ಬೆಂಗಳೂರಿನಲ್ಲಿ ಇಂದು ಕೂಡ ಭಾರಿ ಮಳೆಯ ಮುನ್ಸೂಚನೆ

Team Newsnap
1 Min Read

ಬೆಂಗಳೂರಿನಲ್ಲಿ ಇಂದು ಕೂಡ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಳೆದ 2 ದಿನಗಳಿಂದ ಸುರಿದ ಭಾರೀ ಮಳೆಗೆ ಈಗಾಗಲೇ ನಲುಗಿ ಹೋಗಿರುವ ಸಿಲಿಕಾನ್ ಸಿಟಿಯಲ್ಲಿ ಬುಧವಾರ ಕೂಡ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಗಿನ ಜಾವ 5.30ರವರೆಗೆ 66.8 ಎಂಎಂ ಮಳೆಯಾಗಿದೆ. ಇದರಂತೆ ಇಂದೂ ಕೂಡ 3-4 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳವಾರ ಒಂದೇ ದಿನ ಬೆಂಗಳೂರು ನಗರ ಜಿಲ್ಲೆಯ ರಾಜರಾಜೇಶ್ವರಿ ನಗರದಲ್ಲಿ 87.5 ಎಂಎಂ, ಚನ್ನೇಹಳ್ಳಿ 126.5 ಎಂಎಂ, ಕಗ್ಗಲೀಪುರ 67 ಎಂಎಂ, ನೆಲಗುಳಿ 65.5 ಎಂಎಂ, ಬಸವನಗುಡಿ 64.45 ಎಂಎಂ, ಮಚೋಹಳ್ಳಿ 74.5 ಎಂಎಂ, ಕೊಡಿಗೇಹಳ್ಳಿ 66 ಎಂಎಂ ಮಳೆಯಾಗಿದೆ.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 3-4 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್​ ಮಾರ್ಕೆಟ್ ಸೇರಿ ಹಲವೆಡೆ ಜೋರು ಮಳೆಯಾಗಿದೆ.

ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಆಫೀಸು, ಅಂಗಡಿಗಳಿಗೆ ಹೊರಟ ಬೈಕ್ ಸವಾರರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Share This Article
Leave a comment