November 17, 2024

Newsnap Kannada

The World at your finger tips!

pursue a hobby 1 7333ad4

ಹವ್ಯಾಸಗಳು ನೀಡುವ ಸಂತೋಷ

Spread the love

‘ಆಶಾ ಏನ್ಮಾಡ್ತಾ ಇದೀಯ?’ ಗೀತನ ಪ್ರಶ್ನೆಗೆ ‘ಮಹಡಿ ಮೇಲೆ ಗಿಡಗಳಿಗೆ ನೀರೆರೆಯುತ್ತಿದ್ದೆ. ಅವುಗಳ ಜೊತೆ ಇದ್ರೆ ಅದೇನು ಸಂತೋಷ ಆಗುತ್ತೆ ಗೊತ್ತಾ? ಆಶನ ಉತ್ತರಕ್ಕೆ ಗೀತನಿಗೆ ಅಚ್ಚರಿ. ಹವ್ಯಾಸಗಳು ಅಷ್ಟೊಂದು ಸಂತೋಷ ನೀಡುತ್ತವೆಯೇ ಎಂದು. ಹೌದು ಇದು ಅನೇಕರ ಪ್ರಶ್ನೆ ಮತ್ತು ಅಚ್ಚರಿ. ಆದರೆ ಅವುಗಳ ಸಾಂಗತ್ಯ ದೊರೆತಾಗಲೇ ಅದರ ಅನುಭವ. ಇದು ಒಂದು ಉದಾಹರಣೆ ಮಾತ್ರ. ಮನುಷ್ಯನಿಗೆ ಒಂದಿಲ್ಲೊಂದು ಹವ್ಯಾಸ ಇರಲೇಬೇಕು. ಆಗಲೇ ಒತ್ತಡದ ಬಿಡುಗಡೆ ಮತ್ತು ಆನಂದದ ಮಾರ್ಗ.


ಸಂತೋಷ ಅಂದರೇನು? ನಗುನಗುತ್ತಾ ಇರುವುದಾ..? ಯಶಸ್ಸು ದೊರೆತಾಗ ಸಿಗುವ ತೃಪ್ತಿಯೋ…? ತನ್ನವರೊಂದಿಗೆ ಇರುವಾಗ ಸಿಗುವ ಆನಂದವೋ .? ಏಕಾಂತದ ನಿರಾಳವೋ..? ಭಕ್ತಿಯ ನೆಮ್ಮದಿಯೋ..? ಎಷ್ಟೊಂದು ಪ್ರಶ್ನೆಗಳು ಉದ್ಭವಿಸುತ್ತವೆ.


ಕೆಲವರಿಗೆ ಹೊಸ ಬಟ್ಟೆಯುಟ್ಟಾಗ ಸಂತೋಷ ಸಿಗಬಹುದು, ಮಗದೊಬ್ಬರಿಗೆ ಇಚ್ಛಿಸಿದ್ದನ್ನು ತಿನ್ನುವುದರಲ್ಲಿರಬಹುದು. ಸಂತೋಷ ಎಂಬುದು ಒಂದು ಪ್ರಮೇಯಕ್ಕೋ, ಸೂಕ್ತಿಗೋ ನಿಲುಕದ್ದು. ಅದು ಮಾನವ ತನ್ನಿಂದ ತಾನೇ ಬಸಿದುಕೊಳ್ಳಬಹುದಾದ ಅವರ್ಣನೀಯ ಭಾವ.


ಹೆಚ್ಚಿನ ಬಾರಿ ನಾವು ನಮಗೋಸ್ಕರ ಬದುಕುವುದು ಕಡಿಮೆ. ಸಾಮಾಜಿಕ, ಸಾಂಸಾರಿಕ ಜವಾಬ್ದಾರಿಗಳಿಗೆ ಅನುಗುಣವಾಗಿ ದುಡಿಮೆ ಮಾಡುತ್ತಿರುತ್ತೇವೆ. ನಮಗೆ ಆ ಕೆಲಸದಲ್ಲಿ ಆಸಕ್ತಿ ಇರಲಿ, ಇಲ್ಲದಿರಲಿ ಶ್ರದ್ಧೆಯಿಂದ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಹವ್ಯಾಸ ಎನ್ನುವುದು ನಮ್ಮ ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ನಾವೇ ಇಷ್ಟಪಟ್ಟು ರೂಢಿಸಿಕೊಂಡಿದ್ದು.


ಒತ್ತಡದ ಜೀವನಶೈಲಿಯಿಂದ ಬಿಡುಗಡೆಗೊಂಡು ಮನಸ್ಸಿಗಿಷ್ಟು ಖುಷಿ ಕೊಡುವುದೇ ಹವ್ಯಾಸಗಳು. ನಮ್ಮ ದಿನನಿತ್ಯದ ಭಾಗವಾಗಿ ರೂಪುಗೊಂಡಿರುವ ಅನೇಕ ಹವ್ಯಾಸಗಳು ಹೊಸ ಹುರುಪನ್ನು ತುಂಬುತ್ತವೆ. ಹವ್ಯಾಸಕ್ಕೆ ಆಸಕ್ತಿ ಮುಖ್ಯ. ಅದು ಯಾರದೋ ಯಾವುದೋ ಬಲವಂತದ ಹೇರಿಕೆಯಿಂದ ಬರುವಂಥದ್ದಲ್ಲ. ಆಸಕ್ತಿಯೆಂದರೆ ಶ್ರದ್ಧೆ, ತಲ್ಲೀನತೆ ಮತ್ತು ಅದರ ಬಗೆಗೆ ಪ್ರೀತಿ.


ಸಂತೋಷ ಎಂಬುದು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಭಿನ್ನವಾದ ಸೂತ್ರವಾಗಿರುತ್ತದೆ. ಮನುಷ್ಯನಿಗೆ ಸಂತೋಷದಿಂದಿರಲು ಒಂದಿಷ್ಟು ಹವ್ಯಾಸಗಳು ಅಗತ್ಯ. ಹವ್ಯಾಸಗಳ ಬಗ್ಗೆ ಬೀಚೀ ಅವರ ಒಂದು ಮಾತು ನೆನಪಿಗೆ ಬರುತ್ತಿದೆ. “ಜೀವನೋಪಾಯಕ್ಕಾಗಿ ಅಲ್ಲ…. ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ ಹವ್ಯಾಸಗಳು”


ಕೈ ಕಾಲು ಕಣ್ಣು ಧ್ವನಿ ಇಲ್ಲದವರೂ ಸಂತೋಷದಿಂದಿರುವುದನ್ನು ನೋಡಿದಾಗ ಸಂತೋಷ ಎಂಬುದು ಮಾನವ ತನಗೇ ತಾನು ಕಂಡುಕೊಳ್ಳಬಹುದಾಗ ಅವನಿಗೆ ಒಗ್ಗುವ ಒಂದು ಹಾದಿ ಹವ್ಯಾಸ. ಆತ್ಮಸಂತೋಷಕ್ಕಾಗಿ ಮಾಡುವ ಹವ್ಯಾಸೀ ಕೆಲಸಗಳಾವುವು..?


ಸಂತೋಷದ ನಿಜವಾದ ಗುಟ್ಟು ಆರೋಗ್ಯವೇ. ಹಾಗಾಗಿ ಮನೆಯ ಅಂದ ಹೆಚ್ಚಿಸಿ ಆರೋಗ್ಯಕ್ಕೂ ಇಂಬು ಕೊಡುವ ಕೈತೋಟ ಒಂದೊಳ್ಳೇ ಹವ್ಯಾಸ. ಬಣ್ಣಬಣ್ಣದ ಹೂಗಳು ಮನೆಯ ತುಂಬ ಅರಳಿ ನಗುವಾಗ ಪಟ್ಟ ಶ್ರಮ ಸಾರ್ಥಕವಾಗುತ್ತದೆ. ಹಾಗೆಯೇ ತುಳಸೀ, ಕರಿಬೇವು, ಅಮೃತಬಳ್ಳಿ, ದೊಡ್ಡಪತ್ರೆಗಳಂತಹ ಗಿಡಗಳು ಶರೀರಕ್ಕೂ ಒಳಿತೇ.


ಸೂರ್ಯೋದಯದ ವೇಳೆ ಚಿಲಿಪಿಲಿ ಹಕ್ಕಿಗಳುಲಿಯ ಕೇಳುತ ತಂಗಾಳಿಗೆ ಮೈಯೊಡ್ದಿ ಹಾದಿಯುದ್ದಕ್ಕೂ ನಡೆವುದು, ಮೈಬಗ್ಗಿಸಿ ವ್ಯಾಯಾಮ ಮಾಡುವುದು, ಮೈಮನಗಳ ಸಮ್ಮಿಲನದ ಮಾಧ್ಯಮವಾದ ಯೋಗಾಭ್ಯಾಸ, ಧ್ಯಾನ ಕೆಲವರಿಗೆ ಅಭ್ಯಾಸದ ಜೊತೆಗೇ ಹವ್ಯಾಸವೂ ಆದೀತು. ವ್ಯಾಯಾಮ ಮಾಡುವ ಹವ್ಯಾಸ ಸಂತಸವನ್ನೂ ತರುವುದು.


ಮನೆಯ ಒಳಾಲಂಕಾರ ಕಣ್ಣಿಗೆ ಮಾತವಲ್ಲದೇ ಮನಸ್ಸಿಗೂ ಹಿತ ಕೊಡುವ ಹವ್ಯಾಸ. ವಿವಿಧ ಬಗೆಯ ಗೊಂಬೆಗಳನ್ನು ತಯಾರಿಸುವುದು, ಕಸೂತಿ ಕೆಲಸಗಳು, ಕರಕುಶಲ ವಸ್ತುಗಳ ತಯಾರಿಕೆ, ಹೊಸ ಹೊಸ ವಿನ್ಯಾಸದ ಬಟ್ಟೆ ಹೊಲೆಯುವುದು, ಚಂದವಾದ ಬಟ್ಟೆ ತೊಡುವುದು, ಅಂದವಾದ ಆಭರಣಗಳನ್ನು ಸಂಗ್ರಹಿಸಿ ತೊಡುವುದು ಹೆಣ್ಣಿನ ಕೆಲ ವಿಶಿಷ್ಟ ಹವ್ಯಾಸಗಳು..


ಹಲವು ಮಹಿಳೆಯರಿಗೆ ಬಗೆಬಗೆಯ ಅಡುಗೆ ಮಾಡಿ ಉಣಬಡಿಸಿ ತೃಪ್ತಿ ಪಡುವುದೇ ಹವ್ಯಾಸ.
ಮನುಷ್ಯರಿಗೆ ಕತೆ ಹೇಳುವುದೋ, ಕೇಳುವುದೋ ಅತಿ ಪ್ರಿಯವಾದ ಪ್ರಾಚೀನ ಹವ್ಯಾಸಗಳಲ್ಲೊಂದು. ಇತ್ತೀಚೆಗೆ ಕವನ ಬರೆವುದೂ ಸಾಹಿತ್ಯದ ಭಾಗ ಮಾತ್ರವಲ್ಲದೇ ಹವ್ಯಾಸವಾಗಿಯೂ ಪ್ರಚಲಿತವಾಗಿದೆ. ಹಾಡು, ಹಸೆ, ಸಂಗೀತ, ನಟನೆ, ನಾಟ್ಯ, ಚಿತ್ರ ರಚನೆ, ಪ್ರತಿಮಾ ರಚನೆ,,,, ಇಷ್ಟೇ ಅಲ್ಲದೆ ಇತ್ತೀಚೆಗೆ ಸುಲಭವಾಗಿ ತಯಾರಿಸಬಹುದಾದ ಕಿವಿಯಾಭರಣ, ಬಳೆ, ಕತ್ತಿನಾಭರಣಗಳ ತಯಾರಿಕೆಯೂ ಪ್ರಿಯವಾದ ಹವ್ಯಾಸಗಳಾಗಿಬಿಟ್ಟಿವೆ ಚಿಕ್ಕಪುಟ್ಟ ಹೆಣ್ಣುಮಕ್ಕಳಿಗೆ.
ನೆಚ್ಚಿನ ಕ್ರೀಡೆ, ಅಂಚೆ ಚೀಟಿಗಳ ಸಂಗ್ರಹ, ನಾಣ್ಯಗಳ ಸಂಗ್ರಹ, ಛಾಯಾಚಿತ್ರ ತೆಗೆವುದೂ ಖುಷಿ ಕೊಡುವ ಹವ್ಯಾಸಗಳೇ. ಕುಟುಂಬದವರೊಂದಿಗೆ ಸ್ನೇಹಿತರೊಂದಿಗೆ, ಬಂಧುಗಳೊಂದಿಗಿನ ಪ್ರವಾಸವೂ ಜೀವನವನ್ನು ಉಲ್ಲಾಸದಾಯಕವನ್ನಾಗಿಸುತ್ತದೆ
ಬದುಕಿನ ಏಕತಾನತೆಯನ್ನು ಹೋಗಲಾಡಿಸಿ, ಜಂಜಾಟದ ಜೀವನದಲ್ಲಿ ಒಂದಿಷ್ಟು ನೆಮ್ಮದಿ, ಪ್ರಪುಲ್ಲತೆ, ನವ ಚೈತನ್ಯ ಚಿಮ್ಮಿಸುವ ನಮ್ಮಿಷ್ಟದ ಹವ್ಯಾಸವನ್ನು ರೂಢಿಸಿಕೊಳ್ಳುವುದು ನಿಜಕ್ಕೂ ಉತ್ತಮ.

IMG 20180306 WA0008
ಡಾ ಶುಭಶ್ರೀ ಪ್ರಸಾದ್
Copyright © All rights reserved Newsnap | Newsever by AF themes.
error: Content is protected !!