು ಸುಡುಗಾಡು ಎಲ್ಲಾ ಬಿಟ್ಟಾಕಿ.
ಇಲ್ಲದಿದ್ದರೆ ನಿಮ್ಮ ಜಾಗದಲ್ಲಿ ಕತ್ತೆಗಳಿಗೆ ಯೋಚಿಸುವ ಶಕ್ತಿ ಕೊಟ್ಟು ಮನುಷ್ಯ ಪ್ರಾಣಿಯನ್ನು ಕತ್ತೆಗಳಾಗಿ ಮಾರ್ಪಡಿಸಲಾಗುತ್ತದೆ ಎಚ್ಚರ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!