November 16, 2024

Newsnap Kannada

The World at your finger tips!

deepa1

ಬಚ್ಚಿಟ್ಟುಕೊಂಡಿದೆ ಪ್ರೀತಿ, ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ……

Spread the love

ಬಚ್ಚಿಟ್ಟುಕೊಂಡಿದೆ ಪ್ರೀತಿ, ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ.
ಅವಿತುಕೊಂಡಿದೆ. ಕರುಣೆ ಮಾನವೀಯತೆ ಸಮಾನತೆ
ಆತ್ಮವಂಚಕ ಮನಸ್ಸಿನಲ್ಲಿ..

ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲಿ……

ಕಣ್ಮರೆಯಾಗಿದೆ
ಸಭ್ಯತೆ, ಒಳ್ಳೆಯತನ ಸೇವಾ ಮನೋಭಾವ
ಆತ್ಮವಿಮರ್ಶೆಯ ಗೂಡಿನಿಂದ…….

ಓಡಿ ಹೋಗಿದೆ
ಧ್ಯೆರ್ಯ ಛಲ ಸ್ವಾಭಿಮಾನ
ಮನಸ್ಸಿನಾಳದಿಂದ………..

ಅದರಿಂದಾಗಿಯೇ ….

ಆಕ್ರಮಿಸಿಕೊಂಡು ಮೆರೆಯುತ್ತಿದೆ
ದುರಾಸೆ ದುರಹಂಕಾರ ಸ್ವಾರ್ಥ ಉಢಾಪೆ……..

ತುಂಬಿ ತುಳುಕುತ್ತಿದೆ
ಕಾಮ ಕ್ರೋದ ಲೋಭ ಮೋಹ ಮದ ಮತ್ಸರಗಳು
ಇಡೀ ದೇಹದಲ್ಲಿ………

ಆದರೂ,
ನಿರಾಶರಾಗಬೇಕಾಗಿಲ್ಲ……

ಬಡಿದೆಬ್ಬಿಸಿ
ನಿಮ್ಮ ಸ್ವಾಭಿಮಾನವನ್ನು,…….

ಹುಡುಕಿ ಎಳೆದು ತನ್ನಿ
ಪ್ರೀತಿ ವಿಶ್ವಾಸ ಸ್ನೇಹವನ್ನು……

ಒದ್ದೋಡಿಸಿ
ಅಡಗಿ ಕುಳಿತಿರುವ ದುಷ್ಟ ಶಕ್ತಿಗಳನ್ನು…….
.
ಇದಕ್ಕಾಗಿ ನೀವೇನು ಶ್ರಮ ಪಡಬೇಕಾಗಿಲ್ಲ…….

ಅತ್ಯಂತ ಸರಳ ವಿಧಾನವಿದೆ……

ಅದೆಂದರೆ..‌..

ಸಣ್ಣದಾಗಿ ಹೊತ್ತಿಸಿ ಜ್ಞಾನವೆಂಬ ಬೆಳಕು,

ಪುಟ್ಟದಾಗಿ ಚಿಗುರಿಸಿ ಪ್ರೀತಿಯೆಂಬ ಸೆಳಕು,

ಆಗ ಮರೆಯಾಗುತ್ತದೆ ಕತ್ತಲೆಂಬ ಮನಸ್ಸಿನ ಕೊಳಕು,

ಮತ್ತೆ ಪ್ರಜ್ವಲಿಸುತ್ತದೆ ನಿಮ್ಮ
ನಿಜ ವ್ಯಕ್ತಿತ್ವ,

ಹಾಗಾದಲ್ಲಿ ನಮ್ಮೆಲ್ಲರ ಕನಸು ನನಸಾಗುತ್ತದೆ.

ಏಕೆಂದರೆ………………

ಇಲ್ಲಿ ನಾನು ಯಾರೋ,
ನೀವು ಯಾರೋ,
ಇನ್ಯಾರೋ,
ಮತ್ಯಾರೋ……

ಒಬ್ಬರ ಹಿನ್ನೆಲೆ, ವಯಸ್ಸು, ಅಂತಸ್ತು, ಜಾತಿ, ಧರ್ಮ, ಭಾಷೆ ಇದ್ಯಾವುದೂ ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. (ಕೆಲವು ಸ್ನೇಹಿತರನ್ನು ಹೊರತುಪಡಿಸಿ)

ಆದರೂ ನಾವೆಲ್ಲಾ ನಮ್ಮ ಭಾವನೆ, ಅನಿಸಿಕೆಗಳನ್ನು ಅಕ್ಷರಗಳಲ್ಲಿ ಹಂಚಿಕೊಳ್ಳುತ್ತೇವೆ. ಹಲವಾರು ವಿಷಯಗಳನ್ನು ಚರ್ಚಿಸುತ್ತೇವೆ.

ವಾಸ್ತವ ಬದುಕಿನಲ್ಲಿ ಇದನ್ನು ಯೋಚಿಸಿದಾಗ ಎಷ್ಟೊಂದು ಆಶ್ಚರ್ಯವಾಗುತ್ತದೆಯಲ್ಲವೇ.?

ಮೊದಮೊದಲು ಟಿವಿ ಬಂದಾಗ ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರಿಕೆಟ್ ಮ್ಯಾಚ್ ಅನ್ನು ನೇರವಾಗಿ ಅದೇ ಸಮಯದಲ್ಲಿ ಮನೆಯಲ್ಲಿ ಕುಳಿತೇ ನೋಡಬಹುದು ಎಂದಾಗ ಅಥವಾ ಮನೆ, ಊರು, ನಗರ ,ವಿಶ್ವದ ಯಾವುದೇ ಭಾಗದಲ್ಲಿದ್ದರೂ ಮೊಬೈಲ್ ಮುಖಾಂತರ ನಾವು ನಮ್ಮವರೊಡನೆ ಸಂಪರ್ಕದಲ್ಲಿ ಇರಬಹುದು ಎಂದು ತಿಳಿದಾಗ ಆಶ್ಚರ್ಯವಾದಂತೆ ಈ ಅಜ್ಞಾತ ಮನಸುಗಳ ಸಂಬಂಧಗಳು ನಮ್ಮಲ್ಲಿ ಕೌತುಕ ಉಂಟು ಮಾಡುತ್ತವೆ.

ಇಂತಹ ಅದ್ಭುತ ಸಂದರ್ಭದಲ್ಲಿ ಜೀವಿಸಿರುವ ನಾವು ಇದನ್ನು ಸದುಪಯೋಗಪಡಿಸಿಕೊಳ್ಳೋಣ.

ಈಗಾಗಲೇ ದ್ವೇಷ, ಅಸೂಯೆ, ಸಣ್ಣತನಗಳಿಂದ ಆವರಿಸಿರುವ, ಜಾತಿ, ಧರ್ಮ,ಭಾಷೆಗಳ ಆಧಾರದಲ್ಲಿ ಬಂಧಿಗಳಾಗಿರುವ ನಾವು ಅದನ್ನು ಮೀರಲು ಈ ಮಾಧ್ಯಮ ತಂತ್ರಜ್ಞಾನ ಬಳಸಿಕೊಳ್ಳೋಣ.
ಮರೆಯಾಗುತ್ತಿರುವ ಪ್ರೀತಿ, ವಿಶ್ವಾಸ, ಸ್ನೇಹ, ಮಾನವೀಯ ಗುಣಗಳ ಸಂಬಂಧ ಗಳನ್ನು ಮರುಸ್ಥಾಪಿಸಿಕೊಳ್ಳೋಣ.

ಇದಕ್ಕಾಗಿ ನೀವೇನು ಹಣ ಖರ್ಚುಮಾಡಬೇಕಾಗಿಲ್ಲ, ಪದವಿ ಪಡೆಯಬೇಕಾಗಿಲ್ಲ. ಬೆವರು ಸುರಿಸಬೇಕಾಗಿಲ್ಲ.

ಕೇವಲ ನಿಮ್ಮದೇ ಮನಸ್ಸುಗಳನ್ನು, ವ್ಯಕ್ತಿತ್ವಗಳನ್ನು ಒಂದಷ್ಟು ವಿಶಾಲ ಮಾಡಿಕೊಂಡು, ಮೇಲ್ದರ್ಜೆಗೆ ಏರಿಸಿಕೊಳ್ಳಬೇಕಿದೆ. ಮಾತು, ನಡುವಳಿಕೆಗಳಲ್ಲಿ ವಿನಯ,ವಿಶ್ವಾಸ ಬೆಳೆಸಿಕೊಳ್ಳಬೇಕಿದೆ.

ನಿಮ್ಮಲ್ಲಿರುವ ಅಕ್ಷರ ಜ್ಞಾನವನ್ನು,
ನಿಮ್ಮ ಮೊಬೈಲ್ – ಕಂಪ್ಯೂಟರ್ ನ ಕೀಲಿಮಣೆಯನ್ನು ಬೆರಳುಗಳಲ್ಲಿ ಸರಿಯಾಗಿ ಒತ್ತುವ ಮುಖಾಂತರ ನಿಮ್ಮ ಪ್ರತಿಭೆ ಅನಾವರಣಗೊಳಿಸಿಕೊಳ್ಳಬೇಕಿದೆ.

ದ್ವೇಷ, ಅಸೂಯೆ, ವ್ಯಂಗ್ಯ, ವಿಷಕಾರಿ ಮಾತುಗಳು ನಿಮ್ಮನ್ನು ತೊಂದರೆಗೆ ಸಿಲುಕಿಸುವುದಲ್ಲದೆ ಸಮಾಜದ ವಾತಾವರಣವನ್ನು ಕಲುಷಿತಗೊಳಿಸುತ್ತದೆ.

ಅದು ಬೇಡವೇ ಬೇಡ. ಒಳ್ಳೆಯ ಆಲೋಚನೆಗೆ ಒಳ್ಳೆಯ ಅಭಿಪ್ರಾಯ – ಪ್ರತಿಕ್ರಿಯೆಗಳಿಗೆ ಸಂಕಲ್ಪ ಮಾಡೋಣ.

ಇದು ಕೇವಲ ಪದಗಳಾಗದೆ ನಮ್ಮ ನಿತ್ಯ ಜೀವನದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ಪ್ರೀತಿ, ವಿಶ್ವಾಸ, ಸಭ್ಯ ನಡವಳಿಕೆಗಳಿಂದ ಕನಿಷ್ಠ ನಮ್ಮ ರಾತ್ರಿಗಳು ಸುಖ ನಿದ್ರೆಯ ತಾಣಗಳಾಗಬಹುದು.

ನಾನೂ ಕೂಡ ನಿಮ್ಮಂತೆ ಆ ಪ್ರಯತ್ನದಲ್ಲಿದ್ದೇನೆ.

ಈ ಸಾಮಾಜಿಕ ಜಾಲತಾಣಗಳು. ಅಜ್ಞಾತ ಮನಸುಗಳ, ಒಲವಿನ ಹೃದಯಗಳ ಒಂದು ಕುಟುಂಬ ಎಂಬ ಭಾವನೆಯೊಂದಿಗೆ, ನಿಮ್ಮ ಬರಹದ ಚಟುವಟಿಕೆಗಳು ಮತ್ತಷ್ಟು ಉತ್ಸಾಹದಿಂದ ಗರಿಗೆದರಲಿ ಎಂದು ಆಶಿಸುತ್ತಾ……..

ಸ್ಚಚ್ಚ ಮನಸ್ಸಿನ ಸುಂದರ ದಿನಗಳು ನಿಮ್ಮದಾಗಲಿ ಎಂದು ಆಶಿಸುತ್ತಾ…….

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!