ಕನ್ನಂಬಾಡಿಗೆ ಭಾರಿ ಒಳ ಹರಿವು: ಸೋಮವಾರದಿಂದ ವಿಸಿ ನಾಲೆಗೆ ನೀರು ಬಿಡಿ – ಸಚಿವ ನಾರಾಯಣಗೌಡ ಸೂಚನೆ

Team Newsnap
1 Min Read
heavy rain in Kodagu: Inflow to KRS begins ಕೊಡಗಿನಲ್ಲಿ ವರುಣನ ಅಬ್ಬರ : ಕೆಆರ್ ಎಸ್ ಗೆ ಒಳ ಹರಿವು ಆರಂಭ

ಕಾವೇರಿ ಕಣಿವೆ ಸುತ್ತ ಸಾಕಷ್ಟು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಳವಾಗಿದೆ.

ಈಗಾಗಲೇ 106 ಅಡಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬಂದಿದೆ. ಹೀಗಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ನಾಲೆಗಳಿಗೆ ನೀರು ಹರಿಸುವಂತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾವೇರಿ ನೀರನ್ನು ಅವಲಂಬಿಸಿ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ಸಂತಸದ ಸುದ್ದಿ ಇದು. ಕೆಆರ್‍ಎಸ್ ಅಣೆಕಟ್ಟಿನ 124 ಅಡಿಗಳ ಪೈಕಿ 106 ಅಡಿ ನೀರು ತುಂಬಿದೆ. 35 ಸಾವಿರ ಕ್ಯುಸೆಕ್ಸ್ ಒಳ ಹರಿವಿನ ಪ್ರಮಾಣ ಇದೆ. ಕೇವಲ 24 ಗಂಟೆಯಲ್ಲಿ ಎರಡು ಅಡಿಯಷ್ಟು ನೀರು ಭರ್ತಿಯಾಗಿದೆ. 6 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಈಗಾಗಲೇ ಹೇಮಾವತಿ ನಾಲೆಗೆ ನೀರು ಬಿಡಲಾಗಿದೆ. ಸೋಮವಾರಿಂದ ವಿಸಿ ನಾಲೆಗೆ ನೀರು ಹರಿಸುವ ಮೂಲಕ ಮುಂಗಾರು ಕೃಷಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಪ್ರಾರಂಭ

ಜಿಲ್ಲೆಯಲ್ಲಿ ಕಬ್ಬಿಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. 40 ಸಾವಿರ ಹೆಕ್ಟೇರ್ ನಲ್ಲಿ ಕಬ್ಬು ಬೆಳೆದರೆ 65 ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯಲಾಗುತ್ತದೆ. ಮುಂಗಾರು ಕೃಷಿ ಆರಂಭಿಸಲು ನಾಲೆಗಳಿಗೆ ನೀರು ಬಿಡುವ ಸಮಯವನ್ನೇ ಎದುರು ನೋಡಲಾಗುತ್ತಿತ್ತು.
ಕೆ ಆರ್ ಎಸ್ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈಗ ನೀರು ಹರಿಸಲಾಗುತ್ತಿದೆ. ಹೀಗಾಗಿ ಕೃಷಿ ಇಲಾಖೆ ಸಹ ಸಬ್ಸಿಡಿಯಲ್ಲಿ ಭತ್ತದ ಬೀಜವನ್ನು ವಿತರಿಸುವ ಕಾರ್ಯ ಆರಂಭಿಸಲಿದೆ. ಮುಂದಿನ ಬುಧವಾರದಿಂದ ರೈತರಿಗೆ ಭತ್ತದ ಬೀಜ ವಿತರಣೆ ಶುರುವಾಗಲಿದೆ. ಸುಮಾರು 4 ಸಾವಿರ ಹೆಕ್ಟೇರ್‍ನಲ್ಲಿ ನೀರಾವರಿ ರಾಗಿ ಹಾಗೂ 500 ಹೆಕ್ಟೇರನಲ್ಲಿ ಅಲಸಂದೆ ಕೂಡ ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ಗೊಬ್ಬರ ಸಹ ದಾಸ್ತಾನು ಇದ್ದು, ಪ್ರತಿ ತಿಂಗಳು ನಿಗದಿತ ಪ್ರಮಾಣದಲ್ಲಿ ಸರಬರಾಜು ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a comment