ಇತಿಹಾಸ ಮತ್ತು ಪುರಾಣಗಳ ನಡುವಿನ ವ್ಯತ್ಯಾಸ ಏನು ???????
ರಾಮ ಲಕ್ಷಣ ಸೀತೆ ರಾವಣ ಕೃಷ್ಣ ಪಾಂಡವರು ಕೌರವರು, ಯುದ್ಧಗಳು, ಹರಪ್ಪ ಮಹೆಂಜೊದಾರೋ, ಶಿಲಾಯುಗ, ವೇದ ಉಪನಿಷತ್ತು ಸ್ಮೃತಿಗಳು, ಬುದ್ಧ ಮಹಾವೀರ, ಮೌರ್ಯ ಸಾಮ್ರಾಜ್ಯ ಅಲೆಗ್ಸಾಂಡರ್ ದಾಳಿ, ಘೋರಿ ಘಜ್ನಿ ಆಕ್ರಮಣ, ಭಕ್ತಿ ಪಂಥಗಳು, ಪರಕೀಯರ ದಾಳಿ, ಸ್ವಾತಂತ್ರ್ಯ ಹೋರಾಟ, ಆಗಿನ ಯುದ್ದಗಳು ಹೀಗೆ ಹಿಂದೆ ಗತಿಸಿದ ಅನೇಕ ಘಟನೆಗಳು ಹೇಗೆ ದಾಖಲಾಗಿವೆ, ಅದರ ನಿಖರತೆಗಳು ಏನು ?????
ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಇತಿಹಾಸಕಾರರಂತೆ ಹಿಂದಿನ ಘಟನೆ, ವ್ಯಕ್ತಿ, ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ. ಇತಿಹಾಸ ಮತ್ತು ಪುರಾಣಗಳನ್ನು ಒಂದಕ್ಕೊಂದು ಬೆಸೆಯುತ್ತಾರೆ. ಅದರಿಂದಾಗಿಯೇ ಬಹಳಷ್ಟು ಗೊಂದಲಗಳು ಏರ್ಪಡುತ್ತಿವೆ. ಅನೇಕರು ಕೇಳುತ್ತಾರೆ. ಯಾವುದು ಸರಿ – ಯಾವುದು ತಪ್ಪು ಅವರು ಹಾಗೆ ಹೇಳುತ್ತಾರೆ, ಇವರು ಹೀಗೆ ಹೇಳುತ್ತಾರೆ ಆ ಪುಸ್ತಕದಲ್ಲಿ ಹಾಗೆ ಇದೆ, ಈ ಪುಸ್ತಕದಲ್ಲಿ ಬೇರೆ ರೀತಿಯಲ್ಲಿ ಇದೆ ಎಂದು ಗಲಿಬಿಲಿಗೆ ಒಳಗಾಗಿದ್ದಾರೆ.
ಗೆಳೆಯ/ಗೆಳತಿಯರೇ,
ಅಧೀಕೃತ ಇತಿಹಾಸವನ್ನು ಹೀಗೆ ದಾಖಲು ಮಾಡಲಾಗುತ್ತದೆ.
ಭಾರತದ ಮಟ್ಟಿಗೆ ಹೇಳುವುದಾದರೆ…..
ಭಾರತದ ಅಧೀಕೃತ ಇತಿಹಾಸ ದಾಖಲು ಮಾಡಲು ಪ್ರಾರಂಭಿಸಿದ್ದು ಬ್ರಿಟೀಷರು, ಸುಮಾರು 1800 ರ ಆಸುಪಾಸಿನಲ್ಲಿ.
ಅಲ್ಲಿಯವರೆಗೆ ದೊರೆತ ಶಿಲಾಶಾಸನಗಳು, ಕೆತ್ತನೆಗಳು, ಅಕ್ಷರ ಮತ್ತು ಚಿತ್ರ ರೂಪದ ಎಲ್ಲಾ ಪ್ರಕಾರದ ಬರಹಗಳು, ಸ್ಮಾರಕಗಳು, ಹಾಡುಗಳ ರೂಪದ ಜಾನಪದೀಯ ಕಥನ ಕಾವ್ಯಗಳು, ವಿದೇಶೀ ಪ್ರವಾಸಿಗರ ಬರಹಗಳು, ಆಗಿನ ಜಾಗತಿಕ ವಿದ್ಯಮಾನಗಳು ಸೇರಿ ಇತಿಹಾಸದ ಬಗ್ಗೆ ಮಾಹಿತಿ ಸಿಗಬಹುದಾದ ಎಲ್ಲಾ ದಾಖಲೆಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಲಾಗುತ್ತದೆ. ಆಗ ತಿಳಿದು ಬಂದ ವಿಷಯವೆಂದರೆ ಮಾನವ ಇತಿಹಾಸ ಹೆಚ್ಚು ಕಡಿಮೆ ನದಿ ತೀರದ ಪ್ರದೇಶಗಳಲ್ಲಿಯೇ ಬೆಳೆದುಬಂದಿದೆ ಎಂದು. ಆದ್ದರಿಂದ ಮೇಲಿನ ದಾಖಲೆಗಳ ಆಧಾರದ ಮೇಲೆ ಇನ್ನಷ್ಟು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ( ಭೂ ಅಗೆತ ) ಸಹ ಮಾಡಲಾಗುತ್ತದೆ.
ಈ ಎಲ್ಲಾ ದಾಖಲೆಗಳನ್ನು ಒಟ್ಟು ಮಾಡಿ ಅಧ್ಯಯನ – ಸಂಶೋಧನೆ ಮಾಡಲಾಗುತ್ತದೆ.
ದಿನಾಂಕಗಳು, ಮಾಸಗಳು, ವರ್ಷಗಳು, ಘಟನೆಗಳು, ರಾಜ ವಂಶಗಳು, ಹೆಸರುಗಳು, ಆಡಳಿತದ ಅವಧಿ, ಸೋಲು ಗೆಲುವು, ಪ್ರದೇಶಗಳ ವಿಸ್ತಾರ, ಭಾಷೆ, ಧರ್ಮ, ದೇವರು, ಆಚರಣೆಗಳು, ಆಗಿನ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸೇರಿ ಒಟ್ಟು ವ್ಯವಸ್ಥೆ, ಬರಹಗಳಲ್ಲಿ ಇರುವ ಹೊಗಳಿಕೆ, ತೆಗಳಿಕೆ, ಸಾಂಕೇತಿಕತೆ, ಕಾಲ್ಪನಿಕತೆ, ವಿರೋಧಾಭಾಸ, ಜಯದ ಸಂಭ್ರಮ, ಸೋಲಿನ ಕಹಿ,ತಂತ್ರಗಳು ಕುತಂತ್ರಗಳು ಮುಂತಾದ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಲಾಗುತ್ತದೆ.
ಕೆಲವೊಮ್ಮೆ ಮಧ್ಯದ ದಾಖಲೆಗಳು ದೊರೆಯುವುದಿಲ್ಲ. ಪೂರಕ ಅಂಶಗಳು ಸಿಗುವುದಿಲ್ಲ, ಎರಡು ವಿರುದ್ಧ ದಿಕ್ಕಿನ ಘಟನೆಗಳ ಮಾಹಿತಿ ದೊರೆಯುತ್ತದೆ. ಹಾಗೆಲ್ಲಾ ಇರುವ ದಾಖಲೆಗಳ ಪ್ರಕಾರ ವಾಸ್ತವಕ್ಕೆ ಹತ್ತಿರದ ಊಹಾತ್ಮಕ ನಿರ್ಧಾರ ಮತ್ತು ಸಾಂದರ್ಭಿಕ ಸತ್ಯದ ತೀರ್ಮಾನ ಮಾಡುವುದು ಅನಿವಾರ್ಯವಾಗುತ್ತದೆ.
ಇವುಗಳನ್ನೆಲ್ಲ ಒಟ್ಟು ಮಾಡಿ ವಿವಿಧ ತಂಡಗಳು ಇತಿಹಾಸವನ್ನು ದಾಖಲು ಮಾಡುತ್ತವೆ. ಆ ತಂಡದಲ್ಲಿ ಕೇವಲ ಇತಿಹಾಸಕಾರರು ಮಾತ್ರವಲ್ಲದೆ, ಮಾನವ ಶಾಸ್ತ್ರಜ್ಞರು, ಪುರಾತತ್ವ ಮತ್ತು ಪ್ರಾಚ್ಯ ವಸ್ತು ಇಲಾಖೆಯವರು, ಭೂಗರ್ಭ ತಜ್ಞರು, ವಿಜ್ಞಾನಿಗಳು, ರಾಜಕೀಯ ಪಂಡಿತರು, ಭಾಷಾ ತಜ್ಞರು ಮುಂತಾದ ಎಲ್ಲರೂ ಇರುತ್ತಾರೆ. ಇವರೆಲ್ಲರ ಒಟ್ಟು ಸಹಮತದ ಅಭಿಪ್ರಾಯ ಇತಿಹಾಸವಾಗಿ ದಾಖಲಾಗುತ್ತದೆ ಮತ್ತು ಅದು ಕಾಲಾನುಕ್ರಮದಲ್ಲಿ ಇರುತ್ತದೆ. ಇದನ್ನು ಸರ್ಕಾರದ ಅಧೀಕೃತ ಇತಿಹಾಸ ಎಂದು ಕರೆಯಲಾಗುತ್ತದೆ. ಇದರ ಆಧಾರದ ಮೇಲೆ ಪಠ್ಯ ಪುಸ್ತಕ ಅಧ್ಯಯನ ಮತ್ತು ಸಂಶೋಧನಾ ಶಿಕ್ಷಣವನ್ನು ರೂಪಿಸಲಾಗುತ್ತದೆ.
ಹಾಗಾದರೆ ಇದು ಮಾತ್ರ ಸತ್ಯವೇ ಅಥವಾ ಅಂತಿಮವೇ ? ಇದಕ್ಕೆ ಬೇರೆ ಆಯಾಮ ಇರುವುದಿಲ್ಲವೇ ಎಂಬ ಪ್ರಶ್ನೆ ಉದ್ಬವವಾಗಬಹುದು. ಇದು ಅಂತಿಮ ಸತ್ಯ ಅಲ್ಲದಿರಬಹುದು. ಆದರೆ ಸದ್ಯದ ಅಧೀಕೃತತೆ ಇದು ಮಾತ್ರ ಆಗಿರುತ್ತದೆ.
ಇಲ್ಲಿಯೂ ಕೆಲವು ಉತ್ತರಿಸಲಾಗದ ಗೊಂದಲಗಳು ಹಾಗೆಯೇ ಉಳಿಯುತ್ತದೆ. ಬುದ್ದನ ವೈಯಕ್ತಿಕ ಬದುಕು, ವೇದ ಉಪನಿಷತ್ತುಗಳ ರಚನಾಕಾರರ ಅಧೀಕೃತತೆ, ಎಲ್ಲೂ ದಾಖಲಾಗದ ಹತ್ಯಾಕಾಂಡಗಳು, ತ್ಯಾಗ ಬಲಿದಾನಗಳು ಇತ್ಯಾದಿ ಅನೇಕಾನೇಕ ಸೂಕ್ಷ್ಮ ಅಂಶಗಳು ಕಾಲ ಗರ್ಭದಲ್ಲಿ ಪ್ರಶ್ನೆಗಳಾಗಿಯೇ ಅಡಗಿ ಹೋಗಿರುತ್ತವೆ.
ಈ ಎಲ್ಲಾ ಆಧಾರದ ಮೇಲೆ ರಾಮಾಯಣ ಮತ್ತು ಮಹಾಭಾರತ ಪೌರಾಣಿಕ ಎಂತಲೂ, ಹರಪ್ಪ ಸಂಸ್ಕೃತಿಯಿಂದ ಇಲ್ಲಿಯವರೆಗೂ ಇತಿಹಾಸ ಎಂತಲೂ ಕರೆಯಲಾಗಿದೆ.
ಕೆಲವು ಭೌಗೋಳಿಕ ಮತ್ತು ಸಾಂಧರ್ಭಿಕ ದಾಖಲೆಗಳು ರಾಮಾಯಣ ಮಹಾಭಾರತ ನಿಜವಾಗಿ ನಡೆದ ಘಟನೆಗಳು ಎಂಬುದನ್ನು ಸೂಚಿಸುತ್ತದೆ ಎಂದು ಒಂದಷ್ಟು ಆಧ್ಯಾತ್ಮ ಪಂಡಿತರು ಖಚಿತಪಡಿಸುತ್ತಾರೆ. ಆದರೆ ಇತಿಹಾಸ ಎನ್ನಲು ಬೇಕಾದ ಮಾನದಂಡಗಳನ್ನು ರಾಮಾಯಣ ಮಹಾಭಾರತ ಸಂಪೂರ್ಣ ಪೂರೈಸುವುದಿಲ್ಲ. ಅತಿಮಾನುಷ ಶಕ್ತಿ, ನೈಸರ್ಗಿಕವಾಗಿ ಅಸಾಧ್ಯವಾದ ಘಟನೆಗಳು, ಪುನರ್ಜನ್ಮ ಮುಂತಾದ ಊಹಾತ್ಮಕ ಅಂಶಗಳನ್ನು ಪರಿಗಣಿಸಿ ಅದನ್ನು ಇತಿಹಾಸ ಎನ್ನಲಾಗುವುದು.
ಇತಿಹಾಸ ಸಾರ್ವತ್ರಿಕ ಸತ್ಯದ ಆಧಾರದ ಮೇಲೆ ರಚಿತವಾಗುತ್ತದೆ.
ಆದ್ದರಿಂದ ಯಾರೋ ಭಾಷಣದಲ್ಲೋ, ಅಂಕಣದಲ್ಲೋ, ಹರಿಕಥೆಯಲ್ಲೋ ಇದೇ ಇತಿಹಾಸ ಎಂದು ಬಾಯಿಗೆ ಬಂದಂತೆ ಮಾತನಾಡಿ, ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿದರೆ ದಯವಿಟ್ಟು ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ. ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ಇರುವುದು ಮಾತ್ರ ಒಪ್ಪಬಹುದಾದ ಇತಿಹಾಸ. ಇನ್ನೆಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಮೂಡಿದ ಅಭಿಪ್ರಾಯಗಳು ಮಾತ್ರ.
ಇದೊಂದು ಸರಳ ನಿರೂಪಣೆ. ಆಳದಲ್ಲಿ ಇದನ್ನೂ ಮೀರಿದ ಇನ್ನಷ್ಟು ಆಯಾಮಗಳು ಇತಿಹಾಸಕ್ಕೆ ಇದೆ…..
- ವಿವೇಕಾನಂದ ಹೆಚ್. ಕೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)