November 23, 2024

Newsnap Kannada

The World at your finger tips!

mysuru dasara

ದಸರಾ ಆರಂಭದ ಇತಿಹಾಸ

Spread the love
rajshekar nagur k
ಡಾ.ರಾಜಶೇಖರ ನಾಗೂರ

ಈ ವರ್ಷದ ಮೈಸೂರು ದಸರಾ 413 ನೇ ವರ್ಷದ ದಸರಾ ಮಹೋತ್ಸವಾಗಿದೆ. ಈ ಮೈಸೂರು ದಸರಾ ಆರಂಭದಿಂದ ಮೈಸೂರು ದಸರಾ ಆಗಿರಲಿಲ್ಲ. ಇದರ ಮೂಲ 14ನೇ ಶತಮಾನದ ಹಂಪಿಯ ವಿಜಯನಗರ ಸಾಮ್ರಾಜ್ಯವಾಗಿದೆ.

ಹಂಪಿಯ ವಿಜಯನಗರ ಸಾಮ್ರಾಜ್ಯದಲ್ಲಿ ‘ಮಹಾನವಮಿ’ ಎಂಬ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತಿತ್ತು. ಹಂಪಿಯ ‘ಹಜಾರರಾಮ’ ದೇವಸ್ಥಾನದ ಗೋಡೆಯ ಮೇಲಿನ ಕೆತ್ತನೆಗಳಲ್ಲಿ ಇದರ ಉಲ್ಲೇಖವಿದೆ. ಅಂದಿನ ಇಟಲಿಯ ವಿದೇಶಿ ಪ್ರವಾಸಿಗ ‘ನಿಕೋಲೋ ಡಿ ಕೌಂಟಿ’ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ಅಂದಿನ ಮಹಾನವಮಿಯನ್ನು “ರಾಜರ ಬೆಂಬಲದಿಂದ ನಡೆಯುವ ವೈಭವದ ನಾಡಹಬ್ಬ” ಎಂದು ತನ್ನ ಪ್ರವಾಸ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.

ಹೀಗೆ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾ ನವಮಿಯು ದಖ್ಖನ್ನಿನ ಸುಲ್ತಾನರ ದಾಳಿಯಿಂದ ಪತನವಾದ ಮೇಲೆ ನಿಂತು ಹೋಯಿತು. ಅದಾದ ಮೇಲೆ ಅಳಿದುಳಿದ ದಕ್ಷಿಣ ಕರ್ನಾಟಕದ ಪ್ರದೇಶಗಳನ್ನು ಒಗ್ಗೂಡಿಸಿ ರಾಜ್ಯವನ್ನು ಕಟ್ಟಿ ಮೈಸೂರಿನ ಮಹಾರಾಜರು ರಾಜ್ಯಭಾರವನ್ನು ಮುಂದುವರಿಸಿದರು. ಹಾಗೆಯೇ ವಿಜಯನಗರ ಸಾಮ್ರಾಜ್ಯದ ವೈಭವದ ಸಂಕೇತವಾಗಿದ್ದ ಮಹಾನವಮಿಯನ್ನು ಮೈಸೂರಿನ ದಸರಾ ಉತ್ಸವವಾಗಿ ಮುಂದುವರಿಸಿದರು.

1610 ರಲ್ಲಿ ಶ್ರೀರಾಜ ಒಡೆಯರ್ ರವರು ಶ್ರೀರಂಗಪಟ್ಟಣದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆರಂಭಿಸಿದರು. ಅಂದು ಶುರುವಾದ ಮೈಸೂರು ದಸರಾವನ್ನು ಇಂದಿನವರೆಗೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯ ನಂತರ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಾದ ಮೇಲೆ 1971ರಲ್ಲಿ ರಾಜ್ಯ ಸರ್ಕಾರವು ವಿಶೇಷ ಕಾಯ್ದೆಯೊಂದನ್ನು ತಂದು ರಾಜ ಮನೆತನದವರ ವಿಶೇಷ ಹಕ್ಕುಗಳನ್ನು ವಾಪಸ್ ಪಡೆದು ದಸರಾವನ್ನು ನಾಡ ಹಬ್ಬವಾಗಿ ರಾಜ್ಯ ಸರ್ಕಾರವೇ ಆಚರಿಸುತ್ತಾ ಬರುತ್ತಿದೆ.

ದಸರಾ ಪದ ಹೇಗೆ ಬಂದಿತು?

ಸಂಸ್ಕೃತ ಪದಗಳಾದ ‘ದಶ’ ಎಂದರೆ ಹತ್ತು ‘ಹರ’ ಎಂದರೆ ಸೋಲಿಸುವುದು. ಇವೆರಡು ಪದಗಳು ಸೇರಿ ‘ದಶಹರ’ ಆಯ್ತು. ಮುಂದೆ ಈ ದಶಹರ ಕನ್ನಡದಲ್ಲಿ ದಸರಾ ಆಗಿ ಮಾರ್ಪಟ್ಟಿತು.

ಮೈಸೂರು ದಸರಾವು ಭಾರತದಲ್ಲಿ ಕರ್ನಾಟಕ ರಾಜ್ಯದ ನಾಡಹಬ್ಬವಾಗಿದೆ. ಇದು ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗಿ ಕೊನೆಯ ದಿನ ವಿಜಯದಶಮಿ. ಹಬ್ಬವನ್ನು ಹಿಂದೂ ಕ್ಯಾಲೆಂಡರ್ ತಿಂಗಳ ಅಶ್ವಿನ್‌ನಲ್ಲಿ ಹತ್ತನೇ ದಿನದಂದು ಆಚರಿಸಲಾಗುತ್ತದೆ. ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸಿದ ದಿನವಾಗಿ ಇದನ್ನು ಸಾಂಕೇತಿಕವಾಗಿ ಆಚರಿಸುತ್ತೇವೆ.

Copyright © All rights reserved Newsnap | Newsever by AF themes.
error: Content is protected !!